
ಬೆಂಗಳೂರು, ಜುಲೈ 10: ಮನೆಯಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾ ಒಬ್ಬರನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರೋಬ್ಬರಿ 4.25 ಲಕ್ಷ ರೂಪಾಯಿ ದೋಚಿದ್ದ ನಾಲ್ವರು ಕಿಡ್ನಾಪರ್ಸ್‌ಗಳನ್ನು (Kidnap) ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.ತುಮಕೂರು ಮೂಲದ ಆರಿಫ್ ಮತ್ತು ಆದಿಲ್, ಚಿಕ್ಕಬಾಣಾವರದ ಇಮ್ರಾನ್ ಹಾಗೂ ಆರ್.ಟಿ. ನಗರದ ಕಾದೀರ್ ಬಂಧಿತ ಆರೋಪಿಗಳಾಗಿದ್ದಾರೆ. ನಗರದ ಯಲಹಂಕದಲ್ಲಿ ವಾಸವಾಗಿರುವ ಬಾಬಾ ಮೊಹಮ್ಮದ್ ತಾರಿಕ್ ಹುಸೇನ್ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಬಾಬಾ ತಾರಿಕ್ ಹುಸೇನ್ ಅವರನ್ನು ಸಂಪರ್ಕಿಸಿದ್ದ ಆರೋಪಿ ಆರಿಫ್, ನಮ್ಮ ಮನೆಗೆ ಬಂದು ಶಾಂತತೆಗಾಗಿ ಪೂಜೆ ಮಾಡಿಕೊಡಬೇಕು ಎಂದು ಕೋರಿ ಮುಂಗಡವಾಗಿ 10 ಸಾವಿರ ರೂಪಾಯಿಗಳನ್ನು ಆನ್‌ಲೈನ್ ಮೂಲಕ ಪಾವತಿಸಿದ್ದ. ಆದರೆ ಬಾಬಾ ತಾರಿಕ್ ಕಾರಣಾಂತರಗಳಿಂದ ಮೂರು ದಿನಗಳ ಕಾಲ ಭೇಟಿ ನೀಡಿರಲಿಲ್ಲ. ಜೂನ್ 29 ರಂದು ಆರೋಪಿ ಆರಿಫ್, ಬಾಬಾನನ್ನು ಕರೆತರಲು ತಾನೇ ಕಾರು ಕಳುಹಿಸಿಕೊಡುವುದಾಗಿ ಹೇಳಿದ್ದ. ಅದರಂತೆ ಕಾರ್ ಬಂದಾಗ ತಾರಿಕ್ ಹೋಗಲು ಸಿದ್ಧರಿರಲಿಲ್ಲ. ಈ ವೇಳೆ ಆರೋಪಿಗಳು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದರು.
ಕಿಡ್ನ್ಯಾಪ್ ಆದ ಬಾಬಾನನ್ನು ತುಮಕೂರು ಹೊರವಲಯಕ್ಕೆ ಕರೆದೊಯ್ದಾಗ ಅಲ್ಲಿ ಮೂವರು ವ್ಯಕ್ತಿಗಳು ಕಾಯುತ್ತಿದ್ದರು. ಈ ವೇಳೆ ಗ್ಯಾಂಗ್‌ನಲ್ಲಿದ್ದ ಆದಿಲ್ ಎಂಬಾತ, “ಹಿಂದೆ ನೀನು ಶಾಂತಿ ಪೂಜೆ ಮಾಡುವುದಾಗಿ ಹಣ ಪಡೆದುಕೊಂಡಿದ್ದೆ, ಆದರೆ ಅದರಿಂದ ನನಗೆ ಯಾವುದೇ ಉಪಯೋಗವಾಗಿಲ್ಲ” ಎಂದು ಹಳೇ ಕದನ ತೆಗೆದು ಜಗಳವಾಡಿದ್ದಾನೆ. ಹಣ ನೀಡುವಂತೆ ಬೆದರಿಸಿದಾಗ ಬಾಬಾ ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ನಾಲ್ವರು ಆರೋಪಿಗಳು ಲಾಂಗ್ ಮತ್ತು ಮಚ್ಚುಗಳನ್ನು ಬಳಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬಳಿಕ ಬಾಬಾನ ಮೊಬೈಲ್ ಪಾಸ್‌ವರ್ಡ್ ಹಾಗೂ ಯುಪಿಐ (UPI) ಪಿನ್ ಪಡೆದುಕೊಂಡ ಆರೋಪಿಗಳು, ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷಕ್ಕೂ ಅಧಿಕ ಹಣವನ್ನು ಗಮನಿಸಿದ್ದಾರೆ. ತಕ್ಷಣವೇ ಆರಿಫ್ 13 ಸಾವಿರ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾನೆ. ಅಂದು ರಾತ್ರಿ ಅಜ್ಞಾತ ಸ್ಥಳದಲ್ಲಿ ಬಾಬಾನನ್ನು ಕೂಡಿಹಾಕಿದ್ದ ಗ್ಯಾಂಗ್, ಮರುದಿನ ದಾಖಲೆಗಳನ್ನು ವಾಟ್ಸಾಪ್ ಮಾಡಿಸಿಕೊಂಡು ಖಾಸಗಿ ಬ್ಯಾಂಕ್‌ಗೆ ಬಲವಂತವಾಗಿ ಕರೆದೊಯ್ದಿದ್ದಾರೆ.
ಅಲ್ಲಿ ಬಾಬಾನಿಂದಲೇ ವಿಥ್‌ಡ್ರಾ ಫಾರ್ಮ್‌ಗೆ ಸಹಿ ಹಾಕಿಸಿ, ಸಂಜೆ ವೇಳೆ 4.25 ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಹಣ ಕೈ ಸೇರಿದ ನಂತರ ಬಾಬಾನನ್ನು ಕಾರಿನಲ್ಲಿ ದಾಬಸ್‌ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರದ ಹೊರವಲಯಕ್ಕೆ ಕರೆತಂದು, ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮೊಬೈಲ್ ನೀಡಿ ಪರಾರಿಯಾಗಿದ್ದರು ಎಂದು ಬಾಬಾ ತಾರಿಕ್ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ಕೂ ಜನರನ್ನು ಜೈಲಿಗಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ