ಚಾಯೀಬಸ (ಜಾರ್ಖಂಡ್): ಹಣ, ಆಸ್ತಿ, ಆಭರಣಕ್ಕಾಗಿ ಕೊಲೆಗಳಾಗುತ್ತಿರುವ (Murder) ಬಗ್ಗೆ ಆಗಾಗ್ಗೆ ವರದಿಗಳಾಗುತ್ತಿರುತ್ತವೆ. ಆದರೆ, ಜಾರ್ಖಂಡ್ನಲ್ಲೊಬ್ಬಳು (Jharkhand) ಮಹಿಳೆ ಗಂಡನ ಸಾವಿನ ಅನುಕಂಪದಿಂದ ಸರ್ಕಾರಿ ನೌಕರಿ ದೊರೆಯಬಹುದೆಂಬ ಆಸೆಯಲ್ಲಿ ಆತನನ್ನು ಹತ್ಯೆ ಮಾಡಿ ಸೀಲಿಂಗ್ ಫ್ಯಾನ್ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಕೃತ್ಯ ಕೊನೆಗೂ ಬಯಲಾಗಿದೆ. ಇದೀಗ ಮಹಿಳೆಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡವನ್ನೂ ವಿಧಿಸಿದೆ. ಜಿಲ್ಲಾ ಪ್ರಿನ್ಸಿಪಲ್ ಸೆಷನ್ಸ್ ಜಡ್ಜ್ ವಿಶ್ವನಾಥ್ ಶುಕ್ಲಾ ಅವರು ಆದೇಶ ಪ್ರಕಟಿಸಿದ್ದು, ಅಪರಾಧಿ ಅನಿತಾ ಕುಮಾರಿ ಅಲಿಯಾಸ್ ಅನಿತಾ ಸಿಂಗ್ಗೆ ಶಿಕ್ಷೆ ವಿಧಿಸಿದ್ದಾರೆ. ಈಕೆ 2017ರ ಜನವರಿ 25ರಂದು ಪತಿ ರಾಜೀವ್ ಕುಮಾರ್ ಸಿಂಗ್ನನ್ನು ಹತ್ಯೆ ಮಾಡಿದ್ದಳು.
ಅನಿತಾ ಮತ್ತು ರಾಜೀವ್ 2007ರಲ್ಲಿ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ಸಂಬಂಧ ಹಳಸಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪ್ರಕರಣದ ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿ ಆಶುತೋಷ್ ಶೇಖರ್ ತಿಳಿಸಿದ್ದಾರೆ. 2013ರಲ್ಲಿ ರಾಜೀವ್ಗೆ ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆಯ ನೌಕರನಾಗಿ ಉದ್ಯೋಗ ದೊರೆತಿದೆ. ಆ ನಂತರ ಆತನ ಬಳಿಗೆ ಮರಳಿದ ಅನಿತಾ ನಂತರ ಜತೆಯಾಗಿ ವಾಸಿಸುತ್ತಿರುತ್ತಾಳೆ. ಚಾಯೀಬಸದಲ್ಲಿ ರಾಜೀವ್ಗೆ ದೊರೆತ ಕ್ವಾರ್ಟರ್ಸ್ನಲ್ಲಿ ಮಗಳ ಜತೆ ಇಬ್ಬರೂ ವಾಸಿಸುತ್ತಿರುತ್ತಾರೆ. ಅಲ್ಲಿಯೇ ರಾಜೀವ್ನನ್ನು ಹತ್ಯೆ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಗದಗ: ತಾಯಿಯ ಅನೈತಿಕ ಸಂಬಂಧ ಪ್ರಶ್ನೇ ಮಾಡಿದ ಅಪ್ರಾಪ್ತ ಬಾಲಕಿಯನ್ನ ಕೊಂದ ದುರುಳ
ರಾಜೀವ್ ಸಾವಿನ ಬಗ್ಗೆ ಅನುಮಾನಗಳು ಮೂಡಿಬಂದಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಯಿತು. ಅನಿತಾಳನ್ನು ವಿಚಾರಣೆಗೆ ಒಳಪಡಿಸಿದಾಗ, ಪತಿಯ ಮರಣದ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಬಹುದೆಂಬ ಆಸೆಯಿಂದ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಹಭೂಮ್ ಜಿಲ್ಲೆಯ ನಗರವಾಗಿದೆ. ಚಾಯೀಬಸ ಜಿಲ್ಲಾ ಕೇಂದ್ರವೂ ಹೌದು. ಇದು ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮಸ್ಥಳವೂ ಆಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ