ಬೆಂಗಳೂರು, (ಏಪ್ರಿಲ್ 03): ಬೆಳ್ಳಂಬೆಳಗ್ಗೆ ಎದ್ದು ಮನೆ ಬಾಗಿಲು ತೆರೆದರೆ ಹಾಲು, ನ್ಯೂಸ್ ಪೇಪರ್, ಏರಿಯಾ ಜನ ಓಡಾಡುವುದು ಕಾಣಿಸುತ್ತೆ. ಆದರೆ ಬಾಗಿಲು ತೆರೆದಿದ್ದ ಮನೆಯೋಳಗೆ ಚಿರತೆ (leopard ) ನುಗ್ಗಿದ್ರೆ ಹೇಗಿರುತ್ತೆ. ಇದನ್ನ ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಈ ಘಟನೆ ನೆನಸಿಕೊಂಡರೆ ಮೈಜುಮ್ಮೆನ್ನಿಸುತ್ತೆ. ಹೌದು…ಬೆಂಗಳೂರಿನ (Bengaluru) ಜಿಗಣಿಯ ಕುಂಟ್ಲುರೆಡ್ಡಿ ಲೇಔಟ್ನ ಮನೆಯೊಂದರಲ್ಲಿ ಬೆಳಗ್ಗೆ ಚಿರತೆ ನುಗ್ಗಿದೆ. ವೆಂಕಟೇಶ್ ಎಂಬುವವರು ಇಂದು (ಏಪ್ರಿಲ್ 03) ಬೆಳಗ್ಗೆ ಎದ್ದ ಕೂಡಲೇ ಅವರಿಗೆ ಚಿರತೆ ಕಣ್ಣಿಗೆ ಬಿದ್ದಿದೆ. ಇದರಿಂದ ಬೆಚ್ಚಿಬಿದ್ದ ವೆಂಕಟೇಶ್ ದಂಪತಿ, ಕೂಡಲೇ ಎದ್ದು ಮನೆಯಿಂದ ಆಚೆ ಬಂದು ಬಾಗಿಲು ಲಾಕ್ ಮಾಡಿದ್ದಾರೆ. ಈ ಮೂಲಕ ವೆಂಕಟೇಶ್ ಧೈರ್ಯ ಪ್ರದರ್ಶಿಸಿದ್ದಾರೆ.
ಮನೆಯಲ್ಲಿ ವೆಂಕಟೇಶ್ ಮತ್ತವರ ಪತ್ನಿ ವೆಂಕಟಲಕ್ಷ್ಮೀ ಮತ್ತು ಪುತ್ರ ನಿಖಿಲ್ ವಾಸವಿದ್ದರು. ಇವತ್ತು ಬೆಳಗ್ಗೆ 8 ಗಂಟೆ ಸುಮಾರಿಗೆ ವೆಂಕಟೇಶ್ ಪತ್ನಿ ಜೊತೆ ಇರುವಾಗಲೇ ಚಿರತೆ ಎಂಟ್ರಿ ಕೊಟ್ಟಿತ್ತು. ಚಿರತೆ ಬಂದಿದ್ದನ್ನ ಗಮನಿಸಿದ ವೆಂಕಟೇಶ್ ಒಂದು ಕ್ಷಣ ಭಯಬೀತರಾಗಿದ್ರು. ಆದ್ರೆ ವಿಚಲಿತರಾಗಲಿಲ್ಲ, ಸಮಯಪ್ರಜ್ಞೆ ತೋರಿದ ವೆಂಕಟೇಶ್, ಮನೆಯಿಂದ ಪತ್ನಿಯನ್ನ ಹೊರಗೆ ಕರೆತಂದು ಮನೆ ಬಾಗಿಲನ್ನ ಲಾಕ್ ಮಾಡಿದ್ದಾರೆ. ಇದರಿಂದ ಚಿರತೆ ಮನೆಯೊಳಗೆ ಲಾಕ್ ಆಗಿದ್ದು, ಬಳಿಕ ಪೊಲೀಸರು ಹಾಗೂ ಅರಣ್ಯ ಇಲಾಖೆಹಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮನೆ ಬಳಿ ನೂರಾರು ಜನ ವೆಂಕಟೇಶ್ ಮನೆ ಸುತ್ತ ಜಮಾಯಿಸಿದ್ದರು. ಇನ್ನು ಸ್ಥಳಕ್ಕೆ ಪೊಲೀಸ್ ಹಾಗು ಅರಣ್ಯ ಇಲಾಖೆಯವರು ದೌಡಾಯಿಸಿ, ಮನೆಯಲ್ಲಿ ಲಾಕ್ ಆಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯೊಳಗೆ ಸೇರಿದ ಚಿರತೆ ಭಯದಲ್ಲಿ ಬೆಡ್ ರೂಮ್‌ಗೆ ಹೋಗಿ ಬಚ್ಚಿಟ್ಟುಕೊಂಡಿತ್ತು. ಅರಣ್ಯ ಸಿಬ್ಬಂದಿ ಹೆಲ್ಮೆಟ್ ಧರಿಸಿ ಅರವಳಿಕೆ ಇಂಜೆಕ್ಷನ್ ಕೊಡಲು ಸಾಕಷ್ಟು ಶ್ರಮಿಸಿದ್ದಾರೆ. ತಜ್ಞ ವೈದ್ಯ ಕಿರಣ್ ಅವರು ಚಿರತೆಗೆ ಅರವಳಿಕೆ ಇಂಜೆಕ್ಷನ್ ಡಾಟ್ ನೀಡಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಬೋನಿಗೆ ಶಿಫ್ಟ್ ಮಾಡಲಾಗಿದೆ. ಮಳೆ ಅಡ್ಡಿಪಡಿಸುತ್ತಿದ್ದಾರೂ ಸಹ ಸತತ ನಾಲ್ಕು ಗಂಟೆಗಳ ಆಮರೇಷನ್ ಚಿರತೆ ಸಕ್ಸಸ್ ಆಗಿದೆ.
4 ಗಂಟೆಗಳ ಕಾಲ ಸತತ ಕಾರ್ಯಾಚರಣೆ ಬಳಿಕ ಕಡೆಗೂ ಚಿರತೆ ಬೋನಿಗೆ ಬಿದ್ದಿದೆ. ಆಪರೇಷನ್ ಚಿರತೆ ಹಿನ್ನೆಲೆಯಲ್ಲಿ ಕುಂಟ್ಲುರೆಡ್ಡಿ ಲೇಔಟ್ನಲ್ಲಿ ಭಾರೀ ಜನ ಸೇರಿದ್ದರು. ಮನೆಯ ಸುತ್ತಮುತ್ತ ಪೊಲೀಸರು ಭದ್ರತೆ ಕೈಗೊಂಡು ಹೊರಗಡೆ ನಿಂತ ಜನರನ್ನು ಚದುರಿಸಿದರು. ಅರಣ್ಯ ಇಲಾಖೆ, ವೈದ್ಯರು ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಸತತ 4 ಗಂಟೆಗಳ ಆಪರೇಷನ್ ಯಶಸ್ವಿಯಾಗಿದೆ.
ಚಿರತೆ ಕೂಡಿ ಹಾಕಿದ್ದ ಮನೆ ಮಾಲೀಕ ವೆಂಕಟೇಶ್ ಪ್ರತಿಕ್ರಿಯಿಸಿ, ಬೆಳಗ್ಗೆ ಇದ್ದಕ್ಕಿದಂತೆ ಚಿರತೆ ಮನೆಯೊಳಗೆ ಬಂತು. ಬಾಗಿಲಿಗೆ ಅಡ್ಡ ಫ್ಲೇ ವುಡ್ ಇಟ್ಟಿದ್ವು ಅದನ್ನ ಹಾರಿ ಬಂದಿದೆ. ಯಾರಿಗೂ ಸಮಸ್ಯೆಯಾಗಬಾರದು ಎಂದು ನಾನೇ ಆಚೆ ಬಂದು ಬಾಗಿಲು ಹಾಕಿದ್ದೆ. ಅಕ್ಕಪಕ್ಕ ಕಾಡು ಇರುವುದರಿಂದ ಸ್ವಲ್ಪ ಗಮನಹರಿಸಬೇಕು . ಕಾಡಿನ ಪ್ರಾಣಿಗಳ ಚಲನವಲನ ನಿಗಾ ಇಡಬೇಕು. ದೇವರದಯೆಯಿಂದ ಏನು ಅಪಾಯ ಆಗಿಲ್ಲ ಎಂದರು.
ಬೆಳಗ್ಗೆ ನಮ್ಮ ಯಜಮಾನರು, ನಾನು ಟಿವಿ ನೋಡುತ್ತಿದ್ವಿ. ಸುಮಾರು 8 ಗಂಟೆ ಆಗಿತ್ತು. ಆಗ ಏಕಾಏಕಿ ಚಿರತೆ ಬಾಗಿಲಿಂದ ಒಳಗೆ ಬಂತು. ಚಿರತೆ ಬಂದ ತಕ್ಷಣ ನನಗೆ ಮೊದಲು ಅದರ ಬಾಲ ಕಂಡಿತು. ಬಳಿಕ ನಮ್ಮ ಯಜಮಾನರಿಗೆ ತಿಳಿಸಿದೆ. ಆಗ ಅವರು ಬಾಗಿಲು ಹಾಕಿ ಹೊರಬಂದರು . ಸದ್ಯ ಯಾರಿಗೂ ಸಮಸ್ಯೆಯಾಗದೇ ಚಿರತೆ ಸಿಕ್ಕಿದೆ ಎಂದು ನಿಟ್ಟುಸಿರುಬಿಟ್ಟರು.
ಈ ಚಿರತೆಯಿಂದ ಆತಂಕದಲ್ಲಿದ್ದ ಜನ ನಿಟ್ಟುಸಿರು ಬಿಟ್ಟಿದ್ದು, ವೆಂಕಟೇಶ್ ದಂಪತಿಯ ದಿಟ್ಟತನಕ್ಕೆ ಖುಷಿಯಾಗಿದ್ದಾರೆ. ಆದರೂ ಸಹ ಸ್ಥಳೀಯರಲ್ಲಿ ಚಿರತೆ ಆತಂಕ ಮೂಡಿಸಿರುವುದಂತೂ ಸತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Thu, 3 April 25