Lalbagh Flower Show ಆಗಸ್ಟ್ 5ರಿಂದ ಲಾಲ್​ಬಾಗ್ ಪುಷ್ಪ ಪ್ರದರ್ಶನ: ಡಾ ರಾಜ್​ಕುಮಾರ್, ಪುನೀತ್ ರಾಜ್​ಕುಮಾರ್​ಗೆ ಅರ್ಪಣೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 04, 2022 | 8:14 PM

ಕೊವಿಡ್ ಸಾಂಕ್ರಾಮಿಕದ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಫಲ ಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು.

Lalbagh Flower Show ಆಗಸ್ಟ್ 5ರಿಂದ ಲಾಲ್​ಬಾಗ್ ಪುಷ್ಪ ಪ್ರದರ್ಶನ: ಡಾ ರಾಜ್​ಕುಮಾರ್, ಪುನೀತ್ ರಾಜ್​ಕುಮಾರ್​ಗೆ ಅರ್ಪಣೆ
ಲಾಲ್​ಬಾಗ್ ಫಲಪುಷ್ಪ ಪ್ರದರ್ಶನ
Follow us on

ಬೆಂಗಳೂರು: ಆಗಸ್ಟ್ 5ರಿಂದ 15ರವರೆಗೆ ನಗರದ ಪ್ರತಿಷ್ಠಿತ ಲಾಲ್​ಬಾಗ್ ಫಲಪುಷ್ಪ ಪ್ರದರ್ಶನ (Lalbagh Flowe Show) ನಡೆಯಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ (Muniratna) ತಿಳಿಸಿದರು. ಕೊವಿಡ್ ಸಾಂಕ್ರಾಮಿಕದ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಫಲ ಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು. ಈ ವರ್ಷದಿಂದ ಮತ್ತೆ ಆರಂಭವಾಗುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಜನಪ್ರಿಯ ಸಿನಿಮಾ ನಟರು ಮತ್ತು ಕರ್ನಾಟಕದ ಸಾಂಸ್ಕೃತಿಕ ಐಕಾನ್​ಗಳು ಎಂದು ಖ್ಯಾತರಾದ ಡಾ.ರಾಜ್​ಕುಮಾರ್ ಮತ್ತು ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಅರ್ಪಿಸಲಾಗಿದೆ ಎಂದು ಮುನಿರತ್ನ ತಿಳಿಸಿದರು.

ಆಗಸ್ಟ್ 5ರಂದು ಲಾಲ್​ಬಾಗ್​ನಲ್ಲಿ 212ನೇ ಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಒಟ್ಟು 11 ದಿನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್​ ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ. 2 ವರ್ಷದ ಬಳಿಕ ಫಲ, ಪುಷ್ಪ ಪ್ರದರ್ಶನ ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಲಾಲ್​ಬಾಗ್​ ಪ್ರವೇಶ ದರ ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.


ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ ಇರಲಿದೆ. ಈ ಬಾರಿ ಪುಷ್ಪ ಪ್ರದರ್ಶನದಲ್ಲಿ ಒಟ್ಟು 15 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಚಿವ ಮುನಿರತ್ನ ಹೇಳಿದರು. ಈ ಬಾರಿ ಹಲವು ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಫಲಪುಷ್ಪ ಪ್ರದರ್ಶನ ಮಾಡಿದವರಿಗೆ 12ರಂದು ಬಹುಮಾನ ವಿತರಣೆ ಮಾಡಲಾಗುವುದು ಎಂದರು.

ಊಟಿ ಮತ್ತು ವಿದೇಶಗಳಿಂದ ಅನೇಕ ದಿನಗಳವರೆಗೆ ಬಾಳಿಕೆ ಬರುವ ಹಲವು ಹೂವಿನ ಗಿಡಗಳು, ಹೂಗಳು ಬಂದಿವೆ. ಅವನ್ನು ನಮ್ಮ ಸಿಬ್ಬಂದಿ ಅಚ್ಚುಕಟ್ಟಾಗಿ ಜೋಡಿಸಲಿದ್ದಾರೆ. 30 ಅಡಿ ಪುನೀತ್ ಪ್ರತಿರೂಪದ ಚಿನ್ನದ ಲೇಪನ ಇರುವ ಪ್ರತಿಮೆಯನ್ನು ಪ್ರದರ್ಶನ ಸ್ಥಳದಲ್ಲಿ ತಾತ್ಕಾಲಿಕವಾಗಿ ಇರಿಸಲಾಗುವುದು. ಡಾ.ರಾಜ ಕುಮಾರ್ ವಾಸ ಮಾಡಿರುವ ಮನೆಯ ಮಾದರಿಯನ್ನು ಹೂವಿನ ಅಲಂಕಾರದಲ್ಲಿ ರೂಪಿಸಲಾಗುವುದು. ‘ಅಪ್ಪು’ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಕ್ತಿಧಾಮ ಮಾಡಿದ್ದರು. ಅದರ ಮಾದರಿಯನ್ನೂ ರೂಪಿಸುತ್ತೇವೆ. ಶಕ್ತಿಧಾಮದ ಮಕ್ಕಳೂ ಬರುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಮನೆ ಮೂಲಕ ಲಾಲ್​ಬಾಗ್​ಗೆ ಜ್ಯೋತಿ ತೆಗೆದುಕೊಂಡು ಬರುತ್ತೇವೆ ಎಂದು ಮಾಹಿತಿ ನೀಡಿದರು. ಲಾಲ್​ಬಾಗ್​ಗೆ ಹೊಸ ರೂಪ ಕೊಡುವ ಪ್ರಯತ್ನ ಆರಂಭವಾಗಿದೆ ಎಂದು ಹೇಳಿದರು.

Published On - 2:20 pm, Wed, 3 August 22