ಬೆಂಗಳೂರು: ಆನೇಕಲ್ ಶಿವಾಜಿ ವೃತ್ತದ ಬಳಿ ದುಷ್ಕರ್ಮಿಗಳು ನಡುರಸ್ತೆಯಲ್ಲೇ ಕಾರು ಅಡ್ಡಗಟ್ಟಿ ವ್ಯಕ್ತಿಯೊಬ್ಬರಿಗೆ ಗುಂಡಿಕ್ಕಿ, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದವರಿಗೆ ಬಿಟಿಎಂ ಲೇಔಟ್ ನಿವಾಸಿ ಎಂದು ತಿಳಿದುಬಂದಿದೆ, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಶಿವಾಜಿ ವೃತ್ತದ ಬಳಿ ನಡುರಸ್ತೆಯಲ್ಲೇ ಕಾರು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಕಾರಿನ ಬಲಬದಿಯ ಗಾಜು ಒಡೆದು ಮೊದಲು ಗುಂಡು ಹಾರಿಸಿದ್ದರು. ಕತ್ತಿನ ಭಾಗಕ್ಕೆ ಗುಂಡಿಕ್ಕಿದ ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಲಾಂಗ್, ಮಚ್ಚುಗಳ ಸಮೇತ ಬಂದಿದ್ದ ಗ್ಯಾಂಗ್ ಈ ಕೃತ್ಯ ಎಸಗಿದ್ದಾರೆ. ಘಟನೆಯ ನಂತರ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ರಸ್ತೆಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಂ ಉಂಟಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಚೆದುರಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆನೇಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ
ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಠಾಣಾ ವ್ಯಾಪ್ತಿಯ ಎಕೆ ಕಾಲೊನಿಯಲ್ಲಿ ನಡೆದಿದೆ. ಮೆಹಬೂಬ್ (19) ಕೊಲೆಯಾದವರು. ಲಲಿತ್, ಮಣಿಕಂಠ ನಡುವೆ ಹಣದ ವಿಚಾರದಲ್ಲಿ ಗಲಾಟೆಯಾಗಿತ್ತು. ಲಲಿತ್ ಗುಂಪಿನಲ್ಲಿದ್ದ ಮೆಹಬೂಬ್ ಮೇಲೆ ಆರೋಪಿಗಳಾದ ಮಣಿಕಂಠ, ಪವನ್, ಕಿರಣ್, ಕಾರ್ತಿಕ್ ಸೇರಿದಂತೆ 13 ಮಂದಿ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಿಗಾಗಿ ಕೋಣನಕುಂಟೆ ಠಾಣೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಎಸಿಬಿ ಬಲೆಗೆ ರೆವಿನ್ಯೂ ಇನ್ಸ್ಪೆಕ್ಟರ್
ಬಿಬಿಎಂಪಿ 191ನೇ ವಾರ್ಡ್ ರೆವಿನ್ಯೂ ಇನ್ಸ್ಪೆಕ್ಟರ್ ಗಿರೀಶ್ 3 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಫ್ಲ್ಯಾಟ್‌ಗೆ ಖಾತೆ ಮಾಡಿಕೊಡಲು ಇವರು ಲಂಚ ಕೇಳಿದ್ದರು ಎನ್ನಲಾಗಿದೆ. ಆರ್‌ಐ ಗಿರೀಶ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಕಳವಾದ ಕಾರು ಫಾಸ್ಟ್ಟ್ಯಾಗ್ ಸಹಾಯದಿಂದ ಹುಬ್ಬಳ್ಳಿಯಲ್ಲಿ ಪತ್ತೆ!