
ಬೆಂಗಳೂರು, ಜನವರಿ 8: ಕೋಗಿಲು ಲೇಔಟ್‌ನಲ್ಲಿ (Kogilu Layout) ಬೀದಿಗೆ ಬಿದ್ದವರು ಮನೆಗಾಗಿ ಎದುರು ನೋಡುತ್ತಿದ್ದಾರೆ. ಪರ-ವಿರೋಧದ ಮಧ್ಯೆಯೇ ಕಾಂಗ್ರೆಸ್ ಸರ್ಕಾರ ನಿರಾಶ್ರಿತರಿಗೆ ಮನೆ ಕೊಡುವುದಕ್ಕೆ ಮುಂದಾಗಿದೆ. ಅರ್ಹತೆ ಹೊಂದಿರುವವರಿಗೆ ಮಾತ್ರವೇ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಕೊಡಲುನಿರ್ಧರಿಸಿದೆ. ಪ್ರಾಥಮಿಕ ಹಂತದಲ್ಲಿ ಅಂದಾಜು 37 ಅರ್ಜಿಗಳು ಮಾತ್ರ ಅರ್ಹತೆ ಹೊಂದಿವೆ. 5 ವರ್ಷಗಳಿಗಿಂತ ಹಳೆಯ ದಾಖಲೆಗಳು ಇದ್ದು, ಅವರು ಇಲ್ಲೇ ನೆಲೆಸಿದ್ದಾರೆ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ಆದರೆ ಈಗ ಅಕ್ರಮ ಒತ್ತುವರಿ ಪ್ರಕರಣದಲ್ಲಿ ಒಂದೊಂದೇ ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡವರು ತಲಾ ಒಂದರಿಂದ 2 ಲಕ್ಷ ರೂಪಾಯಿ ನೀಡಿರುವ ವಿಚಾರವೂ ಬಹಿರಂಗವಾಗಿದೆ.
ಅಕ್ರಮವಾಗಿ ಮನೆ ನಿರ್ಮಿಸಲು ಹಣ ಪಡೆದವರಿಗೀಗ ಸಂಕಷ್ಟ ಎದುರಾಗಿದೆ. ಆರೋಪಿಗಳಾದ ವಿಜಯ್, ವಸೀಂ, ಮುನಿ ಆಂಜಿನಪ್ಪ, ರಾಬಿನ್ ಹೀಗೆ ನಾಲ್ವರ ವಿರುದ್ಧ ಜನರಿಂದ ಹಣ ಪಡೆದು, ಸರ್ಕಾರ ಜಾಗ ಅತಿಕ್ರಮಣ ಮಾಡಿದ ಆರೋಪದಡಿ ಕೇಸ್ ದಾಖಲಾಗಿದೆ. ಅದರಲ್ಲೂ A2 ವಾಸೀಂ, ಸರ್ಕಾರಿ ಜಾಗ ಅತಿಕ್ರಮ ಮಾಡಿದ್ದು ಅಲ್ಲದೇ, ಆ ಜಾಗಕ್ಕೆ ವಾಸೀಂ ಲೇಔಟ್ ಅಂತಾ ಹೆಸರಿಟ್ಟಿದ್ದ. ಕೇಸ್ ದಾಖಲಾಗುತ್ತಿದ್ದಂತೆಯೇ ಆರೋಪಿಗಳಾದ ವಾಸಿಮ್ ಬೇಗ್ ಮತ್ತು ವಿಜಯ್‌ಕುಮಾರ್‌ನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್‌ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ.
2023ರಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಆ ಪ್ರಕಾರ 14 ಎಕರೆ 36 ಗುಂಟೆ ಜಮೀನಿನಲ್ಲಿ ಘಟಕ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿತ್ತು. BSWML ವತಿಯಿಂದ 2023 ರಲ್ಲಿ ಬಯೋಮೆಥನೈಸೇಷನ್ ಘಟಕ, ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಟೆಂಡರ್ ಆಹ್ವಾನಿಸಲಾಗಿತ್ತು ಆದರೆ ಘಟಕ ನಿರ್ಮಾಣಕ್ಕೂ ಮೊದಲೇ 4 ಎಕರೆ ಪ್ರದೇಶ ಒತ್ತುವರಿ ಮಾಡಿದ್ದು ಗೊತ್ತಾಗಿದೆ. ಆ ಬಳಿಕ 167 ಕಚ್ಚಾ ಮನೆಗಳನ್ನು ಒತ್ತುವರಿ ತೆರವು ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ ಮನೆ ಕಟ್ಟಿಕೊಳ್ಳಲು ಹಣ ಪಡೆದು ಅವಕಾಶ ನೀಡಿದ್ದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೋಗಿಲು ಲೇಔಟ್: ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ
ಹೈಕೋರ್ಟ್‌ನಲ್ಲಿ ಕೋಗಿಲು ವಿಚಾರವಾಗಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ಬುಧವಾರ ನಡೆದಿದೆ. ಮನೆ ತೆರವಿನಿಂದ ವಸತಿ ರಹಿರತರಾಗಿದ್ದಾರೆ, ಅವರಿಗೆ ಪುನರ್ವಸತಿ ಕಲ್ಪಿಸಬೇಕು ಪರಿಹಾರ ನೀಡಬೇಕು ಎಂದು ಅರ್ಜಿದಾರರ ವಾದಿಸಿದರು. ಇದಕ್ಕೆ ಆಕ್ಷೇಪವೆತ್ತಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, 28 ವರ್ಷಗಳಿಂದ ವಾಸಿಸುತ್ತಿದ್ದಾರೆಂಬುದು ಸುಳ್ಳು ಎಂದರು. ಸರ್ಕಾರದಿಂದ ಊಟ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರತಿವಾದ ಮಂಡಿಸಿದರು. ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶವನ್ನು ಸರ್ಕಾರ ಕೋರಿದ್ದರಿಂದ ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಲಾಗಿದೆ.