ಆಮ್ ಆದ್ಮಿ ಪಕ್ಷದ ಯುವ ಘಟಕ ಉಪಾಧ್ಯಕ್ಷನ ಹತ್ಯೆಗೆ ಯತ್ನ, ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲು
ಆಮ್ ಆದ್ಮಿ ಪಕ್ಷದ ಯುವ ಘಟಕ ಉಪಾಧ್ಯಕ್ಷ ಗಿರೀಶ್ ಕುಮಾರ್ ತಮ್ಮ ಮೇಲೆ ಹತ್ಯೆಗೆ ಯತ್ನ ನಡೆದಿದೆ ಎಂದು ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಲ ಕಿಡಿಗೇಡಿಗಳ ಗುಂಪು ತನ್ನ ಮೇಲೆ ಹಲ್ಲೆ ನಡೆಸಲು ಮನೆ ಮುಂದೆ ಕಾಯುತ್ತಿದ್ದರು. ಹಾಗೂ ನನ್ನನ್ನು ಫಾಲೋ ಮಾಡಿ ಮನೆ ಬಳಿ ಬಂದಿದ್ದರು ಎಂದು ಗಿರೀಶ್ ಆತಂಕ ಹೊರ ಹಾಕಿದ್ದಾರೆ. ಎಎಪಿ ಯುವ ಘಟಕದ ಗಿರೀಶ್ ಕುಮಾರ್ ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳ ವಿರುದ್ಧ ದೂರು ನೀಡಿದ್ದಾರೆ. ಅನೇಕ ಅಕ್ರಮಗಳನ್ನು ಬಯಲು ಮಾಡಿದ್ದಾರೆ.
ಬೆಂಗಳೂರು, ಆ.29: ಆಮ್ ಆದ್ಮಿ ಪಕ್ಷದ(Aam Aadmi Party) ಯುವ ಘಟಕ ಉಪಾಧ್ಯಕ್ಷ ಗಿರೀಶ್ ಕುಮಾರ್ ಹತ್ಯೆಗೆ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ(Amruthahalli Police Station) ದೂರು ದಾಖಲಾಗಿದೆ. ಎಎಪಿ ಯುವ ಘಟಕದ ಗಿರೀಶ್ ಕುಮಾರ್ ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳ ವಿರುದ್ಧ ದೂರು ನೀಡಿದ್ದಾರೆ. ಅನೇಕ ಅಕ್ರಮಗಳನ್ನು ಬಯಲು ಮಾಡಿದ್ದಾರೆ. ಹೀಗಾಗಿ ಅವರಿಗೆ ಜೀವ ಬೆದರಿಕೆ ಕರೆಗಳು ಹಾಗೂ ಗುಂಪು ಗುಂಪಾಗಿ ಕಿಡಿಗೇಡಿಗಳು ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ಗಿರೀಶ್ ತಿಳಿಸಿದ್ದಾರೆ.
ಆ.27ರ ತಡರಾತ್ರಿ 10ಕ್ಕೂ ಹೆಚ್ಚು ಅಪರಿಚಿತರು ಮನೆ ಬಳಿ ಬಂದಿದ್ದರು. ಮೊದಲು ಇಬ್ಬರು ಬೈಕ್ನಲ್ಲಿ ನನ್ನನ್ನು ಫಾಲೋ ಮಾಡಿದ್ದರು. ನಂತರ ಮಿನಿ ಬಸ್ನಲ್ಲಿ 13ಕ್ಕೂ ಹೆಚ್ಚು ಜನ ಬಂದು ಕಾಯುತ್ತಿದ್ದರು. ಕೂಡಲೇ ಅಮೃತಹಳ್ಳಿ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದೆ ಎಂದು ಎಎಪಿ ಯುವ ಘಟಕದ ಉಪಾಧ್ಯಕ್ಷ ಗಿರೀಶ್ ಮಾಹಿತಿ ನೀಡಿದ್ದಾರೆ.
ಸೆಟ್ ಬ್ಯಾಕ್ ಬಿಡದೆ ಖಾಸಗಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದಾರೆಂದು ಬಿಬಿಎಂಪಿ ಅಧಿಕಾರಿಗಳಿಗೆ ಎಎಪಿ ಯುವ ಘಟಕದ ಉಪಾಧ್ಯಕ್ಷ ಗಿರೀಶ್ ದೂರು ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳು ದೂರು ಪಡೆದು ಪರಿಶೀಲನೆಗೆ ಕ್ರಮ ಕೈಗೊಳ್ಳುತ್ತಿದ್ದಂತೆಯೇ ಹಲ್ಲೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಇನ್ನು ಬೆಂಗಳೂರಿನ ಹಲವೆಡೆ ಪಬ್, ಬಾರ್ಗಳ ವಿರುದ್ಧವೂ ಗಿರೀಶ್ ದೂರು ನೀಡಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ನಗರದಾದ್ಯಂತ ಪಬ್ ಬಾರ್ಗಳ ಮೇಲೆ ದಾಳಿ ಆಗಿದಕ್ಕೆ ತಾನು ದೂರು ನೀಡಿದ್ದೇ ಕಾರಣ ಎಂದು ಗಿರೀಶ್ ಹೇಳಿಕೊಂಡಿದ್ದರು. ಹೀಗಾಗಿ ದಾಳಿಯಾಗ್ತಿದ್ದಂತೆ ಗಿರೀಶ್ ಕುಮಾರ್ಗೆ ಜೀವಬೆದರಿಕೆ ಕರೆಗಳು ಸಹ ಬಂದಿದ್ದವು. ಅಪರಿಚಿತರು ಹಿಂಬಾಲಿಸುತ್ತಾರೆ. ತಡರಾತ್ರಿ ಮನೆ ಬಳಿ ಗುಂಪುಗುಂಪಾಗಿ ಬಂದು ಭಯಪಡಿಸ್ತಿದ್ದಾರೆಂದು ಗಿರೀಶ್ ಅಮೃತಹಳ್ಳಿ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಲಾಯ ತಸ್ಮೈ ನಮಃ ATM ಕಾರ್ಡ್ ಗಾತ್ರದಲ್ಲಿ Wedding ಕಾರ್ಡ್!
ಇನ್ನು ಮತ್ತೊಂದೆಡೆ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳ ವಿರುದ್ಧ ಕೂಡ ಗಿರೀಶ್ ದೂರು ದಾಖಲಿಸಿದ್ದರು. ಬಿಬಿಎಂಪಿ, ಬಿಡಿಎ, ಲೋಕಾಯುಕ್ತ, ವಿವಿಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಟ್ಟು 483 FIR ದಾಖಲಿಸಿರೋದಾಗಿ ಗಿರೀಶ್ ಕುಮಾರ್ ಹೇಳಿಕೊಂಡಿದ್ದಾರೆ. ಬಿಬಿಎಂಪಿ, ಬಿಡಿಎ, ಪೊಲೀಸರು ಇದರ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ. ನೀಡಿರುವ ದೂರಿನ ಪೈಕಿ ಯಾವುದನ್ನು ಹಿಂಪಡೆದಿಲ್ಲ, ಎಲ್ಲವೂ ತನಿಖೆ ಹಂತದಲ್ಲಿದೆ. ಹೀಗಾಗಿ ನನಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಮನೆ ಬಳಿ ಗುಂಪುಗುಂಪಾಗಿ ಬಂದು ಭಯಪಡಿಸ್ತಿದ್ದಾರೆಂದು ದೂರು ನೀಡಿದ್ದಾರೆ. ಗಿರೀಶ್ ದೂರಿನ ಮೇರೆಗೆ ಪೊಲೀಸರು ಎನ್ಸಿಆರ್ ದಾಖಲಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:12 am, Tue, 29 August 23