Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಕೇವಲ 11 ದಿನಗಳಲ್ಲಿ ಸಂಗ್ರಹವಾಯ್ತು ಬರೋಬ್ಬರಿ 11 ಕೋಟಿಗೂ ಹೆಚ್ಚು ಕಾಣಿಕೆ!
ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರು ಪ್ರವಾಹದೋಪಾದಿಯಲ್ಲಿ ಬರುತ್ತಿದ್ದಾರೆ. ಕೇವಲ 11 ದಿನಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಮಂದಿ ರಾಮ ಲಲ್ಲಾನ ದರ್ಶನ ಪಡೆದಿದ್ದು, ಈ ಅವಧಿಯಲ್ಲಿ 11 ಕೋಟಿ ರೂಪಾಯಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರಟ್ರಸ್ಟ್ ತಿಳಿಸಿದೆ.
ನವದೆಹಲಿ, ಫೆಬ್ರವರಿ 2: ಅಯೋಧ್ಯೆಯಲ್ಲಿ (Ayodhya) ನೂತನವಾಗಿ ನಿರ್ಮಾಣಗೊಂಡು ಜನವರಿ 22ರಂದು ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ನಡೆದ ಬಳಿಕ ರಾಮ ಮಂದಿರಕ್ಕೆ (Ram Mandir) ಭಕ್ತರ ಪ್ರವಾಹವೇ ಹರಿದುಬಂದಿದೆ. ಈವರೆಗೆ ಸುಮಾರು 25 ಲಕ್ಷ ಭಕ್ತರು ಮಂದಿರಕ್ಕೆ ಭೇಟಿ ನೀಡಿದ್ದಾರೆ. ಕಳೆದ 11 ದಿನಗಳಲ್ಲಿ 11 ಕೋಟಿ ರೂಪಾಯಿಗೂ ಹಚ್ಚಿನ ಮೊತ್ತ ಕಾಣಿಕೆ, ದೇಣಿಗೆ ಹಾಗೂ ಕೊಡುಗೆಗಳ ರೂಪದಲ್ಲಿ ಸಂಗ್ರಹವಾಗಿದೆ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ.
ಸಂಗ್ರಹವಾಗಿರುವ ಒಟ್ಟು ಮೊತ್ತದ ಪೈಕಿ ಸುಮಾರು 8 ಕೋಟಿ ರೂ. ಗರ್ಭಗುಡಿಗೆ ಹೋಗುವ ದರ್ಶನ ಮಾರ್ಗದಲ್ಲಿ ಇರಿಸಲಾದ ಸಾಂಪ್ರದಾಯಿಕ ಕಾಣಿಕೆ ಡಬ್ಬಿಗಳಲ್ಲಿ ಸಂಗ್ರಹವಾಗಿದೆ ಎಂದು ಟ್ರಸ್ಟ್ ತಿಳಿಸಿದೆ. ಹೆಚ್ಚುವರಿಯಾಗಿ, 3.50 ಕೋಟಿ ರೂಪಾಯಿಗಳನ್ನು ಆನ್‌ಲೈನ್ ಮೂಲಕ ದೇಣಿಗೆಯಾಗಿ ಸ್ವೀಕರಿಸಲಾಗಿದೆ.
ಹಣಕಾಸು ನಿರ್ವಹಣೆ ಮತ್ತು ಹೊಣೆಗಾರಿಕೆ
ಕಾಣಿಕೆ, ದೇಣಿಗೆಗಳ ಲೆಕ್ಕಾಚಾರ ಮತ್ತು ಪಾರದರ್ಶಕತೆ ಬಗ್ಗೆ ವ್ಯವಹಾರಗಳನ್ನು ನೋಡಿಕೊಳ್ಳುವ ಟ್ರಸ್ಟ್‌ನ ಕಚೇರಿ ಉಸ್ತುವಾರಿ ಪ್ರಕಾಶ್ ಗುಪ್ತಾ ಮಾಹಿತಿ ನೀಡಿದ್ದಾರೆ. ಗರ್ಭಗುಡಿಯ ಪಕ್ಕದಲ್ಲಿಟ್ಟಿರುವ ಕಾಣಿಕೆ ಡಬ್ಬಿಗಳ ಬಗ್ಗೆ ಮತ್ತು ಮಂದಿರದ ಸೇವಾ ಕೌಂಟರ್‌ಗಳಲ್ಲಿ ದೇಣಿಗೆ ನೀಡುವ ಮತ್ತು ಸ್ವೀಕರಿಸುವ ವಿಧಾನದ ಬಗ್ಗೆ ಅವರು ವಿವರ ನೀಡಿದ್ದಾರೆ. ಟ್ರಸ್ಟ್‌ನಿಂದ ನೇಮಕಗೊಂಡ ಉದ್ಯೋಗಿಗಳು, ಈ ಕೌಂಟರ್‌ಗಳಲ್ಲಿ ಇದ್ದು, ದಿನದ ಸಂಗ್ರಹದ ವಿವರವಾದ ಮಾಹಿತಿಯನ್ನು ಹಣ ಸಹಿತ ಟ್ರಸ್ಟ್ ಕಚೇರಿಗೆ ಸಲ್ಲಿಸುತ್ತಾರೆ. ಇದು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹೊಂದಿದೆ.
ಕಾಣಿಕೆ ಹಾಗೂ ದೇಣಿಗೆ ಲೆಕ್ಕಾಚಾರಕ್ಕೆ ಟ್ರಸ್ಟ್ 11 ಬ್ಯಾಂಕ್ ಉದ್ಯೋಗಿಗಳು ಮತ್ತು ಮೂವರು ದೇವಾಲಯದ ಟ್ರಸ್ಟ್ ಸಿಬ್ಬಂದಿಯನ್ನು ಒಳಗೊಂಡ 14 ಮಂದಿಯ ತಂಡದ ಸಹಾಯವನ್ನು ಪಡೆದಿದೆ. ಪಾರದರ್ಶಕತೆಯ ದೃಷ್ಟಿಯಿಂದ ತಂಡ ರಚಿಸಿ ಹಣ ಲೆಕ್ಕಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಈ ಗುಹೆಗಳಲ್ಲಿಯೇ ವಾಲ್ಮೀಕಿ ಋಷಿ ರಾಮಾಯಣ ಬರೆದಿದ್ದು, ಅಲ್ಲಿಗೆ ಪ್ರವಾಸಿ ದರ್ಶನಕ್ಕೆ ಹೋಗುವುದು ಹೇಗೆ? ವಿವರ ಇಲ್ಲಿದೆ
ಜನವರಿ 22 ರಂದು ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆ ನೆರವೇರಿತ್ತು. ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನೆರವೇರಿಸಿದ್ದರು. ನೂರಾರು ಗಣ್ಯರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ನಂತರ ಜನವರಿ 23ರಿಂದ ರಾಮ ಮಂದಿರಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ. ಮೊದಲ ದಿನದಿಂದಲೇ ಭಕ್ತ ಸಾಗರ ಅಯೋಧ್ಯೆಗೆ ಹರಿದು ಬರಲಾರಂಭವಾಗಿತ್ತು. ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ, ಸಚಿವರು ಯಾರೂ ಸದ್ಯದ ಮಟ್ಟಿಗೆ ರಾಮ ಮಂದಿರಕ್ಕೆ ತೆರಳಬಾರದು. ಮಂದಿರ ಭೇಟಿಯನ್ನು ಮಾರ್ಚ್ ವರೆಗೆ ಮುಂದೂಡಬೇಕು ಎಂದು ಪ್ರಧಾನಿ ಮೋದಿ ಕೇಂದ್ರ ಸಚಿವರಿಗೆ ಸಲಹೆ ನೀಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ