Mahadevapura: ಮಹದೇವಪುರದಲ್ಲಿ ರಾಜಕಾಲುವೆ ಮೇಲೆ ಅಕ್ರಮ ಕಟ್ಟಡ ಕಟ್ಟಿದವರ ವಿರುದ್ಧ ಕಠಿಣ ಕ್ರಮ ಜಾರಿ ಮಾಡಿದ ಶಾಸಕ ಅರವಿಂದ ಲಿಂಬಾವಳಿ
Arvind Limbavali: ಮಹದೇವಪುರದ ಶಾಂತಿನಿಕೇತನ ಲೇಔಟ್, ಪಾಪಯ್ಯ ರೆಡ್ಡಿ ಲೇಔಟ್, ಚೆಲ್ಲಘಟ್ಟ ಸೇರಿದಂತೆ ಹಲವು ವಲಯಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಲಾಗಿರುವ ಅಕ್ರಮ ಕಟ್ಟಡಗಳನ್ನು ತೆರೆವುಗೊಳಿಸಲಾಗುತ್ತಿದೆ.
ಬೆಂಗಳೂರು: ಮಹಾಮಳೆಗೆ ತುತ್ತಾಗಿ ಹೈರಾಣಾಗಿದ್ದ ಬೆಂಗಳೂರಿನ ಮಹದೇವಪುರ ವಿಧಾನ ಸಭಾ ಕ್ಷೇತ್ರದ (Mahadevapura) ಹಲವು ಪ್ರದೇಶಗಳಲ್ಲಿ ನೆರೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ (MLA Arvind Limbavali) ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ರಾಜಕಾಲುವೆ (Raja Kaluve) ಒತ್ತುವರಿ (encroachment) ಮಾಡಿ ಕಟ್ಟಿರುವ ಅಕ್ರಮ ಕಟ್ಟಡಗಳ ತೆರವಿಗೆ ಸ್ವತಃ ಶಾಸಕ ಅರವಿಂದ ಲಿಂಬಾವಳಿ ಮುಂದಾಳತ್ವ ವಹಿಸಿದ್ದಾರೆ.
ಪಾಲಿಕೆಯ ಇಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಯ ಭದ್ರತೆಯೊಂದಿಗೆ ಮಹದೇವಪುರ ಕ್ಷೇತ್ರದಲ್ಲಿ ಅಕ್ರಮ ಕಟ್ಟಡಗಳನ್ನು ತೆರವು ಮಾಡುವ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ನಡೆಸಲಾಗ್ತಿದೆ. ನೆರೆ ಹಾವಳಿಯಿಂದ ಬೆಂಗಳೂರನ್ನು ಬಚಾವು ಮಾಡಲು ಈಗಿರುವ ಏಕೈಕ ಮಾರ್ಗ ಒತ್ತುವರಿ ತೆರವು ಮಾಡಿ ರಾಜಕಾಲುವೆಗಳ ಅಭಿವೃದ್ಧಿ ಮಾಡುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಕೋರಿರುವ ಶಾಸಕ ಅರವಿಂದ ಲಿಂಬಾವಳಿ ಪರಿಣಾಮಕಾರಿ ಕ್ರಮಗಳಿಗೆ ಮುಂದಾಗಿದ್ದಾರೆ.
ಮಹದೇವಪುರದ ಶಾಂತಿನಿಕೇತನ ಲೇಔಟ್, ಪಾಪಯ್ಯ ರೆಡ್ಡಿ ಲೇಔಟ್, ಚೆಲ್ಲಘಟ್ಟ ಸೇರಿದಂತೆ ಹಲವು ವಲಯಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಲಾಗಿರುವ ಅಕ್ರಮ ಕಟ್ಟಡಗಳನ್ನು ತೆರೆವುಗೊಳಿಸಲಾಗುತ್ತಿದೆ.
ಮಹದೇವಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಮಳೆ ಸುರಿದು ಅಲ್ಲಿನ ಮನೆಗಳು, ಅಪಾರ್ಟ್ಮೆಂಟ್ ಗಳು, ವಿಲ್ಲಾಗಳು, ಆಫೀಸ್ ಕಚೇರಿಗಳು ಸೇರಿದಂತೆ ಹಲವೆಡೆ ನೀರು ನುಗ್ಗಿ ತೊಂದರೆ ಉಂಟಾಗಿತ್ತು.
ಪ್ರತಿಯೊಂದು ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅರವಿಂದ ಲಿಂಬಾವಳಿ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪ್ರವಾಹ ಸ್ಥಳಗಳಿಗೆ ಕರೆದೊಯ್ದು ಪರಿಸ್ಥಿತಿ ವಿವರಿಸಿದ್ದರು. ಬಳಿಕ ಸಿಎಂ, ಅಧಿಕಾರಿಗಳ ಜೊತೆ ಚರ್ಚಿಸಿ. ಸೆಪ್ಟೆಂಬರ್ 5 ರಿಂದಲೇ ಭೂಮಾಪಕರ ಮೂಲಕ ಕ್ಷೇತ್ರದಾದ್ಯಂತ ಸಮೀಕ್ಷೆ ಮಾಡಿಸಿ ಒತ್ತುವರಿಯಾಗಿರುವ ಜಾಗವನ್ನು ಮಾರ್ಕಿಂಗ್ ಮಾಡಿಸಿದ್ದಾರೆ. ಅನೇಕ ಸ್ಥಳಗಳಲ್ಲಿ ಅಕ್ರಮವಾಗಿ ರಾಜ ಕಾಲುವೆಯ ಮೇಲೆಯೇ ಕಟ್ಟಡಗಳು, ಸಂಚಾರಿ ಮಾರ್ಗಗಳು, ಕಾಂಪೌಂಡ್ ಗಳು ನಿರ್ಮಾಣವಾಗಿರುವುದು ಕಂಡುಬಂದಿದೆ. ಎಲ್ಲಾ ಅಕ್ರಮ ಒತ್ತುವರಿಗಳನ್ನೂ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕೆಂದು ಸೂಚನೆ ನೀಡಲಾಗಿದ್ದು, ಅದರಂತೆ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಇದುವರೆಗೆ ನಡೆದಿರುವ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಶಾಂತಿನಿಕೇತನ ಲೇಔಟ್ ನಲ್ಲಿ 7 ಕಟ್ಟಡ ಹಾಗೂ 4 ಕಾಂಪೌಂಡ್ ಗೋಡೆಗಳನ್ನು ತೆರವುಗೊಳಿಸಲಾಗಿರುತ್ತದೆ. ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಅಪಾರ್ಟ್ಮ್ಂಟ್ ಗೋಡೆ ಹಾಗೂ ರಾಜಕಾಲುವೆಯ ಖಾಲಿ ಜಾಗದ ಮೇಲೆ ನಿರ್ಮಿಸಿಕೊಂಡಿದ್ದ 4 ಶೇಡ್ ಗಳನ್ನು ತೆರವುಗೊಳಿಸಲಾಗಿದೆ.
ಬಸವನಪುರದಲ್ಲಿ 1 ಕಾಂಪೌಂಡ್ ಗೋಡೆ ಹಾಗೂ 1 ಖಾಲಿ ಜಾಗದ ಒತ್ತುವರಿ ತೆರವುಗೊಳಿಸಲ್ಪಟ್ಟಿದೆ. ಚೆಲ್ಲಘಟ್ಟದ ಸರ್ವೇ ಸಂ. 70/14 ರಲ್ಲಿರುವ ನಲಪಾಡ್ ಅಕಾಡೆಮಿ ಬಳಿ ಸುಮಾರು 50 ಮೀಟರ್ ನಷ್ಟು ಒತ್ತುವರಿ ತೆರವು ಮಾಡಲಾಗಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ.
ಒಟ್ಟಾರೆ ಅರವಿಂದ ಲಿಂಬಾವಳಿಯವರು ತಮ್ಮ ಕ್ಷೇತ್ರ ಮಹದೇವಪುರದಲ್ಲಿ ರಾಜಕಾಲುವೆ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದವರ ಪಾಲಿಗೆ ಸಿಂಹಸ್ವಪ್ನರಾಗಿದ್ದಾರೆ.
Published On - 3:22 pm, Fri, 16 September 22