Translated Story: ನೆರೆನಾಡ ನುಡಿಯೊಳಗಾಡಿ; ಅಪ್ಪನ ಮುಖ ವಿಚಿತ್ರ ರೀತಿಯಲ್ಲಿ ಹೆದರಿಕೆ ಹುಟ್ಟಿಸುವಂತಾಗಿತ್ತು

Translated Story: ನೆರೆನಾಡ ನುಡಿಯೊಳಗಾಡಿ; ಅಪ್ಪನ ಮುಖ ವಿಚಿತ್ರ ರೀತಿಯಲ್ಲಿ ಹೆದರಿಕೆ ಹುಟ್ಟಿಸುವಂತಾಗಿತ್ತು
ಲೇಖಕ ಉದಯ ಪ್ರಕಾಶ, ಅನುವಾದಕ ಮುಕುಂದ ಜೋಶಿ

‘Tirich’ Short Story of Uday Prakash : ಈ ಧತ್ತೂರಿಯ ಬೀಜಗಳನ್ನು ಕುಟ್ಟಿ ಹೋಳೀ ಹಬ್ಬದಲ್ಲಿ ಭಾಂಗ ತಯಾರಿಸುತ್ತಾರೆ. ಆದರೆ ಅದನ್ನು ಸೇವಿಸಿ ಇಲ್ಲಿಯ ತನಕ ಯಾರೂ ಹುಚ್ಚರಾಗಿಲ್ಲ. ಪಂ.ರಾಮ ಅವತಾರ ಒಪ್ಪಿಕೊಳ್ಳುವ ಮಾತೆಂದರೆ ತಿರೀಛದ ವಿಷ ಆ ವೇಳೆಯಲ್ಲಿ ಅಪ್ಪನ ಶರೀರದಲ್ಲಿ ಏರತೊಡಗಿತ್ತು.

ಶ್ರೀದೇವಿ ಕಳಸದ | Shridevi Kalasad

|

Jun 17, 2022 | 2:12 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಅಪ್ಪನ ಜೊತೆಗಿನ ಇನ್ನೊಂದು ತೊಂದರೆ ಎಂದರೆ ಅವರಿಗೆ ಊರಿನ ಹಾಗೂ ಅಡವಿಯ ಎಲ್ಲ ಕಾಲುದಾರಿಗಳೂ ನೆನಪಿರುತ್ತಿದ್ದುವು. ಆದರೆ ಪಟ್ಟಣದ ರಸ್ತೆಗಳನ್ನು ಅವರು ಮರೆಯುತ್ತಿದ್ದರು. ಪಟ್ಟಣಕ್ಕೆ ಅವರು ಹೋಗುವುದೇ ಕಡಿಮೆ. ಒಂದು ವೇಳೆ ಹೋಗುವುದೇ ಆದರೆ ಅವರು ಕೊನೆಯ ಕ್ಷಣದವರೆಗೆ, ಹೋಗುವುದು ಅತೀ ಅನಿವಾರ್ಯವಾಗುವವರೆಗೆ ಅದನ್ನು ತಳ್ಳಿ ಹಾಕುವ ಪ್ರಯತ್ನ ಮಾಡುತ್ತಿದ್ದರು. ಬಹಳ ಸಲ ಹೀಗೂ ಆಗಿದೆ. ಅಪ್ಪ ಸಕಲ ಸಾಮಾನುಗಳನ್ನು ಹೊತ್ತುಕೊಂಡು ಪಟ್ಟಣಕ್ಕೆ ಹೊರಟೆ ಎಂದು ಹೇಳಿ ಬಸ್ ಸ್ಟ್ಯಾಂಡಿನಿಂದ ಮರಳಿ ಬರುತ್ತಿದ್ದರು. ಬಸ್ ಹೊರಟು ಹೋಗಿದೆ ಎಂಬ ನೆಪ ಹೇಳುತ್ತಿದ್ದರು. ನಮಗೆಲ್ಲ ಗೊತ್ತಿತ್ತು. ಹೀಗಾಗಿರಲಿಕ್ಕಿಲ್ಲವೆಂದು. ಅಪ್ಪ ಹೊರಡುವ ಬಸ್ಸು ನೋಡಿರಬಹುದು. ನಂತರ ಎಲ್ಲಿಯಾದರೂ ಕುಳಿತಿರಬಹುದು. ಆಗ ಬಸ್ಸು ಹೋಗುವುದನ್ನು ನೋಡಿರಬಹುದು. ಇಲ್ಲಾ ಮೂತ್ರವಿಸರ್ಜನೆಗೋ, ತಂಬಾಕು ತಿನ್ನಲೋ ಹೋಗಿರಬಹುದು. ಕೆಲವು ಹೊತ್ತು ಅದರ ಹಿಂದೆ ಓಡಿರಲೂ ಬಹುದು. ನಂತರ ಅವರ ಹೆಜ್ಜೆಗಳ ಗತಿ ಮಂದವಾಗಿರಬಹುದು. ಅವರು ದುಃಖ, ಪಶ್ಚಾತ್ತಾಪ, ಸಿಟ್ಟು ಪ್ರಕಟಿಸುತ್ತ, ಮರಳಿರಬೇಕು. ಹೀಗೆ ಮಾಡುವಾಗ ಅವರಿಗೆ ಸ್ವಂತಕ್ಕೂ ಅನ್ನಿಸಿರಬೇಕು. ಬಸ್ಸು ಅವರನ್ನು ನಿಜಕ್ಕೂ ಬಿಟ್ಟು ಹೋಯಿತೆಂದು.

ಕಥೆ : ತಿರೀಛ | ಹಿಂದಿ ಮೂಲ : ಉದಯ ಪ್ರಕಾಶ | ಕನ್ನಡಕ್ಕೆ : ಮುಕುಂದ ಜೋಷಿ | ಸೌಜನ್ಯ : ದೇಶಕಾಲ ಸಾಹಿತ್ಯ ಪತ್ರಿಕೆ

(ಭಾಗ 3)

ನಾವೆಲ್ಲ ಅವರು ಪಟ್ಟಣ ಮುಟ್ಟಿದ್ದಾರೆ ಎಂದುಕೊಳ್ಳುವ ಹೊತ್ತಿಗೇನೇ ಅವರು ತಿರುಗಿ ಬಂದು ನಮ್ಮನ್ನು ಚಕಿತರನ್ನಾಗಿ ಮಾಡುತ್ತಿದ್ದರು.

ಟ್ರ್ಯಾಕ್ಟರಿನಿಂದ ಮಿನರ್ವಾ ಟಾಕೀಸಿನ ಹತ್ತಿರದ ಕೂಟದಲ್ಲಿರುವ ಶಿಂಧೆ ವಾಚ್ ಕಂಪೆನಿಯ ಸೀದಾ ಎದುರುಗಡೆ ಸರಿಯಾಗಿ ಹತ್ತು ಹೊಡೆದು ಏಳು ಮಿನಿಟಿನಿಂದ ಸಂಜೆಯ ಆರರ ವರೆಗೆ ಅಪ್ಪನ ಜೊತೆಗೆ ಏನೆಲ್ಲ ಘಟಿಸಿತೋ ಅದರ ಒಂದು ಅಸ್ಪಷ್ಟ, ಮಸಕಾದ ಅಂದಾಜು ಮಾತ್ರ ಮಾಡಬಹುದು. ಇದು ತಿಳಿದದ್ದು ಕೂಡ ಕೆಲವು ಜನರನ್ನು ಕೇಳಿ ಮತ್ತು ಕೆಲವರೊಡನೆ ಚೌಕಶಿ ಮಾಡಿದ ನಂತರ. ಯಾರದಾದರೂ ಸಾವಿನ ನಂತರ – ಒಂದು ವೇಳೆ ಆ ಸಾವು ಆಕಸ್ಮಿಕ ಮತ್ತು ಅಸ್ವಾಭಾವಿಕವಾಗಿದ್ದರೆ, ಆಗಿದ್ದಂತೆ ಅನಿಸಿದ್ದರೆ – ಇಂಥ ವಿಷಯಗಳ ಬಗ್ಗೆ ಮಾಹಿತಿ ಒಂದೊಂದಾಗಿ ಆಗತೊಡಗುತ್ತದೆ. ಆ ದಿನ ಬುಧವಾರ, 15 ಮೇ 1972ರ ಬೆಳಿಗ್ಗೆ ಹತ್ತೂ ಹತ್ತರಿಂದ ಸಂಜೆಯ ಆರರವರೆಗೆ ಸುಮಾರು ಏಳೂಮುಕ್ಕಾಲು ಅಥವಾ ಎಂಟು ಗಂಟೆ ಅಪ್ಪ ಎಲ್ಲೆಲ್ಲಿ ಹೋಗಿದ್ದರು, ಅಲ್ಲೆಲ್ಲ ಅವರ ಜೊತೆಗೆ ಏನೇನಾಯಿತು ಎಂಬುದರ ಬಗ್ಗೆ ಸರಿಯಾದ ಮತ್ತು ವಿಸ್ತೃತವಾದ ವರ್ಣನೆ ದೊರೆಯುವುದಂತೂ ಕಠಿಣವೇ. ಯಾವ್ಯಾವ ಘಟನೆಗಳು, ವಿಷಯಗಳು, ನಂತರ ಗೊತ್ತಾಗುತ್ತ ಹೋದವೋ ಅವುಗಳ ಮೂಲಕ ಅಂದಿನ ದಿನ ನಡೆದದ್ದರ ಬಗ್ಗೆ ಅಂದಾಜು ಮಾಡಬಹುದಿತ್ತು.

ಈ ಮೊದಲೇ ನಿಮಗೆ ತಿಳಿಸಿದಂತೆ ಪಲಡಾ ಊರಿನ ಮಾಸ್ತರ ನಂದಲಾಲರ ಪ್ರಕಾರ ಅಪ್ಪ ಯಾವಾಗ ಟ್ರ್ಯಾಕ್ಟರಿನಿಂದ ಇಳಿದರೋ ಆಗ ಗಂಟಲು ಒಣಗಿದ್ದರ ಬಗ್ಗೆ ದೂರಿದ್ದರು. ಇದಕ್ಕೂ ಮೊದಲು, ಸುಂಕದಕಟ್ಟೆಯ ಹತ್ತಿರ ಮೂತ್ರವಿಸರ್ಜನೆಗಾಗಿ ಇಳಿದು ಮರಳಿದಾಗ ತಲೆ ಸುತ್ತುತ್ತಿದ್ದುದರ ಬಗ್ಗೆಯೂ ಹೇಳಿದ್ದರು. ಅಂದರೆ ಅಪ್ಪನ ಮೇಲೆ ಧತ್ತೂರಿ ಬೀಜಗಳ ಕಷಾಯದ ಪ್ರಭಾವ ಪ್ರಾರಂಭವಾಗತೊಡಗಿತ್ತು. ಹಾಗೆ ನೋಡಿದರೆ ಪಟ್ಟಣ ತಲಪುವ ತನಕ ಅಪ್ಪ ಕಷಾಯ ಕುಡಿದು ಸುಮಾರು ಎರಡು ಗಂಟೆಗಳು ಆಗಿ ಹೋಗಿದ್ದುವು. ನನ್ನ ಅಂದಾಜಿನ ಪ್ರಕಾರ ಆಗ ಅಪ್ಪನಿಗೆ ಬಹಳ ನೀರಡಿಕೆ ಆಗಿರಬಹುದು. ಗಂಟಲನ್ನು ತೋಯಿಸುವುದಕ್ಕಾಗಿ ಯಾವುದಾದರೂ ಹೋಟೇಲು ಇಲ್ಲ ಡಾಭಾದ ಕಡೆಗೆ ಹೋಗಿರಲೂಬಹುದು. ಅವರ ಸ್ವಭಾವದ ಪೂರ್ಣ ಪರಿಚಯ ನನಗಿದೆ.

ಅದಕ್ಕಾಗೇ ನನಗೆ ಅನಿಸಿದ್ದು: ಅವರು ಕೆಲ ಹೊತ್ತು ಅಲ್ಲಿ ನಿಂತಿರಬಹುದು. ಒಂದು ಗ್ಲಾಸು ನೀರು ಕೇಳುವುದರ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಸಾಧ್ಯವಾಗಿರಲಿಕ್ಕಿಲ್ಲ. ಒಮ್ಮೆ – ಬಹಳ ವರ್ಷಗಳ ಹಿಂದೆ ಅವರೇ ಹೇಳಿದ ಪ್ರಕಾರ – ಬೇಸಿಗೆಯ ದಿನಗಳಲ್ಲಿ ಯಾವುದೋ ಹೋಟೇಲಿಗೆ ಹೋಗಿ ನೀರು ಕೇಳಿದ್ದರು. ಅಲ್ಲಿ ಕೆಲಸ ಮಾಡುವ ಯಾವನೋ ಅವರಿಗೆ ಯದ್ವಾತದ್ವಾ ಬೈದಿದ್ದನಂತೆ. ಅಪ್ಪ ಬಹಳ ಭಾವುಕರು. ಅವರು ತಮ್ಮ ನೀರಡಿಕೆಯನ್ನು ಒತ್ತಿಟ್ಟು ಅಲ್ಲಿಂದ ಹೊರಟಿರಬಹುದು.

ಹತ್ತೂ ಹದಿನೈದರಿಂದ ಹನ್ನೊಂದರವರೆಗಿನ ಆ ಮುಕ್ಕಾಲು ಗಂಟೆಯಲ್ಲಿ ಅಪ್ಪ ಎಲ್ಲೆಲ್ಲಿ ಹೋಗಿರಬಹುದು ಎಂಬುದರ ಸುಳಿವು ಎಲ್ಲಿಯೂ ಸಿಗುವುದಿಲ್ಲ. ಇದರ ಮಧ್ಯೆ ಹೇಳಬೇಕು ಅನ್ನುವಂಥದ್ದೂ ಏನೂ ನಡೆದಿರಲಿಲ್ಲ.

ಇದನ್ನ ಓದಿ : New Book : ಅಚ್ಚಿಗೂ ಮೊದಲು; ‘ಕಡಲು ನೋಡಲು ಹೋದವಳು’ ಫಾತಿಮಾ ರಲಿಯಾ ಕೃತಿ ಸದ್ಯದಲ್ಲೇ ನಿಮ್ಮ ಓದಿಗೆ

ನನ್ನ ಊಹೆ ಅಂದರೆ, ಆಗ ಅಪ್ಪ ಕೋರ್ಟಿಗೆ ಹೋಗುವ ದಾರಿಯ ಬಗ್ಗೆ ಕೆಲವರನ್ನು ಕೇಳಿರಬೇಕು. ಮತ್ತು ಅವರ ತಲೆಯಲ್ಲಿ ಈ ಮಾತು ಇರುವ ಸಾಧ್ಯತೆಯೂ ಇದೆ. ಅಂದರೆ ಅಲ್ಲಿ ಮುಟ್ಟಿದಾಕ್ಷಣ ತಾನು ಎಸ್. ಎನ್. ಅಗರವಾಲ ವಕೀಲರನ್ನು, ಅಂದರೆ ತಮ್ಮ ವಕೀಲರನ್ನು ನೀರಿಗಾಗಿ ಕೇಳಬಹುದೆಂದು. ಆದರೆ ಅವರು ಕೋರ್ಟಿನ ದಾರಿಯ ಬಗ್ಗೆ ವಿಚಾರಿಸಿದಾಗ ಜನ ಉತ್ತರ ಕೊಡದೆ ಬೇಗಬೇಗ, ವೇಗದಿಂದ ಮುಂದೆಮುಂದೆ ದಾಟಿ ಹೋಗಿರಬಹುದು. ಇಲ್ಲಾ, ಮಂಕಾಗಿ ಮತ್ತು ಗಡಿಬಿಡಿಯಿಂದ ಅವರಿಗೆ ಏನಾದರೂ ಹೇಳಿರಬಹುದು. ಅದವರಿಗೆ ಅರ್ಥವಾಗಿರಲಿಕ್ಕಿಲ್ಲ. ಮತ್ತವರು ಕೇವಲ ಅಪಮಾನಿತರಾಗಿರಬಹುದು, ದುಃಖಿಯಾಗಿರಬಹುದು, ಉದ್ವಿಗ್ನರಾಗಿರಬಹುದು.

ಪಟ್ಟಣದಲ್ಲಿ ಆಗುವದು ಹೀಗೇ…

ಹಾಗೆ ನೋಡಿದರೆ ಈ ನಡುವಿನ ಮುಕ್ಕಾಲು ಗಂಟೆಯ ಬಗ್ಗೆ ನನ್ನ ಸ್ವಂತದ ಅಂದಾಜೆಂದರೆ ಅಪ್ಪನ ಮೇಲೆ ಕಷಾಯದ ಪ್ರಭಾವ ಹೆಚ್ಚಾಗಿರಬೇಕು. ಮೇ ತಿಂಗಳ ಬಿಸಿಲು ಮತ್ತು ನೀರಡಿಕೆಯ ಕಾರಣ ಇದರ ಪ್ರಭಾವ ಇನ್ನೂ ತೀವ್ರ ಹಾಗೂ ಆಳವಾಗಿರಬೇಕು. ಅವರ ಕಾಲುಗಳು ಮುಗ್ಗರಿಸಿರಬೇಕು. ಇನ್ನೂ ಒಂದು ಸಾಧ್ಯತೆ ಎಂದರೆ ಅವರಿಗೆ ಚಕ್ಕರ್ ಕೂಡಾ ಬಂದಿರಬಹುದು.

ಅಪ್ಪ ಹನ್ನೊಂದು ಗಂಟೆಗೆ ದೇಶಬಂಧು ಮಾರ್ಗದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಹೊಕ್ಕಿದ್ದರು. ಅವರು ಅಲ್ಲಿ ಯಾಕೆ ಹೋಗಿದ್ದರು ಅನ್ನುವುದರ ಸರಿಯಾದ ಕಾರಣ ಗೊತ್ತಾಗುವುದೇ ಇಲ್ಲ. ಹಾಗೆ ನೋಡಿದರೆ ನಮ್ಮೂರಿನ ರಮೇಶ್ ದತ್ತ ಪಟ್ಟಣದ ಭೂಮಿ ವಿಕಾಸ ಸಹಕಾರಿ ಬ್ಯಾಂಕಿನಲ್ಲಿ ಕಾರಕೂನನಾಗಿದ್ದಾನೆ. ಹೀಗೂ ಆಗಿರಬಹುದು… ಅಪ್ಪನ ತಲೆಯಲ್ಲಿ ಬರೀ ಬ್ಯಾಂಕ್ ಅಷ್ಟೇ ಉಳಿದಿರಬೇಕು. ಮತ್ತು ಅಲ್ಲಿಂದ ದಾಟುವಾಗ ಸ್ಟೇಟ್ ಬ್ಯಾಂಕ್ ಎಂದು ಬರೆದದ್ದನ್ನು ನೋಡಿರಬೇಕು. ಮತ್ತವರು ಅಲ್ಲಿ ಹೊರಳಿರಬೇಕು. ಅಲ್ಲಿಯ ತನಕ ಅವರು ನೀರು ಕುಡಿದಿರಲಿಕ್ಕಿಲ್ಲ. ಅದಕ್ಕಾಗೇ ಅವರು ಯೋಚಿಸಿರಬಹುದು. ರಮೇಶ್ ದತ್ತನನ್ನು ನೀರಿಗಾಗಿ ಕೇಳಬಹುದೆಂದು. ಮತ್ತಾಗ ತಲೆ ಸುತ್ತುತ್ತಿರುವ ಬಗ್ಗೆಯೂ ಹೇಳಬಹುದು. ಇಷ್ಟೇ ಅಲ್ಲ, ನೆನ್ನೆ ಸಂಜೆ ತಿರೀಛ ಕಚ್ಚಿದ್ದರ ಬಗ್ಗೆಯೂ ತಿಳಿಸಬಹುದು.

ಸ್ಟೇಟ್ ಬ್ಯಾಂಕಿನ ಅಗ್ನಿಹೋತ್ರಿಯ ಪ್ರಕಾರ ಆತ ಆಗಷ್ಟೇ ಕ್ಯಾಶ್ ರಜಿಸ್ಟರ ಚೆಕ್ ಮಾಡುತ್ತಿದ್ದ. ಅವನ ಟೇಬಲ್ ಮೇಲೆ ಸುಮಾರು ಇಪ್ಪತ್ತೆಂಟು ಸಾವಿರ ರೂಪಾಯಿಗಳ ಬಂಡಲುಗಳಿದ್ದುವು. ಆಗ ಹನ್ನೊಂದು ಹೊಡೆದು ಎರಡು ಮೂರು ಮಿನಿಟುಗಳಾಗಿರಬೇಕು. ಅದೇ ಹೊತ್ತಿಗೆ ಅಪ್ಪ ಅಲ್ಲಿ ಹೊಕ್ಕದ್ದು. ಧೂಳು ತುಂಬಿದ ಅಪ್ಪನ ಮುಖ, ಹೆದರಿಕೆ ಹುಟ್ಟಿಸುವ ಮುಖಮುದ್ರೆ – ಅಚಾನಕ ಅವರು ಜೋರಾಗಿ ಏನೋ ಹೇಳಿದ್ದರು.

ಅಗ್ನಿಹೋತ್ರಿ ಹೇಳಿದ್ದೆಂದರೆ, ನಾನು ಕೂಡಾ ಅಚಾನಕ ಹೆದರಿದ್ದೆ ಎಂದು. ಸಾಮಾನ್ಯವಾಗಿ ಇಂಥ ಜನ (ಅಂದರೆ ಅಪ್ಪನಂತಹ ಜನ) ಬ್ಯಾಂಕಿನ ಇಷ್ಟು ಒಳಗಡೆ ಕ್ಯಾಶಿಯರನ ಹತ್ತಿರ ಬಂದು ಮುಟ್ಟುವುದು ಸಾಧ್ಯವೇ? ಅಗ್ನಿಹೋತ್ರಿ ಇನ್ನೂ ಒಂದು ಮಾತು ಹೇಳಿದ್ದ. ಒಂದು ವೇಳೆ ಅಪ್ಪ ತನ್ನ ಕಡೆಗೆ ಬರುವುದನ್ನು ಒಂದೆರಡು ಮಿನಿಟುಗಳ ಮೊದಲು ನೋಡಿದ್ದರೆ ಇಷ್ಟೊಂದು ಹೆದರುತ್ತಿರಲಿಲ್ಲ. ಆದರೆ ಆದದ್ದೇನೆಂದರೆ ಆತ ಆ ಹೊತ್ತಿಗೆ ಕ್ಯಾಶ್ ರಜಿಸ್ಟರದ ಲೆಕ್ಕಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದ. ಅದೇ ಹೊತ್ತಿನಲ್ಲಿ ಅಪ್ಪ ಜೋರಾಗಿ ಸಪ್ಪಳ ಮಾಡಿದ್ದರು. ಆತ ತಲೆ ಎತ್ತುತ್ತಲೇ ಅಪ್ಪನನ್ನು ನೋಡಿ, ಹೆದರಿ ಕೂಗಿ ಬಿಟ್ಟಿದ್ದ. ಗಂಟೆ ಕೂಡ ಬಾರಿಸಿದ್ದ.

ಇದನ್ನೂ ಓದಿ : New Book :ಅಚ್ಚಿಗೂ ಮೊದಲು; ಸಮತಾ ಆರ್ ಕೃತಿ ‘ಪರಿಮಳಗಳ ಮಾಯೆ’ ಸದ್ಯದಲ್ಲೇ ನಿಮ್ಮ ಕೈಗೆ

ಬ್ಯಾಂಕಿನ ಉಳಿದ ಜನರ ಹೇಳಿಕೆಯ ಪ್ರಕಾರ ಬ್ಯಾಂಕಿನ ನೌಕರರು, ಕೆಲವು ಕಾವಲುಗಾರರು ಅಚಾನಕ್ಕಾಗಿ ಕೇಳಿದ ಕ್ಯಾಶಿಯರನ ಚೀರುವಿಕೆ ಮತ್ತು ಗಂಟೆಯ ಸಪ್ಪಳದಿಂದ ಬೆಚ್ಚಿಬಿದ್ದು ಆ ಕಡೆಗೆ ಓಡಿದ್ದರು. ಅಲ್ಲಿಯವರೆಗೆ ನೇಪಾಳಿ ಕಾವಲುಗಾರ ಥಾಪ ಅವರನ್ನು ಹಿಡಿದು ಹೊಡೆಯುತ್ತ ಹೊಡೆಯುತ್ತ ಎಳೆಯುತ್ತ ಹೊರಗೆ ತಂದಿದ್ದ. ಸುಮಾರು ಮೂವತ್ತೈದು ವರ್ಷಗಳ ರಾಮಕಿಶೋರ ಎಂಬ ನೌಕರ ಹೇಳಿದ್ದ: ಯಾರೋ ಕುಡುಕ ಇಲ್ಲ ಹುಚ್ಚ ಒಳಗೆ ಹೊಕ್ಕಿರಬೇಕೆಂದು ನಾನು ತಿಳಿದಿದ್ದೆ ಎಂದು. ಅದೂ ಅಲ್ಲದೇ ಅವನ ಮುಖ್ಯ ಡ್ಯೂಟಿ ಬ್ಯಾಂಕಿನ ಗೇಟಿನಲ್ಲಿ ನಿಲ್ಲುವುದೇ ಆಗಿದ್ದರಿಂದ ಬ್ಯಾಂಕ್ ಮ್ಯಾನೇಜರ ಚಾರ್ಜ್ಶೀಟ್ ಕೊಡಬಹುದೆಂಬ ಹೆದರಿಕೆ ಬೇರೆ. ಆದರೆ ಆದದ್ದೇನೆಂದರೆ ಯಾವಾಗ ಅಪ್ಪನನ್ನು ಹೊಡೆಯಲಾಗುತ್ತಿತ್ತೋ ಆಗವರು ಇಂಗ್ಲೀಷಿನಲ್ಲಿ ಏನೇನೋ ಮಾತನಾಡಲು ಪ್ರಾರಂಭ ಮಾಡಿದರು. ಅದರಿಂದಾಗಿಯೇ ನೌಕರನ ಸಂಶಯ ಹೆಚ್ಚು ದಟ್ಟವಾಯಿತು.

ಈ ಮಧ್ಯೆ ಬಹುಶಃ ಅಸಿಸ್ಟೆಂಟ್ ಬ್ರ್ಯಾಂಚ್ ಮ್ಯಾನೇಜರ ಮೆಹತಾ ಹೇಳಿಬಿಟ್ಟಿದ್ದರು. ಈ ಮನುಷ್ಯನನ್ನು ಪೂರ್ಣ ತಪಾಸು ಮಾಡಿ, ಜೇಬುಗಳನ್ನೆಲ್ಲ ಶೋಧಿಸಿದ ನಂತರವೇ ಹೊರಗೆ ಹೋಗಲು ಬಿಡಬೇಕೆಂದು. ರಾಮಕಿಶೋರನ ಹೇಳಿಕೆಯ ಪ್ರಕಾರ ಅಪ್ಪನ ಮುಖ ವಿಚಿತ್ರ ರೀತಿಯಲ್ಲಿ ಹೆದರಿಕೆ ಹುಟ್ಟಿಸುವಂತಾಗಿತ್ತು. ಮುಖದ ಮೇಲೆ ಅಂಟಿಕೊಂಡ ಧೂಳು ಮತ್ತು ಯಾವಾಗಲೋ ಮಾಡಿಕೊಂಡ ವಾಂತಿಯ ವಾಸನೆ ಬೇರೆ. ಬ್ಯಾಂಕಿನ ನೌಕರರು ಅಪ್ಪನನ್ನು ಹೆಚ್ಚು ಹೊಡೆಯಲಿಕ್ಕೂ ಸಿದ್ದರಾಗಲಿಲ್ಲ. ಆದರೆ ಬ್ಯಾಂಕಿನ ಹೊರಗೆ, ಗೇಟಿನ ಹತ್ತಿರ ಒಂದು ಪಾನ ಅಂಗಡಿ ಇದೆ. ಅಲ್ಲಿ ಕುಳಿತಿರುತ್ತಿದ್ದ ಬುನ್ನೂ ಹೇಳಿದ್ದೆಂದರೆ ಹನ್ನೊಂದೂ ಮೂವತ್ತರ ಸುಮಾರಿಗೆ ಅಪ್ಪ ಯಾವಾಗ ಬ್ಯಾಂಕಿನಿಂದ ಹೊರಗೆ ಬಂದಿದ್ದರೋ ಆಗ ಅವರ ಅರಿವೆಗಳು ಹರಿದಿದ್ದುವು. ಕೆಳಗಿನ ತುಟಿ ಕತ್ತರಿಸಿ ಹೋಗಿತ್ತು. ಅಲ್ಲಿಂದ ರಕ್ತ ಬರುತ್ತಿತ್ತು. ಕಣ್ಣಿನ ಕೆಳಭಾಗ ಬಾತುಕೊಂಡಿತ್ತು. ಹಲ್ಲಿನ ಕಡಿತದ ಗುರುತುಗಳಿದ್ದುವು ಅಲ್ಲಿ.

ಇದರ ನಂತರ ಬಂದರೆ, ಹನ್ನೊಂದೂ ಮೂವತ್ತರಿಂದ ಒಂದು ಗಂಟೆಯ ನಡುವೆ ಅಪ್ಪ ಎಲ್ಲೆಲ್ಲಿ ಹೋಗಿದ್ದರು ಅನ್ನುವುದರ ಸುಳಿವೇ ಸಿಗುವುದಿಲ್ಲ. ಆದರೆ… ಹಾಂ… ಒಂದು ಮಾತು – ಸ್ಟೇಟ್ ಬ್ಯಾಂಕಿನ ಹೊರಗಡೆಯ ಪಾನ ಅಂಗಡಿಯ ಬುನ್ನೂ ಇನ್ನೂ ಒಂದು ಮಾತು ಹೇಳಿದ್ದ. ಆದರೆ ಇದರ ಬಗ್ಗೆ ಸ್ಪಷ್ಟವಾಗಿ ಹೇಳಲು ಅಳುಕುತ್ತಿದ್ದ. ಬುನ್ನೂ ಹೇಳಿದ್ದೆಂದರೆ… ಸ್ಟೇಟ್ ಬ್ಯಾಂಕಿನಿಂದ ಅಪ್ಪ ಹೊರಬಿದ್ದಾಗ ಬಹುಶಃ ( ಈ ‘ಬಹುಶಃ’ ದ ಮೇಲೆ ಬಹಳ ಒತ್ತು ಕೊಡುತ್ತಿದ್ದ.) ಅಂದಿದ್ದೆಂದರೆ ಬ್ಯಾಂಕಿನ ನೌಕರರು ಅವರ ಹಣ ಮತ್ತು ಕೋರ್ಟಿನ ಕಾಗದ ಪತ್ರಗಳನ್ನು ಕಸಿದುಕೊಂಡಿದ್ದರೆಂದು. ಇದರ ಜೊತೆಗೇ ಆತ ಇನ್ನೂ ಒಂದು ಮಾತು ಜೋಡಿಸುತ್ತಿದ್ದ. ಅದೆಂದರೆ ಇದನ್ನಲ್ಲ, ಬೇರೆ ಏನೋ ಹೇಳಿರಬೇಕೆಂದು. ಕಾರಣ ಆಗ ಅಪ್ಪನಿಗೆ ಸರಿಯಾಗಿ ಮಾತನಾಡಲು ಆಗುತ್ತಿರಲಿಲ್ಲ.ಅವರ ಕೆಳಗಿನ ತುಟಿ ಬಹಳ ಕತ್ತರಿಸಿ ಹೋಗಿತ್ತು. ಬಾಯಿಯಿಂದ ಜೊಲ್ಲು ಸುರಿಯುತ್ತಿತ್ತು. ಅವರ ತಲೆ ಸರಿಯಾಗಿರಲಿಲ್ಲ.

ಆದರೆ ನನ್ನ ಸ್ವಂತದ ಅನುಮಾನವೆಂದರೆ ಅಲ್ಲಿಯವರೆಗೆ ಅಪ್ಪನ ಮೇಲೆ ಆ ಕಷಾಯದ ಪ್ರಭಾವ ಬಹಳ ಜೋರಾಗಿರಬೇಕು. ಆದರೆ, ಪಂ.ರಾಮ ಅವತಾರ ಇದನ್ನು ಒಪ್ಪುವುದಿಲ್ಲ. ಅವರು ಹೇಳುವುದೇನೆಂದರೆ ಈ ಧತ್ತೂರಿಯ ಬೀಜಗಳನ್ನು ಕುಟ್ಟಿ ಹೋಳೀ ಹಬ್ಬದಲ್ಲಿ ಭಾಂಗ ತಯಾರಿಸುತ್ತಾರೆ. ಆದರೆ ಅದನ್ನು ಸೇವಿಸಿ ಇಲ್ಲಿಯ ತನಕ ಯಾರೂ ಹುಚ್ಚರಾಗಿಲ್ಲ. ಪಂ.ರಾಮ ಅವತಾರ ಒಪ್ಪಿಕೊಳ್ಳುವ ಮಾತೆಂದರೆ ತಿರೀಛದ ವಿಷ ಆ ವೇಳೆಯಲ್ಲಿ ಅಪ್ಪನ ಶರೀರದಲ್ಲಿ ಏರತೊಡಗಿತ್ತು. ಮತ್ತದರ ಅಮಲು ಅವರ ಮೆದುಳನ್ನು ಮುಟ್ಟತೊಡಗಿತ್ತು. ಅಥವಾ ಈ ಶಕ್ಯತೆಯ ಸಾಧ್ಯತೆಯೂ ಇದೆ. ಅದೆಂದರೆ ಯಾವಾಗ ಬ್ಯಾಂಕಿನ ಚೌಕಿದಾರ ಥಾಪಾ ಮತ್ತು ಇತರರು ಅಪ್ಪನನ್ನು ಹೊಡೆಯುತ್ತಿದ್ದರೋ ಆಗ ಅವರ ತಲೆಯ ಹಿಂಭಾಗದಲ್ಲಿ ಪೆಟ್ಟು ಬಿದ್ದಿರಬೇಕು. ಮತ್ತು ಆ ಆಘಾತದಿಂದ ಅವರ ತಲೆ ಸರಿಯಾಗಿ ಕೆಲಸ ಮಾಡುತ್ತಿರಲಿಕ್ಕಿಲ್ಲ. ಆದರೆ ನನಗೆ ಅನ್ನಿಸುವದೆಂದರೆ ಅಲ್ಲಿಯವರೆಗೆ ಅಪ್ಪನಿಗೆ ಸ್ವಲ್ಪವಾದರೂ ಎಚ್ಚರಿರಲೇಬೇಕು. ಮತ್ತವರು ಆಗ, ಪಟ್ಟಣದಿಂದ ಮರಳುವುದರ ಬಗ್ಗೆ ವಿಚಾರ ಮಾಡುತ್ತಿರಬೇಕು. ಹಣ ಮತ್ತು ಕೋರ್ಟಿನ ಕಾಗದಪತ್ರಗಳು ಕಳೆದುಹೋದ ಮೇಲೆ ಅಲ್ಲಿರುವುದಕ್ಕೆ ಏನೂ ಅರ್ಥವಿಲ್ಲ ಎಂದೂ ಅಂದುಕೊಂಡಿರಬಹುದು. ಒಂದೆರಡು ಸಲ ಬಹುಶಃ ಹೀಗೂ ಯೋಚಿಸಿರಬಹುದು… ಬ್ಯಾಂಕಿಗೆ ಹೋಗಿ ಕೋರ್ಟಿನ ಕಾಗದ ಪತ್ರಗಳನ್ನಾದರೂ ಮರಳಿಸಲೂ ಕೇಳಬೇಕೆಂದು. ಆದರೆ ಅವರಿಗೆ ಧೈರ್ಯವಾಗಿರಲಿಕ್ಕಿಲ್ಲ. ಅವರು ಹೆದರಿರಲೂಬಹುದು. ಇಡೀ ಬದುಕಿನಲ್ಲಿ ಮೊದಲ ಸಲ ಹೀಗೆ ಅವರನ್ನು ಹೊಡೆಯಲಾಗಿತ್ತು. ಅದಕ್ಕಾಗಿಯೇ ಅವರಿಗೆ ಸರಿಯಾಗಿ ಯೋಚಿಸುವದೂ ಸಾಧ್ಯವಾಗಿರಲಿಕ್ಕಿಲ್ಲ. ಅವರದು ಬಹಳ ಕೃಶಕಾಯ. ಬಾಲ್ಯದಿಂದಲೇ ಅವರಿಗೆ ಅಪೆಂಡಿಸೈಟಿಸ್ ದ ತೊಂದರೆ.

ಇದನ್ನೂ ಓದಿ : Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ

ಇಲ್ಲ, ಹೀಗೂ ಆಗಿರಬಹುದು. ಅಂದರೆ ಅಲ್ಲಿಯ ವರೆಗೆ ಕಷಾಯದ ಪ್ರಭಾವ ಅವರ ಮೇಲೆ ಎಷ್ಟಾಗಿರಬಹುದೆಂದರೆ ಅವರಿಗೆ ಬಹಳ ಹೊತ್ತಿನ ತನಕ ಒಂದೇ ವಿಷಯದ ಮೇಲೆ ಯೋಚಿಸುವುದೇ ಆಗುತ್ತಿರಲಿಕ್ಕಿಲ್ಲ. ಅಥವಾ ಕ್ಷಣಕ್ಷಣಕ್ಕೂ ಹುಟ್ಟುವ ಸಣ್ಣಸಣ್ಣ ಗುಳ್ಳೆಗಳಂತಹ ವಿಚಾರಗಳು ಹೊಸ ಹೊಸ ಆಘಾತಗಳ ತೆಕ್ಕೆಯಲ್ಲಿ ಸಿಕ್ಕಿಹಾಕಿಕೊಂಡು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆದಾಡುತ್ತಿರಬಹುದು. ಆದರೆ ನನಗೆ ಗೊತ್ತಿದೆ. ಅದಕ್ಕೇ ನನಗೆ ಅನ್ನಿಸುವುದೇನೆಂದರೆ, ಅವರ ತಲೆಯಲ್ಲಿ ಪಟ್ಟಣದಿಂದ ಹೊರಬೀಳುವ, ಮನೆಗೆ ಮರಳುವ ವಿಚಾರ ಕ್ಷೀಣ ಮತ್ತು ಮಸಕಾಗಿಯಾದರೂ ಒಂದು ಸ್ಥಿರ ರೂಪ ಪಡೆದಿರಬೇಕು.

ಅಪ್ಪ, ಹೆಚ್ಚುಕಡಿಮೆ ಒಂದು ಹೊಡೆದು ಹದಿನೈದು ನಿಮಿಷಕ್ಕೆ ಪಟ್ಟಣದ ಪೋಲೀಸ್ ಠಾಣೆ ಮುಟ್ಟಿದ್ದರು. ಈ ಪೋಲೀಸ್ ಠಾಣೆ ಪಟ್ಟಣದಿಂದ ಹೊರಗಿನ ತುದಿಗೆ ಸರ್ಕೀಟ್ ಹೌಸದ ಹತ್ತಿರ ಕಟ್ಟಿದ್ದ ವಿಜಯ ಸ್ಥಂಭದ ಬದಿಗಿತ್ತು. ಆಶ್ಚರ್ಯವೆಂದರೆ ಈ ಠಾಣೆಯಿಂದ ಒಂದು ಕಿಲೋ ಮೀಟರದ ಅಂತರದಲ್ಲಿಯೇ ಕೋರ್ಟು. ಅಪ್ಪ ಒಂದುವೇಳೆ ಬಯಸಿದ್ದರೆ ಇಲ್ಲಿಂದ ನಡೆದುಕೊಂಡು ಹೋಗಿ ಹತ್ತು ನಿಮಿಷದಲ್ಲಿ ಕೋರ್ಟು ಮುಟ್ಟಬಹುದಿತ್ತು. ತಿಳಿಯದ ಸಂಗತಿಯೆಂದರೆ ಇಲ್ಲಿಯ ವರೆಗೆ ಒಂದು ವೇಳೆ ಅಪ್ಪ ಬಂದಿದ್ದೇ ಆಗಿದ್ದರೆ ಆಗವರ ತಲೆಯಲ್ಲಿ ಕೋರ್ಟಿನ ಮಾತು ಉಳಿದಿರಲಿಕ್ಕೇ ಇಲ್ಲ. ಕೋರ್ಟಿನ ಕಾಗದ ಪತ್ರಗಳೂ ಉಳಿದಿರಲಿಕ್ಕಿಲ್ಲ.

*

(ಮುಕುಂದ ಜೋಷಿ ಫೋಟೋ ಸೌಜನ್ಯ : ಜಯಂತ ಕಾಯ್ಕಿಣಿ)

(ಭಾಗ 4)

ಇದನ್ನೂ ಓದಿ

ಈ ಕಥೆಯ ಎಲ್ಲಾ ಭಾಗಗಳು ಮತ್ತು ಇನ್ನಿತರ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada