AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Book :ಅಚ್ಚಿಗೂ ಮೊದಲು; ಸಮತಾ ಆರ್ ಕೃತಿ ‘ಪರಿಮಳಗಳ ಮಾಯೆ’ ಸದ್ಯದಲ್ಲೇ ನಿಮ್ಮ ಕೈಗೆ

Samatha R : ‘ನಾನೇನಾದ್ರೂ ನಿಮಗಿಂತ ಮುಂಚೆ ತೀರಿಕೊಂಡರೆ, ತಿಥಿಗೆ, ಪಕ್ಷಕ್ಕೆ, ಬೋಟಿಗೊಜ್ಜು ಮಾಡಿಸಿ ಎಡೆ ಇಡದಿದ್ದರೆ ನಿಮ್ಮನ್ನೆಲ್ಲಾ ಹಿಡಿದುಕೊಂಡು ಕಾಡುತ್ತೇನೆ " ಎಂದು ಗಂಡನನ್ನು  ಹೆದರಿಸಿಟ್ಟಿದ್ದೇನೆ. ಅದಕ್ಕವರು, ‘ಅದಕ್ಕೇನಂತೆ ಬಿಡು, ನನ್ನ ಹೊಸ ಹೆಂಡ್ತಿ ಕೈಲೇ ಮಾಡಿಸಿ ತಿಂಗಳ ತಿಥಿಗೇ ಎಡೆ ಹಿಡಿದು, ಧೂಪ ಹಾಕಿಸುತ್ತೇನೆ" ಎನ್ನುತ್ತಿರುತ್ತಾರೆ.

New Book :ಅಚ್ಚಿಗೂ ಮೊದಲು; ಸಮತಾ ಆರ್ ಕೃತಿ ‘ಪರಿಮಳಗಳ ಮಾಯೆ’ ಸದ್ಯದಲ್ಲೇ ನಿಮ್ಮ ಕೈಗೆ
ಲೇಖಕಿ ಸಮತಾ ಆರ್.
ಶ್ರೀದೇವಿ ಕಳಸದ
|

Updated on: Jun 10, 2022 | 3:04 PM

Share

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ:  ಪರಿಮಳಗಳ ಮಾಯೆ (ಪ್ರಬಂಧಗಳು)
ಲೇಖಕಿ: ಸಮತಾ ಆರ್.
ಪುಟ: 140
ಬೆಲೆ: ರೂ. 140
ಮುಖಪುಟ ವಿನ್ಯಾಸ : ನಭಾ ವಕ್ಕುಂದ
ಪ್ರಕಾಶನ : ಅಹರ್ನಿಶಿ, ಶಿವಮೊಗ್ಗ

*

ಸಮತಾ ಅವರ ಪ್ರಬಂಧಗಳು ಯಾಕೆ ನನಗೆ ತುಂಬ ಇಷ್ಟವಾದುವು ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿಕೊಂಡಿದ್ದೇನೆ. ಬಹುಶ: ಅವರ ಅಹಂಕಾರವೇ ಇಲ್ಲದ ಬರಹದ ಶೈಲಿ ಅದಕ್ಕೊಂದು ಕಾರಣ ಇರಬಹುದೇ ಅಂತ ಯೋಚಿಸುತ್ತಿದ್ದೆ. ಓದುಗರಿಗೆ ಆತ್ಮೀಯವಾಗಿ ಘಟನೆಯೊಂದನ್ನು ಹೇಳುವ ಉತ್ಸಾಹವಿದೆ, ಲವಲವಿಕೆಯಿದೆ. ತುಂಟಾಟವೂ ಇದೆ. ಇವರ ಅವರ ಪ್ರಬಂಧಗಳಲ್ಲಿ ಕಂಡುಬರುವ ಈ ಗುಣಗಳಿಂದಾಗಿ ಪ್ರಬಂಧಗಳು ಅನವಶ್ಯಕವಾದ ಅತಿ ಗಾಂಭೀರ್ಯದಿಂದ ಪಾರಾಗಿವೆ. ಉದಾತ್ತ ವ್ಯಕ್ತಿತ್ವ ಇಲ್ಲದಿದ್ದರೆ ಹೀಗೆಲ್ಲ ಬರೆಯುವುದೂ ಸಾಧ್ವವಿಲ್ಲ ಎಂಬುದು ನನ್ನ ಗಟ್ಟಿ ನಂಬಿಕೆ.

ಡಾ. ಪುರುಷೋತ್ತಮ ಬಿಳಿಮಲೆ, ಲೇಖಕ

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ನಾನು ಓದಿರುವುದು ರಸಾಯನ ಶಾಸ್ತ್ರ, ಮಾಡುತ್ತಿರುವುದು ಗಣಿತ ಶಿಕ್ಷಕಿಯ ಕೆಲಸ, ಸಾಹಿತ್ಯದ ಓದು ಒಂದು ಹವ್ಯಾಸ ಮಾತ್ರ. ಈ ಹವ್ಯಾಸದ ಕಾರಣದಿಂದಾಗಿ ದೊರೆತ ಪ್ರಿಯ ಗೆಳತಿಯರು ಅನೇಕ. ಅವರಲ್ಲಿ ಕವಿ ಸ್ಮಿತಾ ಅಮೃತರಾಜ ಅವರ ಒತ್ತಾಯದಿಂದಲೇ ನಾನು ಬರವಣಿಗೆ ಪ್ರಾರಂಭಿಸಿದ್ದು. ಬರೆಯಲು ಪ್ರಾರಂಭಿಸಿದಾಗ ನನ್ನ ಬರವಣಿಗೆ ಯಾವ ಪ್ರಕಾರಕ್ಕೆ ಸೇರುವುದೋ ಎನ್ನುವ ಗೊಂದಲವಿತ್ತು. ಪ್ರಕಟಿಸಿದ ಕೆಲವು ಬ್ಲಾಗ್, ಪತ್ರಿಕೆಯವರು, ಲಲಿತ ಪ್ರಬಂಧ ಎಂದು, ಇಲ್ಲವೇ ಲಹರಿ ಎಂದು ಪ್ರಕಟಿಸಿದ್ದಾರೆ. ಬರಹಗಳ ಬಗ್ಗೆ ಬರುವ ಅಭಿಪ್ರಾಯಗಳ ಬಗ್ಗೆ ಕೂಡ ಅಂತಹ ನಿರೀಕ್ಷೆಗಳು ಏನೂ ನನಗಿಲ್ಲ. ಓದಿದವರ ಮುಖದಲ್ಲಿ ಒಂದು ಸಣ್ಣ ಮುಗುಳ್ನಗೆ ಮೂಡಿದರೂ ನಾನು ಬರೆದದ್ದು ಸಾರ್ಥಕ ಎಂದುಕೊಳ್ಳುತ್ತೇನೆ. ಬರೆಯುವುದು ಒತ್ತಾಯ ಪೂರ್ವಕವಾಗಿ ಪ್ರಾರಂಭಿಸಿದರೂ, ಬರೀತಾ ಬರೀತಾ ನನ್ನ ದೈನಂದಿನ ಜೀವನದ ಒತ್ತಡದಿಂದ ಕೊಂಚ ಬಿಡುವು ನೀಡುವ, ನೋವು ನಿವಾರಕ ಗುಳಿಗೆಯಾಗಿಯೂ ಬರವಣಿಗೆ ಕೆಲಸ ಮಾಡುತ್ತಿದೆ.

ಸಮತಾ ಆರ್. ಲೇಖಕಿ

ಬೋಟಿ ಗೊಜ್ಜು 

“ಹಬ್ಬಕ್ ಬರೋದಿಲ್ವ ಈ ಸರಿ, ಹಬ್ಬಕ್ ಅಲ್ದಿದ್ರೆ ವರ್ಷ್ತೊಡಕ್ಕಾದ್ರೂ ಬಾ, ಮರಿ ಕಡ್ದು ಬೋಟಿ ಗೊಜ್ಜು ಮಾಡುಸ್ತೀನಿ”ಎಂದು ಹಬ್ಬಕ್ಕೆ ನನ್ನ ಮಾವನ ಮಗ ಕರೆದ.

“ರಜೆ ಇಲ್ಲ, ಮಕ್ಕಳ ರಜಾದಿನಗಳ ಕ್ಯಾಂಪ್,” ಎಂದೆಲ್ಲಾ ನೆಪ ಹೇಳಿ ತಪ್ಪಿಸಿಕೊಳ್ಳೋಣ ಎಂದುಕೊಳ್ಳುತ್ತಿದ್ದ ನನ್ನ ಮನಸ್ಸಿಗೆ “ಬೋಟಿ ಗೊಜ್ಜು” ಸಡನ್ನಾಗಿ ಬ್ರೇಕ್ ಹಾಕಿಸಿತು.

“ಆಗ್ಲಿ ತೊಗೊಳ್ಳೋ, ಹೆಂಗಿದ್ರೂ ಅತ್ತೆಮಾವನ್ನ ನೋಡಿ ಸುಮಾರ್ ದಿನಾ ಆಯ್ತು, ಬರ್ತೀನಿ ಕಣಂತೆ.”ಎಂದು ಹೇಳಿ ಬೋಟಿ ಗೊಜ್ಜಿನ ನಿರೀಕ್ಷೆಯಲ್ಲಿ ಬಾಯಲಿ ನೀರು ಸುರಿಸಿಕೊಂಡು ಸಿದ್ಧಳಾದೆ. ನನಗೆ ಅತ್ಯಂತ ಪ್ರಿಯವಾದ ಅಡುಗೆ ಯಾವುದೆಂದು ಯಾರಾದರೂ ಕೇಳಿದರೆ ಕನಸಲ್ಲೂ ನನ್ನ ಉತ್ತರ ಒಂದೇ, ‘ಬೋಟಿ ಗೊಜ್ಜು’ ಕೆಲವರಿಗೆ ಇದೇನೆಂದು ಅರ್ಥವಾಗದಿರಬಹುದು, ಹೇಳುತ್ತೇನೆ ಕೇಳಿ.

‘ಕೊಂದ ಪಾಪ ತಿಂದು ಪರಿಹಾರ’ವೆಂಬಂತೆ ನಮ್ಮ ಮೂಡು ಸೀಮೆಯ ಹಳ್ಳಿಗಳ ಕಡೆ ಮರಿ ಕಡಿದಾಗ ಅಂದರೆ ಆಡು ಇಲ್ಲವೇ ಕುರಿಗಳನ್ನು ಕಡಿದಾಗ ಆ ಮರಿಯ ತಲೆಕಾಲು, ಮಾಂಸ, ಬೋಟಿ ಎಂದು ಮೂರು ತರಹದ ಮಾಂಸಗಳಾಗಿ ವಿಂಗಡಿಸುತ್ತಾರೆ ತಲೆ ಕಾಲು ಸೂಪ್ ಬಾಣಂತಿಯರಿಗೆ, ದೇಹ ದುರ್ಬಲರಾದವರಿಗೆ ಪುಷ್ಟಿಗಾಗಿ ನೀಡುತ್ತಾರೆ.

ಬೋಟಿ ಎಂದರೆ ಮರಿಯ ಜೀರ್ಣಾಂಗವ್ಯೂಹದ ಅಂಗಗಳಾದ ಜಠರ, ಈಲಿ, ಕೆಂಪೀಲಿ, ಕರುಳುಗಳನ್ನು ಚೆನ್ನಾಗಿ ಶುದ್ಧ ಮಾಡಿ, ಸಣ್ಣಸಣ್ಣ ತುಂಡುಗಳಾಗಿ ಮಾಡಿರುವ ಮಾಂಸ. ಇದಕ್ಕೆ ಮಾಂಸದ ಸಾರಿಗೆ ಹಾಕುವ ಮಸಾಲೆ ಹಾಕಿ ಬಟಾಣಿ ಇಲ್ಲವೇ ನೆನೆಸಿದ ಕಡಲೆ ಕಾಳು ಸೇರಿಸಿ ಮಾಡುವ ಗೊಜ್ಜು ಬೋಟಿ ಗೊಜ್ಜು. ಎಷ್ಟೇ ತೊಳೆದರೂ ಪಾರ್ಟ್ಸ್ ಪರ್ ಮಿಲಿಯನ್ ಲೆಕ್ಕದಲ್ಲಿ ಉಳಿದುಬಿಡುವ ಜೀರ್ಣಾಂಗವ್ಯೂಹದ ಕಿಣ್ವಗಳು, ಮರಿ ತಿಂದಿದ್ದ ಹುಲ್ಲು ಸೊಪ್ಪು ಪುಷ್ಪಗಳ ರಾಸಾಯನಿಕಗಳು ಸೇರಿ, ಬೋಟಿಗೆ ತನ್ನದೇ ಆದ ವಿಶಿಷ್ಟ ಪರಿಮಳ, ರುಚಿ ನೀಡುತ್ತವೆ. ನಮ್ಮ ಹಳ್ಳಿಗಳ ಕಡೆ ಮದುವೆಯ ಮಾರನೆಯ ಬೀಗರೂಟದ ಕರ್ನೆರೆಗೆ , ಹಬ್ಬಗಳ ಮಾರನೆಯ ವರ್ಷ್ತೊಡಕಿಗೆ, ಯಾವುದಾದರೂ ಊರಮ್ಮನ ಹರ್ಸೇವೆಗೆ ಮರಿ ಕಡಿದಾಗ ಮಾಡುವ ತರಹಾವಾರಿ ಮಾಂಸದಡುಗೆಗಳಲ್ಲಿ ಬೋಟಿ ಗೊಜ್ಜು ಕೂಡ ಒಂದು.

ಇದನ್ನೂ ಓದಿ : Installation Art : ತೈವಾನ್​ಗೆ ಹೊರಡುವ ಮೊದಲೇ ‘ಸಕೀನಾಳ ಮುತ್ತು’ ಮುಖಪುಟದೊಳಗೆ ಈ ಕಲಾಕೃತಿ ಅಡಗಿದ್ದು ಹೇಗೆ?

ಮೊದಲ ಬಾರಿಗೆ ಬೋಟಿ ಗೊಜ್ಜು ಯಾವಾಗ ತಿಂದದ್ದು ಅಂತ ನೆನಪಿಲ್ಲ. ಆದರೆ ಅಪಾರ ಪ್ರಮಾಣದಲ್ಲಿರುವ ನೆಂಟರಿಷ್ಟರ ಮನೆಯ ಕಾರ್ಯಗಳಿಗೆ ವರ್ಷಕ್ಕೆ ಹತ್ತನ್ನೆರಡು ಬಾರಿಯಾದರೂ ಚಿಕ್ಕಂದಿನಿಂದ ಹೋಗುತ್ತಾ ಬರುತ್ತಾ ಇರುವ ರೂಢಿಯಿಂದಾಗಿ ಎಲ್ಲಾ ಕಾರ್ಯಗಳಲ್ಲೂ ತಿಂದುತಿಂದು ಹಲ್ಲಿಗೆ ರಸವಿಳಿದುಹೋಗಿದೆ. ನಾನು ಮನೆಯಲ್ಲಿ ಮಾಡಿದರೆ, ಬೋಟಿಯನ್ನು ಚೆನ್ನಾಗಿ ಉಜ್ಜಿ ಉಜ್ಜಿ, ತೊಳೆದು ತೊಳೆದು ಅದರ ಗಮವನ್ನೆಲ್ಲಾ ಹೋಗಿಸಿ, ಹೊಟ್ಟಿನಂತಾಗಿಸಿ ಕೊಡುವ ನನ್ನ ಮಿಸ್ಟರ್ ಕ್ಲೀನ್ ಗಂಡನಿಂದಾಗಿ ನನ್ನ ಬೋಟಿ ಗೊಜ್ಜು ತನ್ನ ಒರಿಜಿನಲ್ ವಾಸನೆ ರುಚಿ ಕಳೆದುಕೊಂಡು ಏನೋ ಒಂದು ತರಕಾರಿಯ ಗೊಜ್ಜಿನಂತಾಗಿ ಬಿಡುತ್ತದೆ. ಹಾಗಾಗಿ ಮನೆಯಲ್ಲಿ ಅಷ್ಟಾಗಿ ಮಾಡದೆ, ಮದುವೆ, ಹಬ್ಬಗಳಿಗೆ ತಪ್ಪಿಸಿಕೊಂಡರೂ ಕರ್ನೆರೆ , ವರ್ಷ್ತೊಡಕುಗಳಿಗೆ ತಪ್ಪದೇ ಹಾಜರಾಗಿ ತಿಂದು ಆಸೆ ತೀರಿಸಿಕೊಳ್ಳುತ್ತೇನೆ.

ನನ್ನ ಎರಡನೆಯ ಬಸಿರಿನಲ್ಲಿ ಹೆರಿಗೆಗೆಂದು ನನ್ನ ಗಂಡನ ಅಕ್ಕನ ಮನೆಗೆ ಹೋಗಿದ್ದೆ. ನನಗಿಷ್ಟವೆಂದು ನನ್ನ ಅತ್ತಿಗೆ ರಾತ್ರಿ ಊಟಕ್ಕೆ ಬೋಟಿ ಗೊಜ್ಜು ಮಾಡಿ ಬಡಿಸಿದರು. ಇನ್ನೂ ಧಾರಾಳವಾಗಿ ಮಿಕ್ಕಿದ್ದನ್ನು ಫ್ರಿಜ್ ನಲ್ಲಿಟ್ಟು”ಬೆಳಿಗ್ಗೆಗೆ ತಿನ್ನುವೆಯಂತೆ” ಎಂದಿದ್ದರು. ಆದರೆ ಆ ರಾತ್ರಿಯೇ ನನಗೆ ನೀರೊಡೆದು ಆಸ್ಪತ್ರೆಗೆ ಸೇರುವಂತಾಯಿತು. ಬೆಳಿಗ್ಗೆ ಎನಿಮೋ ಕೊಡಿಸಿಕೊಂಡು, ಹೊಟ್ಟೆ ಕ್ಲೀನ್ ಮಾಡಿಸಿಕೊಂಡು, ಕೈಗೆ ಡ್ರಿಪ್ಸ್ ನ ಸೂಜಿ ಚುಚ್ಚಿಸಿಕೊಂಡು ಆಪರೇಷನ್ ಥಿಯೇಟರ್​ಗೆ ಹೋಗಲು ಡಾಕ್ಟರರ ಕರೆಗಾಗಿ ಕಾಯುತ್ತ ಮಲಗಿದ್ದೆ. ಆಗ ಅಚಾನಕ್ಕಾಗಿ ನನಗೆ ನಮ್ಮತ್ತಿಗೆ ಮನೆಯ ಫ್ರಿಜ್ ನಲ್ಲಿದ್ದ ಬೋಟಿ ಗೊಜ್ಜು ನೆನಪಾಗಿ ಬಿಡಬೇಕೆ! ನನ್ನ ಕಣ್ಣು ತುಂಬಿಕೊಂಡಿದ್ದನ್ನು ಕಂಡ ಪಕ್ಕದಲ್ಲೇ ಕುಳಿತಿದ್ದ ನನ್ನ ಗಂಡ,”ಯಾಕಪ್ಪ? ಎರಡನೆಯದು ಕೂಡ ಸಿಸೇರಿಯನ್ ಎಂದು ಬೇಜಾರಾ?”ಎಂದರು. ನಾನದಕ್ಕೆ ಸುಳ್ಳು ಸುಳ್ಳೇ “ಹೂಂ ಕಣ್ರೀ”ಎಂದು ಹೇಳಿ ಕಣ್ಣೊರೆಸಿಕೊಂಡೆ. ನಿಜ ಹೇಳಿದ್ದಿದ್ದರೆ ಅಲ್ಲೇ ನನಗೆ ಚೆನ್ನಾಗಿ ಉಗಿದು ಉಪ್ಪಾಕಿರುತ್ತಿದ್ದರು.

ಕಾರ್ಯಗಳಲ್ಲಿ ಊಟಕ್ಕೆ ಕುಳಿತಿರುವಾಗ, ಅಕ್ಕಪಕ್ಕಗಳಲ್ಲಿ ಮಕ್ಕಳಿಬ್ಬರನ್ನೂ ಕೂರಿಸಿಕೊಂಡು, ಬಡಿಸಲು ಬಂದದ್ದನ್ನೆಲ್ಲಾ ಕೈ ಅಡ್ಡ ಹಿಡಿದು ಬೇಡವೆನ್ನುವ ಅವರನ್ನು ಹೆದರಿಸಿ, ಕಡ್ಡಾಯವಾಗಿ ಬೋಟಿ ಗೊಜ್ಜು ಹಾಕಿಸಿಕೊಂಡು ನಂತರ ನನ್ನ ಎಲೆಗೆ ವರ್ಗಾಯಿಸುವಂತೆ ಮುಂಚಿತವಾಗಿಯೇ ತಾಕಿತು ಮಾಡಿರುತ್ತೇನೆ. ಅಂತಹ ಕಾರ್ಯಗಳಲ್ಲಿ ನನ್ನ ಗಂಡನAತೂ ಅಪ್ಪಿತಪ್ಪಿಯೂ ನನ್ನ ಪಕ್ಕದಲ್ಲಿ ಊಟಕ್ಕೆ ಕುಳಿತುಕೊಳ್ಳುವುದಿಲ್ಲ. ಮಕ್ಕಳಂತೂ”ಅಮ್ಮ! ಒಂಚೂರೂ ನಾಚಿಕೆ ಇಲ್ವಲ್ಲಮ್ಮ ನಿನಗೆ”ಎಂದು ಮುಸಿ ಮುಸಿ ನಕ್ಕರೂ,” ಬೋಟಿಗೊಜ್ಜಿನ ವಿಷಯಕ್ಕೆ ಬಂದರೆ ಮಾತ್ರ ನಾಚಿಕೆ ಗೀಚಿಕೆ ಎಲ್ಲಾ ನಾಗಮಂಗಲದಾಚೆಗೆ,”ಅAದುಕೊಳ್ಳುವ ನನಗೇನು ಬೇಜಾರಿಲ್ಲ!

ಇದನ್ನೂ ಓದಿ : ಅಚ್ಚಿಗೂ ಮೊದಲು: ಮಂಜುನಾಥ ಚಾರ್ವಾಕರ ‘ಮುರಕಮಿ; ಕಿನೊ ಮತ್ತು ಇತರ ಕತೆಗಳು’ ಸದ್ಯದಲ್ಲೇ ನಿಮ್ಮ ಓದಿಗೆ

ಒಮ್ಮೆ ಮನೆಯಲ್ಲಿ ಮಾಂಸದಡಿಗೆ ಮಾಡಿ, ವಿಶೇಷವಾಗಿ ಬೋಟಿ ಗೊಜ್ಜನ್ನು ತಯಾರಿಸಿ, ನನ್ನ ಗಂಡನ ಸ್ನೇಹಿತರೊಬ್ಬರನ್ನು ಕುಟುಂಬ ಸಮೇತರಾಗಿ ಊಟಕ್ಕೆ ಕರೆದಿದ್ದೆವು.ಬಂದವರಿಗೆಲ್ಲಾ ಬಡಿಸಿ ನಾನು ಅಡುಗೆ ಮನೆ ಬಾಗಿಲಲ್ಲಿ ಸೌಟು ಹಿಡಿದು ನಿಂತಿದ್ದಾಗ, ನನ್ನ ಬೋಟಿ ಗೊಜ್ಜಿನ ಪ್ರೀತಿ ಬಗ್ಗೆ ತಿಳಿದಿದ್ದ, ಹಾಸ್ಯ ಪ್ರಿಯರಾದ ಆ ಅತಿಥಿ”ಅರೆ! ಮೇಡಂ,ನಮಗೆಲ್ಲಾ ಬಡಿಸಿ ನೀವು ಅಲ್ಲಿ ಜೊಲ್ಲು ಸುರಿಸಿಕೊಂಡು ನಿಂತಿರುವುದನ್ನು ನೋಡಲಾಗುತ್ತಿಲ್ಲ. ನೀವೂ ಬನ್ನಿ,ನಮ್ಮನ್ನು ಸೇರಿಕೊಳ್ಳಿ,”ಎನ್ನಬೇಕೆ. ಆ ದಿನ ರಾತ್ರಿ ನನ್ನ ಗಂಡ “ಈ ಬೋಟಿ ಗೊಜ್ಜು ಇಷ್ಟೊಂದು ಮಾನ ಕಳೆಯುತ್ತದೆ ಎಂದು ಗೊತ್ತಿದ್ದಿದ್ದರೆ, ಇವಳನ್ನು ಮದುವೆಯೇ ಆಗುತ್ತಿರಲಿಲ್ಲ “ಎಂದು ಕೊರಗಿದರು.

ನಮ್ಮಮ್ಮನ ದೊಡ್ಡಣ್ಣನ ಹೆಂಡತಿ, ನಮ್ಮ ದೊಡ್ಡತ್ತೆ ತಯಾರಿಸುವ ಹಾಗೆ ಬೋಟಿ ಗೊಜ್ಜನ್ನು ಪ್ರಪಂಚದಲ್ಲಿ ಬೇರಿನ್ಯಾರೂ ಮಾಡಲಾರರು. ನಾನು ಯಾವುದೇ ಹಬ್ಬದ ವರ್ಷ್ತೊಡಕಿಗೆ ಹೋದರೂ,ಎಲೆಯ ತುಂಬಾ ಅನ್ನದ ಬದಲಿಗೆ ಬೋಟಿಗೊಜ್ಜ ಬಡಿಸಿ” ನಿನಗೆಷ್ಟು ಬೇಕು ಅಷ್ಟು ತಿನ್ನವ್ವಾ” ಎನ್ನುವ ನಮ್ಮತ್ತೆ ನನ್ನ ಪಾಲಿನ ಬೈಲಾಪುರದಮ್ಮನೇ ಸರಿ.ನಮ್ಮತ್ತೆಯನ್ನು ಬೋಟಿಗೊಜ್ಜಿ ನಲ್ಲಿ ಯಾರಾದರೂ ಸೈಡ್ ಹೊಡೆಯುವವರಿದ್ದರೆ ಅದು ನಮ್ಮೂರಿನ ಒಬ್ಬ ಬಾಣಸಿಗ ಕುಬೇರ ಮಾತ್ರ.ನಮ್ಮ ಸಂಬAಧಿಕರೆಲ್ಲರ ಮನೆಗಳ ಕಾರ್ಯಗಳಲ್ಲಿ ಮಾಂಸದಡಿಗೆಯ ಉಸ್ತುವಾರಿ ಆತನದೇ.ಒಂದೇ ಒಂದು ಬಾರಿಯಾದರೂ ಆತನ ಬೋಟಿ ಗೊಜ್ಜು ಹಾಳಾದದ್ದನ್ನು ನಾನಂತೂ ಕಂಡಿಲ್ಲ,ಕೇಳಿಲ್ಲ.

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ

ಒಮ್ಮೆ ನನ್ನ ಕಸಿನೊಬ್ಬಳ ಮಗನ ಮದುವೆಯಲ್ಲಿ ಕರ್ನೆರೆಗೆ ಮೂವತ್ತು ಮರಿ ಕಡಿದು ಭರ್ಜರಿಯಾಗಿ ಬೀಗರೂಟ ಮಾಡಿಸಿದ್ದರು.ಅಡುಗೆ ಇನ್ಯಾರದು?ಕುಬೇರನದೇ.ಮೂವತ್ತು ಮರಿ ಅಂದ ಮೇಲೆ ಕೇಳಬೇಕೆ,ಮಾಂಸದ ರಾಶಿಯೇ ಸುರಿದು ಬಿದ್ದಿತ್ತು.ಬಡಿಸುವಾಗಲೂ ಧಾರಾಳವಾಗಿ ಬಡಿಸಿದರು.ಊಟ ಮುಗಿಸಿ ಕೈ ತೊಳೆಯಲು ಹೋಗುವಾಗ ನನ್ನ ಕಣ್ಣು ಭೋಜನ ಶಾಲೆಯ ಪಕ್ಕದಲ್ಲೇ ಇದ್ದ ಅಡುಗೆ ಮನೆ ಕಡೆ ಹೋಯಿತು.ಬಕೆಟ್ ಗಟ್ಟಲೇ ತುಂಬಿಸಿಟ್ಟಿದ್ದ ಬೋಟಿ ಗೊಜ್ಜನ್ನು ನೋಡಿ”ರಾತ್ರೆಗೂ ಸಿಕ್ಕೋ ಹಂಗಿದ್ದಿದ್ದರೇ”ಎAದು ಮರುಗುತ್ತಾ ಹೋದೆ. ಒಂದೆರಡು ವಾರಗಳ ನಂತರ ಸಿಕ್ಕ ನನ್ನ ಕಸಿನ್,ತನ್ನ ಮಗನ ಮದುವೆಯ ವೈಭವವನ್ನ ಸಾರಿಕೊಳ್ಳುತ್ತಾ,”ನಾವಂತೂ ಯಾವ್ದಕ್ಕೂ ಕೈ ಹಿಡಿಲಿಲ್ಲಪ್ಪ,ಧಾರಾಳವಾಗಿ ಅಡುಗೆ ಮಾಡಿಸ್ದೋ. ಕರ್ನೆರೆ ದಿನ ವಸಿ ಅಡ್ಗೆ ಮಿಕ್ಕಿತ್ತಿಲ್ಲಾ! ರಾತ್ರೆ ಊರೋರಿಗೆಲ್ಲಾ ಹಂಚಿದ್ರೂ ಇನ್ನೂ ಮಿಕ್ಕಿತ್ತು.ಬೆಳಿಗ್ಗೆ ಎರಡು ಬಕೆಟ್ ಬೋಟಿ ಗೊಜ್ಜು ತಿಪ್ಪೆಗೆ ಸುರ್ದೋ”ಎಂದಾಗ ನನ್ನೆದೆ ಒಡೆದು ಹೋಗದ್ದು ನನ್ನ ಪುಣ್ಯ.

ನನ್ನ ಬೋಟಿಗೊಜ್ಜಿನ ಲೋಭದ ಬಗ್ಗೆ ತಿಳಿದಿರುವ ನನ್ನ ಸಹೋದ್ಯೋಗಿಗಳು ತಾವೆಲ್ಲಾದರೂ ಹೊರಗಡೆ ಸಮಾರಂಭಗಳಲ್ಲಿ ತಿಂದು ಬಂದ್ರೆ ಮಾರನೇ ದಿನ ಶಾಲೆಯಲ್ಲಿ ಅದರ ರುಚಿಯ ವರ್ಣನೆ ಮಾಡಿ,ಬಡಿಸಿದ್ದ ಪ್ರಮಾಣವನ್ನು ಒಂದಕ್ಕೆ ಎರಡರಂತೆ ಹೆಚ್ಚು ಮಾಡಿ ಹೇಳಿ ನನ್ನ ಕಣ್ಣಲ್ಲಿ ನೀರು ತರಿಸುತ್ತಾರೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ನನ್ನ ತಮ್ಮನ ಸಹೋದ್ಯೋಗಿಗಳಲ್ಲಿ ಕೆಲವರು ಯುರೋಪಿಯನ್ನರಿದ್ದಾರಂತೆ. ಭಾರತೀಯ ಆಹಾರ ಪದ್ಧತಿಗಳ ಬಗ್ಗೆ ಕುತೂಹಲಕಾರಿಗಳಾಗಿರುವ ಅವರಿಗೆಲ್ಲಾ ಬೇರೆ ಬೇರೆ ರೀತಿಯ ಅಡುಗೆಗಳನ್ನು ತಿನ್ನಿಸಿ ರುಚಿ ತೋರಿಸುತ್ತಿದ್ದಾರಂತೆ. ಒಮ್ಮೆ ಒಂದು ಮಿಲ್ಟ್ರಿ ಹೋಟೆಲಿಗೆ ಕರೆದುಕೊಂಡು ಹೋಗಿ ತಿನ್ನಿಸಿದ್ದಾರೆ. ಮಾರನೇ ದಿನ ಅವರೆಲ್ಲಾ ಆಫೀಸ್​ನಲ್ಲಿ”ಎಸ್ಟರ್ಡೇ ವಿ ಹ್ಯಾಡ್ ಗೊಟ್ಸ್ ಶಿಟ್” ಎಂದು ಹೇಳಿಕೊಂಡು ತಿರುಗಿದ್ದನ್ನು ನನ್ನ ತಮ್ಮ ರಸವತ್ತಾಗಿ ವರ್ಣಿಸಿದ.

“ಉಪ್ಪು, ಹುಳಿ, ಖಾರವಿಲ್ಲದ ಅಡುಗೆ ತಿಂದು ಮರಗಟ್ಟಿರುವ ಅವರ ನಾಲಿಗೆಗೆ ಸರಿಯಾದ ಚಿಕಿತ್ಸೆಯಾಗಿದೆ ಬಿಡು” ಎಂದು ನಾನು ನಕ್ಕೆ.

ನನ್ನ ಮನೆಯಲ್ಲಿ ನನಗೊಬ್ಬಳಿಗೆ ಮಾತ್ರ ಅದಿಷ್ಟ. ಗಂಡ ಮಕ್ಕಳಿಬ್ಬರಿಗೂ ಅದ ಕಂಡರಾಗದು. ಇನ್ನು ಗೀಳೆನಿಸುವಷ್ಟು ಶುಚಿತ್ವದ ಪ್ರಿಯರಾದ ನನ್ನ ಗಂಡ “ಅದು ಹೇಗೆ ಆ ವಾಸನೆ ಸಹಿಸಿಕೊಂಡು ತಿನ್ನುತ್ತಿಯೋ? ನಿನಗೆ ನಾಗರಿಕತೆ ಬರಲು ಇನ್ನೆಷ್ಟು ದಿನ ಬೇಕೋ” ಎಂದು ನಿಟ್ಟುಸಿರು ಬಿಡುತ್ತಾರೆ. “ಅರೆ!ಬೋಟಿ ಗೊಜ್ಜು ತಿನ್ನುವುದಕ್ಕೂ ನಾಗರಿಕತೆಗೂ ಏನಪ್ಪಾ ಸಂಬಂಧ!”

ನನ್ನ ಮಕ್ಕಳಿಗೂ ನಾನು ನಾಗರಿಕತೆ ತಿಳಿಯದ ಹಳ್ಳಿ ಗಮಾರೇ. “ಬರೀ ಯಾವಾಗ್ಲೂ ಹಳ್ಳಿ ಅಡುಗೆ ಮಾಡಿ ಕೊಂಡಿರುತ್ತೀಯಲ್ಲಮ್ಮ, ಟಿವಿ ಇಂಟರ್ನೆಟ್ ನೋಡಿಕೊಂಡು ಮಾಡರ್ನ್ ಕುಕಿಂಗ್ ಹೇಗಿರುತ್ತೆ ಅಂತಾ ಕಲ್ತುಕೋ. ಎಂಥೆಂಥಾ ವರೈಟಿ ವರೈಟಿ ಡಿಷಸ್ ತೋರಿಸ್ತಾರೆ ಮಾಸ್ಟರ್ ಶೆಫ್ ನಲ್ಲಿ. ಸ್ವಲ್ಪ ನೋಡಿ ಕಲ್ತುಕೋ. ಸ್ವಲ್ಪ ನೀನೂ ನಿನ್ನ ಬಾವಿ ಬಿಟ್ಟು ಆಚೆ ಬಾ”ಎಂದ ಮಕ್ಕಳಿಗಾಗಿ ಒಂದು ನಾಲ್ಕಾರು ಎಪಿಸೋಡ್ ಮಾಸ್ಟರ್ ಶೆಫ್ ನೋಡಿದ್ದಾಯಿತು.

ಅಲ್ಲಿಯ ಶೆಫ್ ಗಳ ಶುಭ್ರಾತಿಶುಭ್ರ ಏಪ್ರನ್​ಗಳು, ತಣಗುಟ್ಟುವ ಅಡಿಗೆ ಮನೆ, ಪಾತ್ರೆಗಳು, ಹೆಸ್ರು ತಿಳಿಯದ ಥರಾವರಿ  ಯಂತ್ರಗಳು, ಹಣ್ಣು, ತರಕಾರಿ, ಸಾಂಬಾರ ಪದಾರ್ಥ, ಡೈರಿ ಉತ್ಪನ್ನಗಳು, ವಿವಿಧ ಬಗೆಯ ನೆಲ, ಜಲಚರಗಳ ಮಾಂಸಗಳಿಂದ ತುಂಬಿ ತುಳುಕುತ್ತಿರುವ ಪ್ಯಾಂಟ್ರಿಗಳೆಲ್ಲಿ? ಒಂದು ಸ್ಟೌ , ಮಿಕ್ಸಿ, ಮತ್ತೊಂದು ಫ್ರಿಜ್ಕೆ ಕೆಲವು ಪಾತ್ರೆಗಳಿರುವ ನನ್ನ ಅಡುಗೆ ಮನೆಯಲ್ಲಿ?

ಇದನ್ನೂ ಓದಿ : New Book ; ಶೆಲ್ಫಿಗೇರುವ ಮುನ್ನ : ’ಅಮರ ಸುಳ್ಯದ ರೈತ ಹೋರಾಟ‘

ಇನ್ನು ಅವರು ಮಾಡುವ ನಾಜೂಕಾತಿ ನಾಜೂಕಿನ ಡಿಷಸ್ ಗಳದೇ ಬೇರೆ ಕಥೆ. ಒಂದು ಗಿಡದ ಒಂದೆರಡು ಎಲೆ ಕಿತ್ತುಕೊಂಡು, ತರಕಾರಿ, ಹಣ್ಣುಗಳ ಸಿಪ್ಪೆ ಗಿಪ್ಪೆ ಎಲ್ಲಾ ಹೆರೆದು ಹಾಕಿ, ನಾಜೂಕಾಗಿ ತಿರುಳು ಮಾತ್ರ ತೆಗೆದುಕೊಂಡು ಬಳಸುತ್ತಾರೆ. ಯಾವುದಾದರೂ ಹಿಟ್ಟಿನ ಇಷ್ಟಗಲ ಚಪಾತಿ ಉಜ್ಜಿ, ಅದರಲ್ಲಿ ಬೇಕಾದ ಆಕಾರಗಳನ್ನು ಮಾತ್ರ, ವಿವಿಧ ವಿನ್ಯಾಸದ ಬಟ್ಟಲುಗಳಿಂದ ಕತ್ತರಿಸಿ ತೆಗೆದುಕೊಂಡು ಉಳಿದಿದ್ದನ್ನು ಬಿಸಾಡುತ್ತಾರೆ. ಯಾವುದೇ ಪ್ರಾಣಿಯಿರಲಿ  ಸೂಕ್ಷ್ಮವಾಗಿ ಚಾಕು ಬಳಸುತ್ತಾ,ಒಂದೆರಡು ಚದರ ಇಂಚುಗಳಷ್ಟು ಮಾತ್ರ ಮಾಂಸ ತೆಗೆದುಕೊಂಡು ಉಳಿದಿದ್ದನ್ನೆಲ್ಲ ಎಸೆಯುವಾಗ ನನ್ನ ಹೊಟ್ಟೆಯುರಿದು ಹೋಗುತ್ತದೆ.

ಒಲೆಯ ಮೇಲೆ ಬೇಯುತ್ತಿರುವ ಅಡುಗೆಗಿಂತ ಹತ್ತುಪಟ್ಟು ಹೆಚ್ಚು ಪಕ್ಕದ ಕಸದಬುಟ್ಟಿಯಲ್ಲಿ ತುಂಬಿರುವುದುನ್ನು ಕಂಡಾಗ, ಕಸದಿಂದ ರಸ ತಯಾರಿಸುವ ನಮ್ಮ ಭಾರತೀಯ ಅಡುಗೆಯ ತಂತ್ರಗಾರಿಕೆಗಳು ನೆನಪಾಗುತ್ತವೆ.

ನಮ್ಮಲ್ಲಿ ನೋಡಿ,ತರಕಾರಿ ಹಣ್ಣುಗಳ ಸಿಪ್ಪೆಗಳು ಚಟ್ನಿ ಉಪ್ಪಿನಕಾಯಿಗಳಾಗುತ್ತವೆ.ನುಗ್ಗೆ, ಬಾಳೆ, ತೆಂಗು, ಹುಣಿಸೆ ಮುಂತಾದ ಮರಗಳ ಹೂ, ಚಿಗುರು, ಕಾಯಿ, ಹಣ್ಣು, ದಿಂಡು ಎಂತೆಲ್ಲಾ ನಾವು ಬಳಸುವುದಿಲ್ಲವೇ? ಹೊಲದ ಕಳೆಯಾದ ಬೆರಕೆ ಸೊಪ್ಪಿನ ರುಚಿ ಯಾರಿಗೆ ತಿಳಿಯದು?ಮರಿಯ ದೇಹದ ಯಾವ ಭಾಗವೂ ಹಾಳಾಗದಂತೆ ಬಳಸುವುದು ಉಳಿತಾಯದ ದೊಡ್ಡ ಪಾಠ ಎನ್ನುತ್ತೇನೆ ನಾನು.ಮೀನಿನ ತಲೆ,ಕೋಳಿಯ ತಲೆ ಕಾಲುಗಳನ್ನು ಚಪ್ಪರಿಸಿಕೊಂಡು ತಿನ್ನುವ ನನ್ನಣ್ಣನ ಪ್ರಕಾರ “ಅವರಿಗೆ ಇದರ ರುಚಿ ಅಂದ್ರೇನು ಅಂತ ಗೊತ್ತಿಲ್ಲ”.

ಇನ್ನು ಮಾಡಿದ ಅಡುಗೆಯನ್ನು ಅವರು ತಿನ್ನುವ ಪರಿಯೋ! ಅಂದಚಂದದ ತಟ್ಟೆ ಪಾತ್ರೆಗಳಲ್ಲಿ ಅಲಂಕಾರಿಕವಾಗಿ ಮಾಡಿರುವ ಅಡುಗೆಯನ್ನು ಜೋಡಿಸಿಕೊಂಡು ಚಾಕು ಫೋರ್ಕ್​ಗಳಿಂದ ಇಷ್ಟಿಷ್ಟೇ ತೆಗೆದುಕೊಂಡು, ಸ್ವಲ್ಪ ಸ್ವಲ್ಪವೇ ತಿನ್ನುವುದನ್ನು ಕಂಡಾಗ “ಅಯ್ಯೋ ಪಾಪ! ಹೊಟ್ಟೆಯಲ್ಲಿರುವ ಹುಳಕ್ಕಾಗುವಷ್ಟಾದರೂ ತಿನ್ನಬಾರದ” ಅನ್ನಿಸುತ್ತೆ.

ಜಂಕ್ ಫುಡ್ ಪ್ರಿಯರಾದ ನನ್ನ ಮಕ್ಕಳೋ ಕಣ್ಣು ಬಾಯಿ ಬಿಟ್ಟುಕೊಂಡು, ಟಿವಿ ನೋಡಿಕೊಂಡು, ಜೊಲ್ಲು ಸುರಿಸಿಕೊಂಡು ಕುಳಿತಿರುತ್ತವೆ. ಹೊರಗೆ ಊಟಕ್ಕೆ ಹೋದಾಗಲೂ ಪಿಜ್ಜಾ, ಬರ್ಗರ್, ಚೈನೀಸ್ ಗೈನಿಸ್ ಅಂತಲೇ ಅವರಿಗೆ ಬೇಕು. ಒಮ್ಮೆ ಅವರಿಬ್ಬರ ಬಲವಂತಕ್ಕೆ ಪಿಜ್ಜಾ ತಿಂದದ್ದಾಯಿತು. “ಈ ರಟ್ಟಿನ ಹಾಳೆ ತಿನ್ನೋಕೆ ಜನ ಯಾಕೆ ಹಾಗೆ ಪರದಾಡುತ್ತಾರೆ! ನಮ್ಮ ಅಕ್ಕಿರೊಟ್ಟಿ, ಬೋಟಿ ಗೊಜ್ಜಿನ ಎದುರು ಇದನ್ನು ನೀವಳಿಸಿ ಎಸೆಯಬೇಕು”ಎಂದಿದ್ದಕ್ಕೆ ನನ್ನ ಮಗ “ಅಮ್ಮ ನೀನು ಸಕ್ಕತ್ ಔಟ್ ಡೇಟೆಡ್, ಆ ಶಿಟ್ನೆಲ್ಲ ಈಗ್ಯಾರು ತಿಂತಾರೆ? ನೀನೋ, ನಿನ್ನ ಬೋಟಿ ಗೊಜ್ಜೋ “ಎಂದು ಅಣಕಿಸಿದ.

ನನಗಂತೂ ಈ ಪಿಜ್ಜಾ ಬರ್ಗರ್ ಜನಾಂಗದವರನ್ನು ಕಂಡರೆ ಅಪಾರ ಕನಿಕರವೆನಿಸುತ್ತದೆ. ಅದರಲ್ಲೂ ಹುಡುಗಿಯರು ಡಯಟ್ ಗಿಯಟ್ ಎಂದುಕೊಂಡು, ಸಲಾಡ್, ಹುಲ್ಲು ಸೊಪ್ಪು ತಿಂದುಕೊಂಡು, ರಕ್ತ ಮಾಂಸವಿಲ್ಲದೇ ಬರೀ ಮೂಳೆ ಮೂಳೆ ಬಿಟ್ಟುಕೊಂಡು ತಿರುಗುವುದನ್ನು ಕಂಡರೆ ಸಿಟ್ಟೇ ಬರುತ್ತದೆ. ಚೆನ್ನಾಗಿ ತಿಂದು ಉಂಡು ಗಟ್ಟಿಯಾಗಿ ಬದುಕಬಾರದೇ?

ಇದನ್ನೂ ಓದಿ : Literature : ಅಚ್ಚಿಗೂ ಮೊದಲು; ಸಹನಾ ಹೆಗಡೆ ಅನುವಾದಿಸಿದ ‘ಅನಿಮಲ್ ಫಾರ್ಮ್’ ಕಾದಂಬರಿ ಸದ್ಯದಲ್ಲೇ ನಿಮ್ಮ ಓದಿಗೆ

ಆದರೆ ಈ ಲತಾಂಗಿ ಕೃಷಾಂಗಿಯರನ್ನು ಕಂಡಾಗಲೆಲ್ಲಾ ನಿಟ್ಟುಸಿರು ಬಿಟ್ಟು ನಿಡುಸುಯ್ಯುವ ನನ್ನ ಗಂಡನಿಗಾಗಿ ನಾನೂ ಸ್ವಲ್ಪ ದಿನ ಡಯಟ್ ಮಾಡಿ ನೋಡೋಣವೆಂದುಕೊಂಡೆ. ಸರಿ ಅನ್ನದ ಬದಲಿಗೆ ದಿನಕ್ಕೆರಡು ರಾಗಿ ರೊಟ್ಟಿ, ಹಿಡಿ ಮೊಳಕೆಕಾಳು, ಒಂದಷ್ಟುಹಣ್ಣುಗಳ ತಿಂದುಕೊಂಡು ಸ್ವಲ್ಪ ದಿನ ಕಾಲ ಹಾಕಿದೆ. ಆದರೊಂದು ಭಾನುವಾರದ ದಿನ ಮಾಡಿದ್ದ ಚಿಕನ್​ನ ಘಮ ತಡೆಯಲಾರದೇ “ಒಂದೆರಡು ಪೀಸ್ ತಿಂದರೇನೂ ಕೊಳ್ಳೆ ಹೋಗದು” ಎಂದುಕೊಳ್ಳುತ್ತಾ ಶುರು ಮಾಡಿದ್ದು, ನಿಂತಿದ್ದು ಸರಿಯಾಗಿ ಅರ್ಧ ಕೆಜಿ ಚಿಕನ್ ಖಾಲಿಯಾದ ಬಳಿಕವೇ. ನಂತರ “ಇಷ್ಟೆಲ್ಲಾ ಕಷ್ಟಪಟ್ಟು ಹಲ್ಲು ಕಚ್ಚಿಕೊಂಡು ಬದುಕಲು ನಾನೇನು ಅರಿಷಡ್ವರ್ಗಗಳ ಗೆದ್ದಿರುವ ಸನ್ಯಾಸಿಯೇ?”ಎಂದುಕೊಂಡು ಆ ಕ್ಷಣವೇ ನನ್ನ ಡಯಟ್ ನ ಪ್ಲಾನನ್ನೆಲ್ಲಾ ತಿಪ್ಪೆಗೆಸೆದೆ. ಮಾರನೆಯ ದಿನವೇ ನಮ್ಮೂರಿಗೆ ಹೋಗಿ ನಮ್ಮತ್ತೆಯ ಕೈಲಿ “ಬೋಟಿ ಗೊಜ್ಜು ” ಮಾಡಿಸಿಕೊಂಡು ತಿಂದಾಗ ಆದ ತೃಪ್ತಿ ಸಮಾಧಾನಗಳು ಅಷ್ಟಿಷ್ಟಲ್ಲ.

ನಾನಂತೂ ನನ್ನ ಗಂಡನನ್ನು”ನಾನೇನಾದ್ರು ನಿಮಗಿಂತ ಮುಂಚೆ ತೀರಿಕೊಂಡರೆ, ತಿಥಿಗೆ, ಪಕ್ಷಕ್ಕೆ, ಬೋಟಿಗೊಜ್ಜು ಮಾಡಿಸಿ ಎಡೆ ಇಡದಿದ್ದರೆ ನಿಮ್ಮನ್ನೆಲ್ಲಾ ಹಿಡಿದುಕೊಂಡು ಕಾಡುತ್ತೇನೆ ” ಎಂದು  ಹೆದರಿಸಿಟ್ಟಿದ್ದೇನೆ. ಅದಕ್ಕವರು    “ಅದಕ್ಕೇನಂತೆ ಬಿಡು, ನನ್ನ ಹೊಸ ಹೆಂಡ್ತಿ ಕೈಲೇ ಮಾಡಿಸಿ, ತಿಂಗಳ ತಿಥಿಗೇ ಎಡೆ ಹಿಡಿದು, ಧೂಪ ಹಾಕಿಸುತ್ತೇನೆ” ಎಂದು ಹಲ್ಲು ಕಿರಿಯುತ್ತಾರೆ.

ಅಂತೂ ಇಹಪರಗಳೆರಡರಲ್ಲು ನನ್ನ ಬೋಟಿ ಗೊಜ್ಜಿನ ಪೂರೈಕೆ ಗ್ಯಾರಂಟೀ ಮಾಡಿಕೊಂಡ ನೆಮ್ಮದಿಯಲ್ಲಿದ್ದೇನೆ ನಾನು.

ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 9449174332 

ಈ ಅಂಕಣಗಳಲ್ಲಿರುವ ವಿವಿಧ ಪುಸ್ತಕಗಳ ಆಯ್ದ ಭಾಗಗಳನ್ನು ಓದಲು ಕ್ಲಿಕ್ ಮಾಡಿ