KSRTCಯ 100 ಹೊಸ ಅಶ್ವಮೇಧ ಕ್ಲಾಸಿಕ್ ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಹೊಸ ಹೊಸ ಬಸ್ಗಳನ್ನು ರಸ್ತೆಗೆ ಇಳಿಸುವುದರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸದಾ ಮುಂಚೂಣಿಯಲ್ಲಿರುತ್ತದೆ. ಇದೀಗ ಕೆಎಸ್ಆರ್ಟಿಸಿ ಮತ್ತೆ ಹೊಸ 100 ಬಸ್ಗಳನ್ನು ರಸ್ತೆಗೆ ಇಳಿಸಿದೆ. ಅಲ್ಲದೆ ಈ ಬಸ್ಗಳಿಗೆ ಅಶ್ವಮೇಧ ಕ್ಲಾಸಿಕ್ ಎಂದು ನಾಮಕರಣ ಮಾಡಲಾಗಿದೆ. ಹೊಸ ಬಸ್ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಬೆಂಗಳೂರು, ಫೆಬ್ರವರಿ 05: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ 100 ಹೊಸ ಅಶ್ವಮೇಧ ಕ್ಲಾಸಿಕ್ ಬಸ್ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramlinga Reddy) ಚಾಲನೆ ನೀಡಿದರು. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ನಡೆದ ಕಾರ್ಯಕ್ರಮದಲ್ಲಿ ಮೊದಲ ಹಂತದಲ್ಲಿ 100 ಹೊಸ ಕ್ಲಾಸಿಕ್ ಬಸ್ಗಳಿಗೆ ಹಸಿರು ನಿಶಾನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಒಂದು ಸಾವಿರ ಹೊಸ ಬಸ್ಗಳನ್ನು ಖರೀದಿಸುವ ಗುರಿ ಸಂಸ್ಥೆ ಹೊಂದಿದೆ.
ಅಶ್ವಮೇಧ ಕ್ಲಾಸಿಕ್ ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮೆರಾ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, 52 ಬಜೆಟ್ ಆಸನ, ಬಸ್ ಒಳಗೆ ಮತ್ತು ಹೊರಗೆ ಎಲ್ಇಡಿ ಮಾರ್ಗ ಫಲಕ ಅಳವಡಿಸಲಾಗಿದೆ. ಈ ಬಸ್ಗಳು ರಾಜಧಾನಿಯಿಂದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಸಂಚರಿಸಲಿವೆ. ಇನ್ನು ಈ ಅಶ್ವಮೇಧ ಕ್ಲಾಸಿಕ್ ಬಸ್ಗಳಲ್ಲೂ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಹೊಸ ಅಶ್ವಮೇಧ ಬಸ್ಸುಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ: ಕೆಎಸ್ಆರ್ಟಿಸಿ ಘೋಷಣೆ
ಅಧಿಕಾರಕ್ಕೆ ಬಂದ ಮೇಲೆ 5800 ಹೊಸ ಬಸ್ಗಳು ಸೇರ್ಪಡೆ: ಸಿದ್ದರಾಮಯ್ಯ
ಕೆಎಸ್ಆರ್ಟಿಸಿಗೆ 1000 ಹೊಸ ಬಸ್ ಈ ವರ್ಷ ಸೇರ್ಪಡೆಯಾಗುತ್ತವೆ. ಇಂದು (ಫೆ.05) 100 ಬಸ್ಗಳಿಗೆ ಚಾಲನೆ ನೀಡಿದ್ದೇವೆ. KSRTC ಹಾಗೂ ನಾಲ್ಕು ನಿಗಮಗಳು ರಾಜ್ಯದ ಜನರಿಗೆ ಸಮರ್ಪಕವಾಗಿ ಬಸ್ ಸೇವೆ ಒದಗಿಸಿಕೊಂಡು ಬರುತ್ತಿವೆ. ನಾಲ್ಕು ವರ್ಷಗಳಿಂದ ಹೊಸ ಬಸ್ ಸೇರ್ಪಡೆ ಮಾಡಿರಲಿಲ್ಲ. ಕೊರೊನಾ ವೇಳೆ 3800 ಬಸ್ ನಿಲ್ಲಿಸಲಾಗಿತ್ತು. ಸಾರ್ವಜನಿಕರಿಗೆ ಬಹಳ ತೊಂದರೆ ಆಗಿತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ 5800 ಬಸ್ಗಳನ್ನು ಸೇರ್ಪಡೆ ಮಾಡುತ್ತಿದ್ದೇವೆ. ರಾಜ್ಯದ ಸುರಕ್ಷಿತ ಪ್ರಯಾಣಕ್ಕೆ ಬೇಕಾಗದ ಎಲ್ಲಾ ಸೌಲಭ್ಯ ಮಾಡಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಹಿಳಾ ಸಬಲೀಕರಣಕ್ಕಾಗಿ KSRTC ಹಾಗೂ ನಾಲ್ಕೂ ನಿಗಮದ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದ್ದೇವೆ. ಯೋಜನೆ ಜಾರಿಗೆಯಾದ ದಿನದಿಂದ ಇವತ್ತಿನವರೆಗೂ 146 ಕೋಟಿ ಜನರು ಪ್ರಯಾಣ ಮಾಡಿದ್ದಾರೆ. ಬೇರೆ ಯಾವ ಸರ್ಕಾರ ಆದರೂ ಮಾಡಿತ್ತಾ? 1 ಕೋಟಿ 17 ಲಕ್ಷ ಮಹಿಳೆಯರಿಗೆ ಹಣ ಕೊಡಲಾಗಿತ್ತು. ಹಾಗಾದರೆ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇಡಬೇಡ್ವಾ..? ಬಿಜೆಪಿಯರನ್ನು ನಂಬಬೇಡಿ. ಅವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು ಗುಜರಾತ್ನಲ್ಲಿ ಗ್ಯಾರಂಟಿಯಿಂದ ದಿವಾಳಿ ಆಗುತ್ತೆ ಅಂತ ಹೇಳಿದ್ದರು. ಈಗ ಯಾಕೆ ಮೋದಿ ಗ್ಯಾರಂಟಿ ಅಂತಿದ್ದೀರಾ? 10 ವರ್ಷಗಳಲ್ಲಿ ಯಾಕೆ ಪ್ರಧಾನಿ ಮೋದಿ ಗ್ಯಾರೆಂಟಿ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರಿ ಬಸ್ಗಳಿಗೆ ಪಿಂಕ್ ಬಣ್ಣ: ಡಿಕೆ ಶಿವಕುಮಾರ್
ನಮ್ಮ ಸರ್ಕಾರ ಬಂದ ಮೇಲೆ ನಾವು ಏನು ಮಾಡಿದ್ದೇವೆ ಮತ್ತು ಮತ್ತೆ ಬೇರೆ ರಾಜ್ಯದ ಸರ್ಕಾರ ಏನು ಮಾಡಿದೆ ಎಂಬುವುದರ ಕುರಿತು ಮಾಹಿತಿ ತರಿಸಿಕೊಂಡೆ. ನಮ್ಮ ಸಾರಿಗೆ ನಿಗಮ ದೇಶದಲ್ಲೇ ಅತ್ಯುತ್ತಮ ಸೇವೆ ನೀಡುತ್ತಿದೆ ಎಂಬುವುದು ಗೊತ್ತಾಯಿತು. ಸಾರಿಗೆ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಶಕ್ತಿ ಯೋಜನೆ ಮೂಲಕ ಸಚಿವ ರಾಮಲಿಂಗಾರೆಡ್ಡಿ ಅವರು ಪಿಂಕ್ ಬಸ್ ಕಾಂತ್ರಿ ಮಾಡಲು ಹೊರಟಿದ್ದಾರೆ. ಅದೇ ರೀತಿಯಾಗಿ ಬಸ್ಗಳಿಗೆ ಬಣ್ಣ ಬದಲಿಸಿ ಪಿಂಕ್ ಬಸ್ ಮಾಡಬೇಕು. ನಮ್ಮ ಸರ್ಕಾರದ ಅವದಿಯಲ್ಲಿನ ಬಸ್ ಎಂಬುವುದು ಗೊತ್ತಾಗಬೇಕು ಎಂದರು.
ಸಿಎಂ ಕಾರ್ಯಕ್ರಮದ ವೇಳೆ ಘೋಷಣೆ: ಕೆಎಸ್ಆರ್ಟಿಸಿ ಕಾರ್ಮಿಕ ಪೊಲೀಸರ ವಶಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ, ಕೆಎಸ್ಆರ್ಟಿಸಿ ಕಾರ್ಮಿಕ ಮುಖಂಡ ಬೋರ್ ಶೆಟ್ಟಿ 30 ವರ್ಷಗಳಿಂದ ಯೂನಿಯನ್ ಚುನಾವಣೆಯಾಗಿಲ್ಲ. ಕಳೆದ 4 ವರ್ಷಗಳಿಂದ ತುಟ್ಟಿಭತ್ಯ ಕೊಟ್ಟಿಲ್ಲ. ಇದನ್ನು ಕೂಡಲೆ ಬಿಡುಗಡೆ ಮಾಡಿ ಸಿಎಂ ಸಿದ್ದರಾಮಯ್ಯ ಅವರೇ ಎಂದು ಬೊರ್ ಶೆಟ್ಟಿ ವೇದಿಕೆ ಮುಂಭಾಗದಲ್ಲಿ ಜೋರಾಗಿ ಕೂಗಾಡಿದ್ದಾರೆ. ಕೂಡಲೆ ಪೊಲೀಸರು ಬೋರ್ ಶೆಟ್ಟಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಬೋರ್ ಶೆಟ್ಟಿ ಮಾತು ಕೇಳಿ ಸಿಎಂ ಸಿದ್ದರಾಮಯ್ಯ ” ಲೋಕಸಭೆ ಚುನಾವಣೆ ಬಳಿಕ ಮಾಡುವುದಾಗಿ” ಭರವಸೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Mon, 5 February 24