ನೈಸ್ ಟೋಲ್ ವಿವಾದ: 2008-09 ರಿಂದ 2025ರವರೆಗೆ 4,756 ಕೋಟಿ ರೂ ಸಂಗ್ರಹ: ಅಂಕಿ-ಸಂಖ್ಯೆ ಬಿಚ್ಚಿಟ್ಟ ಕುಮಾರಸ್ವಾಮಿ
ನೈಸ್ ಯೋಜನೆ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮಧ್ಯೆ ಜಟಾಪಟಿಗೂ ಕಾರಣವಾಗಿದೆ. ಇದೀಗ ಟೋಲ್ ಸಂಗ್ರಹದ ಬಗ್ಗೆ ದಾಖಲೆ ಬಿಡುಗಡೆ ಮಾಡಿರುವ ಕುಮಾರಸ್ವಾಮಿ, ‘2008ರಿಂದ ಕಾನೂನು ಬಾಹಿರವಾಗಿ ಟೋಲ್ ಸಂಗ್ರಹಿಸಲಾಗುತ್ತಿದ್ದು, ಇಲ್ಲಿಯವರೆಗೆ 5,500 ಕೋಟಿ ರೂ ಸಂಗ್ರಹವಾಗಿದೆ’ ಎಂದಿದ್ದಾರೆ.

ಮುಖ್ಯಾಂಶಗಳು
- ನೈಸ್ ಸಂಸ್ಥೆ ವಿರುದ್ಧ ಕೇಂದ್ರ ಸಚಿವ HD ಕುಮಾರಸ್ವಾಮಿ ಮತ್ತೆ ಆರೋಪ
- 2008-09ರಿಂದ 2025ರವರೆಗೆ 4,756 ಕೋಟಿ ರೂ ಟೋಲ್ ಸಂಗ್ರಹ
- ದಾಖಲೆ ಬಿಡುಗಡೆ ಮಾಡಿದ ಕೇಂದ್ರ ಸಚಿವ
ಬೆಂಗಳೂರು, ಅಕ್ಟೋಬರ್ 07: ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗೂ ಹೆಚ್ಚು ಅವ್ಯವವಹಾರ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಇದೀಗ ‘2008ರಿಂದ ಕಾನೂನು ಬಾಹಿರವಾಗಿ ನೈಸ್ ಟೋಲ್ ಸಂಗ್ರಹಿಸಲಾಗುತ್ತಿದೆ. 2008-09ರಿಂದ 2025ರವರೆಗೆ ಒಟ್ಟು 4,756 ಕೋಟಿ ರೂ ಸಂಗ್ರಹ ಆಗಿದೆ’ ಎಂದು ನೈಸ್ ಸಂಸ್ಥೆ ವಿರುದ್ಧ ಮತ್ತೊಮ್ಮೆ ಆರೋಪ ಮಾಡಿರುವ ಕುಮಾರಸ್ವಾಮಿ, ಟೋಲ್ ಸಂಗ್ರಹದ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.
5,500 ಕೋಟಿ ರೂ ಸಂಗ್ರಹ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ‘2025ರವರೆಗೆ ನೈಸ್ ಟೋಲ್ 4,756 ಕೋಟಿ ರೂ. ಸಂಗ್ರಹ ಆಗಿದೆ. ಭೂಮಿ ಮಾರಾಟ ಮಾಡಿರೋದು 384 ಕೋಟಿ ರೂ.ಗೆ. ಜಾಯಿಂಟ್ ಅಗ್ರಿಮೆಂಟ್ನಿಂದ 108 ಕೋಟಿ ರೂ ಸಂಗ್ರಹವಾಗಿದೆ. ನೈಸ್ ಪ್ರಾಜೆಕ್ಟ್ನ ಒಟ್ಟು ಮೊತ್ತ 1,585 ಕೋಟಿ ರೂ. ಈವರೆಗೆ ಎಲ್ಲಾ ವಿಭಾಗದಿಂದ 5,500 ಕೋಟಿ ರೂ ಸಂಗ್ರಹ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಆರೋಪ
‘2000 ಸೆಪ್ಟೆಂಬರ್ 4ರಲ್ಲಿ ನೈಸ್ ಟೋಲ್ ಕಲೆಕ್ಷನ್ಗೆ ಸೆಕ್ಷನ್ 3ರ ಪ್ರಕಾರ ಫ್ರೇಮ್‌ವರ್ಕ್ ಅಗ್ರಿಮೆಂಟ್ನಂತೆ ಕೆಲಸ ಆಗಬೇಕು ಎಂದು ಅಗ್ರಿಮೆಂಟ್ ಆಗತ್ತೆ. ಸೆಕ್ಷನ್ 2 ಪ್ರಕಾರ ಏನು ಕೆಲಸ ಮಾಡಬೇಕು ಎಂದು ಅಗ್ರಿಮೆಂಟ್ ಆಗತ್ತೆ. ಇದೆಲ್ಲವು 2000ನೇ ಇಸವಿಯಲ್ಲೇ ಆದ ಅಗ್ರಿಮೆಂಟ್. ಯಾವ ರೀತಿ ಕೆಲಸ ಮಾಡುತ್ತೇವೆ ಎಂದು ಅಗ್ರಿಮೆಂಟ್ ಮಾಡಿ ಕೊಟ್ಟಿದ್ದರು. ಸಂಪೂರ್ಣ ಕೆಲಸ ಮುಗಿದ ಮೇಲೆಯೇ ಟೋಲ್ ಸಂಗ್ರಹಿಸಬೇಕು’ ಎಂದರು.
ಅಗ್ರಿಮೆಂಟ್ನಲ್ಲಿ ಏನಿದೆ?
2193 ಎಕರೆ ಫೆರಿಫೆರಿಯಲ್ ರಸ್ತೆಗೆ ಎಂದು ಅಗ್ರಿಮೆಂಟ್ ಆಗಿತ್ತು. 7555 ಎಕರೆ ಕರಾಬ್ ಲ್ಯಾಂಡ್ ಸೇರಿದಂತೆ 20 ಸಾವಿರ ಎಕರೆ ಭೂಮಿ ಕೇಳಿದ್ದರು. 163 ಕಿ.ಮಿ ರೋಡ್ಗೆ 6999 ಎಕರೆ ಕೇಳಿದ್ದರು. 2024 ಫೆಬ್ರವರಿ 12ರಲ್ಲಿ bmicpa ಮೂಲಕ ಫ್ರೇಮ್‌ವರ್ಕ್ ಅಗ್ರಿಮೆಂಟ್ ಬದಲಾಯಿಸಿದರು. ಈ ವಿಚಾರವನ್ನು ಕ್ಯಾಬಿನೆಟ್ ಗಮನಕ್ಕೆ ತಂದಿಲ್ಲ. 2015ರಲ್ಲಿ ಕೋರ್ಟ್ ಮುಂದೆ ತಪ್ಪಾಗಿರುವುದನ್ನ ನೈಸ್ ಸಂಸ್ಥೆಯೇ ಒಪ್ಪಿದೆ. ಬಿಎಂಐಸಿಪಿಎ ಅಲ್ಲಿ ಓಡಿಪಿ ಮೂಲಕ ಫ್ರೇಮ್‌ವರ್ಕ್ ಅಗ್ರಿಮೆಂಟ್ ಬದಲಾಯಿಸಿದ್ದನ್ನ ಒಪ್ಪಿದ್ದಾರೆ. 2193 ಎಕರೆಯಿಂದ 2742 ಎಕರೆಗೆ ಭೂಮಿಯನ್ನ ಹೆಚ್ಚಿಸಿಕೊಂಡರು. 2026 ಜುಲೈ 29ರಲ್ಲಿ ಸುಪ್ರಿಂ ಕೋರ್ಟ್ ಇದನ್ನೆಲ್ಲಾ ನೋಡಿಯೇ ತೀರ್ಪು ಕೊಟ್ಟಿದೆ’ ಎಂದು ಅವರು ಹೇಳಿದರು.
ಸಿಎಂ ಉತ್ತರ ಕೊಡಬೇಕು ಎಂದ ಹೆಚ್ಡಿ ಕುಮಾರಸ್ವಾಮಿ
‘ರಾಜ್ಯ ಸರ್ಕಾರ ಇದರಲ್ಲಿ ಶಾಮೀಲು ಎಂದು ಪರೋಕ್ಷವಾಗಿ ಕೋರ್ಟ್ ಹೇಳಿದೆ. ಇದು ಫ್ರಾಡ್, ಫ್ರಾಡ್ ಮಾಡಿದ್ದು ಯಾರು, ಸುಪ್ರಿಂಕೋರ್ಟ್ ಹೇಳಿದ್ದೇನು ಎಂದು ಸಿಎಂ ಉತ್ತರ ಕೊಡಬೇಕು. ದೇವೆಗೌಡರು 20 ವರ್ಷಗಳಿಂದ ಸಾಲ ಮಾಡಿ ಹೋರಾಟ ಮಾಡುತ್ತಿದ್ದಾರೆ. ಕಾಮಗಾರಿ ವೇಳೆ ಹಲವರನ್ನ ಸಾಯಿಸಿದ್ದಾರೆ, ಚಿತ್ರಹಿಂಸೆ ನೀಡಿದ್ದಾರೆ, ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಇದೆ’ ಎಂದರು.
ನೈಸ್ ರಸ್ತೆ ಬೇಕಿಲ್ಲ ಎಂದು 2023ರಲ್ಲಿ ಜಯಚಂದ್ರ ಹೇಳಿದ್ರು
ಇನ್ನು ‘ನೈಸ್ ರೋಡ್ ಹೆಸರಿನಲ್ಲಿ ಬಡವರ ಮನೆಗಳನ್ನ ವಶಪಡಿಸಿಕೊಂಡರು. ಏಕೆ ಬೇಕು ನೈಸ್ ರೋಡ್? ನೈಸ್ ನಿಲ್ಲಿಸಲ್ಲ ಅಂತ ಹೇಳುತ್ತಾರಲ್ಲ, ಯಾರು ಹೇಳಿದ್ದು ನಿಲ್ಲಿಸಿ ಅಂತ. 2023ರಲ್ಲಿ ಸದನ ಸಮಿತಿ ಅಧ್ಯಕ್ಷರು ಮತ್ತು ಕಾನೂನು ಸಚಿವರು ಆಗಿದ್ದಾಗ ಜಯಚಂದ್ರ ಅವರೇ ನೈಸ್ ರಸ್ತೆ ಬೇಕಿಲ್ಲ ಅಂತ ಹೇಳಿದ್ದರು. ನೈಸ್ ಯೋಜನೆಯನ್ನ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಅಂತ ಹೇಳಿದ್ದರು. ಡಿಕೆ ಶಿವಕುಮಾರ್ ಸಿಎಂ ಆದರೂ ಅಂತ ಅಸೂಯೆಗೆ ಹೇಳುತ್ತಿಲ್ಲ. ರೈತರ ಪರವಾಗಿ ಧ್ವನಿ ಎತ್ತಿರುವುದು. ಯಾರನ್ನೋ ಬ್ಲಾಕ್ಮೇಲ್ ಮಾಡಲು ಅಲ್ಲ, ಅದರಿಂದ ನನಗೆ ಏನೂ ಉಪಯೋಗ’ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:30 pm, Wed, 7 October 26




