ಬೆಂಗಳೂರು, ಜ.24: ಮದುವೆ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಫ್ ಆಗಿದ್ದ ಕಳ್ಳನನ್ನು ಇದೀಗ ಮಾಗಡಿ ರಸ್ತೆ ಪೊಲೀಸರು(Magadi Road Police)ಬಂಧಿಸಿದ್ದಾರೆ. ನಿಖಿಲ್ ಬಂಧಿತ ಆರೋಪಿ. ಆತನಿಂದ 1.80 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚಿಗಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಂದಿದ್ದ ಆಸಾಮಿ, ತನ್ನ ಚಾಳಿ ಬಿಡದೇ ಮುಂದುವರೆಸಿದ್ದ. ಅದರಂತೆ ಮದುವೆ ಮನೆಗೆ ಟಿಪ್ ಟಾಪ್ ಆಗಿ, ಯಾರಿಗೂ ಅನುಮಾನ ಬಾರದಂತೆ ಬೆಲೆ ಬಾಳುವ ಉಡುಗೆ ಜೊತೆಗೆ ನಗು ನಗುತ್ತಲೇ ಎಂಟ್ರಿ ಕೊಡುತ್ತಿದ್ದ.
ಮದುವೆ ಮನೆಯಲ್ಲಿ ವಧು ಅಥವಾ ವರನ ಕಡೆಯವರು ಎಂದು ಹೇಳಿಕೊಂಡು ವಧು-ವರರ ಡ್ರೆಸಿಂಗ್ ರೂಮ್ಗೆ ಎಂಟ್ರಿ ಕೊಡುತ್ತಿದ್ದ. ಬಳಿಕ ಎಲ್ಲರೂ ಮದುವೆ ಬ್ಯುಸಿಯಲ್ಲಿ ಇರುವುದನ್ನ ಗಮನಿಸಿ ಕಳ್ಳತನ ಮಾಡುತ್ತಿದ್ದ. ಅದರಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಫ್ ಆಗಿದ್ದ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತನಿಖೆ ನಡೆಸಿ ಆರೋಪಿಯನ್ನು ಮಾಲು ಸಹಿತ ಬಂಧಿಸಿದ್ದಾರೆ.
ಕೋಲಾರ: ಕುರಿ ಸಂತೆಯಲ್ಲಿ ಕುರಿ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕುರಿ ಕಳ್ಳರನ್ನು ಸ್ಥಳೀಯರೇ ಹಿಡಿದು ಬಟ್ಟೆ ಬಿಚ್ಚಿ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ರೋಜರಪಲ್ಲಿ ಕ್ರಾಸ್ ಬಳಿ ನಡೆದಿದೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಂದು ಕುರಿ ಸಂತೆಯಲ್ಲಿ ಕುರಿ ಕಳ್ಳತನಕ್ಕೆ ಯತ್ನಿಸುವ ವೇಳೆ ಬೆಂಗಳೂರು ಮೂಲದ ಮುಜಾಮಿಲ್ ಹಾಗೂ ಶಬ್ಬೀರ್ ಸಿಕ್ಕಿಬಿದ್ದಿದ್ದರು. ಇದೀಗ ಕಳ್ಳರನ್ನು ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ