Ashwamedha Classic buses: ಹೊಸ ಅಶ್ವಮೇಧ ಬಸ್ಸುಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ: ಕೆಎಸ್ಆರ್ಟಿಸಿ ಘೋಷಣೆ
Free travel for women: ಕೆಎಸ್ಆರ್ಟಿಸಿಯು ಹೊಸ ಅಶ್ವಮೇಧ ಕ್ಲಾಸಿಕ್ ಬಸ್ಗಳನ್ನು ಕಾರ್ಯಾಚರಣೆಗೆ ಇಳಿಸುತ್ತಿದೆ. ಮಹಿಳಾ ಸುರಕ್ಷತೆ ದೃಷ್ಟಿಯಿಂದ ಹಲವು ಹೊಸ ಫೀಚರ್ಗಳನ್ನು ಒಳಗೊಂಡಿರುವ ಈ ನಾನ್ ಎಸಿ ಬಸ್ಗಳಲ್ಲಿ ಕೂಡ ಮಹಿಳೆಯರಿಗೆ ಉಚಿತ ಪ್ರಯಾಣ ಇರಲಿದೆ. ಉಚಿತ ಗ್ಯಾರಂಟಿ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಬೆಂಗಳೂರು, ಫೆಬ್ರವರಿ 5: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಹೊಸದಾಗಿ ಆರಂಭಿಸಿರುವ ಅಶ್ವಮೇಧ ಬಸ್ಸುಗಳಲ್ಲೂ (Ashwamedha Classic buses) ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ಘೋಷಣೆ ಮಾಡಲಾಗಿದೆ. ಕೆಎಸ್ಆರ್ಟಿಸಿಗೆ ಒಟ್ಟು ಸಾವಿರ ಹೊಸ ಬಸ್ಗಳು ಬರಲಿದ್ದು, ಮೊದಲ ಹಂತದಲ್ಲಿ ನೂರು ಹೊಸ ಕ್ಲಾಸಿಕ್ ಬಸ್ಗಳು ಬಂದಿವೆ. ಬಣ್ಣ ಬಣ್ಣದ ಬಗೆ ಬಗೆಯ ಹೂವುಗಳಿಂದ ಸಿಂಗಾರಗೊಂಡಿರುವ ಅಶ್ವಮೇಧ ಬಸ್ಗಳಿಗೆ ವಿಧಾನಸೌಧದ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಸೋಮವಾರ ಚಾಲನೆ ನೀಡಿದರು.
ಅಶ್ವಮೇಧ ಬಸ್ಗೆ ಚಾಲನೆ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹ ಹಾಜರಿದ್ದರು.
ಅಶ್ವಮೇಧ ಕ್ಲಾಸಿಕ್ ಬಸ್ ವಿಶೇಷತೆಗಳೇನು?
ಸದ್ಯ ಕಾರ್ಯಾರಂಭ ಮಾಡುತ್ತಿರುವ ನೂರು ಅಶ್ವಮೇಧ ಕ್ಲಾಸಿಕ್ ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮರಾ, ಮೊಬೈಲ್ ಫೋನ್ ಚಾರ್ಜ್ ಹಾಕಿಕೊಳ್ಳಲು ಆರು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. 52 ಸೀಟು, ಬಸ್ಸಿನ ಒಳಗೆ ಮತ್ತು ಹೊರ ಭಾಗದಲ್ಲಿ ಎಲ್ಇಡಿ ಮಾರ್ಗಫಲಕ, ಪ್ರಯಾಣಿಕರು ಲಗೆಜ್ ಇಡಲು ದೊಡ್ಡದಾದ ಸ್ಥಳದ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ
ಅಶ್ವಮೇಧ ಕ್ಲಾಸಿಕ್ ಬಸ್ಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಿಂದ ರಾಜಧಾನಿಗೆ ಸಂಪರ್ಕ ಕಲ್ಪಿಸುವ ಪಾಯಿಂಟ್ ಟೂ ಪಾಯಿಂಟ್ ಎಕ್ಸ್‌ಪ್ರೆಸ್ ಬಸ್ಸುಗಳಾಗಿವೆ. ಮಹಿಳೆಯರು ಈ ಬಸ್ಸುಗಳಲ್ಲೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಅಶ್ವಮೇಧ ಬಸ್ಗಳಲ್ಲೂ ಉಚಿತದ ಗ್ಯಾರಂಟಿ!
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಚುನಾವಣಾ ಪೂರ್ವ ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೊಳಿಸಿತ್ತು. ಸ್ಲೀಪರ್, ಐರಾವತ ಕ್ಲಬ್ ಕ್ಲಾಸ್, ಅಂಬಾರಿಯಂಥ ವಿಶೇಷ ಬಸ್ಗಳನ್ನು ಹೊರತುಪಡಿಸಿ ಇತರ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಅದರಂತೆ, ಇದೀಗ ಅಶ್ವಮೇಧ ಬಸ್ಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಅಂತರ್ಜಲ ಮಟ್ಟ ಕುಸಿತ: ಬೆಂಗಳೂರಿನ ಈ ಪ್ರದೇಶಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೀಗ
ಸದ್ಯ ನೂರು ಬಸ್ಗಳಿಗೆ ಚಾಲನೆ ನೀಡಲಾಗಿದ್ದು, ಇವು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ಕಾರ್ಯಾಚರಣೆ ಆರಂಭಿಸಲಿವೆ. ಮುಂದಿನ ದಿನಗಳಲ್ಲಿ ಒಟ್ಟು ಸಾವಿರ ಅಶ್ವಮೇಧ ಬಸ್ಗಳು ಕೆಎಸ್ಆರ್ಟಿಸಿಗೆ ಬರಲಿದ್ದು, ರಾಜ್ಯದಾದ್ಯಂತ ಕಾರ್ಯಾಚರಣೆ ಆರಂಭಿಸಲಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 am, Mon, 5 February 24