ಸಿದ್ದರಾಮಯ್ಯ-ದೇವೇಗೌಡರು ನಮ್ಮ ಆಸ್ತಿ, ಅವರು ಚೆನ್ನಾಗಿರಲಿ ಎಂಬುದೇ ನಮ್ಮ‌ ಭಾವನೆಯಾಗಿದೆ: ಸಚಿವ ಈಶ್ವರಪ್ಪ ಕಾಳಜಿ

| Updated By: ಸಾಧು ಶ್ರೀನಾಥ್​

Updated on: Jan 06, 2022 | 12:53 PM

ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಮಾತನಾಡಿರುವ ಸಚಿವ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರು ನಮ್ಮ ಆಸ್ತಿ. ಅವರು ಚೆನ್ನಾಗಿರಲಿ ಎಂಬುದು ನಮ್ಮ‌ ಭಾವನೆಯಾಗಿದೆ ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ-ದೇವೇಗೌಡರು ನಮ್ಮ ಆಸ್ತಿ, ಅವರು ಚೆನ್ನಾಗಿರಲಿ ಎಂಬುದೇ ನಮ್ಮ‌ ಭಾವನೆಯಾಗಿದೆ: ಸಚಿವ ಈಶ್ವರಪ್ಪ ಕಾಳಜಿ
ಸಚಿವ ಕೆ.ಎಸ್.ಈಶ್ವರಪ್ಪ
Follow us on

ಬೆಂಗಳೂರು: ಮೇಕೆದಾಟು ಯೋಜನೆ ಜಾರಿ ಆಗ್ರಹಿಸಿ ಪಾದಯಾತ್ರೆ ಮಾಡಿಯೇ ಸಿದ್ಧ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರು ನಮ್ಮ ಆಸ್ತಿ. ಅವರು ಚೆನ್ನಾಗಿರಲಿ ಎಂಬುದು ನಮ್ಮ‌ ಭಾವನೆಯಾಗಿದೆ ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ. ಮುಂದುವರಿದು ಮಾತನಾಡಿರುವ ಸಚಿವ ಈಶ್ವರಪ್ಪ ಅದಕ್ಕೇ.. ಈಗ ಪಾದಯಾತ್ರೆ, ಧರಣಿ ಮಾಡಬೇಡಿ ಎಂದಿದ್ದೇವೆ. ಮಾಡಿಯೇ ಮಾಡುತ್ತೇವೆ ಅಂದರೆ ಅವರಿಗೆ ಸೇರಿದ್ದು. ಮುಂದೆ ಅದರ ಬಗ್ಗೆ ನೋಡೋಣ ಎಂದು ಸಚಿವ ಈಶ್ವರಪ್ಪ ಕ್ಲುಪ್ತವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬೇಕಾದರೆ ನಿಯಮ ಮಾಡಿ.. ನಮ್ಮ ಶಿವಮೊಗ್ಗದಲ್ಲಿ ಸುಡುಗಾಡು ಕೊರೊನಾ ಇಲ್ಲ- ಈಶ್ವರಪ್ಪ
ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕು ಕಟ್ಟಿಹಾಕಲು ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ಜಾರಗೆ ತಂದಿರುವ ಕರ್ಫ್ಯೂ, ವೀಕೆಂಡ್​ ಕರ್ಫ್ಯೂಗಳ ಬಗ್ಗೆಯೂ ಸಚಿವ ಈಶ್ವರಪ್ಪ ಇಂದೂ ಅದರ ಬಗ್ಗೆ ಅಪಸ್ವರ ಎತ್ತಿದ್ದಾರೆ. ರಾಜ್ಯದಲ್ಲಿ ಒಂದೇ ರೂಲ್ ಇದೆ ಎಂದು ಯಾರು ಹೇಳಿದ್ದು? ಯಾವ ಕರ್ಫ್ಯೂ ಇಲ್ಲ, ಏನೂ ಇಲ್ಲ ಎಂದಿದ್ದಾರೆ. ನಮ್ಮ ಶಿವಮೊಗ್ಗದಲ್ಲಿ ಯಾವ ಸುಡುಗಾಡೂ ಇಲ್ಲ.

ಜಿಲ್ಲೆಗಳಿಗೆ ಇನ್ನೂ‌ ಯಾವುದೇ ರೀತಿಯಾಗಿ ಆದೇಶ ಬಂದಿಲ್ಲ. ನನಗೆ ಬೇಜಾರಿಲ್ಲ, ಜನರ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಬೆಂಗಳೂರಿನಲ್ಲಿ ಬೇಕಾದರೆ ನಿಯಮ ಮಾಡೋದು ಮಾಡಿ. ಬೇರೆ ಜಿಲ್ಲೆಗಳಲ್ಲಿ ಕಠಿಣ ನಿಯಮ ಮಾಡುವುದು ಬೇಡ ಎಂದು ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ಸಿಎಂ ಜೊತೆ ಇದನ್ನೇ ಮಾತನಾಡುವೆ ಎಂದೂ ಹೇಳಿದ್ದಾರೆ. ಅಂದಹಾಗೆ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟ ಸಭೆ ಇದೀಗತಾನೆ ಆರಂಭವಾಗಿದೆ.

ತಜ್ಞರ ಸಲಹೆಯಂತೆ ಮೊನ್ನೆ ನಿರ್ಧಾರವಾಗಿತ್ತು. ಇಂದು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ. ಯಾವ ಜಿಲ್ಲೆಗಳಲ್ಲಿ ಕಡಿಮೆ ಇದೆ ಅಲ್ಲಿ ಬೇಡ ಎಂದು ಹೇಳುತ್ತೇವೆ. ಎಲ್ಲಿ‌ ಸಮಸ್ಯೆ ಇದೆಯೋ ಅಲ್ಲಿ ಮಾಡುತ್ತೇವೆ. ಎಲ್ಲಿ ಸಮಸ್ಯೆ ಇಲ್ಲವೋ ಅಲ್ಲಿ ತೆರವು ಮಾಡೋಣ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಕೊವಿಡ್ ನಿಯಮ ಜಾರಿಗೆ ಮತ್ತಷ್ಟು ಸಚಿವರಿಂದ ಆಕ್ಷೇಪ, ವಿರೋಧ:
ಇನ್ನು ರಾಜ್ಯಾದ್ಯಂತ ಕೊವಿಡ್ ನಿಯಮ ಜಾರಿ ಮಾಡಿದ್ದಕ್ಕೆ ಕೆ.ಎಸ್.ಈಶ್ವರಪ್ಪ ಬಳಿಕ ಇದೀಗ ಮತ್ತಷ್ಟು ಸಚಿವರಿಂದ ಆಕ್ಷೇಪ, ವಿರೋಧ ವ್ಯಕ್ತವಾಗಿದೆ.

ಜಿಲ್ಲೆಗಳಿಗೆ ಪ್ರತ್ಯೇಕ ರೂಲ್ಸ್ ಮಾಡೋಣ ಬಿಡಿ ಅಂದಿರುವ ಸಚಿವ ಅಶೋಕ್:
ರಾಜ್ಯಾದ್ಯಾಂತ ಇರುವ ಕೋವಿಡ್ ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿರುವ ಸಿಎಂ ಬೊಮ್ಮಾಯಿ ಮಂತ್ರಿ ಮಂಡಳದ ಅನೇಕ ಸಚಿವರು ಕೋವಿಡ್ ನಿಯಮಗಳಿಗೆ ಅಪಸ್ವರ ಎತ್ತಿದ್ದಾರೆ. ಬೆಂಗಳೂರಿಗೆ ಮಾತ್ರ ಸೀಮಿತವಾದ ಕೋವಿಡ್ ನಿಯಮ ರೂಪಿಸುವಂತೆ ಆಗ್ರಹಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಉಪಾಧ್ಯಕ್ಷ ಸಚಿವ ಆರ್ ಅಶೋಕ್ ಅವರ ಮೇಲೂ ಒತ್ತಡ ಹೇರಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಸಚಿವ ಅಶೋಕ್ ಜಿಲ್ಲೆಗಳಿಗೆ ಪ್ರತ್ಯೇಕ ರೂಲ್ಸ್ ಮಾಡೋಣ ಬಿಡಿ ಅಂದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ:

Paryaya Mahotsava: ಕೊವಿಡ್ ಕರಿನೆರಳಲ್ಲೇ ಮಾರ್ಗಸೂಚಿ ಅನುಸರಿಸಿ ಪರ್ಯಾಯ ಮಹೋತ್ಸವ ನಡೆಸುವ ಸವಾಲು

Published On - 12:18 pm, Thu, 6 January 22