ಬೆಂಗಳೂರು, ಫೆಬ್ರವರಿ 05: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮ ಮಂದಿರ (Ram Mandir) ನಿರ್ಮಾಣವಾಗಿದ್ದು, ಬಾಲ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಬೆನ್ನಲ್ಲೆ ಮುಜರಾಯಿ ಇಲಾಖೆ (Muzrai Department) ರಾಜ್ಯದಲ್ಲಿರುವ 100 ರಾಮ ಮಂದಿರಗಳನ್ನು ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಮಾಡಲು ಮುಂದಾಗಿದೆ. ಈ ಸಂಬಂಧ ಮುಜರಾಯಿ ಇಲಾಖೆಯು ಬಜೆಟ್ನಲ್ಲಿ 100 ಕೋಟಿ ರೂ. ಅನುದಾನ ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ಈ ಕುರಿತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮಾತನಾಡಿ, “ರಾಜ್ಯದಲ್ಲಿನ ನೂರು ರಾಮ ಮಂದಿರಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ನೂರು ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿರುವುದು ನಿಜ” ಎಂದು ಹೇಳಿದ್ದಾರೆ.
ನಮ್ಮ ಊರುಗಳಲ್ಲಿಯೂ ಹಲವಾರು ರಾಮ ಮಂದಿರಗಳಿವೆ. ಅವುಗಳಿಗೆ ದೇಣಿಗೆ ನೀಡಲಾಗಿದೆ. ನಾವು ಆ ದೇವಸ್ಥಾನಗಳಿಗೆ ಭಕ್ತರಾಗಿ ಇಂದಿಗೂ ನಡೆದುಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಹೇಳಿದ್ದರು. ಇದೀಗ ರಾಜ್ಯದ 100 ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ ಹಣ ನೀಡುವಂತೆ ಮುಜರಾಯಿ ಇಲಾಖೆ ಪ್ರಸ್ತಾವನೆ ಇಟ್ಟಿದ್ದು, ಇದೇ ತಿಂಗಳು 16 ರಂದು ಮಂಡನೆಯಾಗುವ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣ ಬಿಡುಗಡೆ ಮಾಡಲಿದ್ದಾರೆಯೇ ಎಂಬುವುದು ಕುತೂಹಲ ಸಂಗತಿಯಾಗಿದೆ.
ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ ಒಂದೇ ದಿನ 2.5 ಲಕ್ಷ ಭಕ್ತರು ಭೇಟಿ, ಹರಿದುಬಂತು 3.17 ಕೋಟಿ ರೂ. ದೇಣಿಗೆ
ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ರಾಜ್ಯದ ದಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಸರ್ಕರಿ ಆದೇಶ ಹೊರಡಿಸಿದ್ದರು. ಇದೀಗ ರಾಜ್ಯದಲ್ಲಿ 100 ರಾಮ ಮಂದಿರಗಳ ಅಭಿವೃದ್ಧಿಗೆ 100 ಕೋಟಿ ಅನುದಾನ ನೀಡುವಂತೆ ಕೇಳಿದ್ದು ಅಚ್ಚರಿ ಮೂಡಿಸಿದೆ. ಅಲ್ಲದೆ ರಾಜಕೀಯ ಲೆಕ್ಕಾಚರಕ್ಕೂ ಕಾರಣವಾಗಿದೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಬಿಜೆಪಿ ರಾಜಕೀಯ ಲಾಭ ಪಡೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಇದೀಗ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಹಿಂದು ಸಮುದಾದಯದ ಮತಗಳನ್ನು ಸೆಳೆಯಲು 100 ರಾಮ ಮಂದಿರ ಜೀರ್ಣೋದ್ಧಾರದ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಅಯೋಧ್ಯೆ ರಾಮ ಮಂದಿರ ವಿಚಾರವಾಗಿ ಬಿಜೆಪಿಯ ಚುನಾವಣೆ ರಾಜಕೀಯ ಲಾಭ ಪಡೆಯುವುದನ್ನು ಬ್ರೇಕ್ ಹಾಕಲು ರಾಮಲಿಂಗಾರೆಡ್ಡಿ ಮುಂದಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 am, Mon, 5 February 24