ಬೆಂಗಳೂರಿನಲ್ಲಿ ಕೋಳಿ ಮೊಟ್ಟೆ ದರ ಏರಿಕೆ: ಕ್ರಿಸ್ಮಸ್, ಹೊಸ ವರ್ಷ ಹಿನ್ನೆಲೆ ಬೇಡಿಕೆ ಹೆಚ್ಚಳ
Bangalore Egg Price: ದಿನದಿಂದ ದಿನಕ್ಕೆ ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರತ್ತಿದೆ. ಈ ಸಾಲಿಗೆ ಇದೀಗ ಕೋಳಿ ಮೊಟ್ಟೆಯೂ ಸೇರಿದೆ. ಕ್ರಿಸ್ಮಸ್, ಹೊಸ ವರ್ಷ ಬೆಂಗಳೂರಿನಲ್ಲಿ ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಮೊಟಟೆಯ ಕೊರತೆ ಎದುರಾಗಿದ್ದು, ಇದರಿಂದ ಮೊಟ್ಟೆ ಬೆಲೆ ಏರಿಕೆ ಆಗಿದೆ ನೋಡಿ.

ಬೆಂಗಳೂರು, ಡಿಸೆಂಬರ್ 5: ಈ ವರ್ಷ ಬೆಂಗಳೂರಿನಲ್ಲಿ (Bengaluru) ಚಳಿ ಹೆಚ್ಚೇ ಇದೆ. ಇಂಥ ಸಮಯದಲ್ಲಿ ಮೊಟ್ಟೆ, ಚಿಕನ್, ಫಿಶ್ ಸೇವಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲೂ ಮೊಟ್ಟೆಯಿಂದ ತಯಾರಿಸಿದ ಆಹಾರಗಳನ್ನು ಹೆಚ್ಚಿನ ಜನ ಸೇವಿಸುತ್ತಾರೆ. ಜೊತೆಗೆ ಕ್ರಿಸ್ಮಸ್, ಹೊಸವರ್ಷದ ಹಬ್ಬ ಇರುವುದರಿಂದ ಕೇಕ್ ಉತ್ಪಾದನೆಗಾಗಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಪೂರೈಕೆ ಕಡಿಮೆಯಾಗಿದ್ದು, ಮೊಟ್ಟೆಯ ದರವೂ ಏರಿಕೆಯಾಗಿದೆ.
ಮೊಟ್ಟೆ ಪೂರೈಕೆ ಕೊರತೆಗೆ ಕಾರಣ ಏನು?
ಬೆಂಗಳೂರಿನಲ್ಲಿ ಮೊಟ್ಟೆ ಪೂರೈಕೆ ಕಡಿಮೆಯಾಗಿದೆ. ಜೊತೆಗೆ ಕಳೆದ ವರ್ಷ ಹಕ್ಕಿ ಜ್ವರ ಬಂದಿದ್ದರಿಂದ ಕೋಳಿಗಳ ಸಾಕಾಣಿಕೆ ಕಡಿಮೆಯಾಗಿತ್ತು. ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆಗಳ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮೊಟ್ಟೆಗಳ ಕೊರತೆ ಉಂಟಾಗಿದೆ. ಸದ್ಯ ಪ್ರತಿನಿತ್ಯ ಬೆಂಗಳೂರಲ್ಲಿ 1.10 ಕೋಟಿ ಮೊಟ್ಟೆಗಳಿಗೆ ಬೇಡಿಕೆ ಇದೆ. ಆದರೆ 30 ರಿಂದ 40 ಲಕ್ಷ ಮೊಟ್ಟೆಗಳ ಕೊರತೆ ಎದುರಾಗಿದೆ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್ ನಾಗರಾಜ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈಗೆಷ್ಟಿದೆ ಮೊಟ್ಟೆ ದರ?
ಬೆಂಗಳೂರಿನಲ್ಲಿ 5 ರೂಪಾಯಿ ಇದ್ದ ಮೊಟ್ಟೆ ಬೆಲೆ ಇದೀಗ ದುಬಾರಿಯಾಗಿದ್ದು, ಒಂದು ಮೊಟ್ಟೆಗೆ 7 ರಿಂದ 8 ರೂಪಾಯಿ ಆಗಿದೆ. ತಮಿಳುನಾಡಿನ ನಾಮಕಲ್ನಿಂದ ಪ್ರತಿನಿತ್ಯ 79 ಲಕ್ಷ ಮೊಟ್ಟೆ ಪೂರೈಕೆಯಾಗುತ್ತಿತ್ತು. ಸದ್ಯ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಕರ್ನಾಟಕಕ್ಕೆ ಮೊಟ್ಟೆ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ.
ಚಿಕನ್ ಬೆಲೆಯೂ ಹೆಚ್ಚಳ
ಮೊಟ್ಟೆ ಜೊತೆಗೆ ಕೋಳಿ ಬೆಲೆಯೂ ಹೆಚ್ಚಾಗಿದ್ದು, ಬಾಯ್ಲರ್ ಕೋಳಿ ಕೆಜಿಗೆ 150 ರೂಪಾಯಿ ಹಾಗೂ ಫಾರಂ ಕೋಳಿ ಕೆ.ಜಿಗೆ 170 ರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಕೋಳಿ ಹಾಗೂ ಮೊಟ್ಟೆಯಿಂದ ಮಾಡಿದ ಎಲ್ಲಾ ಆಹಾರ ಪದಾರ್ಥಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದ್ಯಂತೆ.
ಇದನ್ನೂ ಓದಿ: ಆಗಸ್ಟ್ ಮಳೆಯಿಂದ ರೈತರಿಗೆ ಸಂಕಷ್ಟ: ಚಳಿಗಾಲದಲ್ಲಿ ಬೆಂಗಳೂರಿಗರಿಗೆ ಶಾಕ್ ಕೊಟ್ಟ ಅವರೆಕಾಯಿ
ಮೊಟ್ಟೆ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಗೃಹಿಣಿ ಕಲಾ, ದರ ಏರಿಕೆ ಆಗಿರುವುದರಿಂದ ಮಕ್ಕಳಿಗೆ ಸರಿಯಾಗಿ ಮೊಟ್ಟೆ ಕೊಡಲು ಆಗುತ್ತಿಲ್ಲ. ಜಿಮ್ಗೆ ಹೋಗುತ್ತಿದ್ದು, ಪ್ರೋಟಿನ್ಗಾಗಿ ಪ್ರತಿದಿನ 10 ರಿಂದ 12 ಮೊಟ್ಟೆ ತಿನ್ನಬೇಕು. ಇಷ್ಟೊಂದು ದರ ಏರಿಕೆ ಆದರೆ ಕಷ್ಟ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಇನ್ನೂ ಎರಡು-ಮೂರು ತಿಂಗಳು ಕೋಳಿ, ಮೊಟ್ಟೆ ಬೆಲೆ ಕಡಿಮೆಯಾಗುವ ಸಾಧ್ಯತೆ ಇಲ್ಲ. ಇತ್ತ ಈ ದರ ಏರಿಕೆಯು ಕ್ರಿಸ್ಮಸ್ ಕೇಕ್ ತಿನ್ನಬೇಕು ಎಂದವರ ಜೇಬಿಗೂ ಕತ್ತರಿ ಹಾಕುವ ಸಾಧ್ಯತೆ ಇದೆ.



