ಬೆಂಗಳೂರು, ಮೇ 29: ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರುತ್ತಿದೆ. ಇಂದು ಕೂಡ ತರಕಾರಿ ಬೆಲೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನ ರೋಸಿ ಹೋಗಿದ್ದಾರೆ. ಇನ್ನು ಬೆಂಗಳೂರಿನ ಜನ ತಕಕಾರಿ ಬೆಲೆ ಕೇಳಿ ಶಾಕ್ ಆಗಿದ್ದಾರೆ. ಕೆಜಿಗೆ 20 ರೂ. ಇದ್ದ ತರಕಾರಿಗಳ ಬೆಲೆ ಒಮ್ಮೆಯೇ ಬರೋಬ್ಬರಿ 80 ರೂ. ಗಡಿ ದಾಟಿವೆ. ಒಂದು ಕಡೆ ಬಿಸಿಲಿನ ಬಿಸಿಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಇನ್ನು ಕಡೆ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಈ ವಾರ ಕೂಡ ಬೆಲೆ ಗಗನಕ್ಕೇರಿದೆ.
ರೈತರು ಹೇಳುವಂತೆ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ಮಳೆಯ ಕೊರತೆಯಿಂದ ನಾವು ಅದುಕೊಂಡಷ್ಟು ಫಸಲು ಬಂದಿಲ್ಲ ಎಂದು ಹೇಳುತ್ತಾರೆ. ಮಾರುಕಟ್ಟೆಯಲ್ಲಿ ವ್ಯಾಪರಿಗಳು ಕೂಡ ತರಕಾರಿಗಳು ನಮಗೆ ಹೇಳಿದಷ್ಟು ಪೂರೈಕೆ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಒಂದು ವಾರದಿಂದ ಅಕಾಲಿಕವಾಗಿ ಮಳೆಯೂ ಬರುತ್ತಿದ್ದು, ಬೆಳೆ ಹಾಳಾಗುತ್ತಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮಾರುಕಟ್ಟೆಗಳಲ್ಲಿ ಸ್ವಲ್ಪ ಪರವಾಗಿಲ್ಲವೆಂಬ ಬೆಲೆ ಇದ್ದರೂ ಬಡವಾಣೆಗಳ, ಮನೆಗಳ ಬಳಿಯ ತರಕಾರಿ ಅಂಗಡಿಗಳು, ತಳ್ಳುವ ಗಾಡಿ ವ್ಯಾಪಾರಸ್ಥರು, ಹಾಪ್ ಕಾಮ್ಸ್ಗಗಳಲ್ಲಿ ಬೆಲೆ ವಿಪರೀತ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಹೊಸ ಬೆಳೆ ಬರುವರೆಗೂ ಬೆಲೆ ಹೀಗೆ ಮುಂದುವರೆಯಲಿದೆ. ಆದರೆ ತರಕಾರಿಗಳ ಬೆಲೆ ಕೇಳಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಒಂದು ಕೆಜಿ ಖರೀದಿಸುವವರು ಅರ್ಧ ಕೆಜಿ ಖರೀದಿ ಮಾಡುತ್ತಿದ್ದಾರೆ. ವ್ಯಾಪಾರ ತುಂಬ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ವಿಜಯ ನಗರವೂ ಸೇರಿದಂತೆ ನಗರದ ವಿವಿಧೆಡೆ ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪು ಬರೋಬ್ಬರಿ 100 ರೂಪಾಯಿಗೆ ಮಾರಾಟವಾಗುತ್ತಿದೆ.
ಕಳೆದ ವಾರವೇ ಬೀನ್ಸ್ ಬೆಲೆ 200 ರೂ. ಗಡಿದಾಟಿತ್ತು. ಇದೀಗ 220 ರೂ. ಹಾಗೂ ಅದಕ್ಕಿಂತಲೂ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದೆ. ಈ ಮಧ್ಯೆ ಸೌತೆಕಾಯಿ ಹಾಗೂ ಲಿಂಬೆಹಣ್ಣಿನ ಬೆಲೆ ಕೂಡ ವಿಪರೀತ ಜಾಸ್ತಿಯಾಗಿ ಹೋಗಿದೆ. ತರಕಾರಿ ಬೆಲೆ ನಿಯಂತ್ರಣದ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಜೂನ್ 1 ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ: ಎಲ್ಲೆಲ್ಲಿ ಸಿಗುತ್ತೆ? ಇಲ್ಲಿದೆ ವಿವರ
ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ