ಬೆಂಗಳೂರು: ಕುಖ್ಯಾತ ದ್ವಿಚಕ್ರ ವಾಹನ ಕಳ್ಳನನ್ನ (thief) ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿರುವಂತಹ ಘಟನೆ ನಡೆದಿದೆ. ಕಿಶನ್ ಚೌಧರಿ ಬಂಧಿತ ಆರೋಪಿ. ಸದ್ಯ 11 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನ ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ರೀತಿಯಾಗಿ ಗೋವಿಂದರಾಜನಗರ ಪೊಲೀಸರಿಂದ ಕುಖ್ಯಾತ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಬಂಧನ ಮಾಡಲಾಗಿದೆ. ಬೀಗ ಹಾಕಿದ ಮನೆಗಳನ್ನ ಗುರುತಿಸಿ ಆರೋಪಿ ಕಳ್ಳತನ ಮಾಡುತ್ತಿದ್ದ. ಗೋವಿಂದರಾಜ ನಗರ, ಎಪಿ ನಗರ, ಜ್ಞಾನಭಾರತಿ ನಗರ ಠಾಣಾ ವ್ಯಾಪ್ತಿಗಳಲ್ಲಿ ಬಂಧಿತ ಕಾರ್ತಿಕ್ ಕಳ್ಳತನ ಮಾಡಿದ್ದ. ಬಂಧಿತನಿಂದ 9 ಲಕ್ಷ ಬೆಲೆಬಾಳುವ 157 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ಸ್ನೇಹಿತನ ಮನೆಯಲ್ಲಿ ಕಳ್ಳತನ: 24 ಗಂಟೆಯಲ್ಲಿ ಆರೋಪಿಗಳ ಬಂಧನ
ಮೈಸೂರು: ಸ್ನೇಹಿತನ ಮನೆಯಲ್ಲಿ 5 ಲಕ್ಷ ರೂಪಾಯ ಕಳ್ಳತನ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಟಿ. ನರಸೀಪುರದ ಪ್ರವೀಣ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಸ್ನೇಹಿತರಾದ ಅಶೋಕ ಹಾಗೂ ಚಾಮುಂಡರಿಂದ ಕೃತ್ಯವೆಸಗಲಾಗಿದೆ. ಟಿ. ನರಸೀಪುರ ಪೊಲೀಸರ ಕಾರ್ಯಾಚರಣೆಯಿಂದ 24 ಗಂಟೆಯಲ್ಲಿ ಆರೋಪಿಗಳ ಬಂಧನ ಮಾಡಿದ್ದು, ಬಂಧಿತರಿಂದ 5 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಕಳ್ಳತನವಾಗಿದ್ದ ಬಗ್ಗೆ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೆಲಸದಿಂದ ವಜಾಗೊಳಿಸಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಂಗಳೂರು ಗ್ರಾಮಾಂತರ: ಸ್ವೀಪರ್ ಕೆಲಸದಿಂದ ವಜಾ ಗೊಳಿಸಿದ್ದಕ್ಕೆ ಆಲೂರು ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಹೆಗ್ಗಡದೇವಪುರದ ಹನುಮಯ್ಯ(50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ನಾಲ್ಕು ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ತುಮಕೂರು: ಕೊರಟಗೆರೆ ತಾಲೂಕಿನ ತಿಮ್ಮಸಂದ್ರ ಗ್ರಾಮದ ಬಳಿ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವಂತಹ ಘಟನೆ ನಡೆದಿದೆ. ತಿಮ್ಮಸಂದ್ರದ ಶಿವಕುಮಾರ್(42) ಎಂದು ಶವವನ್ನು ಗುರುತಿಸಲಾಗಿದೆ. ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಜಾಮೀನು ವಿವಾದ; ಓರ್ವನಿಗೆ ರಾಡ್ನಿಂದ ಹಲ್ಲೆ
ನೆಲಮಂಗಲ: ಜಾಮೀನು ವಿವಾದದಲ್ಲಿ ಗಲಾಟೆ ನಡೆದಿದ್ದು, ಓರ್ವನಿಗೆ ರಾಡ್ನಿಂದ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಹುಳ್ಳೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿಂತಿದ್ದ ಕಾರಿನ ಮೇಲೆ ಕಲ್ಲು ಎತ್ತಾಕಿ ಹಲ್ಲೆ ನಡೆಸಿರುವ ಆರೋಪ ಮಾಡಿದ್ದು, ಗಿರೀಶ್ (26)ಗಂಭೀರ ಗಾಯ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸಂಬಂಧಿ ನವೀನ್ ಸೇರಿದಂತೆ ಕುಟುಂಬಸ್ಥರಿಂದ ಹಲ್ಲೆ ನಡೆದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಪೊಲೀಸರ ದೌಜನ್ಯ ಆರೋಪಿಸಿ ಹೋಮ್ ಗಾಡ್೯ ವಿಷ ಸೇವನೆ
ತುಮಕೂರು: ಪೊಲೀಸರ ದೌಜನ್ಯ ಆರೋಪಿಸಿ ಹೋಮ್ ಗಾಡ್೯ ವಿಷಸೇವಿಸಿರುವಂತಹ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಹಾರೋಗೆರೆ ಗ್ರಾಮದಲ್ಲಿ ನಡೆದಿದೆ. ಹನುಮಂತರಾಜು(39) ವಿಷಸೇವಿಸಿ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿ. ಪಟ್ಟನಾಯಕನಹಳ್ಳಿಯಲ್ಲಿ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಪೊಲೀಸರ ದೌರ್ಜನ್ಯಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಲಾಗಿದೆ. ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪಟ್ಟನಾಯನಕಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.