
ಮಂಗಳೂರು, ಅ.19: ಮಂಗಳೂರು–ಬೆಂಗಳೂರು ವಿಮಾನ ಮಾರ್ಗವು ದೇಶದಲ್ಲೇ ಅತಿಹೆಚ್ಚು ವಾಯುದಂಚೆ ಸಾಗಣೆ ಮಾಡುವ ಮೂಲಕ ಪ್ರಮುಖ ವಾಣಿಜ್ಯ ಹಾಗೂ ಲಾಜಿಸ್ಟಿಕ್ಸ್ ಕಾರಿಡಾರ್ ಆಗಿ ಹೊರಹೊಮ್ಮಿದೆ. ಪತ್ರಗಳು, ಪಾರ್ಸೆಲ್ಗಳು ಮತ್ತು ಅತಿ ಸುರಕ್ಷಿತ ದಾಖಲೆಗಳ ಸಾಗಣೆಯಲ್ಲಿ ಈ ಮಾರ್ಗವು ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. 2025ರ ಏಪ್ರಿಲ್ನಿಂದ 2026ರ ಮಾರ್ಚ್ ಅಂತ್ಯದವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಒಟ್ಟು 3,238.09 ಟನ್ ವಾಯು ಸರಕು (Air Cargo) ಸಾಗಣೆಯಾಗಿದೆ. ಇದರ ವಿರುದ್ಧ ದಿಕ್ಕಿನಲ್ಲಿ 608 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಕಳುಹಿಸಲಾದ ಒಟ್ಟು ಸರಕಿನಲ್ಲಿ ಶೇ. 95ರಷ್ಟು ಅಂದರೆ ಬರೋಬ್ಬರಿ 3,076.19 ಟನ್ಗಳಷ್ಟು ಭಾಗವು ‘ಇಂಡಿಯಾ ಪೋಸ್ಟ್’ ನಿರ್ವಹಿಸುವ ವಾಯುದಂಚೆ ಆಗಿದೆ. ಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್ನಿಂದ ಸೆಪ್ಟೆಂಬರ್ ನಡುವೆ) ಈ ಮಾರ್ಗದಲ್ಲಿ ಒಟ್ಟು 1,806 ಮೆಟ್ರಿಕ್ ಟನ್ ವಾಯುದಂಚೆ ಸಾಗಣೆಯಾಗಿದೆ.
ಬೆಂಗಳೂರು ಮೂಲಕ ದೇಶದ ವಿವಿಧ ಭಾಗಗಳಿಗೆ ಸಾಗಿಸಲ್ಪಡುವ ಅತಿ ಸುರಕ್ಷಿತ ದಾಖಲೆಗಳೇ ಈ ಅಧಿಕೃತ ದಟ್ಟನೆಗೆ ಪ್ರಮುಖ ಕಾರಣವಾಗಿದೆ. ಪರೀಕ್ಷಾ ಪ್ರಶ್ನೆ ಪತ್ರಿಕೆಗಳು, ಚೆಕ್ ಪುಸ್ತಕಗಳು, ಕ್ರೆಡಿಟ್ ಕಾರ್ಡ್ಗಳು, ಡೆಬಿಟ್ ಕಾರ್ಡ್ಗಳು ಮತ್ತು ಅತ್ಯಂತ ಸಂವೇದನಾಶೀಲ ಅಂಚೆ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಾಗಿಸಲು ಈ ವಿಮಾನ ಮಾರ್ಗವು ಪ್ರಮುಖ ಕೊಂಡಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರೈಲ್ವೆ ಪ್ರಯಾಣಿಕರ ಗಮನಕ್ಕೆ: ರೈಲು ಸಂಖ್ಯೆ 16377, 16378, 16596, 16536 ವೇಳಾಪಟ್ಟಿಯಲ್ಲಿ ಬದಲಾವಣೆ
ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರ ಮಂಗಳೂರು–ಬೆಂಗಳೂರು ಮಾರ್ಗದಲ್ಲಿ 138 ಟನ್ ವಾಯುದಂಚೆ ಸಾಗಣೆಯಾಗುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ದೆಹಲಿ–ಮುಂಬೈ ಮಾರ್ಗವು 123 ಟನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ದೆಹಲಿ–ಲೇಹ್ ಮಾರ್ಗವು 105 ಟನ್ಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಇಂಡಿಯಾ ಪೋಸ್ಟ್ನ ಲಾಜಿಸ್ಟಿಕ್ಸ್ ಜಾಲದಲ್ಲಿ ಮಂಗಳೂರು-ಬೆಂಗಳೂರು ವಿಮಾನ ಮಾರ್ಗವು ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರಮುಖ ದಾಖಲೆಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸಲು ಇದು ಅತ್ಯಂತ ವೇಗದ ಮಾಧ್ಯಮವಾಗಿ ಸಾಬೀತಾಗಿದೆ.
ಮಂಗಳೂರಿನಿಂದ ಹಾರಾಟ ನಡೆಸುವ ವಾರದ ವಿಮಾನಗಳ ಒಟ್ಟು ಸಂಚಾರ ಸಂಖ್ಯೆ 181ರಿಂದ ಬರೋಬ್ಬರಿ 195ಕ್ಕೆ ಏರಿಕೆಯಾಗಲಿದೆ. ಇದರೊಂದಿಗೆ ದೇಶೀಯ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಪರ್ಕ ಇನ್ನಷ್ಟು ಬಲಗೊಳ್ಳಲಿದೆ. ‘ಫ್ಲೈ91’ (FLY91) ಸಂಸ್ಥೆಯು ಮಂಗಳೂರಿನಿಂದ ಲಕ್ಷದ್ವೀಪದ ಅಗತ್ತಿ ಹಾಗೂ ಮಹಾರಾಷ್ಟ್ರದ ಪುಣೆಗೆ ನೂತನ ದೈನಂದಿನ ವಿಮಾನಯಾನ ಸೇವೆ ಆರಂಭಿಸಲಿದೆ. ಈ ಎರಡು ಮಾರ್ಗಗಳಲ್ಲಿ ವಾರಕ್ಕೆ ಒಟ್ಟು 14 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯು ಬೋಯಿಂಗ್ 737-8 ವಿಮಾನಗಳನ್ನು ಬಳಸಿ ಮಂಗಳೂರು-ಹೈದರಾಬಾದ್ ಮಾರ್ಗದಲ್ಲಿ ವಾರಕ್ಕೆ 3 ಬಾರಿ ವಿಮಾನ ಸೇವೆಯನ್ನು ಪುನರಾರಂಭಿಸಲಿದೆ.
ಇಂಡಿಗೋ ಸಂಸ್ಥೆಯು ಮುಂಬೈ ಮಾರ್ಗದಲ್ಲಿ ಹೆಚ್ಚುವರಿ ವಿಮಾನಗಳನ್ನು ಕಾರ್ಯಾಚರಣೆಗೊಳಿಸಲಿದ್ದು, ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಿಗೆ ಸಂಪರ್ಕ ಜಾಲವನ್ನು ಮತ್ತಷ್ಟು ವಿಸ್ತರಿಸಲಿದೆ. ಪ್ರವಾಸಿಗರು ಹಾಗೂ ಅನಿವಾಸಿ ಕನ್ನಡಿಗರ ಬಹುದಿನಗಳ ಬೇಡಿಕೆಯಂತೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಕುವೈಟ್ಗೆ ನೇರ ವಿಮಾನ ಸೇವೆಯನ್ನು ಪುನರಾರಂಭಿಸಲಿದೆ. ಬುಧಾಬಿ, ಬಹ್ರೇನ್ ಮತ್ತು ದುಬೈ ನಗರಗಳಿಗೆ ಹಾರಾಟ ನಡೆಸುವ ವಿಮಾನಗಳ ಆವರ್ತನವನ್ನು ಹೆಚ್ಚಿಸಲಾಗಿದೆ. ಇದರಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಅಂತಾರಾಷ್ಟ್ರೀಯ ವಾರದ ನಿರ್ಗಮನಗಳ ಸಂಖ್ಯೆ 34ರಿಂದ 45ಕ್ಕೆ ಏರಿಕೆಯಾಗಲಿದೆ.
ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರಿ ಮಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಸಂಪರ್ಕ ಜಾಲವನ್ನು ಇನ್ನಷ್ಟು ಸುಲಭಗೊಳಿಸಿವೆ. ಪ್ರಸ್ತುತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ 4 ರಿಂದ 5 ನೇರ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಇದಲ್ಲದೆ, ಸಂಪರ್ಕಿತ ವಿಮಾನಗಳನ್ನು ಪರಿಗಣಿಸಿದರೆ ದಿನವೊಂದಕ್ಕೆ ಒಟ್ಟು 11 ರಿಂದ 15 ಕ್ಕೂ ಹೆಚ್ಚು ವಿಮಾನ ಯಾನ ಸೌಲಭ್ಯಗಳು ಪ್ರಯಾಣಿಕರಿಗೆ ಲಭ್ಯವಿವೆ. ಈ ಮಾರ್ಗದಲ್ಲಿ ಅತ್ಯಂತ ಹೆಚ್ಚಿನ ಸೇವೆ ಒದಗಿಸುತ್ತಿರುವ ಇಂಡಿಗೋ ದಿನವೊಂದಕ್ಕೆ 4 ನೇರ ವಿಮಾನಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೊರಡುವ ದಿನದ ಮೊದಲ ನೇರ ವಿಮಾನವು ಮುಂಜಾನೆ 07:15 ಕ್ಕೆ ನಿರ್ಗಮಿಸಲಿದೆ. ವಾರದಲ್ಲಿ 5 ದಿನಗಳ ಕಾಲ (ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ) ಪ್ರತಿನಿತ್ಯ 1 ನೇರ ವಿಮಾನದ ಸೇವೆಯನ್ನು ಒದಗಿಸುತ್ತಿದೆ. ನೇರ ವಿಮಾನಗಳ ಜೊತೆಗೆ ಇತರೆ ಪ್ರಮುಖ ವಿಮಾನಯಾನ ಸಂಸ್ಥೆಗಳು ವಿವಿಧ ನಗರಗಳ ಮೂಲಕ ಸಂಪರ್ಕ ಕಲ್ಪಿಸುವ 10ಕ್ಕೂ ಹೆಚ್ಚು ಕನೆಕ್ಟಿಂಗ್ ವಿಮಾನ ಸೇವೆಗಳನ್ನು ಒದಗಿಸುತ್ತಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 am, Mon, 19 October 26