Column: ವೈಶಾಲಿಯಾನ; ‘ನೀವುದಯ್ಯಾ ದೇಹ ತ್ರಾಣ, ನೀನೆ ಪ್ರಾಣ, ನೀನೆ ಮಾನ, ಕಾವುದೆನ್ನ ಶೀಲ ನಿಧಾನ’

Kuvempu: ‘ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರ ಯಾತ್ರಿ . ಈ ಊರ್ಧ್ವಮುಖದ, ಗಗನಗಮನದ ಮತ್ತು ನಕ್ಷತ್ರಯಾತ್ರೆಯ ಸಾಹಸಕ್ಕೆ ಮೊದಲನೆ ಸಾಕ್ಷಿ ಚರಿತ್ರೆ! ಎರಡನೆಯ ಸಾಕ್ಷಿ ಕಲೆ. ಒಂದು ಬಹಿರ್ಮುಖದ ಸಾಹಸವಾದರೆ ಮತ್ತೊಂದು ಅಂತರ್ಮುಖದ ಸಾಹಸ.’ ಕುವೆಂಪು

Column: ವೈಶಾಲಿಯಾನ; ‘ನೀವುದಯ್ಯಾ ದೇಹ ತ್ರಾಣ, ನೀನೆ ಪ್ರಾಣ, ನೀನೆ ಮಾನ, ಕಾವುದೆನ್ನ ಶೀಲ ನಿಧಾನ’
Follow us
ಶ್ರೀದೇವಿ ಕಳಸದ
|

Updated on:Jun 11, 2022 | 11:00 AM

ವೈಶಾಲಿಯಾನ | Vaishaliyaana : “ಪ್ರಿಯ ಮಧುವನದಲಿ ಕೂಡಾಡುವ ಬಾ/ಚೆಂದ ನೋಡುವ ಬಾ, ಮಧು ಸವಿಯುವ ಬಾ/ಕೋಗಿಲೆ ಕೆರೆವುದು ಪ್ರಿಯತಮನ/ಹೋಗುವ ಬಾರೊ ಮನ ರಮಣ/ರತಿಯಾಗುವೆ ನಾ ನೀ ಎನ್ನ ಮದನ/ಸುಂದರಾಂಗನೆ ಬಾ/ ಇರಿಸಿದೆ ನಿನ್ನೊಳು ಮನವನ್ನ/ಸಹಿಸೆನು ವಿರಹದ ಬಾಧೆಯನ/ಮನಮೋಹನನೆ, ನಿಮನೋಹರನೇ, ಚೆಂದ ನೋಡುವ ಬಾ/ಮಧು ಸವಿಯುವ ಬಾ/” ಎಂದು ತಮ್ಮ ಸುಮಧುರ ಕಂಠದಲ್ಲಿ ಅಮೀರಿಬಾಯಿ ಕರ್ನಾಟಕಿಯವರು ಹಾಡಿದ ಒಂದು ಹಳೆಯ ನಾಟಕದ ಪ್ರೇಮ ಗೀತೆಯನ್ನು ಗುನುಗುತ್ತಿದ್ದ ನನಗೆ ನಮ್ಮ ರಂಗಭೂಮಿಯ ಅನೇಕ ಅಪ್ರತಿಮ ಕಲಾವಿದ- ಕಲಾವಿದೆಯರ ನೆನಪು ಕಾಡತೊಡಗಿತು. ರಂಗಭೂಮಿಗೂ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತಕ್ಕೂ ಮೊದಲಿನಿಂದಲೂ ಅವಿನಾಭಾವದ ನಂಟಿದೆಯಲ್ಲವೇ? ನಮ್ಮ ಸಂಸ್ಕೃತಿಯಲ್ಲಂತೂ ಇವೆರಡೂ ಕ್ಷೇತ್ರಗಳು ಹೇಗೆ ಒಂದರೊಳಗೊಂದು ಬೆಸೆದುಕೊಂಡಿದ್ದವು ಎಂಬುದಕ್ಕೆ ಹೇರಳವಾದ ಉದಾಹರಣೆಗಳು, ನಿದರ್ಶನಗಳನ್ನು ನೀಡಬಹುದು. ಕಲಾವಿದರಿಗೆ ಅವರ ಕಲೆಯೊಂದೇ ಕೊನೆಯವರೆಗೂ ಉಳಿಯುವ ಆಸ್ತಿ. ನಮ್ಮ ಅಸಾಧಾರಣ ಕಲಾವಿದರ ಪೈಕಿ ಕೆಲವರು ಎದುರಿಸಿದ ಸವಾಲುಗಳು , ಕಷ್ಟ-ಕಾರ್ಪಣ್ಯಗಳು, ಅವರ ಸಾಹಸಿ ಮನೋಭಾವ, ತಪೋನಿಷ್ಠೆಯಿಂದ ಧೈರ್ಯಗುಂದದೇ ಕಲಾಸೇವೆಗೇ ಜೀವನವನ್ನು ಮುಡಿಪಾಗಿಟ್ಟ ಬಗೆ ಕೂಡ ಅವಿಸ್ಮರಣೀಯವೇ. ಡಾ. ಕೆ. ಎಸ್. ವೈಶಾಲಿ (Dr. K.S. Vaishali)

(ಯಾನ 12)

ನಮ್ಮ ಉಭಯ ಶಾಸ್ತ್ರೀಯ ಸಂಗೀತ ಪ್ರಕಾರಗಳಾದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರಲ್ಲಿ ಹಲವಾರು ಮಂದಿ ರಂಗಭೂಮಿಯ ನಂಟಸ್ತನ ಬೆಳೆಸಿದವರೇ. ನನ್ನ ಸಂಗೀತ ಗುರುಗಳಾದ ‘ಸಂಗೀತಮಹಾಮೋಪಾಧ್ಯಾಯ’ ಪಂಡಿತ್ ಶೇಷಾದ್ರಿ ಗವಾಯಿಯವರು ತಮ್ಮ ಗುರುಗಳಾದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ನಾಟಕ ಮಂಡಳಿಯ ಬಗ್ಗೆ ನನಗೆ ಹೇಳುತ್ತಿದ್ದರು. ನನ್ನ ಗುರುಗಳೂ ನಾಟಕಗಳಲ್ಲಿ ಅಭಿನಯಿಸಿದವರೇ. ಆಶ್ರಮದಲ್ಲಿ ಶಿಷ್ಯತ್ವ ಮಾಡುತ್ತಿದ್ದ ಅನೇಕ ಸಂಗೀತ ಕಲಾವಿದರೂ ನಾಟಕಗಳಲ್ಲಿ ಪಾತ್ರವಹಿಸಿದವರೇ ಆಗಿದ್ದರು. ನಾಟಕಗಳು ಸಂಗೀತಮಯವಾಗಿರುತ್ತಿದ್ದವು ಮತ್ತು ಆಗಿನ ಸಂಗೀತ ನಾಟಕಗಳಲ್ಲಿ ಉತ್ತಮ ಶಾರೀರ ನಟ-ನಟಿಯರಿಗೆ ಅತ್ಯವಶ್ಯಕವಾಗಿತ್ತು. ಗುರುಗಳ ನಾಟಕ ಮಂಡಳಿಯ ‘ಹೇಮರೆಡ್ಡಿ ಮಲ್ಲಮ್ಮ’ ನಾಟಕ ಬಹಳ ಜನಪ್ರಿಯವಾಗಿತ್ತೆಂದು ನನ್ನ ಗುರುಗಳು ಹಾಗೂ ತಬಲಾ ವಿದ್ವಾನ್ ಶ್ರೀ ಎಂ. ನಾಗೇಶ್‌ರವರು ನನಗೆ ಅದನ್ನು ರಸವತ್ತಾಗಿ ಬಣ್ಣಿಸಿದ್ದರು.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Image
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಆ ನಾಟಕದ ಸುಂದರವಾದ ಪ್ರಾರ್ಥನಾ ಗೀತೆ “ಮೋಕ್ಷ ಸದನ, ಮೋಹ ಹರನ/ ಗೈವೆ ಧ್ಯಾನ , ಶೀಲ ನಿಧಾನ/ ದೇವನೇ ಭಕ್ತಾಭಿಮಾನ / ನೀವುದಯ್ಯಾ ದೇಹ ತ್ರಾಣ/ ನೀನೆ ಪ್ರಾಣ / ನೀನೆ ಮಾನ / ಕಾವುದೆನ್ನ ಶೀಲ ನಿಧಾನ” ಎಂದು ಹೇಮರೆಡ್ಡಿ ಮಲ್ಲಮ್ಮ ಆರ್ತಳಾಗಿ ಶಿವನನ್ನು ಬೇಡುವ ಹಾಡನ್ನು ನಾನು ತುಂಬಾ ಮೆಚ್ಚಿಕೊಂಡಿದ್ದೆ. ಮರಾಠಿ ರಂಗಭೂಮಿಯಲ್ಲಿ ಬಾಲಗಂಧರ್ವ, ದೀನಾನಾಥ ಮಂಗೇಶ್ಕರ್, ವಸಂತರಾವ್ ದೇಶಪಾಂಡೆ , ಪ್ರಸ್ತುತ ಅವರ ಮೊಮ್ಮಗ ಹಾಗೂ ಸುಪ್ರಸಿದ್ಧ ‘ಮೀ ವಸಂತರಾವ್’ ಚಲನಚಿತ್ರದ ಖ್ಯಾತಿಯ ಶಾಸ್ತ್ರೀಯ ಸಂಗೀತ ಕಲಾವಿದ ರಾಹುಲ್ ದೇಶಪಾಂಡೆ – ಹೀಗೆ ಸಂಗೀತ ನಾಟಕಗಳ ಪ್ರವರ್ತಕರಾದ ಸಂಗೀತ ಕಲಾವಿದರ ಒಂದು ದೊಡ್ಡ ಪರಂಪರೆಯೇ ಇದೆ. ಮರಾಠಿ ರಂಗಭೂಮಿಯ ಪ್ರಸಿದ್ಧ ಸಂಗೀತ ನಾಟಕ “ಕಾಟ್ಯಾರ್ ಕಾಳಿಜಾತ್ ಘುಸಲಿ” ನಾಟಕದ ಹಾಡುಗಳನ್ನು ಪ್ರಖ್ಯಾತ ಶಾಸ್ತ್ರೀಯ ಸಂಗೀತ ಗಾಯಕರಾದ ಪಂಡಿತ್ ಜಿತೇಂದ್ರ ಅಭಿಷೇಕಿಯವರು ಬರೆದಿದ್ದರು. ಎರಡು ಬೇರೆ ಬೇರೆ ಘರಾನಾಗಳ ಪ್ರತಿನಿಧಿಗಳಾದ, ಗಾಯಕರಾದ ಪಂಡಿತ್ ಭಾನುಶಂಕರ್ ಶಾಸ್ತ್ರೀ  ಮತ್ತು ಖಾನ್ ಅಫ್ತಾಬ್ ಹುಸೇನ್ ಖಾನ್ ಬರೇಲಿವಾಲೆಯರ ನಡುವೆ ಉಂಟಾಗುವ ಘರ್ಷಣೆಯ ಸುತ್ತ ಹೆಣೆದಿರುವ ಈ ನಾಟಕ ಅಪಾರ ಜನಮನ್ನಣೆಯನ್ನು ಗಳಿಸಿತ್ತು, ನಾಟಕ 1967ರಲ್ಲಿ ಮೊದಲು ಪ್ರದರ್ಶನಗೊಂಡಿತ್ತು.

ಇದನ್ನೂ ಓದಿ : ವೈಶಾಲಿಯಾನ : ಸ್ತ್ರೀಯರ ಸಂಗೀತ ಪುರುಷರ ಸಂಗೀತ ಎಂಬ ಪರಿಕಲ್ಪನೆಯೇ ಹಾಸ್ಯಾಸ್ಪದವಲ್ಲವೇ?

ಈ ನಾಟಕದಲ್ಲಿ ಖಾನ್‌ಸಾಬ್ ಆಗಿ ತಮ್ಮ ಅಮೋಘ ಹಾಡುಗಾರಿಕೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಪಂಡಿತ್ ವಸಂತ್‌ರಾವ್ ದೇಶಪಾಂಡೆಯವರಿಗೆ ‘ಪಂಡಿತ್ ವಸಂತ್‌ಖಾನ್ ದೇಶಪಾಂಡೆ’ ಎಂಬ ಅಡ್ಡ ಹೆಸರು ಲಭಿಸಿತ್ತು! ಈ ನಾಟಕ 1967ರ ಕಾಲಘಟ್ಟದಲ್ಲಿ ಸಾವಿರ ಪ್ರದರ್ಶನಗಳನ್ನು ಕಂಡಿತ್ತು. ಮರಾಠಿ ರಂಗ ಭೂಮಿಯ ದಿಗ್ಗಜರಾದ ಬಾಲಗಂಧರ್ವರ ಅದ್ಭುತ ಕಂಠಸಿರಿಗಂತೂ ಜನರು ಮಾರುಹೋಗಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲೂ ‘ಮಾನಪಮಾನ’, ‘ಸಂಗೀತ ಸುಭದ್ರ’, ‘ಏಕಚಪ್ಯಾಲ’ ಮೊದಲಾದ ನಾಟಕಗಳ ಜನಪ್ರಿಯ ಹಾಡುಗಳನ್ನು ಖ್ಯಾಲ್ ಗಾಯನದ ನಂತರ ರಸಿಕ ಶ್ರೋತೃಗಳ ಬೇಡಿಕೆಗೆ ಮಣಿದು ಹಾಡುವ ಪರಿಪಾಠವಿದೆ. “ಘೇಯಿ ಚಂದ ಮಕರಂದ, ಪ್ರಿಯ ಹಾ ಮಿಲಿಂದ ಮಧುಸೇವನಾನಂದ ಸ್ವಚ್ಛಂದ”, ‘ಕರಾ ‘ಕರತೂ ಪ್ರೇಮ’, ’ಚಂದ್ರಿಕಾ ಸ್ನೇಹೇ ಕಮಲಾಂಗನೇ’, ತೇಜೋ ನಿಧಿ ಲೋಹಗೋಲ, ಭಾಸ್ಕರ ಹೇ ಗಗನರಾಜ’, ‘ಹೇ ಸುರಾನೋ ಚಂದ್ರಮಾ’, ‘ಝಾಲೆ ಯುವತಿ ಮನಾ’, ‘ಮೃಗ ನಯನ ರಸಿಕ ಮೋಹಿನಿ’ ಮೊದಲಾದ ಮರಾಠಿ ಸಂಗೀತ ನಾಟಕಗಳ ಗೀತೆಗಳ ಪ್ರಸ್ತುತಿ ಅನೇಕ ಬಾರಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಬಹಳ ಪ್ರಚಲಿತವಾಗಿದೆ.

Vaishaliyaana Column influence of Theatre and Music by Dr KS Vaishali

‘ಮಿ ವಸಂತರಾವ್’ ಸಿನೆಮಾದಲ್ಲಿ ರಾಹುಲ್ ದೇಶಪಾಂಡೆ ಮತ್ತಿತರ ಕಲಾವಿದರು

ಅವುಗಳಿಂದ ಆಕರ್ಷಿತಳಾದ ನಾನು ಕೆಲವು ಮರಾಠಿ ನಾಟ್ಯಗೀತೆಗಳನ್ನು ಹಾಡಲು ಕಲಿತೆ. ಈ ನಾಟ್ಯಗೀತೆಗಳಲ್ಲಿ ನಮ್ಮ ಶಾಸ್ತ್ರೀಯ ಸಂಗೀತದ ರಾಗಗಳ ಬಳಕೆ ಎಷ್ಟು ಅಮೋಘವಾಗಿದೆಯೆಂದರೆ ಎಷ್ಟೋ ಬಾರಿ ನನಗೆ ಯಾವುದಾದರೊಂದು ರಾಗವನ್ನು ರಿಯಾಜ್ ಮಾಡಲು ತೆಗೆದುಕೊಂಡಾಗ, ಮೊದಲು ಮನಸ್ಸಿನಲ್ಲಿ ಮೂಡುವುದೇ ಆ ರಾಗಕ್ಕೆ ಸಂಬಂಧಿಸಿದಂಥ ಸಂಗೀತ ನಾಟಕದ ಗೀತೆ. ಉದಾಹರಣೆಗೆ ರಾಗ ಚಾರುಕೇಶಿಯ ರಾಗವಿಸ್ತಾರವನ್ನು ಕಲ್ಪಿಸಿಕೊಳ್ಳುವಾಗಲೆಲ್ಲ ನನ್ನ ಮನಸ್ಸಿನಲ್ಲಿ ಅದೇ ರಾಗದಲ್ಲಿರುವ ಪಂಡಿತ್ ಜಿತೇಂದ್ರ ಅಭಿಷೇಕಿಯವರು ರಾಗ ಸಂಯೋಜಿಸಿ ಹಾಡಿ ಜನಪ್ರಿಯವಾದ ‘ಯಯಾತಿ-ದೇವಯಾನಿ’ನಾಟಕದ ಸಂದರವಾದ ಪ್ರೇಮ- ವಿರಹ ಗೀತೆ ‘ಹೇ ಸುರಾನೋ ಚಂದ್ರಮಾ’ ಗರಿಗೆದರಿ ನವಿಲಿನಂತೆ ತನ್ನ ಬಣ್ಣಬಣ್ಣದ ಗರಿಗಳನ್ನು ಪ್ರದರ್ಶಿಸಿದಂತಾಗುತ್ತದೆ. ಹೀಗೆ ರಾಗ- ರಾಗಿಣಿಗಳಾದ ಸಾಲಗವರಾಳಿ, ತೋಡಿ, ಲಲಿತ್ ಪಂಚಮ್, ಕೀರವಾಣಿ ಮೊದಲಾದ ರಾಗಗಳನ್ನು ಹಾಡುವಾಗ, ಈ ರಾಗಗಳನ್ನು ಆಧಾರವಾಗಿಟ್ಟುಕೊಂಡು ಸಂಯೋಜಿಸಿದ ನಾಟ್ಯಗೀತೆಗಳ ಝಲಕ್, ಗಮಕಗಳ ಮರೆಯಲಾರದ ಸೊಲ್ಲುಗಳು, ತಾನುಗಳ ವೈಖರಿ ನನ್ನ ಕಲ್ಪನಾ ಲಹರಿಯಲ್ಲಿ ಒಂದು ವಕ್ರ ತಾನ್ ಅಥವಾ ವೇಗದ ಸಪಾಟ್ ತಾನಿನ ಪಲುಕಾಗಿ ಮಾರ್ಪಾಡಾಗುತ್ತದೆ. ನಾಟಕದ ಗೀತೆಗಳಿಂದ ಶಾಸ್ತ್ರೀಯ ಸಂಗೀತದ ಖ್ಯಾಲ್ ಹಾಡುಗಾರರು ಅನೇಕ ಬಾರಿ ಸ್ಫೂರ್ತಿ ಪಡೆಯುವುದು ನಮಗೆ ತಿಳಿದಿರುವ ಸಂಗತಿಯೇ.

ಇದನ್ನೂ ಓದಿ : Literature: ಅನುಸಂಧಾನ; ಸಂಪಾದಕರು ಕೊಟ್ಟ ಒಂದು ಶಬ್ದ, ಪ್ರಶ್ನೆಯಿಂದ ಎಲೆನಾ ಅಂಕಣ ಸಿದ್ಧವಾಗುತ್ತಿತ್ತು

ಮರಾಠಿ ನಾಟಕ ಕಂಪನಿಗಳಲ್ಲಿ ಮಹಾನ್ ಸಂವಾದಿನಿ ಕಲಾವಿದರೂ, ಸಂಗೀತ ಸಂಯೋಜಕರೂ, ನಟರೂ ಆಗಿದ್ದ ಗೋವಿಂದರಾವ್ ಟೆಂಬೆ, ತಬಲಾ ಮಾಂತ್ರಿಕರೆಂದೇ ಸುಪ್ರಸಿದ್ಧರಾಗಿದ್ದ ಉಸ್ತಾದ್ ಅಹ್ಮದ್ ಜಾನ್ ತಿರಕ್‌ವಾನಂಥ ಅಸಾಮಾನ್ಯರಿದ್ದರು. ಮರಾಠಿ ಸಂಗೀತ ನಾಟಕದ ಮೇರು ನಟ ನಾರಾಯಣ ಶ್ರೀಪಾದ ರಾಜಹಂಸ್‌ರವರು ‘ಬಾಲಗಂಧರ್ವ’ ಎಂದೇ ಜನಜನಿತರಾಗಿದ್ದರು. ತಬಲಾ ವಾದನದಲ್ಲಿ ಗೌರೀಶಂಕರ ಪರ್ವತದಷ್ಟು ಉತ್ತುಂಗ ಶ್ರೇಣಿಯ ಕಲಾವಿದನೆಂದು ಖ್ಯಾತರಾಗಿ, ತಮ್ಮ ಮಿಂಚಿನ ವೇಗದ ತಬಲಾ ವಾದನದಿಂದ ‘ಥಿರಕ್‌ವಾ’ ಎಂಬ ವಿಶೇಷ ಬಿರುದನ್ನು ಹೊಂದಿದ್ದ ಉಸ್ತಾದ್ ಅಹ್ಮದ್ ಜಾನ್ ಥಿರಕ್‌ವಾ ಮತ್ತು ಬಾಲಗಂಧರ್ವರ ಜೋಡಿ ಮರಾಠಿ ರಂಗಭೂಮಿಯಲ್ಲಿ ಚರಿತ್ರಾರ್ಹವಾದ್ದು. ಈ ಜೋಡಿ ಅದ್ಭುತ ಸಂಗೀತ ನಾಟಕಗಳನ್ನು ರಸಿಕರಿಗೆ ನೀಡಿತ್ತು. ನನ್ನ ಗುರುಗಳಾದ ಪಂಡಿತ್ ಆರ್. ವಿ. ಶೇಷಾದ್ರಿ ಗವಾಯಿಯವರು ತಾನು ಒಂದು ಬಾರಿ ಕೇಳಿದ್ದ ಪಂಡಿತ್ ಗೋವಿಂದ್ ಸದಾಶಿವ ಟೆಂಬೆಯವರ ಅದ್ವಿತೀಯ ಸಂವಾದಿನಿ ಗಾಯನ ತನಗೆ ಅಜನ್ಮ ಪೂರ್ತಿ ಸ್ಫೂರ್ತಿ ನೀಡಿತ್ತೆಂದು ನನ್ನ ಬಳಿ ಆ ತಾರುಣ್ಯದ ದಿನಗಳನ್ನು ಮೆಲುಕು ಹಾಕುತ್ತ ಭಾವೋದ್ವೇಗಗೊಂಡಿದ್ದರು. ಶಾಸ್ತ್ರೀಯ ಸಂಗೀತವೆನ್ನುವುದು ನನ್ನ ಮಟ್ಟಿಗಂತೂ ಬೇರೆ ಯಾವ ಸಂಗೀತ ಪ್ರಕಾರಗಳ ಸಂಪರ್ಕವೇ ಇಲ್ಲದ ಅಭೇದ್ಯವಾದ ಉಕ್ಕಿನಕೋಟೆಯಂತೂ ಅಲ್ಲವೇ ಅಲ್ಲ. ಬಗೆಬಗೆಯ ಲೋಕಸಂಗೀತ ಸಂಪ್ರದಾಯಗಳ ಒಂದು ವಿಸ್ಮಯಕಾರಿ, ಸಂಕೀರ್ಣ ಸಮ್ಮಿಶ್ರಣದಿಂದಲೇ ಶಾಸ್ತ್ರೀಯ ಸಂಗೀತದ ಜನನವಾಗಿದೆಯಲ್ಲವೇ?

ಇನ್ನು ನಮ್ಮ ಹಳೆಯ ನಾಟಕ ಕಂಪನಿಗಳ ನಟ- ನಟಿಯರಂತೂ ಒಂದು ರೀತಿಯಲ್ಲಿ ರಾಜ-ರಾಣಿಯರ ಕತೆಗಳಲ್ಲಿ ಬರುವಂಥ ‘ಚೌಷಷ್ಠಿಕಲಾಪ್ರವೀಣ’ರೇ ಸರಿ. ಇದು ತುಸು ಮಟ್ಟಿಗೆ ಉತ್ಪ್ರೇಕ್ಷಾಲಂಕಾರವೆನಿಸಿದರೂ, ಆಗಿನ ಕಾಲದ ನಟ- ನಟಿಯರ ಸಾಮರ್ಥ್ಯಗಳನ್ನು ನೆನೆಸಿಕೊಂಡಾಗ ನನಗೆ ಮೈ ಝಂ ಎನಿಸುತ್ತದೆ. ಬಾಲಗಂಧರ್ವರ ಸಂಗೀತ, ಸ್ತ್ರೀಪಾತ್ರಗಳನ್ನು ಅವರು ನಿರ್ವಹಿಸಿದ ವೈಖರಿ ವರ್ಣನಾತೀತ. ಇತ್ತೀಚಿಗೆ ನಮ್ಮನ್ನಗಲಿದ ಮಹಾರಾಷ್ಟ್ರದ  ಅಪ್ರತಿಮ ರಂಗನಟಿ, ನಾಟ್ಯ ಸಂಗೀತ ಕಲಾವಿದೆ ಕೀರ್ತಿ ಶಿಲೇದಾರ್‌ರವರು ತಮ್ಮ ಮನಮೋಹಕ ಶೈಲಿಯಲ್ಲಿ ಹಾಡಿದ ‘ಕರಾ ತೂ ಪ್ರೇಮ’ ನನ್ನ ಅಚ್ಚುಮೆಚ್ಚಿನ ನಾಟ್ಯಗೀತೆ. ಒಮ್ಮೆ ಸಂದರ್ಶನವೊಂದರಲ್ಲಿ ಕೀರ್ತಿಯವರು, ‘ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನಟನೆ ಹಾಗೂ ಹಾಡುಗಾರಿಕೆಯನ್ನು ಕಲಿತೆ’ ಎಂದಿದ್ದರು . ಅವರ ಮಟ್ಟಿಗಂತೂ ಅದು ಅಕ್ಷರಶಃ ನಿಜವೇ.

ಇದನ್ನೂ ಓದಿ : Theatre Stories : ಪಿತೃಪ್ರಧಾನದ ಕಪಿಮುಷ್ಟಿಯೊಳಗೂ ಇವರು ‘ಆತ್ಮಜ್ಯೋತಿ’ ಬೆಳಗಿಸಿಕೊಂಡೇ ಬದುಕಿಬಿಡುತ್ತಾರಲ್ಲಾ!

ಈ ಮಾತು ನಮ್ಮ ನಾಡಿನ ಪದ್ಮಶ್ರೀ ಪುರಸ್ಕೃತ ರಂಗಕಲಾವಿದೆ , ತಮ್ಮ ಕಂಚಿನ ಕಂಠದಿಂದ ತಾರಸ್ಥಾಯಿಯಲ್ಲಿ ಸುಶ್ರಾವ್ಯವಾಗಿ ‘ಸಾವಿರದ ಶರಣವ್ವ ಕರಿಮಾಯಿ ತಾಯೆ’ ಹಾಡುತ್ತ ‘ಕರಿಮಾಯಿ’ ನಾಟಕದ ಹಾಡಿನಿಂದ ನಮ್ಮನ್ನು ಸಮ್ಮೋಹನಗೊಳಿಸುವ ಬಿ. ಜಯಶ್ರೀಯವರಿಗೆ ಸಂಬಂಧಿಸಿದಂತೆಯೂ ದಿಟವೆಂದೇ ಹೇಳಬಹುದು. ಮನೋಹರ ಗ್ರಂಥಮಾಲೆ ಪ್ರಕಟಿಸಿರುವ, ಪ್ರೀತಿ ನಾಗರಾಜರವರ ನಿರೂಪಣೆಯಲ್ಲಿ ಅರಳಿದ ಕಣ್ಣಾಮುಚ್ಚೇ, ಕಾಡೇಗೂಡೇ (ಬಿ.ಜಯಶ್ರೀಯವರ ರಂಗಪಯಣ) ಎಂಬ ಆತ್ಮಕಥನವನ್ನು ಓದಿದಾಗಲೂ ನನಗೆ ಕೀರ್ತಿಯವರು ಹೇಳಿದ ಮಾತುಗಳು ಜಯಶ್ರೀಯವರಿಗೂ ಅನ್ವಯಿಸಿದ್ದು ಎಂದೆನಿಸಿತು. ‘ಗುಬ್ಬಿ ಕಂಪನಿಗೆಂದು ಹೊರಡುತ್ತಿದ್ದ ಟ್ರೇನು’ ಎಂಬ ಅಧ್ಯಾಯದಲ್ಲಿ ಜಯಶ್ರೀಯವರು ‘ಆರೇಳು ಎತ್ತಿನ ಗಾಡಿಗಳಲ್ಲಿ ಇಡೀ ತಂಡವೇ ಊರಿಂದ ಊರಿಗೆ ಹೋಗುತ್ತಿದ್ದ ಕಂಪನಿ ತನ್ನ ಅತಿ ಉತ್ತುಂಗದಲ್ಲಿದ್ದ ದಿನಗಳಲ್ಲಿ ಆರು ವ್ಯಾಗನ್ನಿನ ಅಂದರೆ ಬೋಗಿಗಳ ಇಡೀ ರೈಲನ್ನು ಉಪಯೋಗಿಸುತ್ತಿತ್ತು. ಸ್ಟೇಷನ್ನಿನಿಂದ ಥಿಯೇಟರಿಗೆ ಸಾಮಾನುಗಳನ್ನು, ಜನಗಳನ್ನು ಸಾಗಿಸಲು ಸುಮಾರು 100 ಎತ್ತಿನ ಗಾಡಿಗಳು ಬೇಕಾಗುತ್ತಿದ್ದವು. ಗುಬ್ಬಿ ಕಂಪನಿಯನ್ನು ಬಹಳ ಜನ ಕಂಪನಿ ಎಂದು ಗುರುತಿಸುತ್ತಿದ್ದಿಲ್ಲ, ಬದಲಾಗಿ “ವೀರಣ್ಣನ ಜಾತ್ರೆ/ವೀರಣ್ಣನ ಸರ್ಕಸ್” ಎಂದು ಕರೆಯುತ್ತಿದ್ದರು. ಅವರಿಗೆ ವೀರಣ್ಣನ ಜಾತ್ರೆ ನೋಡುವುದು ಊರ ಹಬ್ಬ ಮಾಡಿದಷ್ಟೇ ಸಂಭ್ರಮ ಮತ್ತು ಮುಖ್ಯ ಕೂಡ. ಅದಕ್ಕೆ ಸರಿಯಾಗಿ ತಾತ ಮತ್ತವರ ತಂಡ ಪ್ರೇಕ್ಷಕರ ನಿರೀಕ್ಷೆಗೆ ಚ್ಯುತಿ ಬಾರದಂತೆ ಭರಪೂರ ಮನರಂಜನೆಯನ್ನು ಕಟ್ಟಿಕೊಡುತ್ತಿದ್ದರು.’ ಎಂದು ಕಣ್ಸೆಳೆಯುವ ಆ ದೃಶ್ಯವನ್ನು ವರ್ಣಿಸುತ್ತಾರೆ.

ತನ್ನ ತಾತ ಗುಬ್ಬಿ ವೀರಣ್ಣನವರ ಕಂಪನಿಯಲ್ಲಿಯೇ ಬೆಳೆದ, ನಾಟಕದಲ್ಲಿ ರಾಜ- ರಾಣಿಯರ ವೈಭವೋಪೇತವಾದ ಭಾರೀ ತೂಕದ ದಿರಸುಗಳು, ಬೆಳ್ಳಿ- ಚಿನ್ನದ ಝರಿಗಳುಳ್ಳ ಸೀರೆಗಳು, ಲೋಹದಿಂದ ಮಾಡಿದ ಒಡವೆಗಳು ಇತ್ಯಾದಿಗಳನ್ನು ಜಾಗರೂಕತೆಯಿಂದ ಜೋಪಾನ ಮಾಡಿಟ್ಟುಕೊಳ್ಳಲು ಬಳಸುತ್ತಿದ್ದ ಬೃಹದಾಕಾರದ ಪೆಟ್ಟಿಗೆಗಳು, ಆರು ಅಡಿ ಉದ್ದ ಟ್ರಂಕುಗಳಲ್ಲೇ ಬಾಲಕಿಯಾಗಿದ್ದಾಗ ಕಣ್ಣಾಮುಚ್ಚಾಲೆ, ಕಳ್ಳ-ಪೊಲೀಸ್ ಆಟಗಳನ್ನು ಆಡಿ, ಅವುಗಳಲ್ಲೇ ಅವಿತುಕೊಂಡು, ನಿದ್ರೆಗೆ ಜಾರಿ ಅಲ್ಲಿಯೇ ಮಲಗೆದ್ದು ಬೆಳೆದವರು. ತಮ್ಮ ತಾತ ನಡೆಸಿದ ‘ಕಲಾ ಅಭಿಯಾನ’ದಲ್ಲಿ ಹೇಗೆ ಅನೇಕ ಘಟಾನುಘಾಟಿ ಸಂಗೀತಗಾರರಿದ್ದರು ಎಂದು ಜಯಶ್ರೀಯವರು ಕಾಳಿಂಗರಾವ್, ಹೊನ್ನಪ್ಪ ಭಾಗವತರ್, ಹರಿಕಥಮ್ಮ, ತನ್ನ ತಾಯಿ ಮಾಲತಮ್ಮ, ದೊಡ್ಡಮ್ಮ ಸ್ವರ್ಣಮ್ಮ, ರಂಗನಾಯಕಮ್ಮ ಮೊದಲಾದ ಸಂಗೀತ ಕಲಾವಿದರೂ ಆಗಿದ್ದ ನಟ- ನಟಿಯರ ಬಗ್ಗೆ ಮನೋಜ್ಞವಾದ ವಿವರಣೆ ನೀಡುತ್ತಾರೆ. ಪ್ರೀತಿ ನಾಗರಾಜರವರ ಶ್ಲಾಘನೀಯ ನಿರೂಪಣೆಯನ್ನು ಓದಿದಾಗ ನಮಗೆ ಗುಬ್ಬಿ ನಾಟಕ ಕಂಪನಿಯ ಒಳಹೊಕ್ಕು ಎಲ್ಲವನ್ನೂ ನೋಡಿಬಂದಂಥ ಒಂದು ತಾಜಾತನದಿಂದ ಕೂಡಿದ ಅನುಭವವಾಗುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.

ಇದನ್ನೂ ಓದಿ : Music: ನಾಕುತಂತಿಯ ಮಿಡಿತ; ಅರೆ ವ್ಹಾ ಕ್ಯಾ ಬಾತ್ ಹೈ! ಕಲಾವಿದರ ಜೀವಸೆಲೆ ಈ ಆಪ್ತಕೋಣೆ

ಈ ಸಂದರ್ಭದಲ್ಲಿ ನಾನು ಸಂಗೀತ ವಿದ್ವಾನ್ ಹೊನ್ನಪ್ಪ ಭಾಗವತರೂ ಹಾಗೂ ನನ್ನ ಕುಟುಂಬದವರಿಗೂ ಇದ್ದ ಬಾಂಧವ್ಯದ ಬಗ್ಗೆಯೂ ಪ್ರಸ್ತಾಪಿಸಲೇಬೇಕು. ಕವಿಯಿತ್ರಿ -ಲೇಖಕಿಯಾದ ನನ್ನ ತಾಯಿ ಶಾಲಿನಿ ಶ್ರೀನಿವಾಸ ಹಾಡುಗಾರ್ತಿ. ಅವರು ಬೆಳೆದಿದ್ದು ಭದ್ರಾವತಿಯಲ್ಲಿ. ಸುಮಾರು ಎಂಟು-ಒಂಭತ್ತು ಪ್ರಾಯದ ಬಾಲಕಿಯಾಗಿದ್ದಾಗ ಭದ್ರಾವತಿಗೆ ಹೊನ್ನಪ್ಪ ಭಾಗವತರ ನಾಟಕ ಕಂಪನಿಯ ಆಗಮನವಾಗಿತ್ತು. ಭರ್ಜರಿ ಯಶಸ್ಸು ಕಂಡ ಅವರ ಚಲನಚಿತ್ರ ‘ಮಹಾಕವಿ ಕಾಳಿದಾಸ’ ಆಗಿನ್ನೂ ನಾಟಕವಾಗಿ ಪ್ರದರ್ಶಿತವಾಗುತ್ತಿತ್ತು. ಭದ್ರಾವತಿಯಲ್ಲಿ ಇದ್ದಕ್ಕಿದ್ದಂತೆ ವರುಣನ ಆರ್ಭಟ ಹೆಚ್ಚಾಗಿ ವರ್ಷಧಾರೆ ನಿಲ್ಲಲೇ ಇಲ್ಲ. ಇದರ ಪರಿಣಾಮವಾಗಿ ನಾಟಕಕ್ಕೆ ಪ್ರೇಕ್ಷಕರೇ ಇಲ್ಲದೆ ನಾಟಕ ಕಂಪನಿ ಅಪಾರ ನಷ್ಟವನ್ನನುಭವಿಸಿತು. ಆಗ ಪುರಸಭೆಯ ಅಧ್ಯಕ್ಷರೂ, ವಕೀಲರೂ ಆಗಿದ್ದ ನನ್ನ ತಾತ ಬಡೆಕ್ಕಿಲ ಕೃಷ್ಣಭಟ್ಟರು, ಹೊನ್ನಪ್ಪ ಭಾಗವತರ ಅಭಿಮಾನಿಗಳೂ ಆಗಿದ್ದವರು ಅವರ ನೆರವಿಗೆ ಧಾವಿಸಿದರು.

ಕರ್ನಾಟಕದ ನವಮಾನವಾತಾವಾದಿಗಳ ಪೈಕಿ ಪ್ರಮುಖರಾಗಿದ್ದ, ಸ್ವಾತಂತ್ರ ಹೋರಾಟಗಾರರೂ ಆಗಿದ್ದ ನನ್ನ ತಾತ ಯಕ್ಷಗಾನ , ಸಂಗೀತ, ಸಾಹಿತ್ಯದಲ್ಲಿ ಅಪಾರ ಆಸಕ್ತಿಯುಳ್ಳವರು. ನನ್ನ ತಾತ ಹಾಗೂ ಹೊನ್ನಪ್ಪ ಭಾಗವತರು ಅನ್ಯೋನ್ಯ ಸ್ನೇಹಿತರಾದರು. ಆ ಕಷ್ಟದ ಕಾಲದಲ್ಲಿ ನಾಟಕ ಕಂಪನಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು, ನನ್ನ ತಾತ ಪ್ರೀತಿಯಿಂದ ನಿರ್ವಹಿಸಿದ್ದರೆಂದು ನನ್ನ ತಾಯಿ ನನಗೆ ಹೇಳಿದ್ದರು. ಆಗ ಬಿಡುವಾಗಿದ್ದ ಹೊನ್ನಪ್ಪ ಭಾಗವತರು ತನ್ನ ತಂದೆಯೊಡನೆ ಲೋಕಾಭಿರಾಮ ಮಾತನಾಡುವ ಸಲುವಾಗಿ ತಮ್ಮ ಭದ್ರಾವತಿಯ ಮನೆಗೆ ಬರುತ್ತಿದ್ದರು. ಹಾಗೆ ಬಂದಾಗಲೆಲ್ಲ ಅವರು ತನ್ನ ಸಂಗೀತಪ್ರೇಮ, ಹುಮ್ಮಸ್ಸನ್ನು ಕಂಡು ವಾತ್ಸಲ್ಯದಿಂದ ತನಗೆ ಅಕ್ಕಮಹಾದೇವಿಯ ಕೆಲವು ವಚನಗಳು, ಪುರಂದರದಾಸರ ಪದಗಳು, ಕಾಳಿದಾಸ ವಿರಚಿತ ‘ಶ್ಯಾಮಲಾ ದಂಡಕ’ವನ್ನೂ ಪಾಠ ಮಾಡಿದ್ದರು ಮತ್ತು ‘ಚೆಲುವಯ್ಯ ಚೆಲುವೋ ತಾನಿತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೆ’ ಕೋಲಾಟದ ಹಾಡನ್ನೂ ಹೇಳಿಕೊಟ್ಟದ್ದರೆಂದು ನನ್ನ ತಾಯಿ ಭಾವಪರವಶರಾಗಿ ಇಂದಿಗೂ ಜ್ಞಾಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ : Music : ನಾಕುತಂತಿಯ ಮಿಡಿತ ; ‘ಕೇಳುವುದನ್ನು ನಿಲ್ಲಿಸಿ ಹಾಡುವುದನ್ನು ಶುರುಮಾಡಿ’

ಕಾಳಿದಾಸ ನಾಟಕದಲ್ಲಿಯೂ ಬರುವ ಪ್ರಸಂಗ, ಕವಿ ಕಾಳಿದಾಸನನ್ನು ವಿವಾಹವಾದ ಬಳಿಕ ತನ್ನ ಪತಿಯೊಬ್ಬ ಅವಿದ್ಯಾವಂತನೆಂದು ತಿಳಿದು ಆಘಾತಗೊಂಡ ರಾಜಕುಮಾರಿ ಅವನನ್ನು ಕಾಳಿಕಾದೇವಾಲಯಕ್ಕೆ ಕರೆದೊಯ್ದು ಇಡೀ ರಾತ್ರಿ ‘ಜಯ ಓಂ ಮಹಾಕಾಳಿ, ಜಗದಂಬ ಜಯಕಾಳಿ’ ಎಂದು ಕಾಳಿದಾಸನೊಡನೆ ಜಪ ಮಾಡುವ ಸನ್ನಿವೇಶವನ್ನು ವೀಕ್ಷಿಸಿ ಅದನ್ನು ಮನಸಾರೆ ಮೆಚ್ಚಿಕೊಂಡ ನನ್ನ ತಾಯಿ ಮತ್ತು ದೊಡ್ಡಮ್ಮ – ಚಿಕ್ಕಮ್ಮಂದಿರು, ಆಗಿನ್ನೂ ಹತ್ತು ವರ್ಷದೊಳಗಿನ ಮುಗ್ಧ ಬಾಲಕಿಯರು, ರಾತ್ರಿ ಸುಮಾರು ಹೊತ್ತು, ರಾಗವಾಗಿ ‘ಜಯ ಓಂ ಮಹಾಕಾಳಿ ಜಗದಂಬ ಜಯಕಾಳಿ’ ಎಂದು ತನ್ಮಯರಾಗಿ ಜಪ ಮಾಡಿದ್ದರಂತೆ . ಕಾಳಿಕಾದೇವಿ ತಮಗೂ ಪ್ರತ್ಯಕ್ಷವಾಗಿ ವರವನ್ನು ಕೊಡಬಹುದೆಂಬ ಆಸೆಯಿಂದ!

Vaishaliyaana Column influence of Theatre and Music by Dr KS Vaishali

ಗರುಡ ಸದಾಶಿವರಾಯರುಅನೇಕ ಅಪೂರ್ವ ಕಲಾವಿದರು ಇಂದು ಭೂತಕಾಲದ ಕಾಲಗರ್ಭದಲ್ಲಿ ಅದೃಶ್ಯರಾಗಿಬಿಟ್ಟಿದ್ದಾರೆ. ವರದಾಚಾರ್ಯರು, ಗರುಡ ಸದಾಶಿವರಾಯರಂಥ ಅಸಾಧಾರಣ ಕಲಾವಿದರು ತಮ್ಮ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿಯೇ ಅಜರಾಮರರಾಗಿದ್ದಾರೆ. ಆದರೆ ಸಾಹಿತಿ ಅ.ನ.ಕೃ ಹೇಳಿದಂತೆ ‘ಎಲ್ಲ ಕಲೆಗಳ ಸಾರ ಸರ್ವಸ್ವವನ್ನೂ ಆಸ್ವಾದಿಸಿ, ತನ್ನ ರಸರಮಣೀಯತೆಯಿಂದ ಹೊಸ ಪ್ರಪಂಚವನ್ನೇ ಸೃಷ್ಟಿಸುವ ಚೇತನ ನಾಟಕಕ್ಕಿದೆಯೆಂದೇ ಅದನ್ನು ಕಲಾಸಾರ್ವಭೌಮ ಎಂದು ಪರಿಗಣಿಸಲಾಗಿತ್ತು’ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಕೋವಿಡ್ ಸಾಂಕ್ರಾಮಿಕ ಪಿಡುಗಿನ ಹಾವಳಿಯಿಂದ ಸ್ಥಗಿತಗೊಂಡಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಪುನರಾರಂಭಗೊಂಡಿರುವುದು ಸಂತಸದ ಸಂಗತಿ. ನೀನಾಸಮ್ ರಂಗ ಶಿಕ್ಷಣ ಕೇಂದ್ರ , ಹೆಗ್ಗೋಡು ವತಿಯಿಂದ ಇದೇ ತಿಂಗಳ ಹನ್ನೊಂದರಿಂದ ಹದಿನೈದನೆಯ ತಾರೀಖಿನವರೆಗೆ ನೀನಾಸಂ ಸಭಾಂಗಣ ಮತ್ತು ಶಿವರಾಮ ಕಾರಂತ ರಂಗಮಂದಿರ ಹಗ್ಗೋಡಿನಲ್ಲಿ 2021-22ರ ಸಾಲಿನ ನಾಟಕೋತ್ಸವ ಜರುಗಲಿದೆ. ಕೆ.ವಿ. ಅಕ್ಷರ ಅನುವಾದಿಸಿರುವ ಭವಭೂತಿಯ ‘ಮಹಾವೀರ ಚರಿತ’ದ ಕನ್ನಡ ಆವತರಣಿಕೆ ‘ಕಡುಗಲಿಯ ನಿಡುಗಾಥೆ’, ಸಂಸರ ‘ಬಿರುದಂತೆಂಬರ ಗಂಡ’, ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪುರಸ್ಕೃತ ಕೆ.ವಿ ಸುಬ್ಬಣ್ಣ ಮತ್ತು ಅವರ ಪುತ್ರ ಕೆ.ವಿ ಅಕ್ಷರ ಕನ್ನಡಕ್ಕೆ ಅನುವಾದಿಸಿ, ಅಳವಡಿಸಿಕೊಂಡಿರುವ ನಿಕೊಲಾಯ್ ಗೋಗೋಲ್‌ನ ‘ದಿ ಇನ್‌ಸ್ಪೆಕ್ಟರ್ ಜನರಲ್’ ನಾಟಕದ ಕನ್ನಡ ರೂಪಾಂತರ ‘ಸಾಹೇಬರು ಬರುತ್ತಾರೆ’ ಮೊದಲಾದ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ನಾಟಕೋತ್ಸವವನ್ನು ಕಣ್ತುಂಬಿಕೊಳ್ಳಲು ಹೆಗ್ಗೋಡಿಗೆ ಹೊರಟಿದ್ದೇನೆ.

(ಮುಂದಿನ ಯಾನ : 25.6.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಭಾಗಗಳನ್ನು ಓದಲು ಕ್ಲಿಕ್ ಮಾಡಿ

Published On - 10:58 am, Sat, 11 June 22