ದಂಪತಿ ನಡುವೆ ಮನಸ್ತಾಪ: ಪತ್ನಿ ಹುಡುಕಿಕೊಟ್ಟ ಎರಡೇ ದಿನಕ್ಕೆ ಪತಿ ಪರಾರಿ, ಪೊಲೀಸರಿಗೆ ತಲೆ ನೋವು ತಂದ ಪ್ರಕರಣ
ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು ಇದರಿಂದ ಪೊಲೀಸರು ಹೈರಾಣಾಗಿದ್ದಾರೆ. ಒಮ್ಮೆ ಹೆಂಡತಿ ಮನೆ ಬಿಟ್ಟು ಹೋದಳೆಂದು, ಇನ್ನೊಮ್ಮೆ ಗಂಡ ಮನೆ ಬಿಟ್ಟು ಹೋದನೆಂದು. ಇವರಿಗಾಗಿ ಹುಡುಕಾಟ ನಡೆಸುತ್ತ ಪೊಲೀಸರು ಹೈರಾಣಾಗಿದ್ದಾರೆ.
ಬೆಂಗಳೂರು: ಗಂಡ ಹೆಂಡತಿ(Husband Wife) ಜಗಳ ಉಂಡು ಮಲಗೋ ತನಕ ಎಂಬ ಗಾದೆ ಮಾತಿದೆ. ಆದ್ರೆ ಈಗೆಲ್ಲ ಇದು ಶುದ್ಧ ಸುಳ್ಳಾಗಿದೆ. ಚಿಕ್ಕ ವಿಚಾರಕ್ಕೆ ಶುರುವಾಗುವ ಮನಸ್ತಾಪಗಳು, ಜಗಳ-ಗಲಾಟೆ ತಿಂಗಳು, ವರ್ಷ ಕಳೆದರೂ ಸರಿ ಹೋಗಲ್ಲ. ದಂಪತಿ ಜಗಳದಿಂದ ಇಡೀ ಕುಟುಂಬದ ನೆಮ್ಮದಿಯೇ ಹಾಳಾಗಿಬಿಟ್ಟಿರುತ್ತೆ. ಆದ್ರೆ ಇಲ್ಲೊಂದು ದಂಪತಿ ನಡುವಿನ ಮನಸ್ತಾಪ ಪೊಲೀಸರಿಗೆ(Konanakunte Police) ದೊಡ್ಡ ತಲೆ ನೋವನ್ನೇ ತಂದಿದೆ. ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು ಇದರಿಂದ ಪೊಲೀಸರು ಹೈರಾಣಾಗಿದ್ದಾರೆ. ಒಮ್ಮೆ ಹೆಂಡತಿ ಮನೆ ಬಿಟ್ಟು ಹೋದಳೆಂದು, ಇನ್ನೊಮ್ಮೆ ಗಂಡ ಮನೆ ಬಿಟ್ಟು ಹೋದನೆಂದು. ಇವರಿಗಾಗಿ ಹುಡುಕಾಟ ನಡೆಸುತ್ತ ಪೊಲೀಸರು ಹೈರಾಣಾಗಿದ್ದು ಸದ್ಯ ಇಬ್ಬರಿಗೂ ಸಂಸಾರ ನಡೆಸುವಂತೆ ಬುದ್ದಿ ಹೇಳಿ ಕಳಿಸಲಾಗಿದೆ. ಪ್ರಕರಣ ಸುಖಾಂತ್ಯ ಕಂಡಿದೆ.
ಕೋಣನಕುಂಟೆಯಲ್ಲಿ ಒಂದೇ ಒಂದು ಫೋನ್ ಕಾಲ್ನಿಂದಾಗಿ ದಂಪತಿ ನಡುವೆ ಮನಸ್ತಾಪ ಉಂಟಾಗಿದೆ. ಪತ್ನಿ ಫೋನಿನಲ್ಲಿ ಯಾರೋ ಜೊತೆ ಗಂಟಗಟ್ಟಲೆ ಮಾತನಾಡುತ್ತಾಳೆ ಎಂದು ಆರೋಪಿ ಗಂಡ ತನ್ನ ಹೆಂಡತಿ ಜೊತೆ ಜಗಳವಾಡಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ತನ್ನ ಪತಿಗೆ ಮೆಸೇಜ್ ಮಾಡಿ ಮನೆ ಬಿಟ್ಟು ಹೋಗಿದ್ದಾಳೆ. ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ಮತ್ತೆ ಯಾವತ್ತೂ ಬರಲ್ಲ. ಮಕ್ಕಳನ್ನು ಚನ್ನಾಗಿ ನೋಡಿಕೋ. ಮನೆಯಲ್ಲಿ ಇಬ್ಬರೇ ಇರ್ತಾರೆ. ಬೇಗ ಮನೆಗೆ ಹೋಗು. ಇದೇ ಕೊನೇ ಮೆಸೇಜ್. ಜೀವನದಲ್ಲಿ ಇನ್ನು ಯಾವತ್ತು ಸಿಗಲ್ಲ ನಾನು. ತಾಳ್ಮೆ ಕಳೆದುಕೊಂಡಿದ್ದೇನೆ. ಸುಳ್ಳು ಹೇಳುತ್ತಿಲ್ಲ. ಬೇಗ ಮನೆಗೆ ಹೋಗು. ಯಾವುದೇ ಕಾರಣಕ್ಕೂ ಮಕ್ಕಳನ್ನು ಬಿಡಬೇಡ ಎಂದು ವಾಟ್ಸಾಪ್ ಮೆಸೇಜ್ ಮಾಡಿದ್ದಾಳೆ. ಹೀಗಾಗಿ ಕೋಣನಕುಂಟೆ ಪೊಲೀಸ್ ಠಾಣೆಗೆ ಬಂದ ಪತಿ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಅಂಗಲಾಚಿದ್ದಾನೆ. ದೂರು ನೀಡಿದ ಹಿನ್ನೆಲೆ ಪೊಲೀಸರು ಹುಡುಕಾಟ ನಡೆಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಮಹಿಳೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಇಬ್ಬರಿಗೂ ಬುದ್ದಿ ಹೇಳಿ ಕಳಿಸಿದ್ದಾರೆ.
ಇದನ್ನೂ ಓದಿ: Jharkhand: ಅನುಕಂಪದ ನೌಕರಿ ಆಸೆಗೆ ಗಂಡನನ್ನೇ ಕೊಲೆ ಮಾಡಿ ಸೀಲಿಂಗ್ ಫ್ಯಾನ್ಗೆ ನೇತು ಹಾಕಿದ್ದ ಪತ್ನಿ; ಆಮೇಲೇನಾಯ್ತು?
ಇಷ್ಟೆಲ್ಲಾ ಆದ ಮೇಲೆ ಇಬ್ಬರೂ ಸರಿ ಹೋಗಬಹುದು ಎಂದು ಕೊಂಡ ಪೊಲೀಸರಿಗೆ ಮತ್ತೊಂದು ದೂರು ಬಂದಿದೆ. ಪತ್ನಿ ಮನೆಗೆ ಬಂದ ಎರಡೇ ದಿನಕ್ಕೆ ಪತಿ ತನ್ನ ಮನಗ ಕೈಗೆ ಮೊಬೈಲ್ ನೀಡಿ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಪತ್ನಿ ಪೊಲೀಸ್ ಠಾಣೆಗೆ ಬಂದು ಪತಿ ಓಡಿ ಹೋದ ಬಗ್ಗೆ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಮತ್ತೆ ಹುಡುಕಾಟ ನಡೆಸಿದ್ದಾರೆ. ಆದ್ರೆ ಪತಿ ಎರಡು ದಿನದ ಬಳಿಕ ಮನೆಗೆ ಪಾರಾಸ್ ಬಂದಿದ್ದು ದಂಪತಿ ಹುಡುಕಾಟದಿಂದ ಹೈರಾಣಾದ ಪೊಲೀಸರು ದಂಪತಿಯನ್ನು ಠಾಣೆಗೆ ಕರೆಸಿ ಬುದ್ದಿ ಹೇಳಿ ಮತ್ತೆ ಈ ರೀತಿಯ ಕೆಲಸ ಮಾಡದಂತೆ ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ದಾರೆ. ಸದ್ಯ ದಂಪತಿ ನಾಪತ್ತೆ ಕೇಸ್ ಸುಖಾಂತ್ಯ ಕಂಡಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ