ಡ್ಯಾಂಗಳಲ್ಲಿ ಹೆಚ್ಚಿದ ನೀರಿನ ಪ್ರಮಾಣ; ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಹೈಅಲರ್ಟ್
ಈ ಆಗುತ್ತಿರುವ ಮಳೆಗೆ ಕರ್ನಾಟಕದ ಬಹುತೇಕ ಜಲಾಶಯಗಳು ತುಂಬಿವೆ. ಅದರಂತೆ ಕಾವೇರಿ ಜಲಾನಯನ ಪ್ರದೇಶ ಹಾಗೂ ವಯನಾಡಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನಲೆ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಮಂಡ್ಯ, ಜು.30: ಕರ್ನಾಟಕದಾದ್ಯಂತ ವರುಣಾರ್ಭಟ ಹೆಚ್ಚಿದ್ದು, ಬಹುತೇಕ ಡ್ಯಾಂ(Dam)ಗಳು ತುಂಬಿ ಹರಿಯುತ್ತಿದೆ. ಅದರಂತೆ ಕಾವೇರಿ ಜಲಾನಯನ ಪ್ರದೇಶ ಹಾಗೂ ವಯನಾಡಿನಲ್ಲಿ ಮಳೆ ಅಬ್ಬರಕ್ಕೆ ರಾಜ್ಯದ ಡ್ಯಾಮ್ಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನಲೆ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಿದ್ದು, ಕಾವೇರಿ, ಕಪಿಲಾ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
KRS ಯಿಂದ 1 ಲಕ್ಷಕ್ಕೂ ಅಧಿಕ, ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
ಮಳೆಯ ಅಬ್ಬರಕ್ಕೆ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಕಾವೇರಿ ನದಿ ಪಾತ್ರದ ಜನರಿಗೆ ಅಲರ್ಟ್ ಘೋಷಿಸಿದ್ದು, ಕೆಆರ್‌ಎಸ್ ಡ್ಯಾಂನಿಂದ 1,10,000 ಕ್ಯೂಸೆಕ್ ನೀರು ಹೊರಕ್ಕೆ ಬಿಟ್ಟರೆ, ಕಬಿನಿ ಜಲಾಶಯದಿಂದ 80,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗಿದೆ. ಜೊತೆಗೆ ಯಾವಾಗ ಬೇಕಾದರೂ 2,00,000 ಕ್ಯೂಸೆಕ್‌ಗೂ ಹೆಚ್ಚಾಗಬಹುದು. ಹೀಗಾಗಿ ನದಿ ಪಾತ್ರದ ಜನರು ನದಿಯ ತಟಕ್ಕೆ ಹೋಗಬೇಡಿ, ಜನರು ತಮ್ಮ ಆಸ್ತಿಪಾಸ್ತಿ, ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಸುರಕ್ಷಿತ ಪ್ರದೇಶಗಳಲ್ಲಿ ನದಿ ದಂಡೆಯ ಜನರು ಇರಬೇಕೆಂದು ಕಾವೇರಿ ನೀರಾವರಿ ನಿಗಮ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ:ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆ: ಕೆಆರ್‌ಎಸ್, ಕಬಿನಿ ಡ್ಯಾಂಗಳಲ್ಲಿ ಹೆಚ್ಚುತ್ತಿದೆ ನೀರಿನ ಮಟ್ಟ
ಕಬಿನಿ ಜಲಾಶಯಕ್ಕೆ 57,819 ಕ್ಯೂಸೆಕ್ ಒಳಹರಿವು
ಮೈಸೂರು: ಕೇರಳದ ವಯನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರಕ್ಕೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಒಟ್ಟು 57,819 ಕ್ಯೂಸೆಕ್ ಒಳಹರಿವು ಇದ್ದು, ಕಬಿನಿ ಜಲಾಶಯದ ಹೊರ ಹರಿವು 80 ಸಾವಿರ ಕ್ಯೂಸೆಕ್ ಇದೆ. ಇನ್ನು ಜಲಾಶಯ ಗರಿಷ್ಟ ಮಟ್ಟ 84 ಅಡಿ ಇದ್ದು, ಈಗಾಗಲೇ 83.14 ಅಡಿ ನೀರು ತುಂಬಿದೆ. ಈ ಹಿನ್ನಲೆ ನಂಜನಗೂಡಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕೂಡಲೇ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಜನರಿಗೆ ನೀರಿಗಿಳಿಯದಂತೆ ಜಿಲ್ಲಾಧಿಕಾರಿ ಮನವಿ
ಇನ್ನು ನಂಜನಗೂಡು ತಾಲ್ಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮಕ್ಕೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಭೇಟಿ ನೀಡಿ, ಕಾಳಜಿ ಕೇಂದ್ರಕ್ಕೆ ಸಂತ್ರಸ್ತರನ್ನು ಸ್ಥಳಾಂತರ ಮಾಡಿದರು. ಜೊತೆಗೆ ಜನರಿಗೆ ನೀರಿಗಿಳಿಯದಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು. ಈ ವೇಳೆ ಜಿಪಂ ಸಿಇಒ ಗಾಯತ್ರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಸಾಥ್ ನೀಡಿದರು. ಬಳಿಕ ಸಂತ್ರಸ್ತರ ಜೊತೆ ಜಿಲ್ಲಾಡಳಿತದ ಅಧಿಕಾರಿಗಳು ಊಟ ಮಾಡಿದರು.
ಭದ್ರಾ ಜಲಾಶಯದಿಂದ ನದಿಗೆ 30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಶಿವಮೊಗ್ಗ: ಭದ್ರಾವತಿ ತಾಲೂಕಿನ ಬಿಆರ್ಪಿಯ ಭದ್ರಾ ಜಲಾಶಯದಿಂದ ನದಿಗೆ 30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಭದ್ರಾವತಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ಹೊಸ ಸೇತುವೆ ಮುಳುಗಡೆ ಹಂತ ತಲುಪಿದೆ. ಈ ಹಿನ್ನಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ ಸೇತುವೆಯ ಎರಡು ಕಡೆ ಬ್ಯಾರಿಕೇಡ್ ಹಾಕಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Tue, 30 July 24