ಬೆಂಗಳೂರು (ಸೆಪ್ಟೆಂಬರ್ 21) ನಗರದ ನಮ್ಮ ಮೆಟ್ರೋದ (Namma Metro) ಕೆ.ಆರ್.ಪುರ-ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸುರಕ್ಷತಾ ಆಯುಕ್ತರು ಇಂದು (ಸೆಪ್ಟೆಂಬರ್.21) ಸುರಕ್ಷತಾ ತಪಾಸಣೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಇಂದು ಇಡೀ ದಿನ ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗಿನ ಮೆಟ್ರೋ ರೈಲ್ವೆ ಸಂಚಾರವನ್ನು ಬಿಎಂಆರ್‌ಸಿಎಲ್ ರದ್ದುಪಡಿಸಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ, ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗೆ ಇಡೀ ದಿನ ಮೆಟ್ರೋ ರೈಲು ಸಂಚಾರ ಸೇವೆ ಇರುವುದಿಲ್ಲ. ಬೈಯ್ಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೋ ನಿಲ್ದಾಣದವರೆಗೆ ಮಧ್ಯಾಹ್ನ 1.30ರಿಂದ 4.30ರವರೆಗೆ ರೈಲು ಸಂಚರಿಸುವುದಿಲ್ಲ ಎಂದು ತಿಳಿಸಿದೆ.
ಉಳಿದಂತೆ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಗರುಡಾಚಾರಪಾಳ್ಯ ನಡುವೆ ರೈಲು ಸೇವೆ ಎಂದಿನಂತೆ ಇರಲಿದೆ. ಇಂದಿರಾನಗರ ಮತ್ತು ಕೆಂಗೇರಿ ನಡುವೆ ಮಧ್ಯಾಹ್ನ 1.30ರಿಂದ 4.30ರವರೆಗೆ ರೈಲ್ವೆ ಸೇವೆ ಲಭ್ಯವಿದೆ. ಮಧ್ಯಾಹ್ನ 1.30ರವರೆಗೆ ಮತ್ತು ಸಂಜೆ 4.30ರ ಬಳಿಕ ಬೈಯ್ಯಪ್ಪನಹಳ್ಳಿ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣದ ನಡುವೆ ರಾತ್ರಿ 11ರವರೆ ಮೆಟ್ರೋ ಸೇವೆ ಎಂದಿನಂತೆ ನಡೆಯಲಿದೆ. ಮೆಟ್ರೋ ಪ್ರಯಾಣಿಕರು ರೈಲ್ವೆ ಸಂಚಾರದ ವ್ಯತ್ಯಯ ಗಮನಿಸಿ ಸಹಕರಿಸುವಂತೆ ಬಿಎಂಆರ್‌ಸಿಎಲ್ ಕೋರಿದೆ.
ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ಎಲ್ಲೆಲ್ಲಿ?
ಹೊಸ ವಿಸ್ತರಿತ ಮಾರ್ಗವಾದ ನಮ್ಮ ಮೆಟ್ರೋದ ಕೆ.ಆರ್.ಪುರ-ಬೈಯಪ್ಪನಹಳ್ಳಿ ನಡುವೆ ಅಳವಡಿಸಲಾಗಿರುವ ಮೆಟ್ರೋ ರೈಲು ಮಾರ್ಗದ ಸುರಕ್ಷತಾ ತಪಾಸಣೆ ಇಂದು ನಡೆಯಲಿದೆ, ಇದು 2 ಕಿ.ಮೀ. ಮಾರ್ಗವಾಗಿದ್ದು, ಇದಕ್ಕೆ ಮೆಟ್ರೋ ಸುರಕ್ಷತಾ ಆಯುಕ್ತರು ತಪಾಸಣೆ ಬಳಿಕ ಗ್ರೀನ್ ಸಿಗ್ನಲ್ ನೀಡಿದರೆ, ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ ತಡೆರಹಿತ ಸಂಚಾರ ನಡೆಸಬಹುದಾಗಿದೆ. ಇದರಿಂದ ಬೆಂಗಳೂರಿನ ಐಟಿ ಹಬ್ ಆಗಿರುವ ವೈಟ್‌ಫೀಲ್ಡ್‌ನ ಸಾವಿರಾರು ಟೆಕ್ಕಿಗಳಿಗೆ ನೆರವಾಗಲಿದೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ