Namma Metro: ಪಾಳು ಬಿದ್ದ ಮೆಟ್ರೋದ 31 ವಾಣಿಜ್ಯ ಮಳಿಗೆಗಳು, ಗ್ರಾಹಕರಿಲ್ಲದೆ ವ್ಯಾಪಾರಗಳಿಗೆ ಆರ್ಥಿಕ ಸಂಕಷ್ಟ
ಮೆಟ್ರೋ ಪ್ರಯಾಣಿಕರಿಂದ ಬರ್ತಿರೋ ಆದಾಯ ಸಾಲುತ್ತಿಲ್ಲ ಎಂದು ಬೆಂಗಳೂರಿನ ಸಾಕಷ್ಟು ಮೆಟ್ರೋ ಸ್ಟೇಷನ್ ಗಳ ಕೆಳಗೆ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಬಾಡಿಗೆ ನೀಡಲಾಗಿತ್ತು. ಆದರೆ ವಿವೇಕಾನಂದ ಮೆಟ್ರೋ ಸ್ಟೇಷನ್ ಬಳಿ ನಿರ್ಮಾಣ ಮಾಡಿದ್ದ ಮಳಿಗೆಗಳು ಗ್ರಾಹಕರಿಲ್ಲದೆ ಖಾಲಿ ಖಾಲಿಯಾಗಿ ಪಾಳುಬಿದ್ದಿದೆ.
ಬೆಂಗಳೂರು, ಜೂನ್.15: ಓಲ್ಡ್ ಮದ್ರಾಸ್ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ (Swamy Vivekananda Metro Station) ಬಳಿ ಬಿಎಂಆರ್‌ಸಿಎಲ್ (BMRCL) ನಿರ್ಮಿಸಿರುವ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರವಿಲ್ಲದೆ ವ್ಯಾಪಾರಿಗಳು ಮಳಿಗೆಗಳನ್ನು ಖಾಲಿ ಮಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಮಳಿಗೆಗಳು ಈಗ ಪಾಳು ಬಿದ್ದಿವೆ. ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ಬಳಿ ನಿರ್ಮಿಸಿದ್ದ 31 ಮಳಿಗೆಗಳ ಪೈಕಿ ನಾಲ್ಕೈದು ಮಳಿಗೆಗಳನ್ನು ಮಾತ್ರ ಬಾಡಿಗೆ ನೀಡಲಾಗಿದೆ. ಉಳಿದ ಮಳಿಗೆಗಳಿಗೆ ಬೀಗ ಹಾಕಲಾಗಿದೆ.
ವಿವೇಕಾನಂದ ಮೆಟ್ರೊ ನಿಲ್ದಾಣದ ನಿತ್ಯ ಪ್ರಯಾಣಿಕರಿಂದ ತುಂಬಿರುತ್ತದೆ. ಆದರೆ ಈ ಮಳಿಗೆಗಳತ್ತ ಜನರು ಬಾರದೆ ಇರುವುದು ವ್ಯಾಪಾರಿಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ನಾವು ಬರುವ ತಿಂಗಳು ಖಾಲಿ ಮಾಡ್ತಿದ್ದೀವಿ ಕೊರೊನಾದಿಂದ ಅಂಗಡಿಗಳು ಖಾಲಿ ಆಗಿದೆ ಎಂದು ಅಂಗಡಿ ಮಾಲಕಿ ಶಾಂತ ತಿಳಿಸಿದ್ದಾರೆ.
ಇನ್ನೂ ಈ ಮಳಿಗೆಗಳಲ್ಲಿ ಆಟಿಕೆ ವಸ್ತು, ಅಲಂಕಾರಿಕ ವಸ್ತುಗಳು ಸೇರಿದಂತೆ ಗೃಹ ಉಪಯೋಗಿ ವಸ್ತುಗಳನ್ನು ಸಹ ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆರಂಭದಲ್ಲಿ ವ್ಯಾಪಾರಿಗಳು ಈ ಮಳಿಗೆಗಳನ್ನು ಹರಾಜು ಪ್ರಕ್ರಿಯೆಯಲ್ಲಿ ಪಡೆದುಕೊಂಡಿದ್ದರು. ಕ್ರಮೇಣವಾಗಿ ಈ ಮಳಿಗೆಗಳತ್ತ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಸದ್ಯ ಮೂರ್ನಾಲ್ಕು ಅಂಡಿಗಳು ಮಾತ್ರ ಓಪನ್ ಇದೆ. ಬಿಎಂಆರ್ಸಿಎಲ್ ನಿಂದ ಖಾಸಗಿ ಏಜೆನ್ಸಿಗೆ ಟೆಂಡರ್ ನೀಡಲಾಗಿದ್ಯಂತೆ, ಟೆಂಡರು ಪಡೆದವ್ರು ಸರಿಯಾಗಿ ಮಳಿಗೆಗಳಿಗೆ ಪ್ರಚಾರ ನೀಡಿಲ್ಲ. ಹಾಗಾಗಿ ಅಂಗಡಿಗಳು ಖಾಲಿ ಆಗ್ತಿವೆ ಎಂದು ಮೆಟ್ರೋ ಪ್ರಯಾಣಿಕರು ತಿಳಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಬಿಸಿಯೂಟ ಸೇವಿಸಿ 48 ಮಕ್ಕಳು ಅಸ್ವಸ್ಥ, ಮೂವರ ಸ್ಥಿತಿ ಚಿಂತಾಜನಕ
ಒಟ್ಟಿನಲ್ಲಿ ಮೆಟ್ರೋ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಎಲ್ಲಾ ಮೆಟ್ರೋ ಸ್ಟೇಷನ್ ಒಳಗೂ ಮತ್ತು ಹೊರಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ನೀಡ್ತಿದೆ. ಆದರೆ ಕೆಲವೊಂದು ಸ್ಟೇಷನ್ ಗಳ ಬಳಿ ಮಾತ್ರ ಸರಿಯಾಗಿ ನಿರ್ವಹಣೆ ಮತ್ತು ಪ್ರಚಾರ ಇಲ್ಲದೆ ಅಂಗಡಿಗಳು ಪಾಳು ಬಿಳ್ತಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ