ಕುಟುಂಬ ಉಳಿಸಿಕೊಳ್ಳಲು ನನ್ನ ಹೋರಾಟ, ನೀವು ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿ; ಮಾಧ್ಯಮಗಳಿಗೆ ರೂಪಾ ಹೀಗೆಂದಿದ್ದೇಕೆ?
ಆ ಮಹಿಳೆ ಐಎಎಸ್ ಅಧಿಕಾರಿಯಾಗಿದ್ದುಕೊಂಡು ಸಾಕಷ್ಟು ಮನೆ ಹಾಳು ಮಾಡಿದ್ದಾರೆ. ನಾನು ಮತ್ತು ನನ್ನ ಪತಿ ಇನ್ನೂ ಒಟ್ಟಿಗೆ ಇದ್ದೇವೆ. ಕುಟುಂಬವನ್ನು ಉಳಿಸಿಕೊಳ್ಳಲು ಇನ್ನೂ ಹೋರಾಡುತ್ತಿದ್ದೇವೆ. ಕುಟುಂಬಕ್ಕೆ ಕಂಟಕಪ್ರಾಯವಾದವರನ್ನು ದಯವಿಟ್ಟು ಪ್ರಶ್ನಿಸಿ - ಡಿ ರೂಪಾ
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಬಗ್ಗೆ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆ ವಿವಾದಿತ ಐಪಿಎಸ್ ಅಧಿಕಾರಿ ಡಿ. ರೂಪಾ(D Roopa) ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಟಿವಿ9ಗೆ ಡಿ ರೂಪಾ ಪ್ರತಿಕ್ರಿಯೆ ನೀಡಿದ್ದು ನಾನು ನನ್ನ ಕುಟುಂಬ ಉಳಿಸಿಕೊಳ್ಳಲು ಹೋರಾಡ್ತಿದ್ದೇನೆ ಅಷ್ಟೇ ಎಂದಿದ್ದಾರೆ. ಈ ಮಧ್ಯೆ, ಆಡಿಯೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ರೋಹಿಣಿ ಸಿಂಧೂರಿ ನಿರಾಕರಿಸಿದ್ದಾರೆ.
ಐಎಎಸ್ ಅಧಿಕಾರಿಯಾಗಿದ್ದುಕೊಂಡು ಅವರು ಸಾಕಷ್ಟು ಮನೆ ಹಾಳು ಮಾಡಿದ್ದಾರೆ. ನನ್ನ ಕುಟುಂಬ ಉಳಿಸಿಕೊಳ್ಳಲು ನಾನು ಹೋರಾಡ್ತಿದ್ದೇನೆ ಎಂದು ರೂಪಾ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಅನವಶ್ಯಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ರೋಹಿಣಿ ಸಿಂಧೂರಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಚರ್ಚೆ ಆಗಲಿ, ಕೌಟುಂಬಿಕ ಮತ್ತು ವೈಯಕ್ತಿಕ ವಿಚಾರ ಬಗ್ಗೆ ಚರ್ಚೆ ಬೇಡ. ಗಂಗರಾಜು ವಿರುದ್ಧವೂ ಕೂಡ ಹಲವು ಕ್ರಿಮಿನಲ್ ಕೇಸ್ಗಳಿವೆ. ವೈಯಕ್ತಿಕ ವಿಚಾರ ಚರ್ಚಿಸಿದ್ರೆ ಯಾವ IAS ದಂಪತಿ ಬೇರ್ಪಟ್ಟಿದ್ದಾರೆ. ತಮಿಳುನಾಡಿನ ಯಾವ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ್ರು, ಯಾರಿಂದ, ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಬಗ್ಗೆಯೂ ಚರ್ಚೆ ಆಗಲಿ. IAS ಅಧಿಕಾರಿಯಾಗಿದ್ದುಕೊಂಡು ಸಾಕಷ್ಟು ಮನೆ ಹಾಳು ಮಾಡಿದ್ದಾರೆ ಎಂದು ರೋಹಿಣಿ ವಿರುದ್ಧ ರೂಪಾ ಆರೋಪ ಮಾಡಿದ್ದಾರೆ.
ಗಂಗರಾಜುಗೆ ಡಿ.ರೂಪಾ ಸವಾಲು
ಆಡಿಯೋ ಬಿಡುಗಡೆ ಮಾಡಿದ ಗಂಗರಾಜುಗೆ ಡಿ. ರೂಪಾ ಸವಾಲು ಹಾಕಿದ್ದಾರೆ. ಭ್ರಷ್ಟಾಚಾರ ವಿರುದ್ಧ ಹೋರಾಟ ನಿಲ್ಲಿಸು ಎಂದು ನಾನು ಹೇಳಿಲ್ಲ. ನಾನು ಹಾಗೆ ಹೇಳಿದ್ದರೆ ಗಂಗರಾಜು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಡಿ ರೂಪಾ ಫೇಸ್ಬುಕ್ ಫೋಸ್ಟ್ನಲ್ಲೇನಿದೆ?
ಇನ್ನು ಆಡಿಯೋ ವೈರಲ್ ಬಗ್ಗೆ ಡಿ ರೂಪಾ ತಮ್ಮ ಫೇಸ್ಬುಕ್ ಫೋಸ್ಟ್ ಮುಖಾಂತರ ಪ್ರತಿಕ್ರಿಯಿಸಿದ್ದಾರೆ. ಅದರ ಸಾರಾಂಶ ಹೀಗಿದೆ. ಆತ್ಮೀಯ ಮಾಧ್ಯಮಗಳೇ, ದಯವಿಟ್ಟು ನಾನು ರೋಹಿಣಿ ಸಿಂಧೂರಿ ವಿರುದ್ಧ ಎತ್ತಿದ ಭ್ರಷ್ಟಾಚಾರದ ವಿಷಯದ ಬಗ್ಗೆ ಗಮನಹರಿಸಿ. ಜನಸಾಮಾನ್ಯರ ಮೇಲೆ ಹೆಚ್ಚು ಪರಿಣಾಮ ಬೀರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾರನ್ನೂ ನಾನು ತಡೆದಿಲ್ಲ. ಅದೇ ರೀತಿ, ಕರ್ನಾಟಕದಲ್ಲಿ ಒಬ್ಬ ಐಎಎಸ್ ಅಧಿಕಾರಿ ಮೃತಪಟ್ಟಿದ್ದಾರೆ, ಹಾಗೂ ತಮಿಳುನಾಡಿನಲ್ಲಿ ಒಬ್ಬ ಐಪಿಎಸ್ ಅಧಿಕಾರಿ ಮೃತಪಟ್ಟಿದ್ದಾರೆ, ಕರ್ನಾಟಕದಲ್ಲಿ ಒಬ್ಬ ಐಎಎಸ್ ಪತಿ-ಪತ್ನಿ ಈಗಾಗಲೇ ವಿಚ್ಛೇದನ ಪಡೆದಿದ್ದಾರೆ. ನಾನು ಮತ್ತು ನನ್ನ ಪತಿ ಇನ್ನೂ ಒಟ್ಟಿಗೆ ಇದ್ದೇವೆ. ನಾವು ಇನ್ನೂ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಕುಟುಂಬಕ್ಕೆ ಕಂಟಕಪ್ರಾಯವಾಗುವುವರನ್ನು ದಯವಿಟ್ಟು ಪ್ರಶ್ನಿಸಿ. ಇಲ್ಲದಿದ್ದರೆ ಇನ್ನೂ ಹಲವು ಕುಟುಂಬಗಳು ನಾಶವಾಗುತ್ತವೆ. ನಾನು ಧೈರ್ಯವಂತ ಮಹಿಳೆ, ನಾನು ಹೋರಾಡುತ್ತೇನೆ. ಎಲ್ಲಾ ಮಹಿಳೆಯರಿಗೂ ಹೋರಾಟ ಮಾಡುವ ಶಕ್ತಿ ಇರುವುದಿಲ್ಲ. ದಯವಿಟ್ಟು ಅಂತಹ ಮಹಿಳೆಯರಿಗೆ ಧ್ವನಿಯಾಗಿರಿ. ಭಾರತವು ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ. ಅದನ್ನು ಮುಂದುವರಿಸೋಣ. ಧನ್ಯವಾದಗಳು ಎಂದು ರೂಪಾ ಪೋಸ್ಟ್ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:02 pm, Wed, 22 February 23