ಅಂತಾರಾಷ್ಟ್ರೀಯ ಜಾಲಕ್ಕೆ NCB ಶಾಕ್: 8 ಕೋಟಿ ಮೌಲ್ಯದ ಡ್ರಗ್ಸ್ ಸೀಜ್
ಬೆಂಗಳೂರು ಮೂಲಕ ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಜಾಲವನ್ನು ಎನ್‌ಸಿಬಿ ಭೇದಿಸಿದೆ. 160 ಕೆ.ಜಿ. ಖಾಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, 2018ರಲ್ಲಿ ಖಾಟ್ ಎಲೆ ಮಾದಕ ವಸ್ತು ಪಟ್ಟಿಗೆ ಸೇರಿದ ನಂತರ ಇದು ಅತಿ ದೊಡ್ಡ ಸೀಜ್ ಆಗಿದೆ. ವಿದೇಶಿ ನಾಗರಿಕರನ್ನು ಒಳಗೊಂಡಿದ್ದ ಈ ಜಾಲವು ಅಂಚೆ ವ್ಯವಸ್ಥೆ ಮೂಲಕ ಹಲವು ದೇಶಗಳಿಗೆ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿತ್ತು.

ಬೆಂಗಳೂರು, ಡಿಸೆಂಬರ್ 31: ಬೆಂಗಳೂರು ಮೂಲಕ ಕಾರ್ಯನಿರ್ವಹಿಸುತ್ತಿದ್ದ ಖಾಟ್ ಎಲೆಗಳ ಅಕ್ರಮ ಸಾಗಣೆ ಅಂತಾರಾಷ್ಟ್ರೀಯ ಜಾಲವನ್ನು ಭೇದಿಸಿರೋದಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ತಿಳಿಸಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 160 ಕಿಲೋಗ್ರಾಂ ತೂಕದ ಖಾಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮೌಲ್ಯವು ಸುಮಾರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2018ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಖಾಟ್ ಅನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿಸಲಾಗಿತ್ತು. ಆ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಟ್ ಎಲೆಗಳನ್ನು ವಶಪಡಿಸಿಕೊಂಡಿರೋದು ರಾಜ್ಯದಲ್ಲಿ ಇದೇ ಮೊದಲು ಎಂದು ಎನ್‌ಸಿಬಿ ತಿಳಿಸಿದೆ.
ಈ ಅಕ್ರಮ ವಸ್ತುಗಳನ್ನು ಇಥಿಯೋಪಿಯಾದಿಂದ ಕೀನ್ಯಾ ಮೂಲಕ ಭಾರತಕ್ಕೆ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಸುಮಾರು 20ಕ್ಕೂ ಹೆಚ್ಚು ದೇಶಗಳಲ್ಲಿ ಈ ಜಾಲ ಸಕ್ರಿಯವಾಗಿರುವ ಮಾಹಿತಿ ದೊರೆತಿದೆ. ಈ ಜಾಲವು ಉತ್ತರ ಅಮೆರಿಕಾ, ಯುರೋಪ್, ಗಲ್ಫ್ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯಕ್ಕೆ ಸುಮಾರು 2,100 ಕಿಲೋಗ್ರಾಂ ತೂಕದ 550ಕ್ಕೂ ಹೆಚ್ಚು ಪಾರ್ಸೆಲ್‌ಗಳನ್ನು ಕಳುಹಿಸಿದೆ ಎಂದು ಎನ್‌ಸಿಬಿ ತಿಳಿಸಿದೆ.
ಇದನ್ನೂ ಓದಿ: ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ ಮಹಾ ಪೊಲೀಸ್; ಬೆಂಗಳೂರಿನ ಮೂವರು ಇನ್ಸ್ಪೆಕ್ಟರ್ಗಳ ತಲೆದಂಡ
ಮಾರ್ಗಮಧ್ಯದಲ್ಲಿರುವ ಪಾರ್ಸೆಲ್‌ಗಳ ಮಾಹಿತಿಯನ್ನು ಸಂಬಂಧಿತ ದೇಶಗಳ ಏಜೆನ್ಸಿಗಳಿಗೆ ನೀಡಲಾಗಿದೆ. ಭಾರತದಲ್ಲಿ ಹೆಚ್ಚು ಜನಪ್ರಿಯವಲ್ಲದ ಅಥವಾ ಕಡಿಮೆ ಬಳಕೆಯಲ್ಲಿರುವ ಮಾದಕ ವಸ್ತುವಾಗಿದ್ದರೂ ಖಾಟ್ ಎಲೆಗಳು ಮತ್ತು ಇತರೆ ಮನೋವೈಕಾರಿಕ ದ್ರವ್ಯಗಳ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಎನ್‌ಸಿಬಿ ಕಠಿಣ ಕ್ರಮ ಕೈಗೊಂಡಿದೆ. ಅಂತಾರಾಷ್ಟ್ರೀಯ ಅಂಚೆ ಮತ್ತು ಕೋರಿಯರ್ ವ್ಯವಸ್ಥೆ ಬಳಸಿಕೊಂಡು, ಚಹಾ ಮುಂತಾದ ಸಾಮಾನ್ಯ ವಾಣಿಜ್ಯ ವಸ್ತುಗಳಂತೆ ಇವನ್ನು ಬಿಂಬಿಸಿ ಸಾಗಾಟ ಮಾಡಲಾಗುತ್ತಿತ್ತು ಎಂಬ ಬಗ್ಗೆಯೂ ತಿಳಿದುಬಂದಿದೆ. ಈ ಅಕ್ರಮ ಜಾಲದಲ್ಲಿ ಮುಖ್ಯವಾಗಿ ವಿದೇಶಿ ನಾಗರಿಕರು ಭಾಗಿಯಾಗಿದ್ದು, ಸ್ಥಳೀಯ ಸಹಕಾರಿಗಳ ಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಹಲವರು ವಿದ್ಯಾರ್ಥಿ ಮತ್ತು ವೈದ್ಯಕೀಯ ವೀಸಾಗಳ ಹೆಸರಿನಲ್ಲಿ ಭಾರತದಲ್ಲಿ ವಾಸಿಸುತ್ತಿದ್ದರು ಎಂದು ಎನ್‌ಸಿಬಿ ಹೇಳಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:42 pm, Wed, 31 December 25




