Translated Story: ನೆರೆನಾಡ ನುಡಿಯೊಳಗಾಡಿ; ಅಪ್ಪ ಸಿಟ್ಟಿನಲ್ಲಿ ಹುಡುಗರ ಕಡೆಗೆ ಕಲ್ಲು ಒಗೆದಿದ್ದರೆ ಅದರ ಮೊದಲ ಕಾರಣ ಇಷ್ಟೆ

Translated Story: ನೆರೆನಾಡ ನುಡಿಯೊಳಗಾಡಿ; ಅಪ್ಪ ಸಿಟ್ಟಿನಲ್ಲಿ ಹುಡುಗರ ಕಡೆಗೆ ಕಲ್ಲು ಒಗೆದಿದ್ದರೆ ಅದರ ಮೊದಲ ಕಾರಣ ಇಷ್ಟೆ
ಲೇಖಕ ಉದಯ ಪ್ರಕಾಶ, ಅನುವಾದಕ ಮುಕುಂದ ಜೋಶಿ

‘Tirich’ Short Story of Uday Prakash : ನಾನು ಅಳುತ್ತೇನೆ. ಇನ್ನೂ ಓಡುವ ಪ್ರಯತ್ನ ಮಾಡುತ್ತೇನೆ. ನನ್ನಿಡೀ ಶರೀರ ನಿದ್ದೆಯಲ್ಲೇ ಬೆವರಿನಿಂದ ತೊಯ್ದಿರುತ್ತದೆ. ನಾನು ಕೂಗಿ ಕೂಗಿ ಮಾತನಾಡಿ, ಎಚ್ಚರಾಗುವ ಪ್ರಯತ್ನ ಮಾಡುತ್ತೇನೆ. ಇದೆಲ್ಲ ಒಂದು ಕನಸೆಂದು ನಂಬಬಯಸುತ್ತೇನೆ.

ಶ್ರೀದೇವಿ ಕಳಸದ | Shridevi Kalasad

|

Jun 17, 2022 | 2:01 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ನನಗೆ ಗೊತ್ತು. ಸುರಂಗದಂಥ ಉದ್ದೋ ಉದ್ದ ಸಮ್ಮೋಹಕ ಮತ್ತು ಹೆದರಿಕೆ ಹುಟ್ಟಿಸುವ ಕನಸು ನನಗೆ ಬಿದ್ದಂತೆ ಅವನಿಗೂ ಬೀಳುತ್ತಿರಬಹುದು. ನಮ್ಮಿಬ್ಬರಲ್ಲಿ ಬಹಳಷ್ಟು ವಿಷಯಗಳಲ್ಲಿ ಸಾಮ್ಯವಿತ್ತು. ನನಗನಿಸುವದೇನೆಂದರೆ ಈಗ, ಈ ಹೊತ್ತಿಗೆ ಒಂದು ಮಾತನ್ನು ಅವರು ಒಪ್ಪಿಕೊಂಡಿರಬೇಕು. ಇದು ಎಲ್ಲ, ಈಗ ನಡೆಯುತ್ತಿದೆಯಲ್ಲ, ಇದೆಲ್ಲ ಸುಳ್ಳು. ಅವಾಸ್ತವಿಕ. ಅದಕ್ಕಾಗೇ ಅವರು ಮತ್ತೆ ಮತ್ತೆ ಕನಸಿನಿಂದ ಹೊರಗೆ ಬರುವ ಪ್ರಯತ್ನ ಮಾಡುತ್ತಿರಬಹುದು. ಒಂದು ವೇಳೆ ಅವರು ಮಧ್ಯೆ ಮಧ್ಯೆ ಜೋರು ಜೋರಾಗಿ ಮಾತನಾಡುತ್ತಿದ್ದರೆ, ಇಲ್ಲ ಒದರಿ ಒದರಿ ಬೈಯುತ್ತಿದ್ದರೆ, ಅದು ತಮ್ಮ ಸಪ್ಪಳದ ಸಹಾಯದಿಂದ ಆ ದುಸ್ವಪ್ನದಿಂದ ಹೊರಗೆ ಬರಬೇಕೆಂದು. ನ್ಯಾಶನಲ್ ರೆಸ್ಟಾರೆಂಟದ ಮಾಲೀಕ ಮತ್ತು ನೌಕರ ಈ ಮೊದಲೇ ಹೇಳಿದ ಪ್ರಕಾರ ಅಲ್ಲೇ, ಆ ಸ್ಥಳದಲ್ಲೇ ಅಪ್ಪ ಹೆಚ್ಚು ಪೆಟ್ಟು ತಿಂದದ್ದು. ಅವರ ಕಣ್ಣು ಮತ್ತು ಕಿವಿಯ ಕೆಳಭಾಗ, ಹಣೆ, ಬೆನ್ನು ಮತ್ತು ಶರೀರದ ಎಷ್ಟೋ ಕಡೆಯಲ್ಲಿ ಇಟ್ಟಂಗಿ, ಕಲ್ಲು, ಹೆಂಟೆಗಳು ಬಡಿದದ್ದರ ಗುರುತುಗಳಿದ್ದವು. ರಸ್ತೆಯ ಗುತ್ತಿಗೆ ಪಡೆಯುವ ಕಂತ್ರಾಟುದಾರ ಅರೋಡಾನ ಇಪ್ಪತ್ತು ಇಪ್ಪತ್ತೈದು ವರ್ಷಗಳ ಹುಡುಗ ಸಂಜೂ ಎರಡು ಮೂರು ಸಲ ಕಬ್ಬಿಣದ ರಾಡಿನಿಂದ ಹೊಡೆದಿದ್ದ. ಸತ್ರೆ ಹೇಳಿದ್ದೆಂದರೆ ಇಷ್ಟೊಂದು ಪೆಟ್ಟು ತಿಂದ ಯಾವುದೇ ಮನುಷ್ಯ ಉಳಿಯುವುದು ಸಾಧ್ಯವೇ ಇಲ್ಲ ಎಂದು.

ಕಥೆ : ತಿರೀಛ | ಹಿಂದಿ ಮೂಲ : ಉದಯ ಪ್ರಕಾಶ | ಕನ್ನಡಕ್ಕೆ : ಮುಕುಂದ ಜೋಷಿ | ಸೌಜನ್ಯ : ದೇಶಕಾಲ ಸಾಹಿತ್ಯ ಪತ್ರಿಕೆ

(ಭಾಗ 5)

ಇದನ್ನೆಲ್ಲ ಯೋಚಿಸುತ್ತಿರುವಾಗ ನನಗೆ ಒಂದು ವಿಚಿತ್ರವಾದ ಸಮಾಧಾನ ದೊರೆಯುತ್ತದೆ. ಎಷ್ಟೋ ಹೊತ್ತಿನಿಂದ ಎಲ್ಲೋ ಅಟಕಾಯಿಸಿದ ಉಸಿರಾಟ ಪುನಃ ಸರಾಗವಾಗಿ ಪ್ರಾರಂಭವಾದಂತೆ ಅನಿಸುತ್ತದೆ. ಯಾಕೆಂದರೆ ಆ ವೇಳೆಗೆ ಅಪ್ಪನಿಗೆ ಯಾವ ರೀತಿಯ ನೋವಿನ ಅನುಭವವೂ ಆಗಿರಲಿಕ್ಕಿಲ್ಲ. ಕಾರಣ ಅವರು ಸರಿಯಾಗಿ, ಎಲ್ಲ ತರ್ಕದ ಜೊತೆಗೆ ಮತ್ತು ಬಹಳ ಆಳವಾದ ವಿಶ್ವಾಸದೊಂದಿಗೆ ನಂಬಿದ್ದೆಂದರೆ ಇದೆಲ್ಲ ಒಂದು ಕನಸು ಎಂದು. ಎಚ್ಚರಾಗುತ್ತಲೇ ಎಲ್ಲ ಸರಿಯಾಗಬಹುದು. ಕಣ್ಣು ತೆರೆಯುತ್ತಲೇ ಅಂಗಳದಲ್ಲಿ ಅವ್ವ ಕಸಗುಡಿಸುವುದು ಕಾಣಬಹುದು. ಇಲ್ಲ ಫರಸಿಯ ಮೇಲೆ ನಾನು ಮತ್ತು ತಂಗಿ ಮಲಗಿರುವುದು ಕಾಣಬಹುದು. ಅಥವಾ ಚಿಲಿಪಿಲಿ ಸಪ್ಪಳ ಮಾಡುವ ಗುಂಪು. ನಡು ನಡುವೆ ಅವರಿಗೆ ಈ ಚಿತ್ರವಿಚಿತ್ರ ಕನಸಿನ ಮೇಲೆ ನಗುವೂ ಬರುತ್ತಿರಬಹುದು.

ಅಪ್ಪ ಒಂದು ವೇಳೆ ಸಿಟ್ಟಿನಲ್ಲಿ ಹುಡುಗರ ಕಡೆಗೆ ಕಲ್ಲು ಒಗೆದಿದ್ದರೆ ಅದರ ಮೊದಲ ಕಾರಣ ಇಷ್ಟೆ: ಈ ಕಲ್ಲುಗಳು ಕನಸಿನೊಳಗೆ ಹೋಗುತ್ತಿದೆ ಮತ್ತು ಇದರಿಂದ ಯಾರಿಗೂ ಪೆಟ್ಟು ಹತ್ತುವುದಿಲ್ಲ. ಅಥವಾ ಹೀಗೂ ಆಗಿರಬಹುದು. ತಮ್ಮೆಲ್ಲ ಶಕ್ತಿಯನ್ನು ಒಂದುಗೂಡಿಸಿ ಕಲ್ಲುಗಳನ್ನು ಒಗೆದು ಉತ್ಸಾಹ ಮತ್ತು ಅಸ್ವಸ್ಥತೆಯಿಂದ ಯಾವುದರ ಪ್ರತೀಕ್ಷೆ ಮಾಡುತ್ತಿರಬಹುದೆಂದರೆ ಅವು, ಆ ಕಲ್ಲುಗಳು ಯಾವುದೋ ಹುಡುಗನ ತಲೆಗೆ ಬಡಿಯಬಹುದು, ಅವನ ಮಿದುಳು ಚೂರಾಗಬಹುದು, ಮತ್ತು ಕ್ಷಣಾರ್ಧದಲ್ಲಿ ಈ ದುಃಸ್ವಪ್ನದ ತುಂಡುಗಳು ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಬಹುದು ಮತ್ತು ನಾಲ್ಕೂ ಕಡೆಯಿಂದ ವಾಸ್ತವಿಕ ಜಗತ್ತಿನ ಉಗ್ರವಾದ ಬೆಳಕು ಒಳಗೆ ಬರತೊಡಗಬಹುದು. ಅವರು ಜೋರು ಜೋರಾಗಿ ಒದರುವುದೂ ವಾಸ್ತವವಾಗಿ ಸಿಟ್ಟಿನ ಕಾರಣದಿಂದಲ್ಲ. ಅವರು ನಿಜಕ್ಕೂ ನನ್ನನ್ನು, ತಂಗಿಯನ್ನು, ಅವ್ವಳನ್ನು ಇಲ್ಲ ಯಾರನ್ನಾದರೂ ಕರೆಯುತ್ತಿದ್ದರು. ಮತ್ತೆ ಒಂದುವೇಳೆ ತಾವೇ ಕನಸಿನಲ್ಲಿ ಖುದ್ದಾಗಿ ಎಚ್ಚರಾಗುವುದರಲ್ಲಿ ಅಸಫಲರಾದರೂ ಯಾರಾದರೂ ಬಂದು ತಮ್ಮನ್ನು ಎಚ್ಚರಿಸಬಹುದು ಎಂಬ ಭ್ರಮೆ ಹುಟ್ಟಿಸುವಂತಹ ಕ್ಷೀಣ ಆಶಾಕಿರಣ.

ಇದನ್ನೂ ಓದಿ : Award: ‘ನಮ್ಮೂರಿಗೆ ಬಾರದ ಸರ್ಕಾರಿ ಬಸ್ಸುಗಳೇ ಕಥೆ ಬರೆಯಲು ಪ್ರೇರಣೆ’ ಇಸ್ಮಾಯಿಲ್ ತಳಕಲ್

ಒಂದು ಬಹುದೊಡ್ಡ ಉಪಹಾಸ ಈ ಮಧ್ಯೆ ನಡೆದು ಹೋಯಿತು. ನಮ್ಮೂರಿನ ಗ್ರಾಮ ಪಂಚಾಯತಿಯ ಸರಪಂಚ ಮತ್ತು ಅಪ್ಪನ ಬಾಲ್ಯಕಾಲದ ಹಳೆಯ ಗೆಳೆಯರಾದ ಪಂ. ಕಂದಯಿ ರಾಮ ತಿವಾರಿ ಹೆಚ್ಚು ಕಡಿಮೆ ಮೂರೂವರೆಗೆ ನ್ಯಾಶನಲ್ ರೆಸ್ಟಾರೆಂಟಿನ ಎದುರಿನಿಂದ ರಸ್ತೆ ದಾಟಿದ್ದರು. ಅವರು ರಿಕ್ಷಾದಲ್ಲಿ ಇದ್ದರು. ಅವರಿಗೆ ಮುಂದಿನ ಕೂಟಿನಿಂದ ಊರಿಗೆ ಹೋಗುವ ಬಸ್ಸು ಹಿಡಿಯಬೇಕಾಗಿತ್ತು. ಅವರು ನ್ಯಾಶನಲ್ ರೆಸ್ಟಾರೆಂಟದ ಎದುರಿನ ಜನರ ಗುಂಪನ್ನು ನೋಡಿದ್ದರು. ಅಲ್ಲಿ ಎಲ್ಲರೂ ಕೂಡಿ ಯಾರನ್ನೋ ಹೊಡೆಯುತ್ತಿದ್ದಾರೆ ಅನ್ನುವುದೂ ಅವರಿಗೆ ಗೊತ್ತಾಗಿತ್ತು. ನಡೆದದ್ದೇನು ಅನ್ನುವದನ್ನು ತಿಳಿದುಕೊಳ್ಳುವ ಇಚ್ಛೆಯೂ ಅವರಿಗಾಯಿತು. ಅವರು ಆ ರಿಕ್ಷಾವನ್ನು ನಿಲ್ಲಿಸಿದರು ಕೂಡ. ಆದರೆ ಅವರು ಕೇಳಿದ್ದಕ್ಕೆ ಯಾರೋ ಹೇಳಿದ್ದೆಂದರೆ ನೀರಿನ ಟ್ಯಾಂಕಿನಲ್ಲಿ ವಿಷ ಹಾಕಲು ಹೊರಟ ಒಬ್ಬ ಪಾಕಿಸ್ತಾನೀ ಗುಪ್ತಚರನನ್ನು ಹಿಡಿದು ಹೊಡೆಯುತ್ತಿದ್ದಾರೆ ಎಂದು. ಸರಿಯಾಗಿ ಅದೇ ಹೊತ್ತಿಗೆ ಪಂ. ಕಂದಯಿ ರಾಮ ತಿವಾರಿಗೆ ಊರಿಗೆ ಹೋಗುವ ಬಸ್ಸು ಬರುವದು ಕಾಣಿಸಿತು. ಮತ್ತವರು ರಿಕ್ಷಾದವನನ್ನು ಬೇಗ ಬೇಗ ರಿಕ್ಷಾ ಓಡಿಸಲು ಹೇಳಿದರು. ಈ ಬಸ್ಸು ಊರಿಗೆ ಹೋಗುವ ಕೊನೆಯ ಬಸ್ಸಾಗಿತ್ತು. ಒಂದು ವೇಳೆ ಆ ಬಸ್ಸು ಮೂರುನಾಲ್ಕು ಮಿನಿಟು ತಡವಾಗಿ ಬಂದಿದ್ದರೆ ಅವರು ನಿಶ್ಚಿತವಾಗಿ ಅಲ್ಲಿ ಹೋಗಿ ಅಪ್ಪನನ್ನು ನೋಡುತ್ತಿದ್ದರು. ಮತ್ತವರನ್ನು ( ಬಹುಶಃ) ಆ ಸ್ಥಿತಿಯಲ್ಲೂ ಗುರುತಿಸುತ್ತಿದ್ದರು. ರಾಜ್ಯ ಸಾರಿಗೆಯ ಆ ಬಸ್ಸು ಯಾವಾಗಲೂ ಅರ್ಧ ಮುಕ್ಕಾಲು ಗಂಟೆ ತಡವಾಗಿಯೇ ಹೊರಡುತ್ತಿತ್ತು. ಆದರೆ ಆ ದಿನ ಸಂಯೋಗದಿಂದ ನಿಗದಿ ಪಡಿಸಿದ ವೇಳೆಗೇ ಹೊರಟಿತ್ತು.

ಸತನಾಮಸಿಂಹ ಹೇಳಿದ್ದೆಂದರೆ ಆ ಜನಜಂಗುಳಿ ನ್ಯಾಶನಲ್ ರೆಸ್ಟಾರೆಂಟದ ಎದುರಿಂದ ಯಾವಾಗ ಚದುರಿತ್ತೆಂದರೆ ಅಪ್ಪ ನೆಲದ ಮೇಲೆ ಕುಕ್ಕರಿಸಿದ ನಂತರ ಯಾವಾಗ ಏಳಲೇ ಇಲ್ಲವೋ ಆಗ. ಇಟ್ಟಿಗೆಯ ಒಂದು ತುಂಡು ಅವರ ಕಣ್ಣು ಮತ್ತು ಕಿವಿಯ ಕೆಳಗಡೆ ಬಂದು ಬಡಿದಿತ್ತು. ಅವರ ಬಾಯಿಯಿಂದ ರಕ್ತ ಬರಲು ಪ್ರಾರಂಭವಾಗಿತ್ತು. ತಲೆಯ ಮೇಲೂ ಪೆಟ್ಟುಗಳಿದ್ದವು. ಸತನಾಮಸಿಂಹನ ಹೇಳಿಕೆಯ ಪ್ರಕಾರ ಅಪ್ಪ ಯಾವಾಗ ಬಹಳ ಹೊತ್ತಿನವರೆಗೆ ಕುಕ್ಕರಿಸಿದ ನಂತರ ಏಳಲೇ ಇಲ್ಲವೋ ಆಗ ಗುಂಪಿನಲ್ಲಿದ್ದ ಒಬ್ಬ ಹುಡುಗ ಅಂದಿದ್ದ : ಆ ಮನುಷ್ಯ ಸತ್ತಿದ್ದಾನೆ ಎಂದು.

ಗುಂಪು ಚದುರಿ ಹತ್ತು ಹದಿನೈದು ನಿಮಿಷಗಳ ನಂತರವೂ ಅಪ್ಪ ಅಲ್ಲಾಡದೇ ಇದ್ದಾಗ ಸತನಾಮ ಸಿಂಹ ಸತ್ರೆಗೆ ಹೇಳಿದ್ದ. ಅವರ ಮುಖದ ಮೇಲೆ ನೀರಿನ ಹನಿಗಳನ್ನು ಸಿಂಪಡಿಸಿನೋಡು. ಒಂದು ವೇಳೆ ಮೂರ್ಛೆಯಲ್ಲಿದ್ದರೆ ಏಳಲೂ ಬಹುದು. ಆದರೆ ಸತ್ರೆ ಪೋಲೀಸರ ಕಾರಣ ಹೆದರತೊಡಗಿದ್ದ. ನಂತರ ಸತನಾಮಸಿಂಹನೇ ಖುದ್ದಾಗಿ ಒಂದು ಬಾಟಲು ನೀರನ್ನು ಅವರ ಮೇಲೆ ಚೆಲ್ಲಿದ್ದ – ದೂರದಿಂದ. ನೀರು ಚೆಲ್ಲಿದ್ದಕ್ಕಾಗಿ ನೆಲದ ಮಣ್ಣು ಹಸಿಯಾಗಿ ಅಪ್ಪನ ಮೈಗೆ ಅಂಟಿಕೊಂಡಿತ್ತು.

ಸತನಾಮಸಿಂಹ ಮತ್ತು ಸತ್ರೆ ಇಬ್ಬರೂ ಹೇಳಿದ್ದೆಂದರೆ ಸುಮಾರು ಐದರ ವರೆಗೆ ಅಪ್ಪ ಅಲ್ಲೇ ಬಿದ್ದುಕೊಂಡಿದ್ದರು. ಅಲ್ಲಿಯ ವರೆಗೆ ಪೋಲೀಸರು ಬಂದಿರಲಿಲ್ಲ. ನಂತರ ಸತನಾಮಸಿಂಹ ಯೋಚಿಸಿದ – ಹೀಗೇ ಇಲ್ಲೇ ಉಳಿದರೆ ಪಂಚನಾಮೆ, ಸಾಕ್ಷಿಯ ಭಾನಗಡಿಯಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಅದಕ್ಕಾಗೇ ಆತ ಢಾಬ ಬಂದುಮಾಡಿ ಡಿಲಾಯಿಟ್ ಟಾಕೀಜಿನಲ್ಲಿ ‘ಆನ್ ಮಿಲೊ ಸಜನಾ’ ನೋಡಲು ಹೋಗಿದ್ದ.

ಇದನ್ನೂ ಓದಿ : Toto Awards 2022 : ‘ಕವಿತೆ ಒಳಗಿಳಿಸಿಕೊಳ್ಳಬೇಕಿತ್ತು, ಓದನ್ನು ಅರ್ಧಕ್ಕೇ ನಿಲ್ಲಿಸಿದೆ’ ಟೊಟೊ ಪುರಸ್ಕೃತ ಕೃಷ್ಣ ದೇವಾಂಗಮಠ

ಸಿಟಿ ಲಾಯಿನ್ಸ್ ದ ರಸ್ತೆಗಳ ಮೇಲೆ ಒಂದೇ ಸಾಲಿನಲ್ಲಿದ್ದ ಚಮಗಾರರ ಅಂಗಡಿಗಳಲ್ಲಿನ ಒಂದು ಅಂಗಡಿಯ ಚಮಗಾರ ಗಣೇಶನ ಝೋಪಡಿಯಲ್ಲಿ ಅಪ್ಪ ತಮ್ಮ ತಲೆಯನ್ನು ತುರುಕಿದಾಗ ಸಾಧಾರಣ ಆರು ಹೊಡೆದಿತ್ತು. ಆ ಹೊತ್ತಿನ ತನಕ ಅಪ್ಪನ ಮೈ ಮೇಲಿದ್ದ ಆ ಪಟಪಟ್ಟಿಯ ಒಂದು ಚಡ್ಡಿಯೂ ಉಳಿದಿರಲಿಲ್ಲ. ಅವರು ಮೊಳಕಾಲ ಮೇಲೆ ಹೊಟ್ಟೆ ಹೊಸೆಯುತ್ತ ಸರಿಯುತ್ತಿದ್ದರು.

ಗಣೇಶ ನಮ್ಮೂರಿನ ಸರೋವರದ ಆಚೆಗಿನ ಓಣಿಯ ಚಮಗಾರ. ಅವನೇ ಹೇಳಿದ್ದ… ನಾನು ಬಹಳ ಹೆದರಿದ್ದೆ. ಮಾಸ್ತರ ಸಾಹೇಬರನ್ನು ಗುರುತಿಸುವುದೂ ಸಾಧ್ಯವಾಗಲಿಲ್ಲ ಎಂದು. ಆ ಅವರ ಮುಖ ಹೆದರಿಕೆ ಹುಟ್ಟಿಸುವಂತಿತ್ತು ಹಾಗೂ ಗುರುತಿಸಲೂ ಆಗುತ್ತಿರಲಿಲ್ಲ. ನಾನು ಹೆದರಿ ಹೊರಗೆ ಬಂದೆ. ಗೊಂದಲಗೊಂಡೆ. ಉಳಿದ ಚಮಗಾರರು ಮತ್ತು ಇನ್ನೂ ಕೆಲವು ಜನ ಅಲ್ಲಿ ಸೇರಿದರು. ಜನ ಗಣೇಶನ ಜೋಪಡಿಯಲ್ಲಿ ಹಣಿಕಿ ನೋಡಿದಾಗ ಕಂಡದ್ದೇನು? ಒಂದು ಮೂಲೆಯಲ್ಲಿ ಹರಿದ ಚಪ್ಪಲಿ ಮತ್ತು ಬೂಟುಗಳು, ಚರ್ಮದ ತುಕಡಾಗಳು. ರಬ್ಬರ್ ಮತ್ತು ಚಿಂದಿ. ಅವುಗಳ ನಡುವೆ ಬೆದರಿ, ಅಡಗಿ ಕುಳಿತ ಅಪ್ಪ. ಅವರ ಉಸಿರಾಟ ಹೆಚ್ಚೂ ಕಡಿಮೆ ಇನ್ನೂ ನಡೆದಿತ್ತು. ಅವರನ್ನು ಅಲ್ಲಿಂದೆಳೆದು ರಸ್ತೆಯ ಮೇಲೆ ತಂದದ್ದಾಯಿತು. ಗಣೇಶ ಆಗ ಮಾತ್ರ ಅವರನ್ನು ಗುರುತಿಸಿದ. ಅವರ ಕಿವಿಯಲ್ಲಿ ಏನೆಲ್ಲ ಸಪ್ಪಳ ಮಾಡಿದ. ಆದರೆ ಅವರು ಏನನ್ನೂ ಹೇಳುವಂತಹ ಸ್ಥಿತಿಯಲ್ಲಿರಲಿಲ್ಲ. ಬಹಳ ಹೊತ್ತಿನ ನಂತರ ಅವರು `ರಾಮ ಸಾರಥ ಪ್ರಸಾದ’ ಮತ್ತು ‘ಬಕೇಲಿ’ ಎಂದನಿಸುವಂಥ ಏನೋ ಹೇಳಿದ್ದರು. ನಂತರ ಗಪ್ಪಾಗಿ ಬಿಟ್ಟಿದ್ದರು.

ಅಪ್ಪನ ಸಾವು ಆರೂ ಹದಿನೈದರ ಅಸುಪಾಸಾಗಿತ್ತು. ದಿನಾಂಕ 17 ಮೇ 1972. ಇಪ್ಪತ್ತನಾಲ್ಕು ಗಂಟೆಗಳ ಮೊದಲು ಹೆಚ್ಚೂ ಕಡಿಮೆ ಅದೇ ಹೊತ್ತಿಗೆ ಅಡವಿಯಲ್ಲಿ ಅವರನ್ನು ತಿರೀಛ ಕಚ್ಚಿತ್ತು.

ಇಪ್ಪತ್ತನಾಲ್ಕು ಗಂಟೆಗಳ ಮೊದಲು ಅಪ್ಪನಿಗೆ ಈ ಘಟನೆಗಳ ಬಗ್ಗೆ ಮತ್ತು ತಮ್ಮ ಸಾವಿನ ಬಗ್ಗೆ ಊಹಿಸಲೂ ಸಾಧ್ಯವಿತ್ತೆ…? ಪೋಲೀಸರು ಅಪ್ಪನ ಹೆಣವನ್ನು ಶವಾಗಾರದಲ್ಲಿ ಇಡಿಸಿದ್ದರು. ಪೋಸ್ಟ್ಮಾರ್ಟಮ್‌ದ ಮುಖಾಂತರ ತಿಳಿದದ್ದೇನೆಂದರೆ ಅವರ ಎಲುಬುಗಳು ಎಷ್ಟೋ ಕಡೆ ಮುರಿದಿದ್ದವು. ಬಲಗಣ್ಣು ಪೂರಾ ಒಡೆದು ಹೋಗಿತ್ತು. ಕಾಲರ್ ಬೋನ್ ಮುರಿದಿತ್ತು. ಅವರ ಸಾವು ಮಾನಸಿಕ ಆಘಾತ ಮತ್ತು ಹೆಚ್ಚಿನ ರಕ್ತಸ್ರಾವದಿಂದ ಆಗಿತ್ತು. ಪೋಲೀಸರ ಅನುಸಾರ ಅವರ ಹೊಟ್ಟೆಯಲ್ಲಿ ಏನೂ ಇರಲಿಲ್ಲ. ಇದರರ್ಥ ಇಷ್ಟೇ: ಧತ್ತೂರಿಯ ಬೀಜಗಳ ಕಷಾಯ ವಾಂತಿಯ ಕಾರಣ ಈ ಮೊದಲೇ ಹೊರಗೆ ಬಿದ್ದುಹೋಗಿತ್ತು.

ಇಷ್ಟಾಗಿಯೂ ಥಾನೂ ಹೇಳುತ್ತಾನೆ: ಈಗಲಾದರೂ ಸಿದ್ದವಾಯಿತಲ್ಲವೇ? ತಿರೀಛದ ವಿಷದಿಂದ ಯಾರೂ ಉಳಿಯಲಾರರು ಎಂದು. ಸರಿಯಾಗಿ ಇಪ್ಪತ್ತನಾಲ್ಕು ಗಂಟೆಗಳ ನಂತರ ಅದು ತನ್ನ ಪ್ರಭಾವ ತೋರಿಸಿತ್ತು. ಮತ್ತು ಅಪ್ಪ ಸಾವಿಗೀಡಾಗಿದ್ದರು. ಪಂ. ರಾಮ ಅವತಾರರೂ ಹೇಳುವುದು ಇದೇ. ಪಂ. ರಾಮ ಅವತಾರ ಈ ರೀತಿ ಹೇಳುವುದರ ಹಿಂದಿನ ಕಾರಣ ಅಂದರೆ ಕಷಾಯದಿಂದ ಅಪ್ಪ ಸತ್ತಿರಲಿಕ್ಕಿಲ್ಲ ಎಂದು ತಮಗೆ ತಾವೇ ವಿಶ್ವಾಸ ಕೊಡುವುದಕ್ಕಾಗಿ.

ಇದನ್ನೂ ಓದಿ : Yashwant Chittal: ವಿಲಂಬಿತ ಲಯ ತಂತ್ರಮಾಂತ್ರಿಕ ಯಶವಂತರ ‘ಚಿತ್ತಾಲತನ’

ನಾನು ಯೋಚಿಸುತ್ತೇನೆ. ಊಹಿಸುವ ಪ್ರಯತ್ನ ಮಾಡುತ್ತೇನೆ. ಬಹುಶಃ ಕೊನೆಯ ಘಳಿಗೆಯಲ್ಲಿ ಯಾವಾಗ ಗಣೇಶ ತನ್ನ ಝೋಪಡಿಯಿಂದ ಹೊರಗೆ ಬಂದು ಅಪ್ಪನ ಕಿವಿಯಲ್ಲಿ ಏನೋ ಸಪ್ಪಳ ಮಾಡಿದನೋ ಆಗ ಅಪ್ಪ ಕನಸಿನಿಂದ ಎಚ್ಚತ್ತಿರಬೇಕು. ನದಿಯ ತಣ್ಣಗಿನ ನೀರಿನಲ್ಲಿ ಮುಖ ತೊಳೆದಿರಬೇಕು. ಬಾಯಿ ಮುಕ್ಕಳಿಸಿಕೊಂಡಿರಬೇಕು. ಮತ್ತು ಇಷ್ಟೊಂದು ದೀರ್ಘವಾದ ಕನಸನ್ನು ಅವರು ಮರೆತಿರಬೇಕು. ಕೋರ್ಟಿಗೆ ಹೋಗುವುದರ ಬಗ್ಗೆ ವಿಚಾರ ಮಾಡಿರಬೇಕು. ನಮ್ಮ ಮನೆಯ ಚಿಂತೆ ಅವರನ್ನು ಕಾಡಿರಬಹುದು.

ಆದರೆ ನಾನು ಮೇಲಿಂದ ಮೇಲೆ ಬೀಳುವ ಕನಸಿನ ಬಗ್ಗೆ ಹೇಳಬಯಸುತ್ತೇನೆ. ಅದು ಈ ಈತಿ ಇದೆ. ಹೊಲದ ಒಡ್ಡು. ಊರಿನ ಕಾಲುದಾರಿಗಳ ಮುಖಾಂತರ ಅಡವಿ ಸೇರುತ್ತೇನೆ. ಕಾಲುವೆ. ಮುದಿ ಗಿಡ ನೋಡುತ್ತೇನೆ. ಇಡೀ ಮಳೆಗಾಲದಲ್ಲಿ ಮುಳುಗಿರುವ ಆ ಕಂದು ಬಣ್ಣದ ಬಂಡೆಗಲ್ಲು ಅಲ್ಲೇ, ತನ್ನ ಜಾಗದಲ್ಲಿಯೇ ಇದೆ. ತಿರೀಛದ ಹೆಣ ಅದರ ಮೇಲೆ ಬಿದ್ದುಕೊಂಡಿರುವುದು ನನಗೆ ಕಾಣುತ್ತದೆ. ಒಂದು ಉಗ್ರ ಆನಂದ ನನನ್ನು ಸುತ್ತುಗಟ್ಟುತ್ತದೆ. ಕೊನೆಗೂ ಅದನ್ನು ಹೊಡೆದು ಕೊಂದಿದ್ದಾರೆ. ಅದು ಸತ್ತು ಹೋಗಿದೆ. ನಾನು ಕಲ್ಲು ಬೀಸಿ ಅದನ್ನು ಹೊಡೆಯುತ್ತೇನೆ. ನನ್ನ ಬದಿಗೆ ಥಾನೂ ಚಿಮಣಿ ಎಣ್ಣೆ ಕಡ್ಡಿ ಪೆಟ್ಟಿಗೆ ಹಿಡಿದುಕೊಂಡು ನಿಂತಿದ್ದಾನೆ.

ಆಗ….ಆಗ…ಅಚಾನಕ ನನಗೆ ಅರಿವಾಗುತ್ತದೆ. ಆ ಬಂಡೆಗಲ್ಲಿನ ಮೇಲೆ ನಾನಿಲ್ಲೇ ಇಲ್ಲ. ಥಾನೂ ಕೂಡ ಅಲ್ಲಿಲ್ಲ. ಅಲ್ಲಿ ಯಾವ ಅಡವಿಯೂ ಇಲ್ಲ.

ವಿಚಿತ್ರ ಅಂದರೆ ನಾನಿದ್ದದ್ದು ಒಂದು ಪಟ್ಟಣದಲ್ಲಿ. ನನ್ನ ಅರಿವೆಗಳು ಹೊಲಸಾಗಿವೆ. ಹರಿದಿವೆ. ಚಿಂದಿಚಿಂದಿಯಾಗಿವೆ. ನನ್ನ ಗಲ್ಲದ ಎಲುಬುಗಳು ಹೊರಬಂದಿವೆ. ಕೂದಲುಗಳು ಅತ್ತಿತ್ತ ಹರಡಿವೆ. ನನಗೆ ನೀರಡಿಕೆ ಆಗಿದೆ. ನಾನು ಮಾತನಾಡುವ ಪ್ರಯತ್ನ ಮಾಡುತ್ತೇನೆ. ಬಹುಶಃ ನಾನು ನನ್ನ ಊರಾದ ಬಕೇಲಿಗೆ ಹೋಗುವ ರಸ್ತೆಯ ಬಗ್ಗೆ ಕೇಳಬಯಸುತ್ತೇನೆ. ಮತ್ತು ಅದೇ ಹೊತ್ತಿಗೆ ಅಕಸ್ಮಾತ್ತಾಗಿ ನಾಲ್ಕೂ ಕಡೆಯಿಂದ ಕೋಲಾಹಲ ಏಳುತ್ತದೆ. ನೂರಾರು, ಸಾವಿರಾರು, ಗಂಟೆಗಳು… ನಾನು ಓಡತೊಡಗುತ್ತೇನೆ. ನಾನು ಓಡುತ್ತೇನೆ. ನನ್ನ ಶರೀರ ಜರ್ಜರಿತವಾಗತೊಡಗುತ್ತದೆ. ಪಪ್ಪುಸಗಳು ಉಬ್ಬಿ ಬರುತ್ತವೆ. ಹತ್ತಿರ ಹತ್ತಿರ ಹೆಜ್ಜೆ ಇಟ್ಟು ನಾನು ಉದ್ದೋಉದ್ದ ಜಿಗಿಯತೊಡಗುತ್ತೇನೆ. ಹಾರುವ ಪ್ರಯತ್ನ ಮಾಡುತ್ತೇನೆ. ಆದರೆ ಜನರ ಗುಂಪು ನನ್ನ ಹತ್ತಿರ ಬರುವಂತಾಗಿರುತ್ತದೆ. ಒಂದು ವಿಚಿತ್ರವಾದ ಬಿಸಿಯಾದ ಭಾರೀ ಗಾಳಿ ನನ್ನನ್ನು ಸ್ತಬ್ಧವಾಗಿಸುತ್ತದೆ. ನನ್ನ ಹತ್ಯೆಯ ಉಸಿರಾಟ ನನ್ನನ್ನು ತಟ್ಟತೊಡಗುತ್ತದೆ. ಮತ್ತು ಕೊನೆಗೂ ಆ ಕ್ಷಣ ಬರುತ್ತದೆ. ನನ್ನ ಬದುಕು ಮುಕ್ತಾಯವಾಗುತ್ತಿರುತ್ತದೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ: ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ ಅನುವಾದಿಸಿದ ಸಿಂಗರ್​ನ ‘ಮಳ್ಳ ಗಿಂಪೆಲ್’ ಕಥೆ

ನಾನು ಅಳುತ್ತೇನೆ. ಇನ್ನೂ ಓಡುವ ಪ್ರಯತ್ನ ಮಾಡುತ್ತೇನೆ. ನನ್ನಿಡೀ ಶರೀರ ನಿದ್ದೆಯಲ್ಲೇ ಬೆವರಿನಿಂದ ತೊಯ್ದಿರುತ್ತದೆ. ನಾನು ಕೂಗಿ ಕೂಗಿ ಮಾತನಾಡಿ, ಎಚ್ಚರಾಗುವ ಪ್ರಯತ್ನ ಮಾಡುತ್ತೇನೆ. ಇದೆಲ್ಲ ಒಂದು ಕನಸೆಂದು ನಂಬಬಯಸುತ್ತೇನೆ. ನಾನು ಕನಸಿನೊಳಗೇ ನನ್ನ ಕಣ್ಣುಗಳನ್ನು ದೊಡ್ಡದಾಗಿ ತೆರೆದು ದೂರ ದೂರದವರೆಗೂ ನೋಡಬಯಸುತ್ತೇನೆ. ಆದರೆ ಅ ಘಳಿಗೆ ಕೊನೆಗೂ ಬಂದೇಬಿಡುತ್ತದೆ.

ಅವ್ವ ಹೊರಗಿನಿಂದ ನನ್ನನ್ನು ನೋಡುತ್ತಾಳೆ. ಹಣೆ ನೇವರಿಸಿ, ದುಪ್ಪಟ್ಟಿಯಲ್ಲಿ ನನ್ನನ್ನು ಮುಚ್ಚಿ ಬಿಡುತ್ತಾಳೆ. ಮತ್ತು ನಾನಿಲ್ಲಿ ಏಕಾಕಿಯಾಗಿ ಉಳಿದುಬಿಡುತ್ತೇನೆ. ನನ್ನನ್ನು ಸಾವಿನಿಂದ ಬಚಾವಾಗುವ ಪ್ರಯತ್ನದ ಜೊತೆಗೆ ಹೋರಾಡುತ್ತ… ದುರ್ಬಲನಾಗಿ ಜರ್ಜರಿತನಾಗುತ್ತ ಅಳುತ್ತ ಚೀರುತ್ತ… ಓಡುತ್ತ….

ಅವ್ವ ಹೇಳುತ್ತಾಳೆ. ನನಗಿನ್ನೂ ಕನಸಿನಲ್ಲಿ ಬಡಬಡಿಸುವ ಮತ್ತು ಚೀರುವ ಅಭ್ಯಾಸ ಇದೆ ಎಂದು. ಆದರೆ ನಾನು ಕೇಳಬಯಸುತ್ತೇನೆ ಮತ್ತು ಈ ಪ್ರಶ್ನೆಯೇ ನನಗೆ ಯಾವಾಗಲೂ ತೊಂದರೆ ಕೊಡುತ್ತದೆ… ಕೊನೆಗೂ ನನಗೀಗ ಆ ತಿರೀಛದ ಕನಸು ಯಾಕೆ ಬೀಳುವುದಿಲ್ಲ ಎಂದು.

(ಮುಗಿಯಿತು)

*

(ಮುಕುಂದ ಜೋಷಿ ಫೋಟೋ ಸೌಜನ್ಯ : ಜಯಂತ ಕಾಯ್ಕಿಣಿ)

ಈ ಕಥೆಯ ಎಲ್ಲಾ ಭಾಗಗಳು ಮತ್ತು ಇನ್ನಿತರ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada