ರಾಜ್ಯಾದ್ಯಂತ ಸಂಕ್ರಮಣದ ಸಂಭ್ರಮ; ದೇವಾಲಯಗಳಲ್ಲಿ ಭಕ್ತ ಸಾಗರ, ಕಿಚ್ಚು ಹಾರಿಸಲು ತಯಾರಿ ಜೋರು
ಇಂದು ಸೂರ್ಯ ದಕ್ಷಿಣಯಾನದಿಂದ ಉತ್ತರಾಯಣಕ್ಕೆ ಪಥ ಬದಲಾವಣೆ ಮಾಡಲಿದ್ದಾರೆ. ಹೀಗಾಗಿ ಕೆಲ ದೇವಾಲಯಗಳಲ್ಲಿ ವಿಸ್ಮಯ ನಡೆದರೆ, ಮತ್ತೆ ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಗವಿಗಂಗಾಧರನಿಗೆ ಸೂರ್ಯ ರಶ್ಮಿ ಬೀಳುವ ಸೂರ್ಯದೇವನ ಅಧ್ಭುತ ಚಮತ್ಕಾರವನ್ನು ನೋಡಲು ಜನ ಕಾತೊರೆಯುತ್ತಿದ್ದು. ದೇವಾಲಯ ಕೂಡ ಕೌತುಕದ ಕ್ಷಣಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ.
ಬೆಂಗಳೂರು, ಜ.15: ನಾಡಿನಾದ್ಯಂತ ಕ್ಯಾಲೆಂಡರ್ ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂಭ್ರಮ ಜೋರಾಗಿದೆ (Makar Sankranti) . ಪ್ರತಿ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡುಬರುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಜನ ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ. ಇಂದು ಸೂರ್ಯ ದಕ್ಷಿಣಯಾನದಿಂದ ಉತ್ತರಾಯಣಕ್ಕೆ ಪಥ ಬದಲಾವಣೆ ಮಾಡಲಿದ್ದಾರೆ. ಹೀಗಾಗಿ ಕೆಲ ದೇವಾಲಯಗಳಲ್ಲಿ ವಿಸ್ಮಯ ನಡೆದರೆ, ಮತ್ತೆ ಕೆಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ.
ಗವಿಗಂಗಾಧರನಿಗೆ ನಮಿಸುವ ಸೂರ್ಯ
ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ವಿಸ್ಮಯವೊಂದು ಜರುಗುತ್ತೆ. ಉತ್ತರಾಯಣ ಪುಣ್ಯ ಕಾಲದಲ್ಲಿ ತನ್ನ ಪಥವನ್ನು ಬದಲಾಯಿಸುವ ಸೂರ್ಯದೇವ ಇಲ್ಲಿ ಪರಮೇಶ್ವರನ ದರ್ಶನ ಮಾಡಿ ಉತ್ತರಾಯಣ ಪ್ರವೇಶ ಮಾಡುತ್ತಾನೆ. ಸಂಜೆ ದೇಗುಲದ ಬಲಭಾಗದಲ್ಲಿರುವ ಕಿಂಡಿಯ ಮೂಲಕ ಪ್ರವೇಶಿಸುವ ಸೂರ್ಯ ರಶ್ಮಿ ನಂದಿಯ ಕೊಂಬುಗಳ ಮೂಲಕ ಹಾದು ಗವಿಯೊಳಗಿರುವ ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಇಂದು ಸಂಜೆ 5.20 ರಿಂದ 5.23 ನಿಮಿಷದವರೆಗೆ ಸೂರ್ಯರಶ್ಮಿ ಶಿವ ಲಿಂಗಕ್ಕೆ ನಮಿಸಲಿದೆ. ಇದಕ್ಕಾಗಿ ಗವಿಗಂಗಾಧರ ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾಶಿ ಚಂದ್ರಮೌಳೇಶ್ವರಸ್ವಾಮಿ ದೇಗುಲದಲ್ಲಿ ಸೂರ್ಯರಶ್ಮಿ ಸ್ಪರ್ಶ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿರುವ ಕಾಶಿ ಚಂದ್ರಮೌಳೇಶ್ವರಸ್ವಾಮಿ ದೇಗುಲದ ಗರ್ಭಗುಡಿಯ ಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶವಾಗುತ್ತೆ. ಶಿವಲಿಂಗದ ಜೊತೆಗೆ ಪಾರ್ವತಿ ವಿಗ್ರಹದ ಮೇಲೂ ಸೂರ್ಯ ರಶ್ಮಿ ಬೀಳುತ್ತೆ. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ದೇವಾಲಯದಲ್ಲಿ ಎಲ್ಲಾ ರೀತಿಯ ಪೂಜೆಗಳು ಆರಂಭವಾಗಿವೆ.
ಮೈಸೂರಿನಲ್ಲಿ ಹಸುಗಳಿಗೆ ವಿಶೇಷ ಅಲಂಕಾರ
ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಸುಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಪಶು ಪಾಲಕರು ರಾತ್ರಿ ಹಸುಗಳಿಗೆ ಕಿಚ್ಚು ಹಾಯಿಸಲಿದ್ದಾರೆ. ಈ ಹಿನ್ನೆಲೆ ಹಸುಗಳಿಗೆ ಅರಿಸಿನ ಹಚ್ಚಿ ಅಲಂಕಾರ ಮಾಡಲಾಗಿದೆ. ಮೈಸೂರಿನ ದೇವರಾಜ ಮೊಹಲ್ಲಾದಲ್ಲಿ ಸಂಭ್ರಮ ಜೋರಾಗಿದೆ.
ಇದನ್ನೂ ಓದಿ: Makar Sankranti: ಗವಿ ಗಂಗಾಧರೇಶ್ವರ ದೇಗುಲದಲ್ಲಿ ಕೌತುಕಕ್ಕೆ ಕ್ಷಣಗಣನೆ, ಭಕ್ತರ ಪ್ರವಾಹ
ಕಪಿಲೇಶ್ವರ ಮೂರ್ತಿಗೆ ಅಭಿಷೇಕ ಮಾಡಿ ಪೂಜೆ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಕಪಿಲೇಶ್ವರ ಮೂರ್ತಿಗೆ ಹಲವು ಅಭಿಷೇಕ ಮಾಡಿ ಹೂ ಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕೆಲವರು ವೈಯಕ್ತಿಕವಾಗಿ ಅಭಿಷೇಕ ಮಾಡಿಸುವ ಮೂಲಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲಿ ಪೂಜೆ
ಮಕರ ಸಂಕ್ರಾಂತಿ ಹಿನ್ನೆಲೆ ಚಿತ್ರದುರ್ಗದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಅರ್ಚನೆ ಮಾಡಿಸಲಾಗುತ್ತಿದೆ. ಅದರಲ್ಲೂ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿದ್ದು ಬೆಳಗ್ಗೆಯಿಂದಲೇ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ