ಕುಂಕುಮ, ಶಿಲುಬೆಗೆ ಕೋರ್ಟ್ ಆಕ್ಷೇಪವಿಲ್ಲ ಎಂದ ಸಚಿವ ಅಶೋಕ್, ಹೈಕೋರ್ಟ್ ತೀರ್ಪಿಗೆ ಮೇಲ್ಮನವಿ ಇಲ್ಲ ಎಂದ ರಘುಪತಿ ಭಟ್
ತಿಲಕ, ಕುಂಕುಮ, ಶಿಲುಬೆಗಳ ಬಗ್ಗೆ ಹೈಕೋರ್ಟ್ ಏನೂ ಹೇಳಿಲ್ಲ. ಹೈಕೋರ್ಟ್ ಮಧ್ಯಂತರ ಆದೇಶವು ಹಿಜಾಬ್ ಮತ್ತು ಕೇಸರಿ ಶಾಲಿಗೆ ಮಾತ್ರವೇ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಕುಂಕುಮ ಇಟ್ಟುಕೊಂಡು ಬಂದಿದ್ದ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆಯೊಂದಕ್ಕೆ ಪ್ರವೇಶ ನೀಡದ ವಿಚಾರಕ್ಕೆ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ತಿಲಕ, ಕುಂಕುಮ, ಶಿಲುಬೆಗಳ ಬಗ್ಗೆ ಹೈಕೋರ್ಟ್ ಏನೂ ಹೇಳಿಲ್ಲ. ಹೈಕೋರ್ಟ್ ಮಧ್ಯಂತರ ಆದೇಶವು ಹಿಜಾಬ್ ಮತ್ತು ಕೇಸರಿ ಶಾಲಿಗೆ ಮಾತ್ರವೇ ಸಂಬಂಧಿಸಿದ್ದಾಗಿದೆ. ವಿಷಯವನ್ನು ಡೈವರ್ಟ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈ ವಿಷಯದ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಸೌಹಾರ್ದದ ವಾತಾವರಣ ಕೆಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ವಿಜಯಪುರದ ಇಂಡಿ ಕಾಲೇಜಿನಲ್ಲಿ ಕುಂಕುಮಧಾರಿ ವಿದ್ಯಾರ್ಥಿಗೆ ಪ್ರವೇಶ ನಿರ್ಬಂಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಸದ್ಯಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಈ ಆದೇಶ ಹಿಜಾಬ್, ಕೇಸರಿ ಶಾಲೆಗೆ ಸಂಬಂಧಿಸಿದ್ದಾಗಿದೆ. ಕುಂಕುಮ, ತಿಲಕ, ನಾಮ, ಶಿಲುಬೆ ಧಾರಣೆ ವಿಚಾರದಲ್ಲಿ ಸರ್ಕಾರವು ಯಾವುದೇ ಸೂಚನೆ, ಆದೇಶ ಮಾಡಿಲ್ಲ. ಸೌಹಾರ್ದದ ವಾತಾವರಣ ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಹಿಜಾಬ್ಗೆ ಸಂಬಂಧಿಸಿದಂತೆ ನಡೆದಿರುವ ಬೆಳವಣಿಗೆಗಳ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿರುವ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಪಾಕಿಸ್ತಾನ, ಇರಾಕ್ ಮತ್ತು ಇರಾನ್‌ನಲ್ಲಿ ನೋಡಿದ್ದೇವೆ. ಅಲ್ಲಿ ಸಣ್ಣಸಣ್ಣ ಮಕ್ಕಳ ಕೈಗೂ ಬಂದೂಕು ಕೊಡುತ್ತಾರೆ. ಶಾಲೆಯಲ್ಲಿ ಧರ್ಮ ಬೇಡ, ಮನೆ, ಹೊರಗೆ ಧರ್ಮ ಆಚರಣೆಗೆ ಒಂದು ಮಿತಿ ಇರಬೇಕು. ವಿದ್ಯೆ ಮುಖ್ಯ, ದೇಶ ಮುಖ್ಯವೇ ಹೊರತು ಧರ್ಮ ಮುಖ್ಯ ಅಲ್ಲ ಎಂದರು.
ವಿಧಾನಸಭೆಯಲ್ಲ ಕಾಂಗ್ರೆಸ್ ಅಹೋರಾತ್ರಿ ಧರಣಿ ಕುರಿತು ಪ್ರತಿಕ್ರಿಯಿಸಿದ ಅವರು, ಎರಡು ಬಾರಿ ಸಂಧಾನ ಮಾಡಿದರೂ ಅವರು ನಮ್ಮ ಮಾತು ಕೇಳಲಿಲ್ಲ. ರಾಜ್ಯದ ಜನತೆ ಕಟ್ಟುವ ತೆರಿಗೆಯಿಂದ ನಾವು ಸಂಬಳ ಪಡೆಯುತ್ತಿದ್ದೇವೆ. ಜನರ ಕಷ್ಟದ ಬಗ್ಗೆ ನಾವು ಧ್ವನಿ ಎತ್ತಬೇಕು. ಪಕ್ಷದ ವಿಚಾರದ ಬಗ್ಗೆ ಮಾತನಾಡಲು ವಿಧಾನಸೌಧ ಕಟ್ಟಿಲ್ಲ. ಈ ದಬ್ಬಾಳಿಕೆ, ದೌರ್ಜನ್ಯ ಮತ್ತು ಗೂಂಡಾಗಿರಿ ಪ್ರವೃತ್ತಿಯನ್ನು ಕಾಂಗ್ರೆಸ್ ಬಿಡಬೇಕು. ಮೂವತ್ತು, ನಲವತ್ತು ಜನರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮಗಳ ಉಲ್ಲೇಖವಿದೆ. ಪ್ರತಿಪಕ್ಷಗಳು ಸೋಮವಾರದಿಂದಲಾದರೂ ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿದರು.
ಪದವಿಗೆ ಸಮವಸ್ತ್ರ ಕಡ್ಡಾಯ ಇಲ್ಲ: ಸಚಿವ ಅಶ್ವತ್ಥ ನಾರಾಯಣ
ಚಾಮರಾಜನಗರ: ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಇಲ್ಲ. ಆದರೆ ಹಿಜಾಬ್ ಧರಿಸಿ ಶಾಲೆಗೆ ಬರಲು ಕಾನೂನಿನಲ್ಲಿ ಅವಕಾಶವಿಲ್ಲ. ಕಾನೂನು ಗೌರವಿಸುವುದನ್ನು ಎಲ್ಲರೂ ಕಲಿತುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದರು. ನ್ಯಾಯಾಲಯದ ಸೂಚನೆಯ ನಂತರವು ಹಿಜಾಬ್ ಧರಿಸಿ ಬರುವುದು ತಪ್ಪಾಗುತ್ತದೆ. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಬರಲು ಬಿಡುವುದಿಲ್ಲ. ಶಾಲಾ ಕಾಲೇಜುಗಳಿಗೆ ಹೊರಗಿನ ಶಕ್ತಿಗಳು ಪ್ರವೇಶ ಮಾಡಬಾರದು. ಹೊರಗಿನವರು ಬಾರದಂತೆ ನೋಡಿಕೊಳ್ಳುವುದು ಪ್ರಾಂಶುಪಾಲರು, ಅಧ್ಯಾಪಕರ ಜವಾಬ್ದಾರಿ. ಯಾರೂ ಯಾರನ್ನು ಟೀಕೆ ಮಾಡುವುದು, ಆರೋಪ ಮಾಡುವುದು, ಗೊಂದಲ ನಿರ್ಮಾಣ ಮಾಡುವುದು ಬೇಡ ಎಂದು ವಿನಂತಿಸಿದರು. ಶನಿವಾರದಿಂದ (ಫೆ 19) ಪದವಿ ಕಾಲೇಜುಗಳು ಮತ್ತೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.
ಹೈಕೋರ್ಟ್ ತೀರ್ಪಿನ ಮೇಲೆ ಮೇಲ್ಮನವಿ ಇಲ್ಲ: ರಘುಪತಿ ಭಟ್
ಉಡುಪಿ: ಹಿಜಾಬ್ ಕುರಿತು ಹೈಕೋರ್ಟ್ ಇನ್ನೊಂದು ವಾರದಲ್ಲಿ ತೀರ್ಪು ಕೊಡಬಹುದು. ನಾವು ಹೈಕೋರ್ಟ್ ತೀರ್ಪನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಿಲ್ಲ. ಆದರೆ ಹಿಜಾಬ್ ಪರವಾಗಿ ಅರ್ಜಿ ಸಲ್ಲಿಸಿರುವವರು ಸುಪ್ರೀಂಕೋರ್ಟ್ಗೆ ಮೊರೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಿಜಾಬ್ ಪರವಾಗಿ ಹೈಕೋರ್ಟ್ ತೀರ್ಪು ಬಂದರೂ ನಾವು ಪಾಲಿಸುತ್ತೇವೆ. ಆದರೆ ಹೈಕೋರ್ಟ್ನ ಮೂವರು ಜಡ್ಜ್ಗಳು ಸಮಂಜಸ ತೀರ್ಪು ನೀಡಲಿದ್ದಾರೆ ಎಂದು ಉಡುಪಿಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಕೇಳಿ ಬರುತ್ತಿರುವ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಮೋದ್ ಅವರು ಪಕ್ಷಕ್ಕೆ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ವರಿಷ್ಠರು ನಮ್ಮನ್ನು ಕೇಳಿ ಪಕ್ಷ ಸೇರ್ಪಡೆಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇನೆ. ಆಗ ಚುನಾವಣಾ ಸಂದರ್ಭದಲ್ಲಿ ವಿರೋಧ ಮಾಡಿದ್ದು ನಿಜ. ನಾನೂ ಸಹ ಟಿಕೆಟ್ ಆಕಾಂಕ್ಷಿ ಆಗಿದ್ದ ಕಾರಣ ಸ್ವಾಭಾವಿಕವಾಗಿ ವಿರೋಧ ಇತ್ತು. ಈ ವಿಚಾರವನ್ನು ಪ್ರಮೋದ್ ಮಧ್ವರಾಜ್ ಸಿಕ್ಕಾಗ ವಿಚಾರಿಸುತ್ತೇನೆ. ಪ್ರಮೋದ್ ಅವರಿಗೆ ಸ್ವಾಗತ. ಅವರು ಬಂದರೆ ಪಕ್ಷವು ಗಟ್ಟಿಯಾಗುತ್ತದೆ ಎಂದರು.
ಇದನ್ನೂ ಓದಿ: ಬುರ್ಖಾನೂ ತೆಗೆಸಬಾರದು, ಹಿಜಾಬ್ ಕೂಡ ತೆಗೆಸಬಾರದು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಫರ್ಮಾನು
ಇದನ್ನೂ ಓದಿ: Karnataka Hijab Row: ಹಿಜಾಬ್ ಪ್ರಕರಣ ವಿಚಾರಣೆ ಮುಂದೂಡಿಕೆ; ನಾಳೆ ರಾಜ್ಯ ಸರ್ಕಾರದ ಪರ ವಾದಮಂಡನೆ
Published On - 5:07 pm, Fri, 18 February 22