ಗೃಹಜ್ಯೋತಿ: ಬೆಸ್ಕಾಂನವರು ದಾಖಲೆ ಪರಿಶೀಲನೆಗೆ ಬಂದಾಗ ಮನೆಯಲ್ಲಿ ಇರಲಿಲ್ಲವೇ? ನೀವು ಮಾಡಬೇಕಾದ್ದೇನೆಂಬ ಮಾಹಿತಿ ಇಲ್ಲಿದೆ

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಗಮನಕ್ಕೆ: ಬೆಸ್ಕಾಂ ಸಿಬ್ಬಂದಿ ದಾಖಲೆ ಪರಿಶೀಲನೆಗೆ ಮನೆಗೆ ಬಂದಾಗ ನೀವು ಇರಲಿಲ್ಲವೇ? ಹಾಗಿದ್ದರೆ ಅಕ್ಟೋಬರ್ 31ರೊಳಗೆ ಸಮೀಪದ ಬೆಸ್ಕಾಂ ಉಪವಿಭಾಗೀಯ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆ ಸಲ್ಲಿಸಬಹುದು. ಪರಿಶೀಲನೆ ಬಾಕಿ ಇರುವ ಅರ್ಹ ಗ್ರಾಹಕರು ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಗೃಹಜ್ಯೋತಿ: ಬೆಸ್ಕಾಂನವರು ದಾಖಲೆ ಪರಿಶೀಲನೆಗೆ ಬಂದಾಗ ಮನೆಯಲ್ಲಿ ಇರಲಿಲ್ಲವೇ? ನೀವು ಮಾಡಬೇಕಾದ್ದೇನೆಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: BESCOM

Updated on: Oct 21, 2026 | 9:29 AM

ಬೆಂಗಳೂರು, ಅಕ್ಟೋಬರ್ 21: ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಿಗೆ ಬೆಸ್ಕಾಂ ಮಹತ್ವದ ಮಾಹಿತಿ ನೀಡಿದೆ. ಮನೆಮನೆಗೆ ತೆರಳಿ ನಡೆಸುತ್ತಿರುವ ದಾಖಲೆ ಪರಿಶೀಲನೆ ವೇಳೆ ಬೆಸ್ಕಾಂ ಸಿಬ್ಬಂದಿ ಮನೆಗೆ ಬಂದಾಗ ನೀವು ಮನೆಯಲ್ಲಿ ಇರಲಿಲ್ಲವೇ? ಹಾಗಿದ್ದರೆ ಆತಂಕಪಡುವ ಅಗತ್ಯವಿಲ್ಲ. ದಾಖಲೆ ಪರಿಶೀಲನೆಗೆ ಅಕ್ಟೋಬರ್ 31ರವರೆಗೆ ಅವಕಾಶ ನೀಡಲಾಗಿದ್ದು, ನಿಗದಿತ ಗಡುವಿನೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆ ಪರಿಶೀಲನೆಗಾಗಿ ಬೆಸ್ಕಾಂ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಕೆಲವು ಮನೆಗಳಿಗೆ ಬೀಗ ಹಾಕಿರುವುದು ಅಥವಾ ಫಲಾನುಭವಿಗಳು ಲಭ್ಯವಿಲ್ಲದ ಕಾರಣ ಪರಿಶೀಲನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇಂತಹ ಗ್ರಾಹಕರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಬೆಸ್ಕಾಂ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಸಂದೇಶದ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ.

ಬೆಸ್ಕಾಂ ಸಿಬ್ಬಂದಿ ಬಂದಾಗ ಮನೆಯಲ್ಲಿ ಇರದಿದ್ದರೆ ಏನು ಮಾಡಬೇಕು?

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನಾ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದವರು ಅಕ್ಟೋಬರ್ 31ರೊಳಗೆ ತಮ್ಮ ಸಮೀಪದ ಬೆಸ್ಕಾಂ ಉಪವಿಭಾಗೀಯ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕು. ಅಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.

ಬೆಸ್ಕಾಂ ಕಚೇರಿಗೆ ತೆರಳುವಾಗ ಯಾವೆಲ್ಲ ದಾಖಲೆಗಳನ್ನು ಕೊಂಡೊಯ್ಯಬೇಕು?

ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲನೆಗಾಗಿ ಕೇಳಬಹುದು. ಹೀಗಾಗಿ, ಕಚೇರಿಗೆ ತೆರಳುವ ಮುನ್ನ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಸೂಕ್ತ. ಮನೆಗೆ ಬೀಗ ಹಾಕಿರುವುದು ಅಥವಾ ಸಮೀಕ್ಷೆಯ ವೇಳೆ ಲಭ್ಯವಿರದ ಕಾರಣಕ್ಕೆ ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಹೆಚ್ಚುವರಿ ಅವಕಾಶ ನೀಡಲಾಗಿದೆ.

ಬೆಸ್ಕಾಂ ಎಕ್ಸ್ ಸಂದೇಶ


ಅಕ್ಟೋಬರ್ 31 ಕೊನೆಯ ಗಡುವು

ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಗ್ರಾಹಕರ ದಾಖಲೆ ಪರಿಶೀಲನೆ ನಡೆಯುತ್ತಿದೆ. ನಿಗದಿತ ಗಡುವಿನೊಳಗೆ ದಾಖಲೆ ಸಲ್ಲಿಸಿ ಪರಿಶೀಲನೆ ಪೂರ್ಣಗೊಳಿಸದವರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಆದ್ದರಿಂದ, ಪರಿಶೀಲನೆ ಬಾಕಿ ಇರುವ ಫಲಾನುಭವಿಗಳು ಕೊನೆಯ ದಿನದವರೆಗೆ ಕಾಯದೆ ಸಮೀಪದ ಬೆಸ್ಕಾಂ ಉಪವಿಭಾಗೀಯ ಕಚೇರಿಗೆ ಭೇಟಿ ನೀಡಿ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸುವುದು ಉತ್ತಮ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆಯಿಂದ ಹೊರನಡೆದ 1.3 ಲಕ್ಷ ಗ್ರಾಹಕರು!

ರಾಜ್ಯದಲ್ಲಿ ಸುಮಾರು 1.3 ಲಕ್ಷ ಗ್ರಾಹಕರು ವೈಯಕ್ತಿಕ ದಾಖಲೆಗಳನ್ನು ನೀಡಲು ನಿರಾಕರಿಸಿ ಗೃಹಜ್ಯೋತಿ ಯೋಜನೆಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಮಾತ್ರ ಸುಮಾರು 1.2 ಲಕ್ಷ ಗ್ರಾಹಕರು ಯೋಜನೆಯಿಂದ ಹೊರನಡೆಯಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 am, Wed, 21 October 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us