ನೀಟ್ ಪರೀಕ್ಷೆ ವಿವಾದ; ಮೆಡಿಕಲ್, ಎಂಜಿನಿಯರಿಂಗ್ ಸೀಟ್ ಗೊಂದಲ, ಈ ವಾರದಲ್ಲಿ ಕೌನ್ಸೆಲಿಂಗ್ ದಿನಾಂಕ ಪ್ರಕಟ
ನೀಟ್ ಪರೀಕ್ಷೆಯ ವಿವಾದ ಹಾಗೂ ಎಡವಟ್ಟಿನಿಂದ ಈ ವರ್ಷ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಓದುವ ಕನಸ್ಸು ಕಂಡಿರುವ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ಟೆನ್ಷನ್ ಶುರುವಾಗಿದೆ. ಅಂದುಕೊಂಡಂತೆ ನಡೆದಿದ್ರೆ ಈ ವರ್ಷ ಈಗಾಗಲೇ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಸೀಟ್ ಹಂಚಿಕೆ ನಡೆಯಬೇಕಿತ್ತು. ಆದ್ರೆ ನೀಟ್ ಪರೀಕ್ಷೆಯಲ್ಲಿನ ಎಡವಟ್ಟಿನಿಂದ ಸೀಟ್ ಹಂಚಿಕೆ ವಿಳಂಬವಾಗಿದ್ದು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ.
ಬೆಂಗಳೂರು, ಜುಲೈ.31: ವೈದ್ಯಕೀಯ ಓದುವ ಕನಸ್ಸು ಕಂಡಿರುವ ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಮೆಡಿಕಲ್ ಸೀಟ್ ಗೊಂದಲದಲ್ಲಿ ಎಂಜಿನಿಯರಿಂಗ್ ಸೀಟ್ ಪಡೆಯಲು ಪೋಷಕರು ಮುಂದಾಗುತ್ತಿದ್ದಾರೆ. ಪೋಷಕರಿಗೆ ತಮ್ಮ ಮಕ್ಕಳನ್ನು ಓದಿಸಲು ವೈದ್ಯಕೀಯ ಸೀಟ್ ಸಿಗುತ್ತ ಇಲ್ಲ. MBBS ಸೀಟ್ ಸಿಗದೆ ಇದ್ರೆ ಎಂಜಿನಿಯರಿಂಗ್ ಸೀಟ್ ಪಡೆದುಕೊಳ್ಳುವುದು ಉತ್ತಮ ಎಂಬ ಗೊಂದಲ ಎದುರಾಗಿದೆ. ಈಗಾಗಲೇ ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆದ್ಯತೆಗಳನ್ನು ದಾಖಲಿಸಲು ಎಂಜಿನಿಯರಿಂಗ್, ಪಶುವೈದ್ಯಕೀಯ ಇತ್ಯಾದಿ ಕೋರ್ಸ್ ಗಳಿಗೆ ಅವಕಾಶ ನೀಡಿದೆ. ಆದರೆ ಇನ್ನೂ ನೀಟ್ ಪರೀಕ್ಷೆ ಫಲಿತಾಂಶದ ಪಟ್ಟಿ ಕೆಇಎಗೆ ಹಸ್ತಾಂತರಿಸದ ಹಿನ್ನಲೆ ವೈದ್ಯಕೀಯ ಸೀಟ್ ಹಂಚಿಕೆಗೆ ಆದ್ಯತೆಗಳನ್ನು ದಾಖಲಿಸಲು ಅವಕಾಶ ನೀಡಿಲ್ಲ. ಹೀಗಾಗಿ ಮೆಡಿಕಲ್ ಓದುವ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.
ಎಂಜಿನಿಯರಿಂಗ್ ಕೋರ್ಸ್ಗೆ ಆದ್ಯತೆ ಆಯ್ಕೆ ಮಾಡಬೇಕಾ ಬೇಡ್ವಾ? ಈಗ ಮಾಡದೆ ವೈದ್ಯಕೀಯ ಸೀಟ್ ಸಿಗದೆ ಇದ್ರೆ ಈ ಕಡೆ ಎಂಜಿನಿಯರಿಂಗ್ ಸೀಟ್ ಕೂಡಾ ಇಲ್ಲದಂತಾಗುತ್ತೆ. ಹೀಗಾಗಿ ಆದ್ಯತೆ ನೀಡಬೇಕಾ ಬೇಡ್ವಾ ಎಂಬ ಆತಂಕದಲ್ಲಿ ಪೋಷಕರಿದ್ದಾರೆ. ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಮಾತ್ರ ರಾಷ್ಟ್ರೀಯ ವೈದ್ಯಕೀಯ ಆಯೋಗ ನೀಟ್ ಪರೀಕ್ಷೆಯ ಫಲಿತಾಂಶದ ಪಟ್ಟಿಯನ್ನು ಕೆಇಎಗೆ ಹಸ್ತಾಂತರಿಸಿದ ನಂತರ ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಇತರ ವೈದ್ಯಕೀಯ ಕೋರ್ಸುಗಳ ಆದ್ಯತೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು.
ಇದನ್ನೂ ಓದಿ: ಮನೆಯಲ್ಲಿ ಈ ಜಾಗಗಳಲ್ಲಿ ಎಂದಿಗೂ ನೀರಿನ ಟ್ಯಾಂಕ್ ಇಡಬಾರದು, ಇಲ್ಲದಿದ್ದರೆ ಬಡತನ ತಾಂಡವವಾಡುತ್ತದೆ
ಪೋಷಕರಿಗೆ ಹಾಗೂ ವಿದ್ಯಾರ್ಥಿಗಳು ಟೆನ್ಷನ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನಲಾಗುತ್ತಿದೆ. ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎಲ್ಲ ಕೋರ್ಸುಗಳ ಪ್ರವೇಶಕ್ಕೆ ಈ ಬಾರಿ ಏಕಕಾಲದಲ್ಲೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುವುದು, ಅಭ್ಯರ್ಥಿಗಳಾಗಲಿ ಅಥವಾ ಪೋಷಕರಾಗಲಿ ಗಾಬರಿ ಪಡುವ ಅಗತ್ಯ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ ತಿಳಿಸಿದ್ದಾರೆ.
ಒಟ್ನಲ್ಲಿ ಸೀಟ್ ಹಂಚಿಕೆ ವಿಚಾರದಲ್ಲಿ ಕೆಇಎ ರಾಷ್ಟ್ರೀಯ ವೈದ್ಯಕೀಯ ಆಯೋಗದ ಜತೆಗೂ ನಿರಂತರ ಸಂಪರ್ಕದಲ್ಲಿ ಇದ್ದು, ಈ ವಾರದಲ್ಲಿ ರಾಷ್ಟ್ರಮಟ್ಟದ ವೈದ್ಯಕೀಯ ಕೌನ್ಸೆಲಿಂಗ್ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಬಳಿಕ ರಾಜ್ಯದ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಲಾಗುವುದು ಅಂತಾ ಹೇಳಿದ್ದು ಅಭ್ಯರ್ಥಿಗಳು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ಕೆಇಎ ವೆಬ್ ಸೈಟ್ ಗೆ ಭೇಟಿ ಕೊಡಬೇಕು. ಆ ಮೂಲಕ ಕಾಲಕಾಲಕ್ಕೆ ಕೆಇಎ ಹೊರಡಿಸುವ ಪ್ರಕಟಣೆಗಳನ್ನು ಗಮನಿಸಿ, ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಅಂತಾ ಅವರು ಸಲಹೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ