ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಅನ್ನೋ ವಿಚಾರ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ರೊಚ್ಚಿಗೆದ್ದಿದೆ. ಇದು ತವ್ರ ಸ್ವರೂಪ ಪಡೆಯುವ ಲಕ್ಷಣಗಳು ಜೋರಾಗಿವೆ. ಪ್ರಸ್ತುತ ವಿಧಾನಮಂಡಲ ಅಧಿವೇಶನದಲ್ಲಿ ಇದು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಸದನದ ಒಳಗೆ ರಾಷ್ಟ್ರಧ್ವಜದ ಗಲಾಟೆ ಜೋರಾದ್ರೆ.. ಹೊರಗೂ ಕೂಡ ಮಹಾ ಕಾಳಗ ನಡೆದಿದೆ. ಸಚಿವ ಈಶ್ವರಪ್ಪ ವಿರುದ್ಧ ಸಿಡಿದೆದ್ದಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ನೇತೃತ್ವದ ಯುವ ಕಾಂಗ್ರೆಸ್ ಪಡೆ, ನಿನ್ನೆ ಅವರ ನಿವಾಸಕ್ಕೆ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿತು.
ಸಚಿವ ಈಶ್ವರಪ್ಪ ವಿರುದ್ಧ ಸಿಡಿದೆದ್ದ ಯುವ ಕಾಂಗ್ರೆಸ್, ರಾಜೀನಾಮೆಗೆ ಆಗ್ರಹಿಸಿ ಯುವ ‘ಕೈ’ ಕಾರ್ಯಕರ್ತರ ಪ್ರತಿಭಟನೆ:
ಸಚಿವ ಕೆ.ಎಸ್ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಅನ್ನೋ ವಿಚಾರ ಯುವ ಕಾಂಗ್ರೆಸ್ ಪಡೆಯನ್ನು ಸಹ ಕೆರಳಿಸಿದೆ. ಅಷ್ಟೇ ಅಲ್ಲ ಸದನದ ಒಳಗೆ ಈಶ್ವರಪ್ಪ ಹಾಗೂ ಡಿಕೆಶಿ ನಡುವೆ ನಡೆದ ಟಾಕ್ ಫೈಟ್ ಕೂಡ ಕಾಂಗ್ರೆಸ್ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ. ಹಾಗಾಗಿ ನಿನ್ನೆ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ರ್ರು. ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗುತ್ತಾ, ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ರು. ರಾಜೀನಾಮೆ ನೀಡುವಂತೆ ಆಗ್ರಹಿಸಿದ್ರು. ಆದ್ರೆ ಸ್ಥಳದಲ್ಲೇ ಇದ್ದ ಪೊಲೀಸರು ನಲಪಾಡ್ ಸಮೇತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ವಶಕ್ಕೆ ಪಡೆದು ಹೈಗ್ರೌಂಡ್ಸ್ ಠಾಣೆಗೆ ಕರೆತಂದ್ರು.
ಸಚಿವ ಈಶ್ವರಪ್ಪ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು:
ಯುವ ಕಾಂಗ್ರೆಸ್ ಕಾರ್ಯಕರ್ತರನ್ನ ಠಾಣೆಗೆ ಕರೆತರುತ್ತಿದ್ದಂತೆ, ಸಚಿವ ಈಶ್ವರಪ್ಪ ವಿರುದ್ಧ ದೂರು ನೀಡಿದ್ರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಸಚಿವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಅಂತಾ ದೂರಿನಲ್ಲಿ ಉಲ್ಲೇಖಿಸಿದ್ರು. ಅಷ್ಟೇ ಅಲ್ಲ ಕೇಸರಿ ಧ್ವಜದ ಮೇಲೆ ಪ್ರೀತಿ ಇದ್ದರೇ ಅವರ ಮನೆಯಲ್ಲಿ ಪೂಜೆ ಮಾಡಲಿ, ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡೋದು ಸರಿಯಲ್ಲ. ಹಾಗಾಗಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡೋವರೆಗೆ ನಮ್ಮ ಹೋರಾಟ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ರು.
ಈಶ್ವರಪ್ಪ ವಿರುದ್ಧ ದೂರು ದಾಖಲಿಸಿಕೊಳ್ಳದ ಪೊಲೀಸರು, ಇಂದು ಡಿಸಿಪಿಗೆ ದೂರು!
ಇಷ್ಟೆಲ್ಲಾ ಪ್ರತಿಭಟನೆ.. ಆಕ್ರೋಶ ವ್ಯಕ್ತವಾದ್ರೂ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಸಚಿವ ಈಶ್ವರಪ್ಪ ವಿರುದ್ಧ ದೂರು ದಾಖಲಿಸಿಕೊಳ್ಳಲಿಲ್ಲ. ಇದರಿಂದ ಗರಂ ಆದ ಯುವಕಾಂಗ್ರೆಸ್ ಕಾರ್ಯಕರ್ತರು ಇಂದು ಡಿಸಿಪಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ ಈಶ್ವರಪ್ಪ ನೀಡಿರುವ ಹೇಳಿಕೆ ವಿಚಾರವಾಗಿ ಯುವ ಕಾಂಗ್ರೆಸ್ ಪಡೆ ಕಾನೂನು ಮೊರೆ ಹೋಗಲು ನಿರ್ಧರಿಸಿದೆ.
ಮತ್ತೆ ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ
ಇನ್ನು ಕಾಂಗ್ರೆಸ್ ಕೆಲ ಸದಸ್ಯರು ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ನಾಯಕರಲ್ಲೇ ಭಿನ್ನಾಭಿಪ್ರಾಯ ಮೂಡಿಸಿದೆ. ಸದನದ ಒಳಗೆ ರಾಷ್ಟ್ರಧ್ವಜ ಹಿಡಿದು ತೆರಳುವುದು ಬೇಡ ಎಂದಿದ್ರೂ, ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ರು. ಈ ವಿಚಾರಕ್ಕೆ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವೆಷ್ಟೇ ಹೇಳಿದ್ರೂ ಹಿರಿಯರ ಮಾತನ್ನು ಕೇಳುತ್ತಿಲ್ಲ ಅಂತಾ ಬೇಸರವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ರಾಷ್ಟ್ರಧ್ವಜ ವಿಚಾರವನ್ನು ಕಾಂಗ್ರೆಸ್ ನಾಯಕರು ಇಲ್ಲಿಗೆ ಬಿಟ್ಟುಕೊಡಲು ಸಿದ್ಧರಿಲ್ಲ. ಇಂದು ಕೂಡ ಸದನದಲ್ಲಿ ಇದೇ ವಿಚಾರವನ್ನು ಪ್ರಸ್ತಾಪಿಸಲು ಕಾಂಗ್ರೆಸ್ ಮುಂದಾಗಿದೆ. ಇನ್ನೊಂದೆಡೆ ಯುವ ಕಾಂಗ್ರೆಸ್ ಕೂಡ ಇಂದು ಪ್ರತಿಭಟನೆಯ ಹಾದಿ ಹಿಡಿಯುವ ಸಾಧ್ಯತೆಯಿದ್ದು, ಮತ್ತೆ ಈಶ್ವರಪ್ಪ ವಿರುದ್ಧ ಕೈ ಪಡೆ ಮುಗಿಬೀಳಲಿದೆ.
Also Read:
Horoscope Today- ದಿನ ಭವಿಷ್ಯ; ಈ ರಾಶಿಯ ವಿವಾಹಿತರು ತಮ್ಮ ಜೀವನ ಸಂಗಾತಿಯಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತಾರೆ
Published On - 7:41 am, Thu, 17 February 22