ಎಲೆಮರೆಯಲ್ಲಿ ಕೆಲಸ ಮಾಡುವ ರೈತನನ್ನು ಗುರುತಿಸಿರುವುದು ಸಂತಸ ತಂದಿದೆ: ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಬೋರೇಗೌಡ
ಕೃಷಿಕರು ಅಂದರೆ ಏನೋ ಬೆಳೆಯೋದು, ಬೆಳೆದು ಬೇರೆಯವರಿಗೆ ಕೊಡೋದು ಅಂತ ಇದೆ. ಇಂಥ ಮಾಧ್ಯಮಗಳು ನಮ್ಮನ್ನು ಗುರುತಿಸಿ, ಗೌರವಿಸಿದಾಗ ಹೆಮ್ಮೆ ಅನಿಸುತ್ತೆ., ಬೇರೆಯವ್ರಿಗಿಂತ ನಾವೂ ಕಡಿಮೆ ಇಲ್ಲ. ಟಿವಿ9 ಕಾರ್ಯಕ್ರಮಕ್ಕೆ ಬಂದಿರೋದು ಖುಷಿ ಇದೆ ಎಂದು ಬೋರೇಗೌಡ ಸಂತಸ ಹಂಚಿಕೊಂಡಿದ್ದಾರೆ.
ಬೆಂಗಳೂರು: ಮಾಧ್ಯಮದಿಂದ ಎಲೆಮರೆಯ ಕಾಯಕ ಮಾಡುವ ರೈತನನ್ನು ಗುರುತಿಸಿರುವುದು. ಬೇರೆಯವರಿಗೆ ತಮ್ಮಂತಹ ರೈತನನ್ನು ಪರಿಚಯ ಮಾಡಿರುವುದಕ್ಕೆ ಹೆಮ್ಮೆ ಆಗ್ತಿದೆ ಎಂದು ಟಿವಿ9 ಕನ್ನಡ ಸುದ್ದಿವಾಹಿನಿಯ 15ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯೋಜಿಸಿದ್ದ ‘ನವನಕ್ಷತ್ರ’ ಸನ್ಮಾನ ಕಾರ್ಯಕ್ರಮದಲ್ಲಿ ಪುರಸ್ಕಾರ ಪಡೆದ ರೈತ ಸಾಧಕ ಬೋರೇಗೌಡ ಹೇಳಿದ್ದಾರೆ. ನಾನು ಟಿವಿ9 ಅಭಿಮಾನಿ ಆಗಿದ್ದೇನೆ. ವಾರ್ತಾ ವಾಹಿನಿಗಳಲ್ಲಿ ಟಿವಿ9 ವಾಹಿನಿಯನ್ನೇ ನೋಡುತ್ತೇನೆ ಎಂದು ಅವರು ಟಿವಿ9 ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ಕೃಷಿಕರು ಅಂದರೆ ಏನೋ ಬೆಳೆಯೋದು, ಬೆಳೆದು ಬೇರೆಯವರಿಗೆ ಕೊಡೋದು ಅಂತ ಇದೆ. ಇಂಥ ಮಾಧ್ಯಮಗಳು ನಮ್ಮನ್ನು ಗುರುತಿಸಿ, ಗೌರವಿಸಿದಾಗ ಹೆಮ್ಮೆ ಅನಿಸುತ್ತೆ., ಬೇರೆಯವ್ರಿಗಿಂತ ನಾವೂ ಕಡಿಮೆ ಇಲ್ಲ. ಟಿವಿ9 ಕಾರ್ಯಕ್ರಮಕ್ಕೆ ಬಂದಿರೋದು ಖುಷಿ ಇದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ನಾನು ಸುಮಾರು 1989ರಲ್ಲಿ ಕೃಷಿ ಕೆಲಸ ಆರಂಭಿಸಿದೆ. ಕೆಲವು ಅನುಭವ ಪಡೆಯುತ್ತಾ ಬೆಳೆದೆ. ಆಗ ರಾಸಾಯನಿಕ ಕೃಷಿ ಮಾಡುತ್ತಿದ್ದೆ. ಈ ನಡುವೆ ಅನಾರೋಗ್ಯ ಸಮಸ್ಯೆಗಳು ಉಂಟಾಯ್ತು. ಕೆಲವು ಸ್ನೇಹಿತರು ಯೋಗ ಕಲಿತು ಆರೋಗ್ಯ ಸುಧಾರಣೆ ಮಾಡಿಕೊಳ್ಳಲು ಸಲಹೆ ನೀಡಿದರು. ಹಾಗೆ ಯೋಗ ಕಲಿತೆ. ಅಲ್ಲಿ ಆಹಾರಕ್ಕೂ ಆರೋಗ್ಯಕ್ಕೂ ಸಂಬಂಧ ಇದೆ ಎಂದು ಗೊತ್ತಾಯ್ತು. ನಂತರ, ಸಾವಯುವ ಕೃಷಿ ಬಗ್ಗೆ ತಜ್ಞರಿಂದ ತಿಳಿದುಕೊಂಡು ಅದನ್ನು ಮಾಡ್ತಾ ಬಂದೆ ಎಂದು ಬೋರೇಗೌಡರು ತಾವು ರಾಸಾಯನಿಕ ಕೃಷಿಯಿಂದ ಸಾವಯುವ ಕೃಷಿಗೆ ಹೊರಳಿದ ಬಗೆಯನ್ನು ವಿವರಿಸಿದ್ದಾರೆ.
ಸುಮಾರು 210 ದೇಶಿ ತಳಿಗಳನ್ನು ಸಂಗ್ರಹಿಸಿದ್ದೇನೆ ದೇಶಿ ತಳಿ ಸಾವಯುವ ಕೃಷಿಗೆ ಹೆಚ್ಚು ಒತ್ತು ಕೊಡುತ್ತದೆ. ಹಾಗಾಗಿ ದೇಶಿ ತಳಿ ಕೃಷಿ ಆರಂಭಿಸಿದೆ. ಒಂದು ಎನ್ಜಿಒ ಜೊತೆ ಸಂಪರ್ಕ ಹೊಂದಿ ದೇಶಾದ್ಯಂತ ಸಂಚರಿಸಿದೆ. ದೇಶದ ವಿವಿಧ ಭಾಗದ ಭತ್ತದ ತಳಿ ಸಂಗ್ರಹಿಸಿ ಅದನ್ನು ನಮ್ಮಲ್ಲಿ ಬೆಳೆದೆ. ಈಗ ಸುಮಾರು 210 ದೇಶಿ ತಳಿಗಳನ್ನು ಸಂಗ್ರಹಿಸಿದ್ದೇನೆ ಎಂದು ತಮ್ಮ ಸಂಗ್ರಹ, ಕೃಷಿಯ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ.
ಜೊತೆಗೆ ತಳಿ ಸಂಗ್ರಹ ಮಾಡಿದ್ದೇನೆ. ಇದು ಮೊಟ್ಟಮೊದಲ ರೈತನ ಮ್ಯೂಸಿಯಂ ಎನ್ನಬಹುದು. ಸರ್ಕಾರಿ ಸ್ವಾಮ್ಯದ ಸಂಗ್ರಹಾಲಯಗಳಲ್ಲಿ ಭತ್ತದ ಕಾಳು ಇಟ್ಟಿರುತ್ತಾರೆ. ಆದರೆ ನಾನು ಬೇರು ಸಹಿತ ಇಟ್ಟಿದ್ದೇನೆ. ಇದಕ್ಕಾಗಿ ಕೇಂದ್ರ ಸರ್ಕಾರದ ಸಸ್ಯ ತಳಿ ಸಂರಕ್ಷಣಾ ಪ್ರಾಧಿಕಾರದಿಂದ ಪ್ರಶಸ್ತಿ ಬಂದಿದೆ. ಟಿವಿ9 ನಲ್ಲಿ ಕೂಡ ಈಗ ಗುರುತಿಸಿರುವುದು ಸಂತೋಷ ಇದೆ ಎಂದು ತಿಳಿಸಿದ್ದಾರೆ.
ತಂದೆ ತಾಯಿ ಹೆಸರನ್ನೇ ನಾನು ಅಭಿವೃದ್ಧಿಪಡಿಸಿದ ಭತ್ತದ ತಳಿಗೆ ಇಟ್ಟೆ ಇದರ ಜೊತೆಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಮನಸಾಯ್ತು. ಕೆಲವರು ತಮ್ಮದೇ ತಳಿ ಅಂತ ಮಾಡಿರೋದು ತಿಳಿಯಿತು. ಹಾಗೇ ನಾನೂ ಭತ್ತದ ತಳಿ ಅಭಿವೃದ್ಧಿಪಡಿಸಿದೆ. ಕಣದತುಂಬ, ಸಿದ್ಧಸಣ್ಣ ಎಂಬ ಎರಡು ಭತ್ತದ ತಳಿ ಅಭಿವೃದ್ಧಿಪಡಿಸಿದೆ. ಇದರಲ್ಲಿ ಸಿದ್ದಸಣ್ಣ ಅಂದರೆ ಅಪ್ಪ, ಅಮ್ಮನ ಹೆಸರು. ತಂದೆಯ ಹೆಸರು ಸಿದ್ದೇಗೌಡ ಹಾಗೂ ತಾಯಿ ಹೆಸರು ಸಣ್ಣಮ್ಮ. ಜನ್ಮಕೊಟ್ಟ ತಂದೆ ತಾಯಿ ಸ್ಮರಣೆ ಮಾಡಬೇಕು. ನಾವು ಕೆಲವು ದಿನ ಇರ್ತೀವಿ, ಸಾಯ್ತೀವಿ. ಆ ಹೆಸರು ಉಳಿದುಕೊಳ್ಳಲಿ ಎಂದು ಆ ಋಣ ತೀರಿಸಲು ಅವರ ಹೆಸರನ್ನು ಅಭಿವೃದ್ಧಿಪಡಿಸಿದ ಭತ್ತದ ತಳಿಗೆ ಇಟ್ಟೆ ಎಂದು ಬೋರೇಗೌಡರು ಯಶೋಗಾಥೆಯನ್ನು ತೆರೆದಿಟ್ಟಿದ್ದಾರೆ.
ಸಿದ್ದಸಣ್ಣ ಇದು ಸಣ್ಣ ಕಾಳಿನ ಅಕ್ಕಿ. ಸೋನಾ ಮಸೂರಿಗೆ ಸಮನಾಗಿ, ರುಚಿಕಟ್ಟಾಗಿ ಇದೆ. ಈಗ ಸಾವಿರಾರು ರೈತರು ಸಾವಿರಾರು ಎಕರೆಗಳಲ್ಲಿ ಈ ತಳಿಯ ಭತ್ತವನ್ನು ಬೆಳೀತಾ ಬಂದಿದ್ದಾರೆ. ಇದು ದೊಡ್ಡ ಗೌರವ ಎಂದು ಹೇಳಿದ್ದಾರೆ.
ಸಕಲ ಜೀವರಾಶಿಗಳಿಗೂ ಅನ್ನ ಕೊಡುವವನು ರೈತ ಅದಕ್ಕಾಗಿ ರೈತನಲ್ಲಿ ಹೆಚ್ಚು ಭವಿಷ್ಯ ಅಡಗಿದೆ. ಮುಂದಿನ ದಿನಗಳಲ್ಲಿ ರೈತನಿಗೆ, ಕೃಷಿಗೆ ಹೆಚ್ಚು ಮಹತ್ವ ಬರಲಿದೆ. ಯುವಪೀಳಿಗೆ ಇದರಲ್ಲಿ ಕೆಲಸ ಮಾಡಬೇಕು, ದೇಶಿ ಕೃಷಿ, ತಳಿ, ಸಾವಯುವ ಕೃಷಿ ಮಾಡಿ, ಸಮಾಜಕ್ಕೆ ಆರೋಗ್ಯಪೂರ್ಣ ಆಹಾರ ಕೊಡಬೇಕು ಎಂದು ಬೋರೇಗೌಡ ಈ ವೇಳೆ ಯುವಜನತೆಗೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ಟಿವಿ9 ಆರಂಭವಾದ ದಿನದಿಂದ ಇಲ್ಲಿಯವರೆಗೂ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿಲ್ಲ: ಹೆಚ್ಡಿ ದೇವೇಗೌಡ
ಇದನ್ನೂ ಓದಿ: ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಹಂಚಿಕೊಂಡ ರಶ್ಮಿಕಾ ಮಂದಣ್ಣ