ಕುಸಿದ ಬೆಂಗಳೂರಿನ ಅಂತರ್ಜಲ: ಬೇಸಿಗೆ ಆರಂಭಕ್ಕೂ ಮೊದಲೆ ಮಹಾನಗರಕ್ಕೆ ಏನಿದು ಜಲಕ್ಷಾಮ? ಇಲ್ಲಿದೆ ವಿವರ

ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದೆ. ಇದರಿಂದ ಕುಡಿಯುವ ನೀರಿಗೂ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಮಳೆ ಇಲ್ಲದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇನ್ನು ಟ್ಯಾಂಕರ್​​ ನೀರಿಗೆ ಭಾರಿ ಬೇಡಿಕೆ ಬಂದಿದೆ. ಮಳೆಯ ಕೊರತೆಯಿಂದಾಗಿ ಕೆಆರ್​​ಎಸ್​ ಜಲಾಶಯಗಳಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಾಗಿದ್ದರೆ ಬೆಂಗಳೂರಿನಲ್ಲಿ ಸದ್ಯ ನೀರಿನ ಪರಿಸ್ಥಿತಿ ಹೇಗಿದೆ ಇಲ್ಲಿದೆ ಓದಿ..

ಕುಸಿದ ಬೆಂಗಳೂರಿನ ಅಂತರ್ಜಲ: ಬೇಸಿಗೆ ಆರಂಭಕ್ಕೂ ಮೊದಲೆ ಮಹಾನಗರಕ್ಕೆ ಏನಿದು ಜಲಕ್ಷಾಮ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 03, 2024 | 9:51 AM

ಬೆಂಗಳೂರು, ಫೆಬ್ರವರಿ 03: ಬೇಸಿಗೆ (Drought) ಆರಂಭಕ್ಕೂ ಮುನ್ನ ರಾಜಧಾನಿ ಬೆಂಗಳೂರಿಗೆ (Bengaluru) ಜಲಕ್ಷಾಮ (Scarcity of Water) ಎದುರಾಗಿದೆ. ಒಂದೆಡೆಗೆ ಜಲಮಂಡಳಿಯಿಂದ (Water Department) ಸರಿಯಾಗಿ ನೀರು ಪೂರೈಕೆಯಾಗದಿದ್ದರೆ, ಇನ್ನೊಂದೆಡೆಗೆ ಅಂತರ್ಜಲಮಟ್ಟ ಕುಸಿತದಿಂದ ಬೋರ್‌ವೆಲ್‌ಗಳು ಬತ್ತಿಹೋಗುತ್ತಿವೆ. ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕುಸಿದಿರುವ ಅಂತರ್ಜಲ ಮಟ್ಟದಿಂದ ಬತ್ತಿರುವ ಬೋರ್‌ವೆಲ್‌ಗಳು, ಮತ್ತೊಂದೆಡೆಗೆ ಕಾವೇರಿ ನೀರಿನ ಕೊರತೆಯಿಂದಾಗಿ ಬೆಂಗಳೂರು ಜಲಮಂಡಳಿಯಿಂದ ನೀರು ಪೂರೈಕೆಯಾಗುತ್ತಿಲ್ಲ. ನೀರಿಗಾಗಿ ಬೇಡಿಕೆ ಹೆಚ್ಚಾಗಿದೆ. ಈಗಲೇ ಈ ಪರಿಸ್ಥಿತಿ, ಇನ್ನೂ ಬೇಸಿಗೆ ಆರಂಭವಾದರೇ ಹೇಗೆ?. ಹೀಗಾಗಿ, ಸರಿಯಾಗಿ ನೀರು ಪೂರೈಕೆ ಮಾಡದ ಜಲಮಂಡಳಿ ವಿರುದ್ಧ ಬೆಂಗಳೂರು ನಿವಾಸಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಮಹದೇವಪುರ, ಕೆಆರ್ ಪುರ, ಯಶವಂತಪುರ, ಯಲಹಂಕ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ ವಿಧಾನಸಭಾ ವ್ಯಾಪ್ತಿಯ 110 ಹಳ್ಳಿಗಳು 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿ ಸರಿ ಸುಮಾರು 16 ವರ್ಷಗಳೇ ಕಳೆದಿವೆ. ಇಲ್ಲಿ ವಾಸಿಸುವ ನಿವಾಸಿಗಳಿಗೆ ಬೆಂಗಳೂರು ಜಲ ಮಂಡಳಿಯಿಂದ ನೀರು ಪೂರೈಕೆ ಮಾಡಬೇಕು. ಆದರೆ, ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ದಾಸರಹಳ್ಳಿ ವಿಧಾಸಭಾ ವ್ಯಾಪ್ತಿಯ ಮಲ್ಲಸಂದ್ರ ವಾರ್ಡ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಒಂದು ವಾರ-ಹದಿನೈದು ದಿನಕ್ಕೆ ಕಾವೇರಿ ನೀರು ಬರುತ್ತಿದೆ. ಸಮಯಕ್ಕೆ ಸರಿಯಾಗಿ ಬಿಲ್ ಮಾತ್ರ ತಗೆದುಕೊಳ್ಳುತ್ತಾರೆ ನೀರು ಮಾತ್ರ ಸರಿಯಾಗಿ ಬರುವುದಿಲ್ಲವೆಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಇತ್ತ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇಟ್ಟಮಡುವಿನ ಕುವೆಂಪುನಗರದಲ್ಲೂ ಕೂಡ ಇದೇ ಪರಿಸ್ಥಿತಿ. ಇಲ್ಲಿ ಒಂದೇ ಕಟ್ಟಡದಲ್ಲಿ ನಾಲ್ಕೈದು ಕುಟುಂಬಗಳು ವಾಸವಾಗಿವೆ. ಆದರೆ, ಕಳೆದ 6 ತಿಂಗಳುಗಳಿಂದ ಕಾವೇರಿ ನೀರು ಸರಬರಾಜು ನಿಂತು ಹೋಗಿದೆ. ಹೀಗಾಗಿ, ಪ್ರತಿನಿತ್ಯ ಇಲ್ಲಿನ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ದಿನ ಕೂಡ ಕುಡಿಯಲು ಹಾಗೂ ಸ್ನಾನ ಮಾಡಲು ನೀರಿಲ್ಲದೇ ಜನರು ಪರದಾಟ ನಡೆಸಿದ್ದು, ಬೀದಿಯಲ್ಲಿ ಖಾಲಿ ಕೊಡ ಹಿಡಿದು ಅಧಿಕಾರಿಗಳ ವಿರುದ್ಧ ಆಕ್ರೋಶ ಹಾಕಿದ್ದಾರೆ. ಅಲ್ಲದೆ ಜಲಮಂಡಳಿ ಸರಿಯಾಗಿ ನೀರು ಬಿಡದೆ ಬಿಲ್ ಮಾತ್ರ ಕಟ್ಟಿಸಿಕೊಳ್ಳುತ್ತೆ. ಜಲಮಂಡಳಿಗೂ ಬಿಲ್ ಕಟ್ಟಬೇಕು ಅತ್ತ ಟ್ಯಾಂಕರ್ ನೀರಿಗೂ ದುಡ್ಡು ಕೊಡಬೇಕು, ನೀರು ಬಾರದ ಹಿನ್ನೆಲೆ ಟ್ಯಾಂಕರ್ ಮೋರೆ ಹೋಗುತ್ತಿದ್ದಾರೆ.

ಒಂದು ಟ್ಯಾಂಕರ್‌ಗೆ ಈ ಹಿಂದೆ 400 ರಿಂದ 500 ರೂಪಾಯಿ ಇತ್ತು. ಇದೀಗ ನೀರಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ 800ರಿಂದ 1 ಸಾವಿರ ರೂಪಾಯಿವರೆಗೆ ದುಡ್ಡು ತಗೆದುಕೊಳ್ಳುತ್ತಿದ್ದಾರೆ. ಇವತ್ತು ಹೇಳಿದರೆ ನಾಳೆ ತಂದು ಸಂಪಗಳಿಗೆ ನೀರು ಬಿಡುತ್ತಾರೆ. ಈಗಲೇ ಟ್ಯಾಂಕರ್‌ಗಳಿಗೆ ಇಷ್ಟೊಂದು ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಬೇಸಿಗೆಯಲ್ಲಿ ಒಂದು ಟ್ಯಾಂಕರ್ ನೀರಿಗೆ ಇನ್ನಷ್ಟು ಬೆಲೆ ಏರಿಕೆ ಆತಂಕದಲ್ಲೇ ಇಲ್ಲಿನ ನಿವಾಸಿಗಳಿದ್ದು, ಸರ್ಕಾರ ಕೊಡುವ ಗ್ಯಾರಂಟಿ ಬೇಡ ನೀರು ಬೇಕು ಅಂತಿದಾರೆ ಮಹಿಳೆಯರು.

ಮಹದೇವಪುರ ವಲಯ ವ್ಯಾಪ್ತಿಯ ನಲ್ಲೂರು ಹಳ್ಳಿ ನಿವಾಸಿಗಳದ್ದು ಇದೇ ಗೋಳು. ಕಳೆದ 15 ವರ್ಷಗಳಿಂದ ಇಲ್ಲಿನ ನಿವಾಸಿಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇಲ್ಲಿ BWSSB ಯಿಂದ ನಲ್ಲಿಗಳನ್ನ ಅಳವಡಿಸಿದೆ. ಆದರೆ, ಒಂದು ಬಾರಿಯೂ ನೀರು ಬಂದಿಲ್ಲ. ಹೀಗಾಗಿ, ಕುಡಿಯುವ ನೀರಿನ ಘಟಕದಲ್ಲಿ ಶುದ್ಧೀಕರಣವಾಗಿ ಬರುವ ವೇಸ್ಟ್ ನೀರನ್ನು ಇಲ್ಲಿನ ನಿವಾಸಿಗಳು ದಿನಬಳಕೆಗೆ ಉಪಯೋಗ ಮಾಡುವ ಪರಿಸ್ಥಿತಿ ಇದೆ. ಅದಕ್ಕೂ ಕೂಡ ಸಾಲು ಸಾಲಾಗಿ ನೀರಿನ ಬಿಂದಿಗೆ ಇಟ್ಟು ನೀರು ಪಡೆಯಬೇಕು. ಈ ನೀರಿನಲ್ಲಿ ಸ್ನಾನ ಮಾಡಬೇಕು. ಕೆಲವೊಂದು ಬಾರಿ‌ ಸ್ನಾನ ಮಾಡಿದರೆ ಚರ್ಮ ಅಲರ್ಜಿ ಉಂಟಾಗಿ ಮೈ ತುರಿಕೆ ಉಂಟಾಗುತ್ತೆ, ಬಾಯಿಯಲ್ಲಿ ನೀರು ಹಾಕಿದರೆ ಬಾಯಿ ಹುಣ್ಣಾಗುತ್ತೆ, ಹೇಳುವರು ಇಲ್ಲ ಕೇಳುವರು ಇಲ್ಲದಂತಾಗಿದೆ. ಅನಿವಾರ್ಯ ಈ ನೀರನ್ನು ಬಳಕೆ ಮಾಡಲೆ ಬೇಕು ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ: ಫೆಬ್ರವರಿಯಲ್ಲಿ ಪ್ರತಿ ದಿನ 998 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲು ಕರ್ನಾಟಕಕ್ಕೆ ಸಿಡಬ್ಲ್ಯುಆರ್​ಸಿ ಸೂಚನೆ

ಅಷ್ಟೇ ಅಲ್ಲದೆ, ಈ ಭಾಗದಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚು ಇದೆ. ಈ ಸಮಸ್ಯೆ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ‌ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನ ಇಲ್ಲ. ಚುನಾವಣೆ ಸಂದರ್ಭದಲ್ಲಿ ವೋಟು ಕೇಳಲು ಮಾತ್ರ ಬರುತ್ತಾರೆ. ಟ್ಯಾಂಕರ್‌ನವರಿಂದ ಒಂದು ಬ್ಯಾರಲ್ ನೀರು ಪಡೆಯಬೇಕು ಅಂದರೆ 50 ರೂಪಾಯಿ ತೆಗೆದುಕೊಳ್ಳುತ್ತಾರೆ. ಅದು ಕೂಡ ಸಮಯಕ್ಕೆ ಬರಲ್ಲ. ಒಂದು ಟ್ಯಾಂಕರ್ ನೀರು ತೆಗೆದುಕೊಳ್ಳಬೇಕು ಅಂದರೆ ಅವರು ಕೇಳುವಷ್ಟು ದುಡ್ಡು ಕೊಡಲು ಆಗಲ್ಲ ಅಂತಿದ್ದಾರೆ.

ಬೆಂಗಳೂರು ನಗರ ತಾಲೂಕುಗಳಲ್ಲೂ ಅಂತರ್ಜಲ ಮಟ್ಟ ಕುಸಿತ

ಬೆಂಗಳೂರು ನಗರ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕಳೆದ ಕೆಲವು ತಿಂಗಳುಗಳಿಂದ ನಗರದ ಹಲವು ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನಗರದ ಹಲವು ಪ್ರದೇಶಗಳು ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಅಂಕಿ-ಅಂಶಗಳ ಪ್ರಕಾರ, ಆನೇಕಲ್‌ನಲ್ಲಿ ಸುಮಾರು 7.42 ಮೀಟರ್, ಯಲಹಂಕದಲ್ಲಿ 7.31 ಮೀಟರ್, ಬೆಂಗಳೂರು ಪೂರ್ವದಲ್ಲಿ 5.81 ಮೀಟರ್ ಮತ್ತು ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರದಲ್ಲಿ ಒಂದು ಮೀಟರ್‌ಗಿಂತ ಕಡಿಮೆ ಅಂತರ್ಜಲ ಕುಸಿದಿದೆ.

ಕಳೆದ ಹತ್ತು ವರ್ಷಗಳಲ್ಲಿ ದಾಖಲಾದ ಸರಾಸರಿ ಅಂತರ್ಜಲ ಮಟ್ಟಕ್ಕೆ ಹೋಲಿಸಿದರೆ. 10 ವರ್ಷಗಳ ಸರಾಸರಿ ನೀರಿನ ಮಟ್ಟ (ಮೀಟರ್‌ಗಳಲ್ಲಿ)

ಆನೇಕಲ್ 26.74

ಬೆಂಗಳೂರು ದಕ್ಷಿಣ 18.96

ಬೆಂಗಳೂರು ಉತ್ತರ 22.68

ಬೆಂಗಳೂರು ಪೂರ್ವ 24.67

ಯಲಹಂಕ 19.88

ಡಿಸೆಂಬರ್ ತಿಂಗಳ 2023ರಲ್ಲಿ ಸರಾಸರಿ ನೀರಿನ ಮಟ್ಟ (ಮೀಟರ್‌ಗಳಲ್ಲಿ)

ಆನೇಕಲ್ 34.16

ಬೆಂಗಳೂರು ದಕ್ಷಿಣ 19.17

ಬೆಂಗಳೂರು ಉತ್ತರ 22.7

ಬೆಂಗಳೂರು ಪೂರ್ವ 30.48

ಯಲಹಂಕ 27.18

ಈ ಸಮಸ್ಯೆಗಳ ಕುರಿತಂತೆ ತಜ್ಞರು ಮಾತನಾಡಿ, ಬೆಂಗಳೂರು ಹಿಂದಿನಿಗಿಂತ ಈ ಬಾರಿ ಹೆಚ್ಚು ನೀರಿನ ತೊಂದರೆ ಅನುಭವಿಸುತ್ತಿದೆ. ತೀವ್ರವಾದ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಒಂದು ಸಾವಿರ ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಇನ್ನೂ ಸಾವಿರ ಅಡಿಗಳಲ್ಲಿ ಸಿಗುವ ನೀರು ಅತ್ಯಂತ ಗಡಸು. ಇದರಲ್ಲಿ ಕ್ಯಾಲ್ಸಿಯಂ, ಮ್ಯಾಗ್ನೆಶೀಯಂ, ಆರ್ಸೆನಿಕ್, ಫ್ಲೋರೈಡ್ ಸೇರಿ ವಿವಿಧ ಖನಿಜಾಂಶಗಳ ಪ್ರಮಾಣ ಹೆಚ್ಚಾಗಿರುವುದರಿಂದ ನೀರು ಕುಡಿಯೋದಕ್ಕೆ ಸೂಕ್ತವಲ್ಲ. ಇನ್ನು ಈ ಹಿಂದೆ ನೀರು ಮೇಲೆಯೇ ಸಿಗುತ್ತಿತ್ತು. ಆದರೆ, ಸರಿಯಾಗಿ ಮಳೆ‌ ಆಗುತ್ತಿಲ್ಲ. ಇದರಿಂದ ಪ್ರತಿ ವರ್ಷ ಅಂತರ್ಜಲಮಟ್ಟ ಕುಸಿತ ಕಾಣುತ್ತಿದೆ. ಅಲ್ಲದೇ ಕಾಂಕ್ರೀಟ್ ರಸ್ತೆಗಳು, ಕೆರೆಗಳ ಒತ್ತುವರಿ ಹಾಗೂ ಕೊಳಚೆ ನೀರು ಹೆಚ್ಚಾಗುತ್ತಿರುವುದರಿಂದ ನೀರಿನಲ್ಲಿ‌ ಕೆಮಿಕಲ್ ಅಂಶ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಹೆಚ್ಚಾಗಿ ಬೋರ್‌ವೆಲ್‌ಗಳು ಕೊರೆದಿರುವುದು ಕೂಡ ನೀರಿನ ಅಂತರ್ಜಲಮಟ್ಟ ಕುಸಿತಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಬೇಸಿಗೆಗೂ ಮುನ್ನ ನೀರಿಗಾಗಿ ಜನರು ಪರದಾಡಬೇಕಾಗಿದೆ. ಅತ್ತ ಕೆ‌ಆರ್‌ಎಸ್ ನಿಂದ ನೀರು ಸರಬರಾಜು ಆಗುತ್ತೆ. ಪ್ರತಿ ತಿಂಗಳಿಗೆ 1.5 ಟಿಎಂಸಿ ನೀರು ಬೇಕು. ಈಗಾಗಲೆ ಬೆಂಗಳೂರು ಜಲಮಂಡಳಿ ಕಾವೇರಿ ನಿಗಮಕ್ಕೆ 2.4 ರಿಂದ 2.5 ಟಿಎಂಸಿ ನೀರು ಬೇಡಿಕೆಗೆ ಪತ್ರ ಬರೆದಿದೆ. ಆದರೆ, ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಕೆ‌ಆರ್‌ಎಸ್‌ನಲ್ಲಿ ಸದ್ಯ 18 ಟಿಎಂಸಿ ನೀರು ಇದೆ. ಜಲಾಶಯದಲ್ಲಿ 8 ಟಿಎಂಸಿ ಡೆಡ್ ಸ್ಟೋರೆಜ್ ನೀರು ಕಾಯ್ದಿರಿಸಲೇಬೇಕು. ಇನ್ನುಳಿದ 10 ಟಿಎಂಸಿ ನೀರು ಬೆಂಗಳೂರು ಹಾಗೂ ತಮಿಳುನಾಡಿಗೂ ಹೋಗಬೇಕು.

ಹೀಗಿರುವಾಗ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿಗಾಗಿ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಜಲಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಈ ಬಾರಿ ಬೇಸಿಗೆಗೆ ನೀರಿನ ಕಂಟಕ ಎದುರಾಗಲಿದೆ ಎನ್ನುತ್ತಾರೆ ತಜ್ಞರು.

ಒಟ್ಟಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಜಲ ಕಂಟಕ ಎದುರಾಗಿದೆ. ನೀರಿಗಾಗಿ ಎಲ್ಲೆಡೆಗೂ ಹಾಹಾಕಾರ ಶುರುವಾಗಿದೆ. ಮುಂದಿನ ದಿನಗಳಲ್ಲಿ ಜಲಮಂಡಳಿ ಹಾಗೂ ಸರ್ಕಾರ ಈ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿ ನೀರಿನ ಬವಣೆಯನ್ನು ಹೇಗೆ ನೀಗಿಸುತ್ತೆ ಎಂಬುವುದನ್ನು ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:51 am, Sat, 3 February 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್