
ಬೆಂಗಳೂರು, ಜೂನ್ 21: ಶೀಘ್ರದಲ್ಲೇ ನಂದಿನಿ ಹಾಲಿನ (Nandini Milk) ಪ್ಯಾಕೆಟ್ ಬದಲಾಗುವ ಸುಳಿವು ದೊರೆತಿದೆ. ಮೆಕ್ಕೆಜೋಳ ಬಳಸಿ ತಯಾರಾಗುವ ಬಯೋಡಿಗ್ರೇಡೆಬಲ್ ಪ್ಯಾಕಿಂಗ್ ವ್ಯವಸ್ಥೆ ಜಾರಿಗೆ ಬಮೂಲ್ (BAMUL) ಮೊದಲ ಪ್ರಯೋಗಕ್ಕೆ ಹೊರಟಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಈ ತಂತ್ರಜ್ಞಾನ ಪರಿಚಯಿಸಲು ಬಮೂಲ್ ಚಿಂತನೆ ನಡೆಸಿದೆ. ಶುಕ್ರವಾರವಷ್ಟೇ ಬಮೂಲ್ ಅಧ್ಯಕ್ಷ ಪಟ್ಟ ಪಡೆದ ಡಿ.ಕೆ.ಸುರೇಶ್, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ಪಡೆಯುತ್ತಿದ್ದಂತೆಯೇ ನಂದಿನಿ ಹಾಲಿನ ಪ್ಯಾಕೆಟ್ಗೆ ಹೊಸರೂಪ ಕೊಡಲು ಚಿಂತನೆ ನಡೆಸಿದ್ದಾರೆ.
ಸದ್ಯ ಪಾಲಿಥಿನ್ ಪ್ಯಾಕೆಟ್ಗಳಲ್ಲಿನಂದಿನಿ ಹಾಲು ಮಾರಾಟವಾಗುತ್ತಿದೆ. ಇದಕ್ಕೆ ಹೊಸ ರೂಪ ಕೊಡಲು ಸಜ್ಜಾಗಿರುವ ಬಮೂಲ್, ಇದೀಗ ವಿದೇಶದಲ್ಲಿ ಬಳಕೆಯಲ್ಲಿರುವ ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್ ಕವರ್ ತಯಾರಿಕೆಗೆ ಚಿಂತನೆ ನಡೆಸಿದೆ.
ಸದ್ಯ ಕನಕಪುರದ ಶಿವನಹಳ್ಳಿಯಲ್ಲಿ ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್ ಕವರ್ ತಯಾರಿಕೆ ಪ್ರಯೋಗ ನಡೆಸಲು ಬಮೂಲ್ ನೂತನ ಅಧ್ಯಕ್ಷ ಡಿ.ಕೆ.ಸುರೇಶ್ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಇದೇ ಮಾದರಿಯಲ್ಲಿ ಹಾಲು ಪೂರೈಕೆ ಮಾಡುವ ಯೋಜನೆ ಪ್ರಸ್ತಾಪಿಸಿದ್ದಾರೆ.
ವಿದೇಶಗಳಲ್ಲಿ ಮಾತ್ರ ಬಳಕೆಯಲ್ಲಿರುವ ಈ ತಂತ್ರಜ್ಞಾನವನ್ನು ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗುತ್ತಿದೆ. ಸದ್ಯ ಈ ಯೋಜನೆ ಜಾರಿಯಾದರೆ ಪರಿಸರಸ್ನೇಹಿ ಹಾಲಿನ ಪ್ಯಾಕೆಟ್ಗಳು ಗ್ರಾಹಕರ ಮನೆ ಸೇರಲಿವೆ.
ನೂತನ ತಂತ್ರಜ್ಞಾನದಡಿ ತಯಾರಿಸಲಾಗುವ ಬಯೋಡಿಗ್ರೇಡೇಬಲ್ ಪ್ಯಾಕೇಟ್ಗಳು ಕೇವಲ 6 ತಿಂಗಳಲ್ಲಿ ಮಣ್ಣಿನಲ್ಲಿ ಕರಗುವ ಸಾಮರ್ಥ್ಯ ಹೊಂದಿದ್ದು, ಒಂದು ವೇಳೆ ನಂದಿನಿ ಹಾಲಿನ ಪ್ಯಾಕಿಂಗ್ ಇದರಲ್ಲೇ ಆಆದರೆ, ಪರಿಸರ ಸಂರಕ್ಷಣೆಗೆ ಉತ್ತಮ ಕೊಡುಗೆಯಾಗಲಿದೆ. ಅಲ್ಲದೇ ಮೆಕ್ಕೆಜೋಳದಿಂದ ಈ ಪ್ಯಾಕೇಟ್ಗಳು ತಯಾರಾಗುವುದರಿಂದ ರೈತರು ಇದನ್ನು ಗೊಬ್ಬರದ ರೂಪದಲ್ಲಿ ಬಳಸಲೂ ಸಹಾಯವಾಗಲಿದೆ.
ಇದನ್ನೂ ಓದಿ: ಬಮೂಲ್ ನೂತನ ಅಧ್ಯಕ್ಷರಾಗಿ ಡಿಕೆ ಸುರೇಶ್ ಆಯ್ಕೆ
ಸದ್ಯ ಬಮೂಲ್ ನಿತ್ಯ 14 ಲಕ್ಷ ಲೀಟರ್ ಹಾಲು ಹಾಗೂ ಮೊಸರು ಮಾರಾಟ ಮಾಡುತ್ತಿದೆ. ಇದೀಗ ನಿತ್ಯ ಸುಮಾರು 20 ಲಕ್ಷ ಪ್ಯಾಕೆಟ್ಗಳ ಬಳಕೆಯಾಗುತ್ತಿದ್ದು, ಈಗ ಬಯೋಡಿಗ್ರೇಡೆಬಲ್ ಪ್ಯಾಕೆಟ್ ಅಳವಡಿಕೆಯಾದ್ರೆ ಪರಿಸರಕ್ಕೆ ಜೊತೆಗೆ ಗ್ರಾಹಕರ ಆರೋಗ್ಯಕ್ಕೂ ಉತ್ತಮ ಎಂದು ಬಮೂಲ್ ಹೇಳಿದೆ. ಈ ಹೊಸ ಯೋಜನೆಗೆ ಬಮೂಲ್ ನೂತನ ಅಧ್ಯಕ್ಷರು ಒಲವು ತೋರುತ್ತಿದ್ದು, ಇದು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
Published On - 9:48 am, Sat, 21 June 25