ಮಾ.24-26ರ ವರೆಗೆ ನಮ್ಮ ಬೆಂಗಳೂರು ಹಬ್ಬ, 23ರಂದು ವಿಧಾನಸೌಧದ ಮುಂದೆ ಕೆಂಪೇಗೌಡ ಮತ್ತು ಬಸವಣ್ಣ ಪುತ್ಥಳಿ ಅನಾವರಣ

ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಹಾಗೂ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗಳನ್ನು ವಿಧಾನಸೌಧದ ಮುಂಭಾಗದಲ್ಲಿ ಅನಾವರಣ ಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ತಿಳಿಸಿದ್ದಾರೆ.

ಮಾ.24-26ರ ವರೆಗೆ ನಮ್ಮ ಬೆಂಗಳೂರು ಹಬ್ಬ, 23ರಂದು ವಿಧಾನಸೌಧದ ಮುಂದೆ ಕೆಂಪೇಗೌಡ ಮತ್ತು ಬಸವಣ್ಣ ಪುತ್ಥಳಿ ಅನಾವರಣ
ಆರ್​.ಅಶೋಕ್ (ಎಡ ಚಿತ್ರ)
Follow us
Rakesh Nayak Manchi
|

Updated on:Feb 27, 2023 | 8:26 PM

ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ (Kempegowda Statue) ಹಾಗೂ ಜಗಜ್ಯೋತಿ ಬಸವೇಶ್ವರರ (Basavanna Statue) ಪುತ್ಥಳಿಗಳನ್ನು ಮಾರ್ಚ್ 23ರಂದು ವಿಧಾನಸೌಧದ ಮುಂಭಾಗದಲ್ಲಿ ಅನಾವರಣ ಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ (R.Ashok) ಅವರು ತಿಳಿಸಿದ್ದಾರೆ. ಮಾರ್ಚ್ 24ರಿಂದ ಮಾರ್ಚ್ 26ರವರೆಗೆ ನಡೆಯುವ ನಮ್ಮ ಬೆಂಗಳೂರು ಹಬ್ಬ ಸಂಬಂಧಿಸಿದಂತೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಅದ್ದೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರು ಪುತ್ಥಳಿಗಳ ಅನಾವರಣ ಮಾಡಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಅವರ ಸಂಸ್ಮರಣೆಯಲ್ಲಿ ಮಾರ್ಚ್ 24 ರಿಂದ 26 ರ ವರೆಗೆ ನಮ್ಮ ಬೆಂಗಳೂರು ಹಬ್ಬ ನಡೆಯಲಿದೆ. ರಾಜ್ಯ ಸರ್ಕಾರದ ವತಿಯಿಂದ ನಡೆಯಲಿರುವ ಈ ಹಬ್ಬದಲ್ಲಿ ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲೂ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ 243 ವಾರ್ಡ್​ಗಳಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ಒಳಗೊಂಡಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆದಿದೆ ಎಂದು ಸಚಿವರು ತಿಳಿಸಿದರು.

ವಿಶ್ವದಲ್ಲಿಯೇ ಶರವೇಗದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿರುವ ಉದ್ಯಾನ ನಗರಿಯ ಹಿರಿಮೆ ಗರಿಮೆಯನ್ನು ಜಗತ್ತಿಗೆ ಪರಿಚಯಿಸುವ ಸದುದ್ದೇಶವನ್ನು ಹೊಂದಿರುವ ಈ ಹಬ್ಬದ ಆಯೋಜನೆ ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಅವರಿಗೂ ಗೌರವವನ್ನು ಸೂಚಿಸುವಂತಹುದಾಗಿದೆ. ನಮ್ಮ ಬೆಂಗಳೂರು ಹಬ್ಬಕ್ಕೆ ಸಂಬಂಧಿಸಿದಂತೆ ಆಹಾರೋತ್ಸವ, ಸಂಗೀತ ಸಂಗೀತ ಸಂಜೆ, ಚಿತ್ರಕಲಾ ಪ್ರದರ್ಶನ, ವಿಂಟೆಜ್ ಕಾರ್ ಮತ್ತು ಬೈಕ್ ಪ್ರದರ್ಶನ, ಶ್ವಾನ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ ಎಂದರು.

ಇದನ್ನೂ ಓದಿ: Bangalore-Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದರ ಪಟ್ಟಿ ಬಿಡುಗಡೆ

ನಗರದ ಎಲ್ಲಾ ವಾರ್ಡುಗಳಲ್ಲಿನ ಪ್ರಮುಖ ಉದ್ಯಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ಯೋಜಿಸಲಾಗಿದೆ, ಅಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆ. ಪ್ರಮುಖ ಬಟ್ಟೆ ಮತ್ತು ಸಿದ್ಧ ಉಡುಪು ಅಂಗಡಿಗಳಲ್ಲಿ ಹಾಗೂ ಇತರೆ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಗ್ರಾಹಕರಿಗೆ ಸೋಡಿ ಅಥವಾ ರಿಯಾಯಿತಿ ದೊರಕಿಸಿಕೊಡಲು ಮಾತುಕತೆ ನಡೆಯುತ್ತಿದೆ ಎಂದರು.

ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ್, ಅಬಕಾರಿ ಸಚಿವ ಕೆ ಗೋಪಾಲಯ್ಯ, ತೋಟಗಾರಿಕಾ ಹಾಗೂ ಯೋಜನಾ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಅವರು ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು. ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಏನ್. ಮಂಜುಳಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಜಯರಾಮ್ ರಾಯಪುರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಎ. ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಲತಾ ಮತ್ತಿತರರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Mon, 27 February 23