ಅಂತರ್ಜಲ ಮಟ್ಟ ಕುಸಿತ: ಬೆಂಗಳೂರಿನ ಈ ಪ್ರದೇಶಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದೆ. ಇದರಿಂದ ಕುಡಿಯುವ ನೀರಿಗೂ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಮಳೆ ಇಲ್ಲದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇನ್ನು ಟ್ಯಾಂಕರ್ ನೀರಿಗೆ ಭಾರಿ ಬೇಡಿಕೆ ಬಂದಿದೆ. ಈ ನಡುವೆ ಕುಡಿಯುವ ನೀರಿಗೆ ಆಧಾರವಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳಿಗೂ ಬೀಗ ಹಾಕಲಾಗುತ್ತಿದೆ.
ಬೆಂಗಳೂರು, ಫೆಬ್ರವರಿ 05: ಈ ವರ್ಷ ರಾಜ್ಯದಲ್ಲಿ ವಾಡಿಕೆ ಪ್ರಮಾಣದಲ್ಲಿ ಮಳೆಯಾಗಿಲ್ಲ (Rain). ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ನಾಡಿನ ಜಲಾಶಯಗಳಲ್ಲಿ (Dam) ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಾಗೆ ಅಂತರ್ಜಲ (Ground Water) ಮಟ್ಟ ಕೂಡ ಕುಸಿಯುತ್ತಿದೆ. ಇದರಿಂದ ಕುಡಿಯುವ ನೀರಿಗೆ (Drinking Water) ಪರದಾಡುವಂತಾಗಿದೆ. ಜಲಮಂಡಳಿಗಳು ವಾರ, ಹದಿನೈದು ದಿವಸಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಿವೆ. ಅಲ್ಲದೆ ಬೆಂಗಳೂರಿನ ಹಲವೆಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಲಾಗುತ್ತಿದೆ. ಹೌದು ಯಶವಂತಪುರ (Yeshwanthpur), ಕೆಂಗೇರಿ (Kengeri) ಸುತ್ತಮುತ್ತಲಿನ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಂದ್ ಮಾಡಲಾಗಿದೆ.
ಬೋರ್ ವೆಲ್ನಲ್ಲಿ ನೀರಿನ ಮಟ್ಟ ಕುಸಿದ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಜನರು ನೀರಿಗಾಗಿ ಟ್ಯಾಂಕರ್ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಮಾಲಿಕರು ಒಂದು ಟ್ಯಾಂಕರ್‌ಗೆ ಈ ಹಿಂದೆ 400 ರಿಂದ 500 ರೂಪಾಯಿ ಇತ್ತು. ಇದೀಗ ನೀರಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ 800ರಿಂದ 1 ಸಾವಿರ ರೂಪಾಯಿವರೆಗೆ ದುಡ್ಡು ತಗೆದುಕೊಳ್ಳುತ್ತಿದ್ದಾರೆ. ಇನ್ನು ಟ್ಯಾಂಕರ್ನವರಿಗೆ ಇವತ್ತು ಕರೆ ಮಾಡಿದರೆ ನಾಳೆ ತಂದು ಸಂಪಗಳಿಗೆ ನೀರು ಬಿಡುತ್ತಾರೆ. ಈಗಲೇ ಟ್ಯಾಂಕರ್‌ಗಳಿಗೆ ಇಷ್ಟೊಂದು ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಬೇಸಿಗೆಯಲ್ಲಿ ಒಂದು ಟ್ಯಾಂಕರ್ ನೀರಿಗೆ ಇನ್ನಷ್ಟು ಬೆಲೆ ಏರಿಕೆ ಆತಂಕದಲ್ಲೇ ಇಲ್ಲಿನ ನಿವಾಸಿಗಳಿದ್ದು, ಸರ್ಕಾರ ಕೊಡುವ ಗ್ಯಾರಂಟಿ ಬೇಡ ನೀರು ಬೇಕು ಅಂತಿದ್ದಾರೆ ಮಹಿಳೆಯರು.
ಬೆಂಗಳೂರಿನಲ್ಲಿ ಬೇಸಿಗೆಗೂ ಮುನ್ನ ನೀರಿಗಾಗಿ ಜನರು ಪರದಾಡಬೇಕಾಗಿದೆ. ಅತ್ತ ಕೆಆರ್‌ಎಸ್ ನಿಂದ ನೀರು ಸರಬರಾಜು ಆಗುತ್ತೆ. ಪ್ರತಿ ತಿಂಗಳಿಗೆ 1.5 ಟಿಎಂಸಿ ನೀರು ಬೇಕು. ಈಗಾಗಲೆ ಬೆಂಗಳೂರು ಜಲಮಂಡಳಿ ಕಾವೇರಿ ನಿಗಮಕ್ಕೆ 2.4 ರಿಂದ 2.5 ಟಿಎಂಸಿ ನೀರು ಬೇಡಿಕೆಗೆ ಪತ್ರ ಬರೆದಿದೆ. ಆದರೆ, ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಕೆಆರ್‌ಎಸ್‌ನಲ್ಲಿ ಸದ್ಯ 18 ಟಿಎಂಸಿ ನೀರು ಇದೆ. ಜಲಾಶಯದಲ್ಲಿ 8 ಟಿಎಂಸಿ ಡೆಡ್ ಸ್ಟೋರೆಜ್ ನೀರು ಕಾಯ್ದಿರಿಸಲೇಬೇಕು. ಇನ್ನುಳಿದ 10 ಟಿಎಂಸಿ ನೀರು ಬೆಂಗಳೂರು ಹಾಗೂ ತಮಿಳುನಾಡಿಗೂ ಹೋಗಬೇಕು.
ಇದನ್ನೂ ಓದಿ: ರಾಜ್ಯದ ಪ್ರಮುಖ 11 ಜಲಾಶಯಗಳಲ್ಲಿ ಪ್ರಸ್ತುತ ಶೇ40 ಕ್ಕಿಂತ ಕಡಿಮೆ ನೀರು ಸಂಗ್ರಹ
ಬೆಂಗಳೂರು ನಗರ ತಾಲೂಕುಗಳಲ್ಲೂ ಅಂತರ್ಜಲ ಮಟ್ಟ ಕುಸಿತ
ಬೆಂಗಳೂರು ನಗರ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕಳೆದ ಕೆಲವು ತಿಂಗಳುಗಳಿಂದ ನಗರದ ಹಲವು ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನಗರದ ಹಲವು ಪ್ರದೇಶಗಳು ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಅಂಕಿ-ಅಂಶಗಳ ಪ್ರಕಾರ, ಆನೇಕಲ್‌ನಲ್ಲಿ ಸುಮಾರು 7.42 ಮೀಟರ್, ಯಲಹಂಕದಲ್ಲಿ 7.31 ಮೀಟರ್, ಬೆಂಗಳೂರು ಪೂರ್ವದಲ್ಲಿ 5.81 ಮೀಟರ್ ಮತ್ತು ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರದಲ್ಲಿ ಒಂದು ಮೀಟರ್‌ಗಿಂತ ಕಡಿಮೆ ಅಂತರ್ಜಲ ಕುಸಿದಿದೆ.
ಈ ಸಮಸ್ಯೆಗಳ ಕುರಿತಂತೆ ತಜ್ಞರು ಮಾತನಾಡಿ, ಬೆಂಗಳೂರು ಹಿಂದಿನಿಗಿಂತ ಈ ಬಾರಿ ಹೆಚ್ಚು ನೀರಿನ ತೊಂದರೆ ಅನುಭವಿಸುತ್ತಿದೆ. ತೀವ್ರವಾದ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಒಂದು ಸಾವಿರ ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಇನ್ನೂ ಸಾವಿರ ಅಡಿಗಳಲ್ಲಿ ಸಿಗುವ ನೀರು ಅತ್ಯಂತ ಗಡಸು. ಇದರಲ್ಲಿ ಕ್ಯಾಲ್ಸಿಯಂ, ಮ್ಯಾಗ್ನೆಶೀಯಂ, ಆರ್ಸೆನಿಕ್, ಫ್ಲೋರೈಡ್ ಸೇರಿ ವಿವಿಧ ಖನಿಜಾಂಶಗಳ ಪ್ರಮಾಣ ಹೆಚ್ಚಾಗಿರುವುದರಿಂದ ನೀರು ಕುಡಿಯೋದಕ್ಕೆ ಸೂಕ್ತವಲ್ಲ. ಇನ್ನು ಈ ಹಿಂದೆ ನೀರು ಮೇಲೆಯೇ ಸಿಗುತ್ತಿತ್ತು. ಆದರೆ, ಸರಿಯಾಗಿ ಮಳೆ ಆಗುತ್ತಿಲ್ಲ. ಇದರಿಂದ ಪ್ರತಿ ವರ್ಷ ಅಂತರ್ಜಲಮಟ್ಟ ಕುಸಿತ ಕಾಣುತ್ತಿದೆ. ಅಲ್ಲದೇ ಕಾಂಕ್ರೀಟ್ ರಸ್ತೆಗಳು, ಕೆರೆಗಳ ಒತ್ತುವರಿ ಹಾಗೂ ಕೊಳಚೆ ನೀರು ಹೆಚ್ಚಾಗುತ್ತಿರುವುದರಿಂದ ನೀರಿನಲ್ಲಿ ಕೆಮಿಕಲ್ ಅಂಶ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಹೆಚ್ಚಾಗಿ ಬೋರ್‌ವೆಲ್‌ಗಳು ಕೊರೆದಿರುವುದು ಕೂಡ ನೀರಿನ ಅಂತರ್ಜಲಮಟ್ಟ ಕುಸಿತಕ್ಕೆ ಕಾರಣವಾಗಿದೆ.
ಹೀಗಿರುವಾಗ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿಗಾಗಿ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಜಲಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಈ ಬಾರಿ ಬೇಸಿಗೆಗೆ ನೀರಿನ ಕಂಟಕ ಎದುರಾಗಲಿದೆ ಎನ್ನುತ್ತಾರೆ ತಜ್ಞರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ