ಬೆಂಗಳೂರು: ಬೆಂಗಳೂರಿನ ಸಂಸ್ಕೃತಿ ಮತ್ತು ವಿಕಸನವನ್ನು ನಗರದಲ್ಲಿ ನೆಲೆಸಿರುವ ಪರ ಭಾಷಿಕರಿಗೆ ಮತ್ತು ನಾಡಿನ ಜನರಿಗೆ ಪರಿಚಯಿಸಲು ಉದ್ದೇಶದಿಂದ ನಮ್ಮ ಬೆಂಗಳೂರು ಹಬ್ಬವನ್ನು (Namma Bengaluru Habba) ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ (R Ashok) ಹೇಳಿದ್ದಾರೆ. ಮಾರ್ಚ್ 25 ಮತ್ತು 26 ರಂದು ಎರಡು ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮವು ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧ ಸುತ್ತ ಮುತ್ತ ನಡೆಯಲಿದೆ. ಈ ಹಬ್ಬದಲ್ಲಿ ನಾಟಕ, ಕಲೆ, ಸಾಂಪ್ರದಾಯಿಕ, ನೃತ್ಯ ಮತ್ತು ಸಾಂಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ವಿಧಾನಸೌಧದಲ್ಲಿ ಬೆಂಗಳೂರು ಹಬ್ಬದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು ಈ ವರ್ಷ ಸಮಯಾವಕಾಶದ ಕೊರತೆಯಿಂದ ಚಿಕ್ಕ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಬರುವ ವರ್ಷದಲ್ಲಿ ಮೈಸೂರು ದಸರಾ ರೀತಿ ಅದ್ಧೂರಿಯಾಗಿ ಮಾಡಲಾಗುವುದು. ಈ ಬೆಂಗಳೂರು ಹಬ್ಬವನ್ನು ಮಾರ್ಚ್ ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಗ್ರಾಹಕರಿಗೆ ಶಾಕ್, ಮಾರುಕಟ್ಟೆಯಲ್ಲಿ ಹೆಚ್ಚಿದ ಹೂ, ಹಣ್ಣುಗಳ ಬೆಲೆ
ಇನ್ನು ವಿಧಾನಸೌಧದ ಮುಂಭಾಗದಲ್ಲಿ ನಿರ್ಮಾಣಗೊಂಡಿರುವ ನಾಡಪ್ರಭು ಕೆಂಪೇಗೌಡ ಮತ್ತು ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಯನ್ನು ಮಾರ್ಚ್ 26ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಾರ್ಪಣೆಗೊಳಿಸಲಿದ್ದಾರೆ. ಬೆಂಗಳೂರಿನ ಸಂಸ್ಕೃತಿ ಮತ್ತು ಪರಿವರ್ತನೆಯನ್ನು ಪ್ರದರ್ಶಿಸುವುದು ಉತ್ಸವದ ಉದ್ದೇಶವಾಗಿದೆ. ನಗರಕ್ಕೆ ಬರುವವರೆಲ್ಲರೂ ಬೆಂಗಳೂರಿಗರಾಗಬೇಕು ಮತ್ತು ಅದರ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿ ಬೆಂಗಳೂರು ಹಬ್ಬವನ್ನು ಆಯೋಜಿಸಲಾಗಿದ್ದು, ಇಲಾಖೆಯ ಅಧಿಕಾರಿಗಳು ಮಾತನಾಡಿ, ಬೆಂಗಳೂರು ಹಬ್ಬವನ್ನು ನಡೆಸಲು ಬಹಳ ಸಮಯದಿಂದ ನಡೆಸಲು ಚಿಂತನೆ ನಡೆಸಲಾಗಿತ್ತು. ಆದರೆ ಅನುಮತಿ ಮತ್ತು ನಿಧಿಯ ಸಮಸ್ಯೆಯಿಂದ ವಿಳಂಬಾಯ್ತು. ಈಗ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಅದರ ಪ್ರಕಾರ ಮುಂದಿನ ವರ್ಷದ ಬೆಂಗಳೂರು ಹಬ್ಬಕ್ಕೆ ಆರು ತಿಂಗಳ ಮೊದಲು ಸಮಿತಿಯನ್ನು ರಚಿಸಲಾಗುವುದು, ಈ ಸಮಿತಿಯು ಎಲ್ಲ ವ್ಯವಸ್ಥೆಗಳು ನೋಡಿಕೊಳ್ಳಲಿದೆ.
ಅಲ್ಲದೆ ಮುಂದಿನ ವರ್ಷದಿಂದ ಜನವರಿಯಲ್ಲಿ ಸಂಕ್ರಾಂತಿ ವಾರದ ಮೊದಲ ಶನಿವಾರ ಮತ್ತು ಭಾನುವಾರದಂದು ಬೆಂಗಳುರು ಹಬ್ಬವನ್ನು ಆಯೋಜಿಸಲಾಗುವುದು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ