ಬೆಂಗಳೂರು: ನಗರದಲ್ಲಿ ಕೊವಿಡ್ ಸೋಂಕು ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಸ್ವಂತ ಊರುಗಳಿಗೆ ತೆರಳಲು ಹಾತೊರೆಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಗಳೂರು ಬಿಟ್ಟು ಹೊರಟ ಕಾರಣ, ವಿಕೆಂಡ್ ಕರ್ಫ್ಯೂ ಮುನ್ನಾದಿನವಾದ ಶುಕ್ರವಾರ (ಜ.7) ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಯಿತು. ಲಾಕ್ಡೌನ್ ಭೀತಿಯಿಂದ ಜನರು ಬೆಂಗಳೂರು ಬಿಟ್ಟು ತಮ್ಮ ಹಳ್ಳಿಗಳಿಗೆ ತೆರಳಲು ಮುಂದಾಗಿದ್ದಾರೆ. ಜಾಲಹಳ್ಳಿ ಕ್ರಾಸ್ನ 8ನೇ ಮೈಲಿ ಬಳಿ ವಾಹನಗಳ ಉದ್ದನೆ ಸಾಲು ಕಂಡು ಬಂತು. ಮತ್ತೆ ಲಾಕ್ಡೌನ್ ಆಗಬಹುದು ಎನ್ನುವ ಭೀತಿಯಿಂದ ಜನರು ಸ್ವಂತ ಊರುಗಳತ್ತ ತೆರಳುತ್ತಿದ್ದಾರೆ. ಲಗೇಜ್, ಮಕ್ಕಳ, ಸಮೇತ ಹಳ್ಳಿಗಳ ಕಡೆಗೆ ಸಿಕ್ಕಸಿಕ್ಕ ವಾಹನಗಳಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ.
ಕೊರೊನಾ 3ನೇ ಅಲೆಗೆ ಕಡಿವಾಣ ಹಾಕಲೆಂದು ರಾಜ್ಯ ಸರ್ಕಾರವು ವಾರಾಂತ್ಯ ಕರ್ಫ್ಯೂ ಘೋಷಿಸಿದೆ. ಹೀಗಾಗಿ ವಾರಾಂತ್ಯದ ಸಂಭ್ರಮದಲ್ಲಿದ್ದ ಬೆಂಗಳೂರಿಗೆ ವೀಕೆಂಡ್ ಕರ್ಫ್ಯೂ ಆದೇಶದಿಂದ ನಿರಾಸೆ ಮೂಡಿದೆ. ಶುಕ್ರವಾರ (ಜ.7) ರಾತ್ರಿ 10ರಿಂದ ಆರಂಭವಾಗಲಿರುವ ವೀಕೆಂಡ್ ಕರ್ಫ್ಯೂ ಸೋಮವಾರ ಮುಂಜಾನೆಯವರೆಗೂ ಜಾರಿಯಲ್ಲಿರುತ್ತದೆ. ಕರ್ಪ್ಯೂ ನಿಯಮ ಜಾರಿಯಾಗುತ್ತಿದ್ದಂತೆ ಬೆಂಗಳೂರು ಸ್ತಬ್ಧಗೊಳ್ಳಲಿದೆ. ಹೊಟೆಲ್, ಬಾರ್, ರೆಸ್ಟೊರೆಂಟ್ಗಳು ಸ್ತಬ್ಧವಾಗಲಿವೆ. ನಗರದ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಸರ್ಕಲ್ ಹಾಗೂ ಜಂಕ್ಷನ್ಗಳಿಗೆ ಸರ್ಕಲ್, ಜಂಕ್ಷನ್ಗಳಿಗೆ ಪೊಲೀಸರು ಬ್ಯಾರಿಕೇಡ್ಗಳನ್ನು ಅಳವಡಿಸಲಿದ್ದಾರೆ.
ವಾರಾಂತ್ಯ ಕರ್ಫ್ಯೂ ಆದೇಶ ಜಾರಿಗೆ ಬರುತ್ತಿದ್ದಂತೆ, ಅಂದರೆ ರಾತ್ರಿ 10 ಗಂಟೆಯ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಸ್ತಬ್ಧಗೊಳ್ಳಲಿದೆ. ಪ್ರಸ್ತುತ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಬಹುತೇಕ ಮುಖ್ಯ ವ್ಯಾಪಾರ ಕೇಂದ್ರಗಳಲ್ಲಿ ಜನಸಂದಣಿ ನೆರೆದಿದೆ. ಕರ್ಫ್ಯೂ ವೇಳೆ ವೈದ್ಯಕೀಯ ತುರ್ತುಪರಿಸ್ಥಿತಿ ಮತ್ತು ಇತರ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಬಾರ್-ರೆಸ್ಟೊರೆಂಟ್, ಶಾಪಿಂಗ್ ಕಾಂಪ್ಲೆಕ್ಸ್ಗಳೆಲ್ಲವೂ 10 ಗಂಟೆಗೆ ವಹಿವಾಟು ಸ್ಥಗಿತಗೊಳಿಸಲಿವೆ.
ಮತ್ತೆ ವಿದ್ಯಾಗಮದ ಚಿಂತನೆ
ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ವಿದ್ಯಾಗಮ ಯೋಜನೆಯನ್ನು ಮತ್ತೆ ಆರಂಭಿಸಲು ಚಿಂತನೆ ನಡೆಸಿದೆ. ರಾಜ್ಯವ್ಯಾಪಿ ಶಾಲೆಗಳಿಗೆ ರಜೆ ನೀಡಿದರೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಮಸ್ಯೆಯಾಗಬಹುದು. ಇಂಥ ಸಂದರ್ಭದಲ್ಲಿ ವಿದ್ಯಾಗಮ ಯೋಜನೆ ಜಾರಿಯಿಂದ ಮಕ್ಕಳ ಕಲಿಕೆ ಸಾಧ್ಯತೆಗಳು ಹೆಚ್ಚಾಗಲಿವೆ. ಈಗಾಗಲೇ ಬೆಂಗಳೂರು ನಗರದಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಗಳಲ್ಲೂ ರಜೆ ಘೋಷಣೆಯಾದರೆ ವಿದ್ಯಾಗಮ ಜಾರಿ ಮಾಡಬೇಕಾಗಬಹುದು. ಈ ಕುರಿತು ಎಲ್ಲ ಜಿಲ್ಲೆಗಳ ಬಿಇಒ ಹಾಗೂ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ವಿದ್ಯಾಗಮ ವೇಳಾಪಟ್ಟಿ, ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿಕೊಳ್ಳಲು ಹಾಗೂ ವಿದ್ಯಾಗಮ ಮಾದರಿಯಲ್ಲಿಯೇ ಬೋಧನೆಗೆ ಸಿದ್ಧತೆ ಮಾಡಿಕೊಳ್ಳಲು ಸರ್ಕಾರವು ಸೂಚಿಸಿದೆ.
ಇದನ್ನೂ ಓದಿ: R Ashok: ಸಚಿವ ಆರ್ ಅಶೋಕ್ಗೆ ಕೊರೊನಾ ಪಾಸಿಟಿವ್; ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ