AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯ ಬೆಂಗಳೂರು-ಮೈಸೂರು ಪಾದಯಾತ್ರೆಗೆ ಆರಂಭದಲ್ಲೇ ವಿಘ್ನ, ಅಪಸ್ವರ ಎತ್ತಿದ ಜೆಡಿಎಸ್

ಮೂಡ ಅಕ್ರಮದ ವಿರುದ್ದ ವಿಪಕ್ಷಗಳಾದ ಬಿಜೆಪಿ ಜೆಡಿಎಸ್, ಸಿದ್ದರಾಮಯ್ಯ ಸರ್ಕಾರದ ಹಗರಣದ ವಿರುದ್ದ ಮುಗಿಬಿದ್ದಿವೆ. ಈ ಅಕ್ರಮದ ವಿರುದ್ದ ಚಾಟಿ ಬೀಸುವುದಕ್ಕೆ ಬೆಂಗಳೂರು ಟು ಮೈಸೂರು ಪಾದಯಾತ್ರೆಯ ಅಸ್ತ್ರ ಪ್ರಯೋಗ ಮಾಡಬೇಕೆಂಬ ಸಿದ್ದತೆಯಲ್ಲಿರುವಾಗಲೇ ಜೆಡಿಎಸ್ ನಿಂದ ಒಂದಿಷ್ಟು ಅಪಸ್ವರ ಶುರುವಾಗಿದೆ. ಪಾದಯಾತ್ರೆ ನಡೆಸಿ ಸರ್ಕಾರ ವಿರುದ್ದ ಅಬ್ಬರಿಸಲು ಬಿಜೆಪಿ ಹೊರಟಿದ್ದ ನಾಯಕರಲ್ಲಿ ಗೊಂದಲಗಳು ಉಂಟಾಗಿವೆ.

ಬಿಜೆಪಿಯ ಬೆಂಗಳೂರು-ಮೈಸೂರು ಪಾದಯಾತ್ರೆಗೆ ಆರಂಭದಲ್ಲೇ ವಿಘ್ನ, ಅಪಸ್ವರ ಎತ್ತಿದ ಜೆಡಿಎಸ್
ರಮೇಶ್ ಬಿ. ಜವಳಗೇರಾ
|

Updated on: Jul 30, 2024 | 10:06 PM

Share

ಬೆಂಗಳೂರು, (ಜುಲೈ 30): ವಾಲ್ಮೀಕಿ, ಮುಡಾ ಹಗರಣ ಖಂಡಿಸಿ ಬೆಂಗಳೂರಿನಿಂದ ಮೈಸೂರಿಗೆ ಹೆಜ್ಜೆ ಹಾಕಲು ವಿಜಯೇಂದ್ರ ಆ್ಯಂಡ್ ಟೀಮ್ ಸಜ್ಜಾಗಿದೆ. ಇದೇ ಆಗಸ್ಟ್​ 3ರಿಂದ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಗೆ ಮುಹೂರ್ತ ಜೊತೆಗೆ ರೂಟ್ ಮ್ಯಾಪ್​ ಸಹ ಸಿದ್ಧವಾಗಿದೆ. ಆದ್ರೆ, ಮೈಸೂರು ದಾರಿಯಲ್ಲಿ ಹೆಜ್ಜೆ ಹಾಕುವ ಮೊದಲೇ ಪಾದಯಾತ್ರೆಯ ದಾರಿ ಕವಲುದಾರಿಯಾಗಿದೆ. ನೀವು ಆ ಕಡೆ ಹೋದರೆ, ನಾವು ಈ ಕಡೆ ಪಾದಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳುತ್ತಿದ್ದಾರೆ. ಮತ್ತೊಂದೆಡೆ ಈ ಪಾದಯಾತ್ರೆಗೆ ಜೆಡಿಎಸ್ ನಿಂದ ಒಂದಿಷ್ಟು ಅಪಸ್ವರ ಶುರುವಾಗಿದೆ.

ಯತ್ನಾಳ್, ಜಾರಕಿಹೊಳಿಯಿಂದ ಪರ್ಯಾಯ ಪಾದಯಾತ್ರೆ

ಇನ್ನೂ ಮೂರು ದಿನ ಕಳೆದ್ರೆ ಕೆಂಗೇರಿಯಿಂದ ಹೆಜ್ಜೆ ಹಾಕಲು ಕೇಸರಿ ಕಲಿಗಳು ಸಜ್ಜಾಗಿದ್ದಾರೆ. ಇದಕ್ಕಾಗಿ ಮೊನ್ನೆ ದೋಸ್ತಿಗಳ ಸಭೆ, ನಿನ್ನೆ ಬಿಜೆಪಿ ಫೂರ್ವಭಾವಿ ಮೀಟಿಂಗ್ ಕೂಡಾ ನಡೆದಿದೆ. ಮೈಸೂರು ಚಲೋ ನಡೆಸಿದ್ರೆ, ವಿಜಯೇಂದ್ರ ನಾಯಕತ್ವವೂ ಗಟ್ಟಿಯಾಗಲಿದೆ. ಆದ್ರೆ, ವಿಜಯೇಂದ್ರ ಅಂದ್ರೆ ಉರಿದುರಿದು ಬೀಳುತ್ತಿರುವ ಯತ್ನಾಳ್, ವಾಲ್ಮೀಕಿ ನಿಗಮದ ಅವ್ಯವಹಾರ ಮುಂದಿಟ್ಟುಕೊಂಡು ಪ್ರತ್ಯೇಕ ಪಾದಯಾತ್ರೆಯ ಬಾಣ ಬಿಟ್ಟಿದ್ದಾರೆ. ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಪ್ರರ್ಯಾಯ ಪಾದಯಾತ್ರೆಯ ಬಗ್ಗೆ ಚರ್ಚೆ ನಡೆಸಿದ್ದು, ಕೂಡಲಸಂಗಮ ಅಥವಾ ಹುಬ್ಬಳ್ಳಿಯಿಂದ ಬಳ್ಳಾರಿಯವರೆಗೆ ಹೆಜ್ಜೆ ಹಾಕಲು ಸ್ಕೆಚ್ ಹಾಕಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಪಾದಯಾತ್ರೆ ವಿಚಾರ ಕವಲುದಾರಿಯಾಗಿದೆ.

ಇದನ್ನೂ ಓದಿ: ಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿ, ಸಿದ್ದರಾಮಯ್ಯಗೇ ಚಿನ್ನದ ಪದಕ: ಬಿಜೆಪಿ ವ್ಯಂಗ್ಯ

ಪಾದಯಾತ್ರೆಗೆ ಆರಂಭದಲ್ಲೇ ಜೆಡಿಎಸ್ ಅಪಸ್ಪರ

ಇನ್ನೂ ಬಿಜೆಪಿಯ ಮುಡಾಯಾತ್ರೆಗೆ ಜೆಡಿಎಸ್ ಕೈಜೋಡಿಸಿದೆ. ಆದ್ರೆ, ಇಂದು (ಜುಲೈ30) ಕೋರ್‌ ಕಮಿಟಿ ಸಭೆ ನಡೆಸಿರುವ ಜೆಡಿಎಸ್ ನಾಯಕರು, ಮುಂದೂಡಿಕೆ ಬಗ್ಗೆ ಚರ್ಚಿಸಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಸಂಸತ್ ಅಧಿವೇಶನದಲ್ಲಿ ಬ್ಯುಸಿ ಇದ್ದಾರೆ. ಅಲ್ಲದೇ, ವ್ಯಾಪಕ ಮಳೆಯಾಗುತ್ತಿರುವುದರಿಂದ ಪಾದಯಾತ್ರೆ ಮುಂದೂಡುವಂತೆ ಜೆಡಿಎಸ್ ನಾಯಕರು, ಬಿಜೆಪಿಗೆ ಮನವಿ ಮಾಡಿದ್ದಾರೆ. ಯಾಕಂದ್ರೆ, ಜೆಡಿಎಶ್ ಪ್ರಾಬಲ್ಯದ ಹಳೇ ಮೈಸೂರು ಭಾಗದಲ್ಲಿ ಪಾದಯಾತ್ರೆಯನ್ನ ಬಿಜೆಪಿ ಲೀಡ್ ಮಾಡಿದ್ರೆ, ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆ ಬರುತ್ತೆ. ಹೀಗಾಗಿ ಕುಮಾರಸ್ವಾಮಿ ಸಂಸತ್ ಅಧಿವೇಶನ ಮುಗಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡರೆ ಜೆಡಿಎಸ್ ಕಾರ್ಯಕರ್ತರಿಗೂ ಉತ್ಸಾಹ ಬರುತ್ತೆ ಎನ್ನುವುದು ಜೆಡಿಎಸ್ ನಾಯಕರ ವಾದ.

ಪಾದಯಾತ್ರೆ ಬಗ್ಗೆ ಗೊಂದಲ ಮೂಡಲು ಕಾರಣ

ಇನ್ನು ಜೆಡಿಎಸ್ ನಲ್ಲಿ ಪಾದಯಾತ್ರೆ ಬಗ್ಗೆ ಗೊಂದಲ ಮೂಡಲು ಹಲವು ಕಾರಣಗಳಿವೆ. ಕೇಂದ್ರ ಸಚಿವ ಕುಮಾರಸ್ವಾಮಿ ಸದ್ಯ ದೆಹಲಿಯ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಪಾದಯಾತ್ರೆ ಮಾರ್ಗದುದ್ದಕ್ಕೂ ಹೇಳಿ ಕೇಳಿ ಜೆಡಿಎಸ್ ಪ್ರಾಬಲ್ಯವನ್ನು ಹೊಂದಿದೆ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಪಾದಯಾತ್ರೆ ಮಾಡಿದರೆ ಅದು ಜೆಡಿಎಸ್ ಗಿಂತ ಬಿಜೆಪಿಗೆ ಹೆಚ್ಚು ಲಾಭ. ಅಲ್ಲದೇ ಮಳೆ ಮುನ್ಸೂಚನೆಯ ಪ್ರಕಾರ ಇನ್ನು ಕೆಲ ದಿನಗಳ ಕಾಲ ಮಳೆ ಮುಂದುವರಿಯಲಿದೆ. ಹಾಗೇ ಪ್ರಕೃತಿ ವಿಕೋಪ,ಅವಘಡಗಳು ಹಲವು ಕಡೆ ಆಗಿದೆ. ಈ ಸಂದರ್ಭದಲ್ಲಿ ಪಾದಯಾತ್ರೆ ನಡೆಸಿವುದು ಬೇಡ ಎಂಬ ತೀರ್ಮಾನನ್ನು ಜೆಡಿಎಸ್ ಕೈಗೊಂಡಿದೆ.

ಅಲ್ಲದೇ ಸ್ವತಃ ಕುಮಾರಸ್ವಾಮಿ ಅವರೇ ಜಿಟಿ ದೇವೇಗೌಡರಿಗೆ ಕೋರ್ ಕಮಿಟಿ ಸಭೆ ನಡೆಸಲು ಸೂಚಿಸಿದ್ದು, ಅಭಿಪ್ರಾಯ ಸಂಗೃಹಿಸಲು ಹೇಳಿದ್ದರು. ಈ ಸಭೆಯಲ್ಲಿ ಪಾದಯಾತ್ರೆಯನ್ನು ಕೆಲ ದಿನಗಳ ವರೆಗೆ ಮುಂದೂಡಲು ಜೆಡಿಎಸ್ ಕೋರ್ ಕಮಿಟಿ ನಿರ್ಧರಿಸಿದೆ. ಹೀಗಾಗಿ ಜಿಟಿ ದೇವೇಗೌಡರು ಕುಮಾರಸ್ವಾಮಿ, ವಿಜಯೇಂದ್ರ ಅವರಿಗೆ ಪಾದಯಾತ್ರೆ ಮುಂದುಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ವಿರುದ್ಧ ಮೂಡ ಅಸ್ತ್ರವನ್ನ ಬತ್ತಳಿಕೆಯಲ್ಲಿಟ್ಟುಕೊಂಡಿರುವ ಮೈತ್ರಿ ಪಡೆಗೆ ಆರಂಭದಲ್ಲೇ ಗೊಂದಲ ಶುರುವಾದಂತೆ ಕಾಣುತ್ತಿದೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಸಭೆಯಲ್ಲಿ ಪಾದಯಾತ್ರೆಯ ಬಗ್ಗೆ ಈಗಾಗಲೇ ತೀರ್ಮಾನವಾಗಿದೆ. ಹೀಗಿರುವಾಗಲೇ ಸಿದ್ದರಾಮಯ್ಯ ಅವರನ್ನ ಮೂಡ ಸಂಕಷ್ಟದಲ್ಲಿ ಸಿದ್ದವಾಗುತ್ತಿರುವ ಮೈತ್ರಿ ನಾಯಕರ ವಿರುದ್ದ ಅಹಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಜೊತೆಗೆ ಪ್ರತಿಕೂಲ ಹವಾಮಾನವು ಅಂದುಕೊಂಡ ಮಟ್ಟಿಗೆ ಪಾದಯಾತ್ರೆ ರೂಪಿಸೋದು ಕಷ್ಟಕರವಾಗಲಿದೆ.. ಈ ಹಿನ್ನೆಲೆಯಲ್ಲಿ ತಳಸಮುದಾಯಗಳ ಕೆಂಗಣ್ಣು ತಮ್ಮ ಪಕ್ಷದ ಮೇಲೆ ಬೀಳದಿರುವಂತೆ ನೋಡೊಕೊಳ್ಳೊಕೆ ಪಾದಾಯಾತ್ರೆಯನ್ನ ಮುಂದೂಡುವ ಸಲಹೆ ನೀಡಿದ್ಯಾ ಎಂಬ ಪ್ರಶ್ನೆ ಶುರುವಾಗಿದೆ.ಇನ್ನು ಜೆಡಿಎಸ್ ನಿರ್ಧಾರಕ್ಕೆ ಬಿಜೆಪಿ ಯಾವ ರೀತಿ ಉತ್ತರ ಕೊಡುತ್ತೆ ಎನ್ನುವುದನ್ನು ಕಾದುನೋಡಬೇಕಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ