New Book : ಅಚ್ಚಿಗೂ ಮೊದಲು; ‘ಕಡಲು ನೋಡಲು ಹೋದವಳು’ ಫಾತಿಮಾ ರಲಿಯಾ ಕೃತಿ ಸದ್ಯದಲ್ಲೇ ನಿಮ್ಮ ಓದಿಗೆ

Fatima Raliya : ‘ಈಗಷ್ಟೇ ಕಟ್ಟಿದ ಮಲ್ಲಿಗೆ ಮಾಲೆಯೊಂದರಿಂದ ಹಗೂರ ಜಾರಿದ ಹೂವೊಂದು ಗಾಳಿ ಬೀಸಿದಾಗಲೆಲ್ಲ ತನ್ನ ಘಮ ಉಳಿಸಿಕೊಳ್ಳುವಂತೆ ‘ಗದ್ಯದ ಭಾವಗೀತೆ’ ನೇಯಬಲ್ಲ ಇವರ, ‘ಉನ್ಮತ್ತ ಕುರುಕ್ಷೇತ್ರವೂ ಬೃಂದಾವನದ ಕೊಳಲೂ..’ ತಲೆಬರಹದ ಪ್ರಬಂಧವೇ ಈಕೆ ಯಾರು, ಏನು ಮತ್ತು ಎತ್ತ ಎಂಬುದನ್ನು ಜಾಹೀರು ಮಾಡುತ್ತದೆ.’

New Book : ಅಚ್ಚಿಗೂ ಮೊದಲು; ‘ಕಡಲು ನೋಡಲು ಹೋದವಳು’ ಫಾತಿಮಾ ರಲಿಯಾ ಕೃತಿ ಸದ್ಯದಲ್ಲೇ ನಿಮ್ಮ ಓದಿಗೆ
ಲೇಖಕಿ ಫಾತಿಮಾ ರಲಿಯಾ
Follow us
ಶ್ರೀದೇವಿ ಕಳಸದ
|

Updated on:Jun 09, 2022 | 3:34 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ: ಕಡಲು ನೋಡಲು ಹೋದವಳು (ಪ್ರಬಂಧಗಳು)
ಲೇಖಕಿ : ಫಾತಿಮಾ ರಲಿಯಾ
ಪುಟ : 104
ಬೆಲೆ : ರೂ. 105
ಮುಖಪುಟ ವಿನ್ಯಾಸ : ರೂಪಶ್ರೀ ಕಲ್ಲಿಗನೂರು
ಪ್ರಕಾಶನ : ಅಹರ್ನಿಶಿ, ಶಿವಮೊಗ್ಗ

*

‘ಅತ್ತ ಹರಟೆಯೂ ಅಲ್ಲದ ಇತ್ತ ವೈಚಾರಿಕ ಪ್ರಬಂಧವೂ ಅಲ್ಲದ, ರುಚಿಗೆ ತಕ್ಕಷ್ಟು ಹಾಸ್ಯವನ್ನೂ ಬೆರೆಸಿ, ಓದುಗರ ಕಲ್ಪನೆಗೆ ವಿಚಾರ-ವಿವರಗಳ ಮೊತ್ತವನ್ನು ಕೂಡಿಸಬಲ್ಲ  ಫಾತಿಮಾ ರಲಿಯಾ, ಮುಂದೊಂದು ದಿನ ಪ್ರಮುಖ ಪ್ರಬಂಧಕಾರರ ಸಾಲಲ್ಲಿ ಎದ್ದು ಕಾಣಿಸಬಲ್ಲವರು. ಈಗಷ್ಟೇ ಕಟ್ಟಿದ ಮಲ್ಲಿಗೆ ಮಾಲೆಯೊಂದರಿಂದ ಹಗೂರ ಜಾರಿದ ಹೂವೊಂದು ಗಾಳಿ ಬೀಸಿದಾಗಲೆಲ್ಲ ತನ್ನ ಘಮವೊಂದನ್ನು ಉಳಿಸಿಕೊಳ್ಳುವಂತೆ ‘ಗದ್ಯದ ಭಾವಗೀತೆ’ ನೇಯಬಲ್ಲ ಇವರ, ‘ಉನ್ಮತ್ತ ಕುರುಕ್ಷೇತ್ರವೂ ಬೃಂದಾವನದ ಕೊಳಲೂ..’ ಎಂಬೊಂದು ತಲೆ ಬರಹದ ಪ್ರಬಂಧವೇ ಈಕೆ ಯಾರು, ಏನು ಮತ್ತು ಎತ್ತ ಎಂಬುದನ್ನು ಜಾಹೀರು ಮಾಡುತ್ತದೆ. ಮಿದು ಮನಸ್ಸಿನ ಕನ್ನಡಿಗರು ಈ ಕೃತಿಯನ್ನು ಖಂಡಿತವಾಗಿಯೂ ಪ್ರೀತಿಯಿಂದಲೇ ಓದುತ್ತಾರೆ.

ಬೊಳುವಾರು ಮಹಮದ್ ಕುಂಞಿ, ಲೇಖಕ

‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆ ಎದುರಾದಾಗೆಲ್ಲಾ ‘ನನ್ನೊಳಗನ್ನು ಬರಿದು ಮಾಡಲು’ ಎಂದು ಮೂರು ಪದಗಳ ಉತ್ತರ ನೀಡಿ ನಾನು ಪಲಾಯನ ಮಾಡುವುದೇ ಹೆಚ್ಚು. ಆದರೆ ನಾನು ಕೇವಲ ಅಷ್ಟಕ್ಕೇ ಬರೆಯುತ್ತೇನೆಯೇ? ಇಲ್ಲವೆನಿಸುತ್ತದೆ. ಯಾವುದೋ ಒಂದು ಕಾಲದಲ್ಲಿ ಅಕಾರಣ ನನ್ನನ್ನು ತಾಕಿದ ಘಟನೆಯೊಂದನ್ನು ಮತ್ತೆ ಮತ್ತೆ ನವೀಕರಿಸಲು, ಯಾರೊಂದಿಗೂ ಹಂಚಿಕೊಳ್ಳಲಾಗದ ಕೆಲವು ಯಥಾವತ್ ಭಾವಗಳನ್ನು ಹೊರಗೆಡವಿ ಹಗುರಾಗಲು, ಒಳಗಿನ ಮೌನಕ್ಕೊಂದು ಬೆಚ್ಚಗಿನ ಮಾತಿನ‌ ಕವಚ ತೊಡಿಸಲು, ನನಗಿಷ್ಟವಿಲ್ಲದ ಘಟನೆ ನಡೆದಾಗ ತುಟಿ ಹೊಲಿದುಕೊಂಡು ಸುಮ್ಮನಾಗುವ ಸ್ಥಿತಿ ಇದ್ದಾಗ ಒಂದು ಪ್ರತಿಭಟನೆಯನ್ನು ಸೂಚಿಸಲು, ನನ್ನೊಳಗಿನ ಸಂಘರ್ಷಕ್ಕೊಂದು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು, ನನ್ನಂತಹುದೇ ಸಹ ಮನುಷ್ಯರನ್ನು ಅಕ್ಷರದ ಮೂಲಕ ತಾಕಲು, ಹೆಗಲು ತಬ್ಬಿ ಸಾಂತ್ವನ ಹೇಳಲು ಒಂದು ರಾಶಿ ಅಕ್ಷರಗಳು ಬೇಕು ಅಂತ ತೀವ್ರವಾಗಿ ಅನ್ನಿಸಿದಾಗೆಲ್ಲಾ ನಾನು ಬರೆಯುತ್ತೇನೆ. ಅಥವಾ ನಾನೇಕೆ ಬರೆಯುತ್ತೇನೆ ಎನ್ನುವ ಪ್ರಶ್ನೆಯ ಉತ್ತರ ಕಾಲ ಕಾಲಕ್ಕೆ ನಿರಂತರ ಪರಿಷ್ಕರಣೆಯಾಗುತ್ತಲೇ ಹೋಗುತ್ತದೇನೋ.

ಫಾತಿಮಾ ರಲಿಯಾ, ಲೇಖಕಿ

*

ವಿವಿಧ ಪ್ರಬಂಧಗಳಿಂದ ಆಯ್ದ ಸಾಲುಗಳು

‘ಆಕೆ ನನ್ನ ರತ್ನಕ್ಕ ಆಗಿರಲಿಲ್ಲ’

ನನಗೆ ರತ್ನಕ್ಕ ಪ್ರತಿ ದಿನ ನಮ್ಮ ಜೊತೆ ಇರುತ್ತಾಳೆ ಅನ್ನುವುದೇ ದೊಡ್ಡ ಸಂಭ್ರಮ. ಅಷ್ಟು ದಿನ ಇಲ್ಲದ ಗಂಡ ಈಗ ಧುತ್ತೆಂದು ಹೇಗೆ ಬಂದ? ಇಷ್ಟು ದಿನ ಎಲ್ಲಿದ್ದ? ಅವರ ನಡುವೆ ಏನಾದ್ರೂ ಜಗಳ ಆಗಿತ್ತಾ? ಅವೆಲ್ಲಾ ನನಗೆ ಆ ಹೊತ್ತಿಗೆ ಕಾಡುವ ಪ್ರಶ್ನೆಗಳು ಆಗಿರಲಿಲ್ಲ, ಆಗಿದ್ದರೂ ಅವೇನು ತುಂಬಾ ಮಹತ್ವದ ಸಂಗತಿಗಳು ಅನ್ನಿಸುತ್ತಿರಲಿಲ್ಲ. ಆದರೆ ಊರ ತುಂಬಾ ರತ್ನಕ್ಕಳ ಬಗ್ಗೆ, ಅವಳ ಗಂಡನ‌ ಬಗ್ಗೆ ಅತಿರಂಜಿತ ಸುದ್ದಿಗಳು ಓಡಾಡುತ್ತಿದ್ದವು. ಒಂದಿಬ್ಬರು ಅಮ್ಮನ ಹತ್ತಿರವೂ ಅವಳ ಬಗ್ಗೆ ಚಾಡಿ ಹೇಳಿದ್ದರು. ಅಮ್ಮನದು ಎಂದಿನ ನಿರ್ಲಿಪ್ತತೆ. ತನ್ನ ಅಂತರಂಗದ ಗೆಳತಿಯ ಬಗ್ಗೆ ಇದ್ದ ನಂಬಿಕೆಯ ಮುಂದೆ ಉಳಿದೆಲ್ಲಾ ಸಂಗತಿಗಳು ಗೌಣವಾಗಿದ್ದಿರಬೇಕು ಅಥವಾ ಕೆಲವು ತೀರಾ ಖಾಸಗಿ ಸಂಗತಿಗಳಲ್ಲಿ ಅತಿಕ್ರಮ ಪ್ರವೇಶ ಮಾಡಬಾರದು ಅಂತ ಅನ್ನಿಸಿರಬೇಕು.

*

‘ನನ್ನುಪ್ಪಾಪನ‌ ಕೆಂಪಿ’

ನಿಜಕ್ಕೂ ಈ ಕೆಂಪಿ ನಮ್ಮ ಮನೆ ಸೇರಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ನಮ್ಮ ಮನೆಯಿಂದ ಅರ್ಧ ಕಿಲೋಮೀಟರಿನಷ್ಟು ದೂರದಲ್ಲಿರುವ ಸಣ್ಣ ರೈತ ಚೆನ್ನಪ್ಪಣ್ಣ ತನ್ನ ಚಿಕ್ಕ ಮಗಳ ಮನೆಗೆ ಹೋಗುವಾಗ ಈ ಕೆಂಪಿಯನ್ನು ಪಕ್ಕದೂರಿನಲ್ಲಿನ ದೊಡ್ಡ ಮಗಳ ಹಟ್ಟಿಯಲ್ಲಿ ಕಟ್ಟಿ ಹೋಗಿದ್ದರು. ಅಲ್ಲಿಂದ ಯಾವ ಮಾಯದಿಂದ ಅವಳು ತಪ್ಪಿಸಿಕೊಂಡಿದ್ದಳೋ ಗೊತ್ತಿಲ್ಲ, ಅಜ್ಜ ಲುಹುರ್ (ಮಧ್ಯಾಹ್ನದ) ನಮಾಜಿಗೆಂದು ಮಸೀದಿಗೆ ಹೊರಟಿದ್ದಾಗ ಪಕ್ಕದಲ್ಲಿ ಹರಿಯುತ್ತಿರುವ ತೋಡಿನ ಬದಿ ಪೆಕರು ಪೆಕರಾಗಿ ನಿಂತುಕೊಂಡಿದ್ದಳಂತೆ. ಉಸ್ತಾದರನ್ನೂ, ಒಂದಿಬ್ಬರು ಮಕ್ಕಳನ್ನೂ ಸೇರಿಸಿ ಅವಳ ಸುತ್ತ ಒಂದು ಹಗ್ಗ ಬಿಗಿದು ತೋಡು ದಾಟಿಸಿ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದರು. ಆಮೇಲೆ ಚೆನ್ನಪ್ಪಣ್ಣ ಊರಿಗೆ ಬರುವವರೆಗೂ ಆಕೆ ನಮ್ಮ ಹಟ್ಟಿಯಲ್ಲೇ ಇರುತ್ತಾಳೆ ಅನ್ನುವ ನಿರ್ಧಾರವನ್ನೂ ತೆಗೆದುಕೊಂಡು ಬಿಟ್ಟರು. ಈ ಹೊತ್ತು ಕೂತು, ಕೆಂಪಿ ನಮ್ಮ ಹಟ್ಟಿ ಸೇರಿದ ಸನ್ನಿವೇಶವನ್ನು ನೆನೆಸಿದರೆ, ಈವತ್ತಿನ ಕಾಲದಲ್ಲೇನಾದರೂ ಈ ಘಟನೆ ನಡೆದಿದ್ದರೆ ಅಜ್ಜ ಹಸುಗಳ್ಳತನದ ಆರೋಪದಲ್ಲಿ ಜೈಲು ಸೇರುತ್ತಿದ್ದರೇನೋ ಅನಿಸುತ್ತದೆ.

ಫಾತಿಮಾರ ಈ ಬರಹವನ್ನೂ ಓದಿ : Body Shaming ; ಸುಮ್ಮನಿರುವುದು ಹೇಗೆ? : ‘ಬುರ್ಖಾದೊಳಗಿದ್ದುಕೊಂಡೇ ಓದುತ್ತಾಳಂತೆ’ ಅಚ್ಚರಿಯೋ ಕುಹಕವೋ ಮೆಚ್ಚುಗೆಯೋ?

*

‘ಒಂದು ಮದುವೆಯ ಸಂಭ್ರಮ ಮತ್ತು ಮೂರು ಸಾವಿನ ಶೂನ್ಯ’

ಪ್ರತೀ ಸಾವೂ ಒಂದು ವಿವರಿಸಲಾಗದ ಶೂನ್ಯವನ್ನೂ, ತಲ್ಲಣವನ್ನೂ ಸೃಷ್ಟಿಸುತ್ತದೆ. ಹಾಗೆ ನೋಡುವುದಾದರೆ ಯಾರ ಸಾವೂ, ಯಾವ ಸಾವೂ ನೆಮ್ಮದಿಯನ್ನು, ಸಂಭ್ರಮವನ್ನು ತರುವುದಿಲ್ಲ. ವರ್ಷಗಳ ಕಾಲ ಹಾಸಿಗೆ ಹಿಡಿದವನು, ಕೋಮಾದಲ್ಲಿದ್ದವನು ಮರಣ ಹೊಂದಿದರೂ ಒಂದು ಬಗೆಯ ಶೂನ್ಯತೆ ಕಾಡದೇ ಇರದು. ಅವನು ಮಲಗಿದ್ದಲ್ಲೇ ಅನೂಹ್ಯವಾದ ಯಾವುದೋ ಸಂಬಂಧವೊಂದು ಬೆಳೆದು ಬಿಟ್ಟಿರುತ್ತದೆ, ಅದನ್ನು ಸುಲಭವಾಗಿ ಕತ್ತರಿಸಲಾಗುವುದಿಲ್ಲ. ಬದುಕೆಂಬ ಅಗಾಧ ಸಂತೆಯೊಳಗೆ ಸಾವೆಂಬುವುದು ಸಂತನಂತೆ, ಅದಕ್ಕೆ ಅಬ್ಬರವಿಲ್ಲ, ವೈಭವವಿಲ್ಲ, ಕೂಗಿ ಕರೆದು ವ್ಯಾಪಾರ ಕುದುರಿಸಬೇಕೆಂದಿಲ್ಲ. ಮೂಲೆಯಲ್ಲಿ ಮೌನವಾಗಿಯೇ ಕೂತು ಎಲ್ಲವನ್ನೂ ನೋಡುತ್ತಾ , ಮನನ ಮಾಡಿಕೊಳ್ಳುತ್ತಾ ಒಂದು ನಿಶ್ಚಿತ ಸಮಯದಲ್ಲಿ ಮೌನವಾಗಿಯೇ ಎದ್ದು ಬಂದು ಕೈ ಹಿಡಿದು ಕರೆದುಕೊಂಡು ಹೋಗುತ್ತದೆ. ಆದರೆ ಅದು ಬದುಕಿರುವವರ ಎದೆಯಲ್ಲಿ ಉಳಿಸಿಬಿಡುವ ಒಂದು ಖಾಲಿತನವಿದೆಯಲ್ಲಾ, ಅದನ್ನು ಒಮ್ಮೆ ಅನುಭವಿಸಿದರೆ ಸ್ವತಃ ಸಾವೂ ಕೂಡ ಬೆಚ್ಚಿ ಬಿದ್ದೀತು.

ಇದನ್ನೂ ಓದಿ :Literature : ಅಚ್ಚಿಗೂ ಮೊದಲು; ಸಹನಾ ಹೆಗಡೆ ಅನುವಾದಿಸಿದ ‘ಅನಿಮಲ್ ಫಾರ್ಮ್’ ಕಾದಂಬರಿ ಸದ್ಯದಲ್ಲೇ ನಿಮ್ಮ ಓದಿಗೆ

*

‘ಉನ್ಮತ್ತ ಕುರುಕ್ಷೇತ್ರವೂ ಬೃಂದಾವನದ ಕೊಳಲೂ’

ಆದರೆ ಅದಾಗಿ ಎರಡೇ ದಿನಗಳಲ್ಲಿ ನನ್ನೂರಿನ ಎರಡು ಎಳೆಜೀವಗಳು ಪೊಲೀಸ್ ಗೋಲಿಬಾರ್‌ಗೆ ಬಲಿಯಾಗಿದ್ದವು‌. ಒಂದು ವಿಚಿತ್ರ ವಿಷಣ್ಣತೆ ಇಡೀ ಕರಾವಳಿಯನ್ನು ಆವರಿಸಿಕೊಂಡ ದಿನಗಳು ಅವು. ಸರಿ ತಪ್ಪುಗಳ ತಕ್ಕಡಿ ಒಮ್ಮೆ ಆ ಕಡೆ ಮತ್ತೊಮ್ಮೆ ಈ ಕಡೆ ಸುಮ್ಮನೆ ಹೊಯ್ದಾಡುತ್ತಿತ್ತು. ಎಲ್ಲ ವಿಷಾದಗಳಿಂದ ಹೊರಬರಬೇಕಾದರೆ ಮತ್ತೆ ಗೌರಿಯ ಮಾತು ಕೇಳುತ್ತಾ ಸುಮ್ಮನೆ ಕುಳಿತುಕೊಳ್ಳಬೇಕು, ಅದಕ್ಕೂ ಮೊದಲು ಅವಳು ತಾಕೀತು ಮಾಡಿದಂತೆ ಸೀರೆ ಉಡಿಸಲು ಕಲಿಯಬೇಕು ಅಂದುಕೊಳ್ಳುತ್ತಿರುವಾಗಲೇ ಕರೆಗಂಟೆ ಸದ್ದಾಗಿತ್ತು. ಬಾಗಿಲು ತೆರೆದು ನೋಡಿದರೆ ಚೆನ್ನಪ್ಪಜ್ಜ, ನನ್ನ ಹೊಟ್ಟೆಯೊಳಗಿನ ಜೀವಕ್ಕೆ ಒಳ್ಳೆಯದು ಅಂತ ಇದುವರೆಗೆ ನಾನು ನೋಡೇ ಇಲ್ಲದ ತಿಂಡಿ ಮಾಡಿ ತಂದಿದ್ದರು. ಒಂದು ತಟ್ಟೆಗೆ ಹಾಕಿ ನನ್ನ ಮುಂದೆ ಇಟ್ಟು ತಿನ್ನು ಎಂದರು. ತಿನ್ನಲಾಗದೆ ನಾನು ಪಿಳಿ ಪಿಳಿ ಕಣ್ಣು ಬಿಡುತ್ತಿದ್ದರೆ, ಅಲ್ಲೇ ಪಕ್ಕದಲ್ಲಿದ್ದ ಲೋಟಕ್ಕೆ ನೀರು ಬಗ್ಗಿಸಿ ಕೊಟ್ಟು ‘ನಾಳೆ ನನ್ನ ಗೌರಿ  ಹೀಗೆ ಒಡಲೊಳಗೊಂದು ಜೀವ ಇಟ್ಟುಕೊಂಡು ಬಂದಾಗ ನಾನಿಲ್ಲದೇ ಹೋದರೆ ನೀನು ಉಪಚರಿಸುತ್ತಿಯಲ್ಲಾ?’ ಎಂದು ಆರ್ದ್ರವಾಗಿ ಕೇಳಿದರು. ನನಗೆ ಅವರನ್ನು ನೋಡುವಾಗೆಲ್ಲಾ, ಇಡೀ ಪ್ರಂಪಚವೇ ಕುರುಕ್ಷೇತ್ರದ ಉನ್ಮಾದದಲ್ಲಿರುವಾಗ ಈ ಚೆನ್ನಪ್ಪಜ್ಜ ಮಾತ್ರ ಬೃಂದಾವನದ ಮೂಲೆಯಲ್ಲಿನ ಯಾವುದೋ ಮರದ ಕೆಳಗೆ ನಿರಮ್ಮಳವಾಗಿ ಕೂತು ಕೊಳಲು ಊದುತ್ತಿದ್ದಾರೆ ಅನ್ನಿಸುತ್ತದೆ.

(ಪ್ರಬಂಧಗಳ ಪೂರ್ಣ ಓದಿಗೆ ಸಂಪರ್ಕಿಸಿ : 91 94491 74662)

ಈ ಅಂಕಣಗಳ ಎಲ್ಲಾ ಆಯ್ದ ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Thu, 9 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ