
ಬೆಂಗಳೂರು, ಡಿಸೆಂಬರ್ 15: ಹೊಸ ವರ್ಷವನ್ನು (New Year 2026) ಸ್ವಾಗತಿಸಲು ಬೆಂಗಳೂರಿಗರು (Bengaluru) ತವಕದಲ್ಲಿದ್ದಾರೆ. ಎಲ್ಲಾ ಕಡೆ ನ್ಯೂ ಇಯರ್ ವೈಬ್ ಶುರುವಾಗಿದೆ. ಪಬ್, ರೆಸ್ಟೋರೆಂಟ್ ಟೇಬಲ್ಗಳು ಹದಿನೈದು ದಿನಗಳ ಮುಂಚೆಯೇ ಬುಕಿಂಗ್ ಆಗುತ್ತಿವೆ. ಕೆಲವೆಡೆ ಡ್ರಗ್ ಪಾರ್ಟಿಗೂ ಪ್ಲಾನಿಂಗ್ ನಡೆಯುತ್ತಿದೆ. ಇತ್ತ ಪೊಲೀಸರು ಕೂಡ ಈ ಎಲ್ಲಾ ವಿಷಯಗಳಲ್ಲಿ ಹೈ ಅಲರ್ಟ್ ಆಗಿದ್ದಾರೆ. ಹೊಸ ವರ್ಷ ಹತ್ತಿರ ಆಗ್ತಿದ್ದಂತೆಯೇ ಚೆಕಿಂಗ್ ಹೆಚ್ಚಿಸಿದ್ದಾರೆ. ಅದರಲ್ಲೂ ವಾರಾಂತ್ಯದಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಹೆಚ್ಚು ತಪಾಸಣೆ ನಡೆಸುತ್ತಿದ್ದಾರೆ.
ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸೂಚನೆ ಬೆನ್ನಲ್ಲೇ ರಾತ್ರಿ ಎಲ್ಲಾ ವಿಭಾಗಗಳ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಎಂಜಿ ರೋಡ್, ಬ್ರಿಗೆಡ್ ರೋಡ್, ಚರ್ಜ್ ಸ್ಟ್ರೀಟ್, ಕೋರಮಂಗಲದ 80ಫೀಟ್ ರೋಡ್, ಇಂದಿರಾನಗರದ 100 ಫೀಟ್ ರೋಡ್ ಸೇರಿ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೆಡ್ ಹಾಕಿ ವಾಹನಗಳನ್ನ ಪರಿಶೀಲನೆ ಮಾಡಿದ್ದಾರೆ.
ಕೆಲವೆಡೆ ಡ್ರೋನ್ಗಳನ್ನು ಹಾರಿಸುವ ಮೂಲಕವೂ ಪರಿಶೀಲನೆ ಮಾಡಲಾಯಿತು. ಎಲ್ಲಾ ಪಬ್, ರೆಸ್ಟೋರೆಂಟ್, ಪ್ರಮುಖ ಮಾಲ್ ಗಳಲ್ಲಿ ಪರಿಶೀಲನೆ ಮಾಡಲಾಯಿತು. ಯಾವ ರೀತಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ, ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಸರಿ ಇದ್ಯಾ, ಭದ್ರತಾ ವ್ಯವಸ್ಥೆ ಏನ್ ಮಾಡ್ಕೊಂಡಿದ್ದಾರೆ, ಏನಾದ್ರು ಅವಘಡ ಸಂಭವಿಸಿದರೆ ಕೂಡಲೇ ತಡೆಗಟ್ಟುವ ಕ್ರಮವಹಿಸಲಾಗಿದೆಯಾ ಎಂಬುದೂ ಸೇರಿ ಎಲ್ಲದರ ಬಗ್ಗೆ ಪರಿಶೀಲನೆ ಮಾಡಿದರು. ನ್ಯೂ ಇಯರ್ಗೆ ಯಾವ ಅಹಿತಕರ ಘಟನೆಗಳು ನಡೆಯದ ಹಾಗೆ ನೋಡಿಕೊಳ್ಳಬೇಕು, ಎಲ್ಲಾ ರೂಲ್ಸ್ ಫಾಲೋ ಮಾಡ್ಬೇಕು ಎಂದು ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್, ಹೊಸ ವರ್ಷದ ಹಿನ್ನೆಲೆ ಈ ಮಾರ್ಗಗಳಲ್ಲಿ ವಿಶೇಷ ರೈಲು
ಚರ್ಚ್ ಸ್ಟ್ರೀಟ್ ಬಳಿ ಪಬ್ ಕ್ಲೋಸ್ ಮಾಡುವ ವೇಳೆ ಮೂರು ಜನ ಏಕಾಏಕಿ ನುಗ್ಗಿ ಅಲ್ಲಿರೋ ಕೆಲ ವಸ್ತುಗಳನ್ನು ಹೊಡೆದಾಕಿದ ಘಟನೆಯೂ ನಡೆದಿದೆ. ಈ ವೇಳೆ ಇಬ್ಬರು ಪರಾರಿ ಆಗಿದ್ದು, ಓರ್ವನನ್ನು ಪಬ್ ಸಿಬ್ಬಂದಿ ಹಿಡಿದಿದ್ದಾರೆ. ನಂತರ ಮಾಹಿತಿ ಬಂದು ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ದೆಹಲಿಯಲ್ಲಿ ಸ್ಫೋಟ ಸಂಭವಿಸಿದ್ದ ಹಿನ್ನೆಲೆ ಕೇಂದ್ರ ತನಿಖಾ ಸಂಸ್ಥೆಗಳು ಎಲ್ಲಾ ರಾಜ್ಯಗಳ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಇರುವಂತೆ ಸೂಚಿಸಿವೆ. ಹೀಗಾಗಿ ಬೆಂಗಳೂರು ಪೊಲೀಸರು ಹೆಚ್ಚಿನ ನಿಗಾ ಇರಿಸಿದ್ದಾರೆ.