ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸ ಟ್ಯಾಕ್ಸ್ ಹಾಕುವುದಿಲ್ಲ: ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದಿನದಿಂದ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೊಸ ತೆರಿಗೆ ವಿಧಿಸಲು ಚಿಂತನೆ ನಡೆಸಿದೆ ಎಂಬ ಸರ್ಕಾರದ ಮೂಲಗಳಿಂದ ತಿಳಿದುಬಂದಿತ್ತು. ಈ ವಿಚಾರ ಟಿವಿ9 ಡಿಜಿಟಲ್ನಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚತ್ತ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಬೆಂಗಳೂರು ಅ.07: ನಗರದಲ್ಲಿನ ಸಂಚಾರ ದಟ್ಟಣೆಯನ್ನು (Bengaluru Traffic) ಕಡಿಮೆ ಮಾಡಲು ಒಂಬತ್ತು ರಸ್ತೆಗಳ ಮೂಲಕ ರಾಜಧಾನಿಗೆ ಪ್ರವೇಶಿಸುವ ವಾಹನಗಳಿಗೆ ದಟ್ಟಣೆ ತೆರಿಗೆ (Tax) ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಟಿವಿ9 ಡಿಜಿಟಲ್ನಲ್ಲಿ ಪ್ರಕಟವಾಗುತ್ತಿದ್ದಂತೆ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾತನಾಡಿ ಬೆಂಗಳೂರು ಜನರಿಗೆ ಯಾವುದೇ ಹೊಸ ಟ್ರಾಫಿಕ್ ಟ್ಯಾಕ್ಸ್ ಹಾಕುವುದಿಲ್ಲ. ಇರುವ ಟ್ಯಾಕ್ಸ್ ಸರಿಯಾಗಿ ಕಟ್ಟಬೇಕು ಎಂದು ಹೇಳಿದರು.
ಹಳ್ಳಿಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುವ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಳ್ಳಿಹಳ್ಳಿಗಳಲ್ಲಿ ಮದ್ಯದಂಗಡಿ ತೆರೆಯಲು ಆಗುವುದಿಲ್ಲ. ಎಲ್ಲವನ್ನೂ ನೋಡಬೇಕು, ಸ್ಟ್ರೀಮ್ ಲೈನ್ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ಬೆಂಗಳೂರಿಗೆ ಪ್ರವೇಶಿಸುವ ವಾಹನಗಳಿಗೆ ಸಂಚಾರ ದಟ್ಟಣೆ ತೆರಿಗೆ: ಸರ್ಕಾರಕ್ಕೆ ಶಿಫಾರಸು
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು ಆ ಭಾಗದ ಶಾಸಕರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ತನಿಖೆ ಮಾಡುವಂತೆ ಹೇಳಿದ್ದಾರೆ. ತಾವು, ಮಾಧ್ಯಮದವರು ಕೂಡ ಅವರ ಪರವಾಗಿ ಮಾತಾಡುತ್ತಿದ್ದೀರಿ ಒಳ್ಳೆದಾಗಲಿ ಎಂದು ಜಾರಿಕೊಂಡರು.
ಕಾಂಗ್ರೆಸ್ಗೆ ಶೇ20 ರಷ್ಟು ಲಿಂಗಾಯತರು ಮತ ಹಾಕಿದ್ದಾರೆ. ಏಳು ಜನ ಸಚಿವರನ್ನು ಮಾಡಿದ್ದೇವೆ ಎಂಬ ಪ್ರಕಾಶ್ ರಾಥೋಡ್ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು ಅದು ಸೀಕ್ರೆಟ್ ಬ್ಯಾಲೆಟ್, ಯಾರು ಎಷ್ಟು ವೋಟ್ ಹಾಕಿದ್ದಾರೆ ಅನ್ನೋದು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲಾ ಜನಾಂಗದವರು ನಮ್ಮ ಪಕ್ಷಕ್ಕೆ ಅಧಿಕಾರ ತಂದಿದ್ದಾರೆ. ಎಲ್ಲರೂ ಸೇರಿಯೇ 136 ಸ್ಥಾನಗಳನ್ನು ನೀಡಿದ್ದಾರೆ ಎಂದು ಪ್ರಕಾಶ್ ರಾಥೋಡ್ ಹೇಳಿಕೆಗೆ ತಿರುಗೇಟು ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ