ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆ: ಕೆಆರ್‌ಎಸ್, ಕಬಿನಿ ಡ್ಯಾಂಗಳಲ್ಲಿ ಹೆಚ್ಚುತ್ತಿದೆ ನೀರಿನ ಮಟ್ಟ
ಕೊಡಗು ಮತ್ತು ಮೈಸೂರು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಪರಿಣಾಮವಾಗಿ ಕೆಆರ್‌ಎಸ್ ಮತ್ತು ಕಬಿನಿ ಡ್ಯಾಂಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಬರದಿಂದ ಕಂಗೆಟ್ಟಿದ್ದ ಜನತೆಗೆ ಕೊನೆಗೂ ಸಿಹಿ ಸುದ್ದಿ ದೊರೆತಿದೆ. ಕೊಡಗಿನ ಎಲ್ಲೆಲ್ಲಿ ಎಷ್ಟು ಮಳೆಯಾಯ್ತು? ಕಬಿನಿಯಲ್ಲಿ ಈಗೆಷ್ಟಿದೆ ನೀರು? ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಕೊಡಗು, ಮೈಸೂರು, ಮೇ 23: ಭೀಕರ ಬರ, ತಮಿಳುನಾಡಿಗೆ ನೀರು ಹರಿಸಿರುವುದರಿಂದ ಖಾಲಿಯಾಗುತ್ತಿದ್ದ ಕೆಆರ್‌ಎಸ್ ಜಲಾಶಯಕ್ಕೆ (KRS Dam) ಈಗ ತುಸು ಜೀವ ಬಂದಂತಾಗಿದೆ! ಇದಕ್ಕೆ ಕಾರಣ ಕೊಡಗು ಜಿಲ್ಲೆಯಾದ್ಯಂತ (Kodagu Rains) ಮಳೆಯಾಗುತ್ತಿರುವುದು. ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಸರಾಸರಿ 32.24 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ದಿನ 0.67 ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಈವರೆಗೆ ಒಟ್ಟು 230.48 ಮಿ.ಮೀ ಮಳೆ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 123.56 ಮಿ.ಮೀ ಮಳೆಯಾಗಿತ್ತು.
ಧಾರಾಕಾರ ಮಳೆಯಿಂದಾಗಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ನಿಧಾನವಾಗಿ ಹೆಚ್ಚುತ್ತಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಆಗಿದ್ದು, ಬುಧವಾರ ಅದು 81.20 ಅಡಿಗಳನ್ನು ದಾಖಲಿಸಿದೆ. ಸಾವಿರ ಮಿಲಿಯನ್ ಘನ ಅಡಿ (tmcft) ನಿಯತಾಂಕಗಳಲ್ಲಿ ಜಲಾಯಶದ ಗರಿಷ್ಠ ಸಾಮರ್ಥ್ಯ 49.452 ಟಿಎಂಸಿ ಅಡಿ ಮತ್ತು ಪ್ರಸ್ತುತ ಸಂಗ್ರಹ 11.325 ಟಿಎಂಸಿ ಅಡಿ ಆಗಿದೆ.
ಕೊಡಗು ತಾಲೂಕಿನ ಎಲ್ಲೆಲ್ಲಿ ಎಷ್ಟು ಮಳೆ?
ಮಡಿಕೇರಿ ತಾಲೂಕಿನಲ್ಲಿ ಬುಧವಾರ ಬೆಳಗ್ಗೆ ಕೊನೆಗೊಂಡಂತೆ ಸರಾಸರಿ 28.80 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.40 ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಒಟ್ಟು ಮಳೆ 325.59 ಮಿ.ಮೀ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 179.73 ಮಿ.ಮೀ ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ 16.50 ಮಿ.ಮೀ ಮಳೆಯಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ 30.10 ಮಿ.ಮೀ ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 37.70 ಮಿ.ಮೀ ಮಳೆಯಾಗಿದೆ. ಕುಶಾಲನಗರ ತಾಲೂಕಿನಲ್ಲಿ ಸರಾಸರಿ 48.10 ಮಿ.ಮೀ ಮಳೆಯಾಗಿದೆ.
ಮೈಸೂರಿನಲ್ಲಿಯೂ ಮುಂದುವರಿದ ಮಳೆ
ಈ ಮಧ್ಯೆ, ಮೈಸೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಹುಣಸೂರು ತಾಲೂಕಿನ ಹನಗೋಡಿನಲ್ಲಿ ಮನೆ, ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಮಳೆಯಿಂದಾಗಿ ಹನಗೋಡು ಬಸ್ ನಿಲ್ದಾಣ ಕೆರೆಯಂತಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಣಸೂರು ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಮಳೆಯಿಂದ ಶ್ರೀನಿವಾಸ್, ಲಕ್ಷ್ಮೀ ದಂಪತಿಯ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ದವಸ ಧಾನ್ಯ ಸೇರಿ ಎಲ್ಲ ವಸ್ತುಗಳು ನಾಶವಾಗಿವೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಕುಟುಂಬ ಮನವಿ ಮಾಡಿದೆ.
ಕಬಿನಿ ಜಲಾಶಯ ಒಳಹರಿವು ಹೆಚ್ಚಳ
ಕೇರಳ ಸೇರಿದಂತೆ ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಹೆಚ್ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಲ್ಲಿ ಸದ್ಯ 4356 ಕ್ಯೂಸೆಕ್ ಒಳಹರಿವು ಇದೆ. 84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಇಂದು (ಗುರುವಾರ) ನೀರಿನ ಮಟ್ಟ 58 ಅಡಿ ಇದೆ. ಜಲಾಶಯದಲ್ಲಿ 6.36 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: Remal Cyclone: ಒಡಿಶಾ, ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿದೆ ಚಂಡಮಾರುತ, ಈ ರಾಜ್ಯಗಳಲ್ಲಿ ಭಾರಿ ಮಳೆ
ಜಲಾಶಯದಿಂದ ಮೈಸೂರು, ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕುಡಿಯುವ ನೀರಿಗಾಗಿ 300 ಕ್ಯೂಸೆಕ್ ನೀರು ಹೊರ ಹರಿವು ಮಾಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Thu, 23 May 24