ಶೆಲ್ಫಿಗೇರುವ ಮುನ್ನ: ‘ಬಿದಿರು ನೀನ್ಯಾರಿಗಲ್ಲದವಳು’ ಮೋಟಮ್ಮನವರ ಆತ್ಮಕಥನ ಜೂನ್ 11ರಂದು ಬಿಡುಗಡೆ

Motamma : ‘ನಾನ್ಯಾರು ಗೊತ್ತಾಯ್ತಾ?’ ಅಂತ ಕೇಳಿದೆ. ಆಕೆ ಗೊತ್ತಿಲ್ಲ ಅಂತಂದಳು. ನನ್ನ ಹೆಸರು ಮೋಟಮ್ಮ, ನಾನು ಎಂಎಲ್‌ಎ. ‘ಹೌದಾ?!’ ಅಂತ ಉದ್ಗಾರ ತೆಗೆದಳು. ಮುಂದೆ ‘ಮದುವೆಗೂ ಮೊದಲೇ ಮನೆಗೆ ಬಂದು ನಮ್ಮ ಮನೆಯನ್ನು ನೋಡಿಕೊಂಡು ಹೋಗಿದ್ದಳು ನಮ್ಮ ಸೊಸೆ’ ಅಂತ ನಮ್ಮ ಅತ್ತೆಯವರು ಹೇಳಿ ತಮಾಷೆ ಮಾಡುತ್ತಿದ್ದರು.

ಶೆಲ್ಫಿಗೇರುವ ಮುನ್ನ: ‘ಬಿದಿರು ನೀನ್ಯಾರಿಗಲ್ಲದವಳು’ ಮೋಟಮ್ಮನವರ ಆತ್ಮಕಥನ ಜೂನ್ 11ರಂದು ಬಿಡುಗಡೆ
ರಾಜೀವ ಗಾಂಧಿಯವರೊಂದಿಗೆ ಮೋಟಮ್ಮನವರು ಮತ್ತಿತರರು.
Follow us
ಶ್ರೀದೇವಿ ಕಳಸದ
|

Updated on:Jun 08, 2022 | 6:56 PM

ಶೆಲ್ಫಿಗೇರುವ ಮುನ್ನ | Shelfigeruva Munna : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ಇಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಗಮನಿಸಿ, ಪ್ರಕಾಶಕರು ಮತ್ತು ಬರಹಗಾರರು ಬಿಡುಗಡೆಗೂ ಮುನ್ನ ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಬಹುದು. ಇ ಮೇಲ್ : tv9kannadadigital@gmail.com 

ಕೃತಿ : ಬಿದಿರು ನೀನ್ಯಾರಿಗಲ್ಲದವಳು (ಪ್ರಸಿದ್ಧ ರಾಜಕಾರಣಿ ಶ್ರೀಮತಿ ಮೋಟಮ್ಮ ಅವರ ಆತ್ಮಕಥನ)
ನಿರೂಪಣೆ : ವೀರಣ್ಣ ಕಮ್ಮಾರ
ಪುಟ : 400
ಬೆಲೆ : ರೂ. 450
ಮುಖಪುಟ ವಿನ್ಯಾಸ: ವೀರನಾರಾಯಣ
ಪ್ರಕಾಶನ : ವಿಕಾಸ ಪ್ರಕಾಶನ, ಬೆಂಗಳೂರು 

*

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 11ರಂದು ಬೆಳಗ್ಗೆ 10ಗಂಟೆಗೆ ಈ ಪುಸ್ತಕವನ್ನು ಎಸ್. ಎಂ. ಕೃಷ್ಣ ಅವರು ಲೋಕಾರ್ಪಣೆ ಮಾಡಲಿದ್ದಾರೆ. 

*

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’
Image
Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್​ ಹುಸೇನ್ ಕಥೆ ‘ಸುಲ್ತಾನಳ ಕನಸು’
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
Image
Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಆತ್ಮಕಥನವನ್ನು ಎಂದೂ ವಿಮರ್ಶೆಯ ಒರೆಗೆ ಹಚ್ಚಬಾರದು, ಬದುಕಿನಲ್ಲಿ ಘಟಿಸಿದ ಘಟನೆಗಳನ್ನು ಪೋಣಿಸಿದ ಹಾರವಿದು. ಆಯಾ ಸಮಯ ಸಂದರ್ಭಕ್ಕೆ ಅನುಸಾರವಾಗಿ ನೀರಲ್ಲಿ ಸಾಗುವ ನೌಕೆಯಂತೆ ಎಡಬಲಗಳಿಗೆ ವಾಲುತ್ತಾ ಸಾಗುವ ಸಾಧನೆಯ ಪಯಣ. ನೋವು- ನಲಿವು. ಕಷ್ಟ-ಸುಖ, ಹತಾಶೆ- ಆಶಾವಾದಗಳ ಸಂಗಮ ಈ ಬದುಕು. ಕಾಂಗ್ರೆಸ್ ಎಂಬ ಮಹಾಸಮುದ್ರದಲ್ಲಿ ರಾಜಕಾರಣಿಯಾಗಿ ಯಶಸ್ಸು ಗಳಿಸುತ್ತಾರೆ ಎಂದರೆ, ಅವರು ನಿಜಕ್ಕೂ ಅಭಿನಂದನಾರ್ಹರು. ಪಕ್ಷದ ತಳಮಟ್ಟದಿಂದ ಬಂದು ಮಂತ್ರಿಯಾಗಿ, ವಿರೋಧ ಪಕ್ಷದ ನಾಯಕಿಯಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ಪಕ್ಷದ ಎಲ್ಲಾ ಹಿರಿಯರ ಮನಸ್ಸು ಗೆದ್ದ ಗಟ್ಟಿಗಿತ್ತಿ. ನೇರ ನಡೆ ನುಡಿ, ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಗುಣ, ಸ್ವಾಭಿಮಾನ ಮೋಟಮ್ಮನವರ ಸಂಪತ್ತು. ರಾಜಕೀಯ ಸ್ಥಾನಮಾನಗಳ ಏರಿಳಿತವಾದರೂ ನಂಬಿದ ತತ್ವ-ಸಿದ್ಧಾಂತವನ್ನು ಮರೆಯದ ಪ್ರಬುದ್ಧ ರಾಜಕಾರಣಿ.

ಬಿದಿರು ಒಂದು ದಿನ ಬ್ರಹ್ಮನಿಗೆ ಬೇಸರದಿಂದ ಕೇಳಿತಂತೆ, ಬೇಕಿತ್ತೇ ಈ ನಿನ್ನ ಸೃಷ್ಟಿಯೊಳಗೆ ನನ್ನದೊಂದು ಪಾತ್ರ? ಹೂವಿಲ್ಲ, ಹಣ್ಣಿಲ್ಲ, ದಣಿದು ಬಂದವರಿಗೆ ನೆರಳು ನೀಡಲೂ ಆಗುವುದಿಲ್ಲ. ಬ್ರಹ್ಮ ನುಡಿದನಂತೆ- ‘ಯಾಕೆ ಸಾಧ್ಯವಿಲ್ಲ? ಮನಸ್ಸು ಮಾಡಿ ನೋಡು’, ಬಿದಿರು ಹಠ ಹಿಡಿದು ಬೆಳೆಯಿತಂತೆ. ಕೃಷ್ಣನ ಕೈಯಲ್ಲಿ ಕೊಳಲಾಯಿತು, ಮಕ್ಕಳ ತೂಗುವ ತೊಟ್ಟಿಲಾಯಿತು, ಸುಮಂಗಲಿಯರ ಬಾಗಿನಕ್ಕೆ ಮೊರವಾಯಿತು, ಬಡವರ ಗುಡಿಸಲಿಗೆ ನೆರಳು ನೀಡಲು ಗಳವಾಯಿತು, ಬಿದಿರಿನ ಬುಟ್ಟಿಯಾಯಿತು, ಆರೋಗ್ಯಕ್ಕೆ ಔಷಧಿಯಾಯಿತು, ಮೋಕ್ಷದ ದಾರಿಯಲ್ಲಿಅಂತಿಮ ಯಾತ್ರೆಯಲ್ಲಿ ನೆರವಾಯಿತು. ಬಿದಿರು ಎಲ್ಲರಿಗೂ ಬೇಕಾಯಿತು. ನನ್ನಿಂದ ಆಗದು ಎಂದು ಕೈಚೆಲ್ಲದಿರು. ಮನಸ್ಸು ಮಾಡಿದರೆ ಯಾವ ಸಾಧನೆಯನ್ನೂ ಸಹ ಮಾಡಬಹುದು ಎಂದು ಲೋಕಕ್ಕೆ ಸಾರಿತು. ಹಾಗೆಯೇ ಮೋಟಮ್ಮನವರು ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆ, ಭರವಸೆಯ ಬೆಳಕು, ಮಾರ್ಗದರ್ಶಿ.

ಎಸ್. ಎಂ. ಕೃಷ್ಣ ಮಾಜಿ ಮುಖ್ಯಮಂತ್ರಿಗಳು

ನಾನು ರಾಜಕೀಯಕ್ಕೆ ಬಂದಾಗ ಜನರ ಕಷ್ಟಗಳಿಗೆ ಸ್ಪಂದಿಸಬೇಕು, ಅವರ ನ್ಯಾಯವಾದ ಬೇಡಿಕೆಗಳನ್ನು ಪೂರೈಸಬೇಕು ಎಂಬ ಉಮೇದು ಇಟ್ಟುಕೊಂಡಿದ್ದೆ. ಹೀಗಾಗಿ ನಾನು ಭ್ರಷ್ಟಳಾಗಲು ಸಾಧ್ಯವಾಗಲಿಲ್ಲ. ಜನರೊಂದಿಗೆ ಬೆರೆತು, ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಇದ್ದ ಕಾರಣ, ನನಗೆ ಚುನಾವಣೆಯಲ್ಲಿ ಹೆಚ್ಚು ಹಣ ವ್ಯಯ ಮಾಡುವ ಪ್ರಮೇಯವೇ ಬರಲಿಲ್ಲ. ಜನರ ಜೊತೆ ನನಗಿದ್ದ ಒಡನಾಟ, ನಡವಳಿಕೆ, ಅವರ ಬಗ್ಗೆ ಇದ್ದ ಕಳಕಳಿ ಮತ್ತು ಜನರ ಸಾಮಾನ್ಯ ಬೇಡಿಕೆಗಳಾದ ಕುಡಿಯುವ ನೀರು, ರಸ್ತೆ, ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸ್ಟೆಲ್ ಇತ್ಯಾದಿಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದಕ್ಕೆ ಜನರು ಮೂರು ಸಲ ನನ್ನನ್ನು ಆಯ್ಕೆ ಮಾಡಿದರು. ನಾಲ್ಕು ಬಾರಿ ಸೋತುಹೋದದ್ದು ಕೂಡ ಗೆದ್ದಂತೆ ಆಗಿತ್ತು. ನನ್ನನ್ನು ಜನರು ಕೈಬಿಟ್ಟರು ಎಂಬ ಕಾರಣ ಅಲ್ಲ. ಸೋತದ್ದು ಕೂಡ ಬಲು ಕಡಿಮೆ ಅಂತರದಿಂದ.

ಈ ಸೋಲುಗಳಿಗೆ ನಮ್ಮ ಪಕ್ಷದೊಳಗಿದ್ದವರ ಕುತಂತ್ರ, ಕ್ಷೇತ್ರದಲ್ಲಿನ ಒಳಜಗಳ, ಅಸೂಯೆ, ಹಿತಶತ್ರುಗಳ ಕಾಟ, ಚುನಾವಣೆಗಳು ನಡೆದ ಸಂದರ್ಭಗಳು, ಬಿಜೆಪಿ ಪರವಾದ ದತ್ತಪೀಠದ ಅಲೆ- ಹೀಗೆ ಇನ್ನು ಏನೇನೋ ಕಾರಣಗಳನ್ನು ಹೇಳಬಹುದು. ಒಟ್ಟಾರೆಯಾಗಿ ಹೇಳಬೇಕು ಅಂದರೆ, ಜನರ ಆಶೀರ್ವಾದ ಯಾವಾಗಲೂ ನನ್ನ ಮೇಲಿತ್ತು. ಈಗಲೂ ಇದೆ. ಈಗಲೂ ಕ್ಷೇತ್ರದ ಜನರೊಂದಿಗೆ ನಾನು ಒಡನಾಟ ಇಟ್ಟುಕೊಂಡಿದ್ದೇನೆ. ಅವರು ನನ್ನ ಮೇಲೆ ಈಗಲೂ ಅಷ್ಟೇ ಪ್ರೀತಿ, ಅಭಿಮಾನ ಇಟ್ಟುಕೊಂಡಿದ್ದಾರೆ. ಇಂದಿಗೂ ನನ್ನ ಕ್ಷೇತ್ರದ ಜನರು ನನ್ನ ಸೋಲಿಗೆ ನೊಂದುಕೊಳ್ಳುತ್ತಾರೆ.

ಮೋಟಮ್ಮ, ರಾಜಕಾರಣಿ

*

ವಿವಾಹದ ಅನುಬಂಧ 

1 979ರ ಸಮಯ ಇರಬೇಕು. ಆಗ ಒಂದು ದಿನ ವೆಂಕಟರಾಮು ಅವರು ನಮ್ಮ ಶಾಸಕರ ಭವನದ ನನ್ನ ಕೊಠಡಿಗೆ ಬಂದರು. ಕುಳಿತರು. ನನ್ನನ್ನು ಮಾತನಾಡಿಸಿದರು. ನಾನೂ ಕೂಡ ಅವರನ್ನು ಗೌರವದಿಂದ ಮಾತನಾಡಿಸಿದೆ. ಮತ್ತೊಂದು ಸಲ ಬಂದರು. ಆವಾಗಲೂ ಅದೇ ರೀತಿ ‘ಚೆನ್ನಾಗಿದ್ದೀರಾ?’ ಇತ್ಯಾದಿಯಾಗಿ ಮಾತನಾಡಿಸಿದರು. ಮಗದೊಂದು ಸಲ ಬಂದಾಗ ಅವರು, ‘ನಿಮ್ಮನ್ನು ಒಂದು ಮಾತು ಕೇಳಬೇಕು ಅಂತ ಅಂದರು. ಅದಕ್ಕೆ ನಾನು, ‘ಏನು ವಿಚಾರ ಹೇಳಿ ಅಂದೆ. ಅದಕ್ಕವರು, ‘ನಿಮ್ಮ ಫೀಲಿಂಗ್ ಏನು ಅಂತ ಕೇಳೋಣ ಅಂದ್ಕೊಂಡೆ. ನಾವಿಬ್ಬರೂ ಮದುವೆ ಮಾಡಿಕೊಂಡರೆ ಹೆಂಗೆ? ಅಂತ ಕೇಳಬೇಕು ಅಂದ್ಕೊಂಡೆ’ ಅಂತ ಅಂದರು. ನನಗೆ ಒಂಥರಾ ಸರ್‌ಪ್ರೈಸ್ ಅನ್ನಿಸ್ತು. ಇದೇನಪ್ಪಾ ಇದ್ದಕ್ಕಿದ್ದಂಗೇ ಈಗ ಇವರು ಹೀಗೆ ಕೇಳಿದ್ದಾರಲ್ಲ? ಅನ್ನಿಸ್ತು.

ಅದಕ್ಕೆ ನಾನು ಅವರಿಗೆ, ‘ನೋಡಿ, ನನಗೆ ಈಗ ತಕ್ಷಣಕ್ಕೆ ಮದುವೆಯಾಗಲಿಕ್ಕೆ ಇಷ್ಟವಿಲ್ಲ.’ ಅಂದೆ. ‘ಫಸ್ಟ್ ಆಫ್ ಆಲ್, ನನಗೆ ಅಧಿಕಾರ ಇದೆ ಅಂತ ನೀವು ನನ್ನನ್ನು ಮದುವೆಯಾಗಬೇಕು ಅಂತ ಮುಂದೆ ಬಂದಿದ್ದೀರಾ? ಅಥವಾ ನಿಜವಾಗಲೂ ನನ್ನನ್ನು ಇಷ್ಟಪಟ್ಟು, ನನ್ನ ನಡವಳಿಕೆಯನ್ನು ಇಷ್ಟಪಟ್ಟು ನೀವು ಈ ಮಾತು ಹೇಳಿದ್ದೀರಾ ಅಂತ ಗೊತ್ತಿಲ್ಲ. ಈ ಮೊದಲು ನಾನು ಚಿಕ್ಕಮಗಳೂರಿನಲ್ಲಿ ಕೆಲಸದಲ್ಲಿದ್ದಾಗ, ಶಾರದಕ್ಕ ಅವರು ಕೇಳಿದ್ದಾಗ ನೀವು ನನ್ನ ತಾಯಿ, ನನ್ನ ಅಕ್ಕ ಎಲ್ಲರೂ ಒಪ್ಪಿಕೊಬೇಕು’ ಅಂತ ಹೇಳಿದ್ದಿರಿ. ಈಗ ದಿಢೀರ್ ಅಂತ ಹೀಗೆ ಹೇಳುತ್ತಿದ್ದೀರಲ್ಲ? ನಿಮ್ಮ ತಾಯಿ, ನಿಮ್ಮ ಅಕ್ಕ ಎಲ್ಲರೂ ಒಪ್ಪಿಕೊಳ್ಳುತ್ತಾರಾ?’ ಅಂತ ಕೇಳಿದೆ.

‘ಅವರನ್ನೆಲ್ಲ ನಾನು ಒಪ್ಪಿಸುತ್ತೇನೆ. ಅಲ್ಲದೇ, ನಮ್ಮ ತಾಯಿಗೆ ಮಾಡರ್ನ್ ಹುಡುಗಿಯರು ಬೇಕಾಗಿಲ್ಲ. ಗ್ರಾಮೀಣ ಹೆಣ್ಣುಮಕ್ಕಳನ್ನೇ ಅವರು ಇಷ್ಟಪಡುತ್ತಾರೆ. ಹೊಂದಿಕೊಂಡು ಹೋಗುವವರು ಬೇಕು ಅಂತ ಅವರ ಭಾವನೆ ಇದೆ. ಹೀಗಾಗಿ ಅವರು ಒಪ್ಪಿಕೊಳ್ಳಬಹುದು. ನಾನು ಒಪ್ಪಿಸುತ್ತೇನೆ’ ಅಂತ ಹೇಳಿದರು. ಅದಕ್ಕೆ ನಾನು ‘ನೋಡೋಣ’ ಅಂತ ಹೇಳಿದೆ. ಇನ್ನೊಬ್ಬರು ಪುಟ್ಟಸ್ವಾಮಿ ಅವರು ಬಂದರು. ಅವರು ‘ನಾನು ವೆಂಕಟರಾಮು ಅವರ ತಾಯಿಯ ಸ್ವಂತ ತಂಗಿ ಮಗ, ನನಗೆ ಎಲ್ಲಾದರೂ ಕೆಲಸ ಕೊಡಿಸಿ’ ಅಂತ ಹೇಳಿದರು. ಸ್ವಲ್ಪ ದಿನಗಳಲ್ಲೇ ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿ ಜೆಇ (ಜ್ಯೂನಿಯರ್ ಎಂಜಿನಿಯರ್) ಹುದ್ದೆಗಳನ್ನು ತುಂಬಲು ಜಾಹೀರಾತು ಪ್ರಕಟವಾಯಿತು. ಅಲ್ಲಿ ಅವರು ಅರ್ಜಿ ಹಾಕಿದರು. ಅದಕ್ಕೆ ಸಂಬಂಧಪಟ್ಟವರಿಗೆ ಯಾರಿಗೋ ನಾನು ಹೇಳಿದೆ. ಹೀಗಾಗಿ ಆತನಿಗೆ ಟೆಂಪರರಿ ನೌಕರಿಗೆ ಆಯ್ಕೆ ಮಾಡಿದರು. ಆಮೇಲೆ ಖಾಯಂಗೊಳಿಸಿದರು.

ಬಿಡಬ್ಲ್ಯೂಎಸ್ಎಸ್‌ಬಿಯಲ್ಲಿ ಕೆಲಸ ಸಿಕ್ಕಮೇಲೆ ಪುಟ್ಟಸ್ವಾಮಿ ಅವರು ಒಂದು ದಿನ ನನ್ನನ್ನು ಭೇಟಿ ಮಾಡಿ, ‘ನಾನು ಬೇರೆ ಕಡೆ ಮನೆ ಮಾಡಿಕೊಂಡು ಇರುವ ಬದಲಾಗಿ, ಶಾಸಕರ ಭವನದಲ್ಲಿನ ನಿಮ್ಮ ನಿವಾಸದಲ್ಲಿಯೇ ಇರುತ್ತೇನೆ’ ಅಂತ ಹೇಳಿದರು. ಅದಕ್ಕೆ ನಾನು ಆಗಲಿ ಎಂದೆ. ಆತ ಊರಿಗೆ ಹೋಗಿದ್ದಾಗ, ವೆಂಕಟರಾಮು ಅವರ ತಾಯಿಯ ಹತ್ತಿರ ನನ್ನ ಬಗ್ಗೆ ಮಾತನಾಡಿದನಂತೆ. ಜೊತೆಗೆ ಅವರು ಒಳ್ಳೆಯ ಹೆಣ್ಣುಮಗಳು, ಅಣ್ಣಂಗೂ ಇಷ್ಟ ಇದ್ದಂಗಿದೆ. ಇಬ್ಬರದೂ ಒಳ್ಳೆಯ ಜೋಡಿ ಆಗುತ್ತಾರೆ. ನೀವು ಕಣ್ಣುಮುಚ್ಚಿಕೊಂಡು ಅವರಿಬ್ಬರ ಮದುವೆ ಮಾಡಿಬಿಡಿ’ ಅಂತ ಹೇಳಿದನಂತೆ.

Shelfigeruva Munna excerpt of Motamma Bidiru Ninyarigalladavalu Narrated by Veeranna Kammar

ಕೃತಿಯನ್ನು ನಿರೂಪಿಸಿದ ಲೇಖಕ ವೀರಣ್ಣ ಕಮ್ಮಾರ ಮೋಟಮ್ಮನವರೊಂದಿಗೆ

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ಡಾ. ವಿನತೆ ಶರ್ಮ ಸಂಪಾದಿತ ‘ಭಾರತೀಯ ಮಹಿಳೆ ಮತ್ತು ವಿರಾಮ‘ ಕೃತಿ ಸದ್ಯದಲ್ಲೇ ಓದಿಗೆ

ಇವರ ಅಕ್ಕ ಸ್ವಲ್ಪ ತಿಳಿವಳಿಕೆ ಇದ್ದವರು. ನಾನು ಏನು ಓದಿದ್ದೀನಿ ಅಂತೆಲ್ಲ ಕೇಳಿ ತಿಳಿದುಕೊಂಡಿದ್ದಾರೆ. ವೆಂಕಟರಾಮು ಹಾಗೂ ಮೋಟಮ್ಮ ಇಬ್ಬರೂ ಒಂದೇ ವಯಸ್ಸಿನವರು. ಇಬ್ಬರೂ ಪಿಯುಸಿಯನ್ನು 1968-69ರಲ್ಲಿ ಮಾಡಿದ್ದಾರೆ. ಆಕೆ ಎಂ.ಎ. ಓದಿದ್ದಾರೆ ಅಂತೆಲ್ಲ ತಿಳಿದುಕೊಂಡಿದ್ದಾರೆ. ವೆಂಕಟರಾಮು ಅವರ ಕ್ಲಾಸ್‌ಮೇಟ್ ಕೆ. ಶಿವರಾಮೇಗೌಡ ಎನ್ನುವವರು ನಾನು ಎಂ.ಎ. ಓದುವಾಗ ನನಗೂ ಕ್ಲಾಸ್‌ಮೇಟ್ ಆಗಿದ್ದರು. ಇವರ ಅಕ್ಕ ಅವರು ಶಿವರಾಮೇಗೌಡರನ್ನೂ ಭೇಟಿಯಾಗಿ ನನ್ನ ಬಗ್ಗೆ ವಿಚಾರಿಸಿಕೊಂಡರಂತೆ. ಶಿವರಾಮೇಗೌಡರಿಂದಲೂ ಅವರಿಗೆ ಒಳ್ಳೆಯ ಅಭಿಪ್ರಾಯವೇ ವ್ಯಕ್ತವಾಗಿದೆ.

ಒಂದು ದಿನ ವೆಂಕಟರಾಮು ಅವರು ಶಾಸಕರ ಭವನಕ್ಕೆ ಬಂದು, ಅವರ ತಾಯಿಗೆ ಹೊಲದಲ್ಲಿ ಹಾವು ಕಚ್ಚಿ, ಮೈಯಲ್ಲಿ ಹುಷಾರಿಲ್ಲ ಎಂಬ ವಿಚಾರವನ್ನು ಹೇಳಿದರು. ಅದನ್ನು ಕೇಳಿದ ನಾನು, ‘ಹಾಗಿದ್ದರೆ ನಡೆಯಿರಿ. ಅವರನ್ನು ನೋಡಿಕೊಂಡು ಬರೋಣ. ಮುಂದಿನ ಭಾನುವಾರ ಹೋಗೋಣ’ ಅಂತ ಹೇಳಿದೆ. ಅದಕ್ಕೆ ಅವರು

‘ನಿಜವಾಗಿಯೂ ಬರ್ತೀರಾ?’ ಅಂತ ಕೇಳಿದರು. ‘ಹೌದು! ನಿಜವಾಗಿಯೂ ಬರೀನಿ’ ಅಂತ ಹೇಳಿದೆ. ಆದರೆ, ಒಂದು ಕಂಡೀಷನ್ನು, ನಾನು ಯಾರು ಅಂತ ಅವರಿಗೆ ಹೇಳಕೂಡದು. ಕ್ಲಾಸ್‌ಮೇಟ್ ಅಂತಲೋ, ಸಹೋದ್ಯೋಗಿ ಅಂತಲೋ ಅಷ್ಟೇ ಹೇಳಬೇಕು’ ಅಂತಂದೆ.

ಮುಂದಿನ ಭಾನುವಾರದಂದು ನಾನು ಮತ್ತು ಪುಟ್ಟಸ್ವಾಮಿ ಮಂಡ್ಯ ಜಿಲ್ಲೆಯ ಅವರ ಊರಿಗೆ ಹೋದೆವು. ಬೆಳಿಗ್ಗೆ ಬೇಗನೆ ಬೆಂಗಳೂರಿನಿಂದ ಬಸ್‌ನಲ್ಲಿ ಹೊರಟೆವು. ಅವರ ತಾಯಿಗೆ ಕಚ್ಚಿದ್ದು ಅಂಥ ವಿಷಸರ್ಪವೇನೂ ಅಲ್ಲ. ಮಾಮೂಲಿ ಇಲಿ ನುಂಗೋ ಹಾವಾಗಿತ್ತಂತೆ. ಸ್ವಲ್ಪ ಗಾಯವಾದ ಕಾರಣ ಅವರ ಕಾಲಿಗೆ ಬ್ಯಾಂಡೇಜ್ ಹಾಕಿದ್ದರು. ನಾನು ಅವರನ್ನು ವಿಚಾರಿಸಿಕೊಂಡೆ. ಹಾವು ಹೇಗೆ ಕಚ್ಚಿತು ಅಂತೆಲ್ಲ ಕೇಳಿದೆ. ಮನೆಯಲ್ಲಿ ವೆಂಕಟರಾಮು ಅವರ ಅಕ್ಕ ಇರಲಿಲ್ಲ. ತಂಗಿ ನಾಗಮ್ಮ ಮಾತ್ರ ಮನೆಯಲ್ಲಿದ್ದಳು. ಅವರಿಗೆ ನಾನು ಯಾರು ಎಂದು ಸ್ವಲ್ಪ ಅನುಮಾನ ಬಂದಿತ್ತು. ನನ್ನನ್ನು ನೋಡಿ ಆಕೆ ನಗುತ್ತಿದ್ದಳು. ಅಂದು ನಮಗೆಲ್ಲ ಅವರು ಊಟ ಬಡಿಸಿದರೋ ಇಲ್ಲವೋ ಎಂಬುದು ಈಗ ನೆನಪಿಲ್ಲ. ಆಮೇಲೆ ಅಲ್ಲಿಂದ ನಾವು ಮಧ್ಯಾಹ್ನಕ್ಕೆ ಹೊರಟುಬಿಟ್ಟೆವು. ಹೋಗುವಾಗ ಬಾಗಿಲಲ್ಲಿ ನಿಂತುಕೊಂಡು ನಾಗಮ್ಮನಿಗೆ, ‘ನಾನ್ಯಾರು ಗೊತ್ತಾಯ್ತಾ?’ ಅಂತ ಕೇಳಿದೆ. ಆಕೆ ಗೊತ್ತಿಲ್ಲ ಅಂತಂದಳು. ನನ್ನ ಹೆಸರು ಮೋಟಮ್ಮ ಅಂತ. ನಾನು ಎಂಎಲ್‌ಎ. ನಿಮ್ಮ ಅಣ್ಣಂಗೆ ನಾನು ಬಂದಿದ್ದೆ ಅಂತ ಹೇಳು’ ಅಂತಂದೆ. ಅವಳಿಗೆ ಆಶ್ಚರ್ಯವೋ ಆಶ್ಚರ್ಯ. ‘ಹೌದಾ?’ ಅಂತ ಉದ್ಗಾರ ತೆಗೆದಳು. ಮುಂದೆ ‘ಮದುವೆಗೂ ಮೊದಲೇ ಮನೆಗೆ ಬಂದು ನಮ್ಮ ಮನೆಯನ್ನು ನೋಡಿಕೊಂಡು ಹೋಗಿದ್ದಳು ನಮ್ಮ ಸೊಸೆ’ ಅಂತ ಆವಾಗಾವಾಗ ನಮ್ಮ ಅತ್ತೆಯವರು ಹೇಳಿ ತಮಾಷೆ ಮಾಡುತ್ತಿದ್ದರು.

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ

ನನ್ನ ಭಾವಿ ಪತಿಯವರ ಮನೆಯವರು ಅನುಕೂಲವಾಗಿದ್ದರು. ಅವರಿಗೆ ಸಾಕಷ್ಟು ಜಮೀನಿತ್ತು. ಅದೊಂದು ದೊಡ್ಡದಾದ ತೊಟ್ಟಿಮನೆ. ಒಬ್ಬನೇ ಮಗ. ಇಬ್ಬರು ಹೆಣ್ಣುಮಕ್ಕಳಿದ್ದರು. ಅವರ ತಂದೆಗೆ ನಾಲೈದು ಜನ ಅಣ್ಣ-ತಮ್ಮಂದಿರಿದ್ದರು. ಕೃಷಿಯೇ ಮೂಲವಾಗಿರುವ ದೊಡ್ಡ ಕುಟುಂಬ. ವೆಂಕಟರಾಮು ಅವರು ಬಿಎಸ್ಸಿ ಅಗ್ರಿ ಮಾಡಿದ್ದರು.

ಅಲ್ಲಿಂದ ನಾವು ಮಹದೇಶ್ವರನ ಬೆಟ್ಟಕ್ಕೆ ಹೋದೆವು. ನನ್ನ ಜೊತೆ ಯಾರು ಬಂದಿದ್ದರು ಎಂಬುದು ನೆನಪಿಲ್ಲ. ಅಲ್ಲಿಂದ ನಾವು ಬೆಂಗಳೂರಿಗೆ ಬಂದೆವು. ಅದಾದ ಮರುದಿವಸವೇ ವೆಂಕಟರಾಮು ಅವರು ನನ್ನನ್ನು ನೋಡಲೆಂದು ಶಾಸಕರ ಭವನಕ್ಕೆ ಬಂದರು. ನಾನು ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದಾಗ ಅಲ್ಲಿಂದ ಬುಟ್ಟಿಯೊಂದನ್ನು ತಂದಿದ್ದೆ. ಅದನ್ನು ನೋಡಿ, ಈ ಬುಟ್ಟಿನ ಎಲ್ಲಿಂದ ತಂದಿದ್ದು? ಚೆನ್ನಾಗಿದೆ’ ಅಂತ ಹೇಳಿದರು. ‘ನಿನ್ನೆ ನಿಮ್ಮ ಊರಿಗೆ ಹೋಗಿ ಅಲ್ಲಿಂದ ಬರುವಾಗ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದೆವು. ಅಲ್ಲಿಂದ ತಂದೆ’ ಅಂತ ಹೇಳಿದೆ. ಅದಕ್ಕೆ ಅವರು ನನ್ನನ್ನು ಅಭಿಮಾನದಿಂದ ನೋಡಿ ನಕ್ಕರು.

ಆಮೇಲೆ ವೆಂಕಟರಾಮು ಅವರು ಪುಟ್ಟಸ್ವಾಮಿಯ ಅಕ್ಕ ಜಯಮ್ಮ ಅವರ ಮನೆಗೆ ಹೋಗುವುದಾಗಿ ಹೇಳಿ ಹೋದರು. ವೆಂಕಟರಾಮು ಅವರ ಅಕ್ಕನ ಹೆಸರೂ ಜಯಮ್ಮ ಅಂತಲೇ, ಪುಟ್ಟಸ್ವಾಮಿಯವರ ಅಕ್ಕನ ಹೆಸರೂ ಜಯಮ್ಮ ಅಂತ. ಜಯಮ್ಮ ಅವರ ಗಂಡ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದರು. ಅವರಿಗೆ ಆಗ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ಆಗಿತ್ತು. ಹೀಗಾಗಿ ವೆಂಕಟರಾಮು ಅವರು ಬೆಂಗಳೂರಿನ ಅಕ್ಕನ(ಕಸಿನ್) ಮನೆಗೆ ಸಂಜೆ ಹೋದರು.

ನಂತರ ನಾನು ಪುಟ್ಟಸ್ವಾಮಿಯನ್ನು ‘ನಿಮ್ಮ ಅಕ್ಕ ಏನೆಂದರು? ನಿಮ್ಮ ದೊಡ್ಡಮ್ಮನಿಗೆ ನಾನು ಇಷ್ಟ ಆದೆನಾ?’ ಅಂತ ಕೇಳಿದೆ. ಅದಕ್ಕೆ ಆತ ಎಲ್ಲ ವಿವರಗಳನ್ನೂ ಹೇಳಿದ. ವೆಂಕಟರಾಮು ಅವರ ತಂದೆಯವರು, ಆಗ ಶಿಕ್ಷಣ ಸಚಿವರಾಗಿದ್ದ ಕೆ.ವಿ. ಶಂಕರೇಗೌಡರ ಅನುಯಾಯಿಗಳಾಗಿದ್ದರು. ಅಲ್ಲದೇ ಅವರು ದಲಿತರ ಮುಖಂಡರೂ ಅನ್ನಿಸಿಕೊಂಡಿದ್ದರು. ಅನೇಕ ಕಡೆಗಳಲ್ಲಿ ಓಡಾಡಿಕೊಂಡು ಸಾರ್ವಜನಿಕರ ಕೆಲಸ ಮಾಡಿಕೊಡುತ್ತಿದ್ದರು. ಹೀಗಾಗಿ ಅವರಿಗೆ ಮಂತ್ರಿಗಳು, ಶಾಸಕರದ್ದೆಲ್ಲ ಪರಿಚಯವಿತ್ತು. ಅವರು ಯಾವಾಗಲೂ ನನ್ನ ಮಗನಿಗೆ ಮಂತ್ರಿಗಳ ಮನೆಯಿಂದಲೇ ಹೆಣ್ಣು ತರ್ತೀನಿ ಅಂತ ಹೇಳುತ್ತಿದ್ದರಂತೆ. ಈಗ ಸ್ವತಃ ಶಾಸಕಿಯೇ ತಮ್ಮ ಸೊಸೆಯಾಗಿ ಬರುತ್ತಿರುವುದನ್ನು ಕೇಳಿದ್ದರೆ ಅವರು ಇನ್ನಷ್ಟು ಸಂಭ್ರಮಿಸುತ್ತಿದ್ದರು. ‘ನಾನು ಮಂತ್ರಿಗಳ ಮಗಳನ್ನು ಸೊಸೆಯಾಗಿ ತರ್ತೀನಿ ಅಂಡ್ಕೊಂಡ್ರೆ, ಸ್ವತಃ ಎಂಎಲ್‌ಎ ನೇ ನಮ್ಮ ಸೊಸೆಯಾಗಿ ಬರಿದ್ದಾಳೆ’ ಅಂತ ಊರ ತುಂಬ ಹೇಳಿಕೊಂಡು ತಮ್ಮ ಖುಷಿ ಹಂಚಿಕೊಳ್ಳುತ್ತಿದ್ದರೆಂದು ಪುಟ್ಟಸ್ವಾಮಿ ನೆನಪಿಸಿಕೊಂಡ. ನಮ್ಮ ಮದುವೆಯ ಹೊತ್ತಿಗಾಗಲೇ ಅವರು ದೈವಾಧೀನರಾಗಿದ್ದರು.

ಅದಾದ ಸ್ವಲ್ಪ ದಿನಗಳ ನಂತರ ಒಂದು ದಿನ ವೆಂಕಟರಾಮು ಅವರು ಮತ್ತೆ ನನ್ನನ್ನು ನೋಡಲು ಬಂದರು. 1978ರ ಡಿಸೆಂಬರ್ ಅಥವಾ 1979ರ ಜನವರಿ ಇರಬಹುದು. ಆಗ ‘ಈ ಸಲ ನಾವು ಮದುವೆ ಮಾಡಿಕೊಳ್ಳೋಣ’ವೆಂದು ಹೇಳಿದರು. ಅದಕ್ಕೆ ನಾನು, ನನ್ನ ಬಳಿ ಒಂದು ಪೈಸೆಯೂ ಇಲ್ಲ; ಎಲೆಕ್ಷನ್ ಅದು ಇದು ಅಂತ ಕಷ್ಟ ಆಗಿದೆ. ಈಗ ಮದುವೆ ಮಾಡಿಕೊಳ್ಳುವುದಾದರೂ ಹೇಗೆ?’ ಅಂತ ಕೇಳಿದೆ. ಅದಕ್ಕವರು, ‘ಸಾಲನಾರ ಮಾಡಿ ಮದುವೆ ಮಾಡಿಕೊಳ್ಳಬಹುದು. ಆಮೇಲೆ ತೀರಿಸಬಹುದು’ ಅಂತಂದರು. ಮದುವೆ ಖರ್ಚು ಎಷ್ಟಾಗಬಹುದು? ಯಾವುದೆಲ್ಲಕ್ಕೆ ಖರ್ಚು ಮಾಡಬೇಕಾಗುತ್ತೆ? ಅಂತೆಲ್ಲ ವಿಚಾರಿಸಿದರು. ‘ಸಾಲ ಹೇಗೆ ತಗೊಳ್ಳಕ್ಕಾಗುತ್ತೆ? ನೀವು ಸಾಲ ಕೊಡಿಸ್ತೀರಾ?’ ಅಂತ ಕೇಳಿದೆ. ಅದಕ್ಕವರು, ‘ಆಯಿತು. ಸಾಲ ತಗೊಳ್ಳೋಣ. ಮದುವೆಯ ಎಲ್ಲಾ ಖರ್ಚನ್ನು ನಮ್ಮ ಮನೆಯವರು ನೋಡಿಕೊಳ್ತಾರೆ’ ಅಂತಂದರು.

ಇದನ್ನೂ ಓದಿ : New Book: ಅಚ್ಚಿಗೂ ಮೊದಲು: ಕೆ. ನಲ್ಲತಂಬಿ ಅನುವಾದಿಸಿದ ‘ಮತ್ತೊಂದು ರಾತ್ರಿ’, ‘ಬಾಪೂ ಹೆಜ್ಜೆಗಳಲ್ಲಿ’, ‘ಗುಡಿ ಗಂಟೆ’ ಸದ್ಯದಲ್ಲೇ ಬಿಡುಗಡೆ

ಆಮೇಲೆ ಈ ವಿಚಾರವನ್ನು ಬೇಲೂರಿನ ಜೋಯಿಸರ ಹತ್ತಿರ ಕೇಳಬೇಕು ಅನ್ನಿಸ್ತು. ಅದೇ ನಾನು ಚುನಾವಣೆಗೆ ನಿಲ್ಲಬೇಕೋ ಬೇಡವೋ ಎಂಬ ಜಿಜ್ಞಾಸೆ ಉಂಟಾದಾಗ, ಡಿ.ಬಿ. ಚಂದ್ರೇಗೌಡರು ತಮ್ಮ ಮನೆಗೆ ಕರೆಸಿ ಶಾಸ್ತ್ರ ಕೇಳಿದ್ದ ಜೋಯಿಸರವರು. ಚಿಕ್ಕಮಗಳೂರಿನಿಂದ ಮೂಡಿಗೆರೆಗೆ ಬರುವಾಗ ಒಮ್ಮೆ ಬೇಲೂರಿಗೆ ಹೋಗಿ ಅವರನ್ನು ಕೇಳಿದೆ. ಅದಕ್ಕವರು, ‘ನೀವಿಬ್ಬರೂ ಮದುವೆ ಆಗುವುದಾದರೆ ತುಂಬ ಒಳ್ಳೆಯದಾಗುತ್ತದೆ. ಇದು ಒಳ್ಳೆಯ ಸಂಬಂಧ. ನಿಮ್ಮಿಬ್ಬರ ಜಾತಕವೂ ಕೂಡಿ ಬರುತ್ತದೆ. ನೀವು ಹೇಳಿದ್ದನ್ನು ಅವರು ದಾಟುವುದಿಲ್ಲ. ಅವರು ಹೇಳಿದ್ದನ್ನು ನೀವು ಮೀರುವುದಿಲ್ಲ. ಹೀಗೆ ನಿಮ್ಮದು ಅನ್ನೋನ್ಯ ಸಂಬಂಧವಾಗುತ್ತದೆ. ನಿಮಗೆ ಶುಭವಾಗಿದೆ. ಮದುವೆ ಮಾಡ್ಕೊಳ್ಳಿ’ ಅಂತ ಹೇಳಿದರು.

ನಮ್ಮ ಮದುವೆಯ ದಿನಾಂಕವನ್ನೂ ಅವರೇ ನಿಗದಿ ಮಾಡಿದರು. ಅಂದರೆ, 1979ರ ಜೂನ್ 4ರಂದು ನಮ್ಮ ಮದುವೆ ನಿಗದಿಯಾಯ್ತು. ನನಗೋ ದುಡ್ಡು ಎಲ್ಲಿಂದ ತರೋದು? ನೆಂಟರಿಗೆಲ್ಲ, ಅಕ್ಕಂದಿರು, ಅಣ್ಣ, ನಮ್ಮ ತಾಯಿ- ಇವರಿಗೆಲ್ಲ ಬಟ್ಟೆ ತರಬೇಕು. ಅದಕ್ಕೆಲ್ಲ ಏನು ಮಾಡೋದು? ಅಂತ ಚಿಂತೆಯಾಯ್ತು. ಹೀಗಾಗಿ ನನಗೆ ವೆಂಕಟರಾಮು ಅವರನ್ನು ಮದುವೆಯಾಗ್ತಿನಿ ಅನ್ನೋ ಎಕ್ಸೈಟ್​ಮೆಂಟ್​ಗಿಂತ ಇಂಥ ಚಿಂತೆಗಳೇ ಜಾಸ್ತಿಯಾಗಿದ್ದವು. ಇಂಥ ಹೊತ್ತಿನಲ್ಲಿ ನನಗೆ ಯಾರನ್ನು ಹಣ ಕೇಳುವುದು? ಏನು ಮಾಡುವುದು? ಎಂಬ ಆತಂಕಗಳೇ ತುಂಬಿದ್ದವು. ಆ ಹೊತ್ತಿಗೆ ನನ್ನ ತಂದೆ ತೀರಿಹೋಗಿದ್ದರು. ಆದ್ದರಿಂದ ನನಗೇನೂ ಅಂಥಾ ಎಕ್ಸೈಟೇನೂ ಆಗಲಿಲ್ಲ. ಮೊದಲಿನಿಂದಲೂ ನನ್ನದು ಒಂಥರಾ ನಿರ್ಲಿಪ್ತ ಭಾವನೆ.

ಜೂನ್ ನಾಲ್ಕರಂದು ನಮ್ಮ ಮದುವೆ ನಿಗದಿಯಾಯಿತು. ಚಿಕ್ಕಮಗಳೂರಿನಲ್ಲಿಯೇ ಮದುವೆ ಮಾಡಿಕೊಳ್ಳುವುದು ಎಂದು ನಿರ್ಧರಿಸಿದೆವು. ನಾನು ಆಮಂತ್ರಣ ಪತ್ರವನ್ನು ಹೇಗೆ ಮಾಡಿಸಿದೆ, ಎಲ್ಲಿ ಮಾಡಿಸಿದೆ ಎಂಬುದೆಲ್ಲ ಮರೆತು ಹೋಗಿದೆ. ನಾನು ನನ್ನ ಮದುವೆ ಆಮಂತ್ರಣದ ಕಾರ್ಡಿನಲ್ಲಿ ಹೆಸರನ್ನು ಮೋಟಮ್ಮ, ಶಾಸಕಿ ಅಂತಲೇ ಹಾಕಿದ್ದೆ. ವೆಂಕಟರಾಮು ಅವರು ಮಂಜುಳಾ ಅಂತ ಹಾಕಿ ಬ್ರ್ಯಾಕೇಟಿನಲ್ಲಿ ಮೋಟಮ್ಮ ಅಂತ ಪ್ರಕಟಿಸಿದ್ದರು. ಹೀಗೆ ಪ್ರಕಟಿಸಿದ ಕಾರ್ಡುಗಳನ್ನು ನಾವು ಯಾರು ಯಾರಿಗೆ ಕೊಟ್ಟೆವು, ಯಾರಿಗೆ ಕೊಡಲಿಲ್ಲವೋ ಎಂಬುದು ಗೊತ್ತಿಲ್ಲ. ಈಗೆಲ್ಲ ಮನೆ ಮನೆಗೆ ಖುದ್ದಾಗಿ ಹೋಗಿ ಕರೆಯುತ್ತಾರೆ. ಆದರೆ, ನಾವು ಯಾರು ಯಾರಿಗೆ ಹೀಗೆ ಮನೆಗೆ ಹೋಗಿ ಕರೆದೆವೊ ಗೊತ್ತಿಲ್ಲ. ಆದರೆ, ನಾನು ಮದುವೆಯಾಗುತ್ತಿರುವುದು ದೊಡ್ಡ ಸುದ್ದಿಯಾಯಿತು.

(ಪೂರ್ಣ ಓದಿಗೆ ಮತ್ತು ಪುಸ್ತಕದ ಖರೀದಿಗೆ ಸಂಪರ್ಕಿಸಿ : 9900095204)

Published On - 6:28 pm, Wed, 8 June 22