Praveen Nettaru: ಪ್ರವೀಣ್ ನೆಟ್ಟಾರು ಹತ್ಯೆಗೆ ವ್ಯಾಪಕ ಆಕ್ರೋಶ: ಶಾಂತಿ ಕಾಪಾಡುವಂತೆ ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ
ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುತ್ತೆ.
ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ (murder) ಪ್ರಕರಣ ಹಿನ್ನೆಲೆ ಶಾಂತಿ ಕಾಪಾಡುವಂತೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಕುರಿತು ನಾನು ಗೃಹ ಸಚಿವರ ಜೊತೆಗೂ ಮಾತಾಡಿದ್ದೇನೆ. ಸಂಪೂರ್ಣ ತನಿಖೆ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಇಂಥ ಕೃತ್ಯ ಎಸಗುವವರನ್ನ ಮಟ್ಟಹಾಕುವ ಕೆಲಸ ಮಾಡುತ್ತೇವೆ ಎಂದು ನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ಅಮಾಯಕ ಕೊಲೆಯಾದಗ ಆಕ್ರೋಶವಿರುತ್ತೆ. ಎಲ್ಲರಿಗೂ ಶಾಂತಿ ಸಹನೆಯಿಂದ ಇರಲು ಸೂಚಿಸಿದ್ದೇನೆ. ಹೋಮ್ ಮಿನಿಸ್ಟರ್, ಎಸ್ಪಿಗೆ ಎಲ್ಲಾ ಸೂಚನೆ ನೀಡಿದ್ದಾರೆ. ಅದಷ್ಟು ಬೇಗ ಕೊಲೆಗಡಕರನ್ನ ಬಂಧಿಸಲು ಸೂಚನೆ ನೀಡಲಾಗಿದೆ. ಕೇರಳ ಬಾರ್ಡರ್ ಆಗಿರೋದ್ರಿಂದ ಕೇರಳಕ್ಕೆ ಹೋಗಿಯಾದ್ರೂ ಕಾರ್ಯಚರಣೆ ಮಾಡಲು ಸೂಚಿಸಿದೆ. ಕೆಲವೊಂದನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ.
ಇದನ್ನೂ ಓದಿ: Praveen Nettaru: ಪುತ್ತೂರು, ಸುಳ್ಯ ಸ್ವಯಂಘೋಷಿತ ಬಂದ್; ಪೊಲೀಸ್ ಭದ್ರತೆಯಲ್ಲಿ ಮೃತದೇಹದ ಮೆರವಣಿಗೆ, ಕುಟುಂಬ ಸದಸ್ಯರ ಆಕ್ರೋಶ
ಹಿಂದಿನಿಂದ ಬಂದು ಮೋಸ ಮಾಡಿ ಕೊಲೆ ಮಾಡಿದ್ದಾರೆ. ಅದನ್ನ ದಸ್ತಗಿರಿ ಮಾಡಿ ಉಗ್ರವಾದ ಶಿಕ್ಷೆಯನ್ನ ಕೊಡುತ್ತೇವೆ. ಇದೊಂದು ವ್ಯವಸ್ಥಿತ ಸಂಚು. ಇದನ್ನ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ದಕ್ಷಿಣ ಕನ್ನಡ ಎಸ್ಪಿ ಋಷಿಕೇಷ್ ಸೋನಾವಣೆ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ತನಿಖೆಗೆ ನಾಲ್ಕು ಪ್ರತ್ಯೇಕ ತಂಡ ರಚಿಸಲಾಗಿದೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆಯನ್ನ ನಡೆಸಲಾಗುತ್ತಿದೆ ಎಂದು ಬೆಳ್ಳಾರೆಯಲ್ಲಿ ಟಿವಿ9ಗೆ ದಕ್ಷಿಣ ಕನ್ನಡ ಎಸ್ಪಿ ಪ್ರತಿಕ್ರಿಯೆ ನೀಡಿದರು. ಇನ್ನೂ ಪುತ್ತೂರು, ಸುಳ್ಯ, ಕಡಬಾ ಭಾಗಗಳಲ್ಲಿ 144 ಸೆಕ್ಷನ್ ಜಾರಿ ಮಾಡಿ, ಪುತ್ತೂರು ಉಪವಿಭಾಗ ಅಧಿಕಾರಿ ಗಿರೀಶ್ರಿಂದ ಆದೇಶ ಪ್ರವೀಣ್ ಹತ್ಯೆ ದುರದೃಷ್ಟಕರ ಸಂಗತಿ: ಆರಗ ಜ್ಞಾನೇಂದ್ರ
ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುತ್ತೆ. ಶಾಂತಿ ಕಾಪಾಡುವಂತೆ ಅಲ್ಲಿನ ಜನರಿಗೆ ಮನವಿ ಮಾಡುತ್ತೇನೆ. ಪ್ರಕರಣ ಸಂಬಂಧ ಪೊಲೀಸರೂ ತನಿಖೆ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಸಿಎಂ ಜೊತೆ ನಾನು ಮಾತಾಡಿದ್ದೇನೆ. ಪ್ರವೀಣ್ ಹತ್ಯೆ ದುರದೃಷ್ಟಕರ ಸಂಗತಿ. ಹಿಜಾಬ್ನಿಂದ ಹಿಡಿದು ಅಲ್ಲಿ ನಡೆಯುವ ಕೆಲಸಗಳ ಹಿಂದೆ ಕೆಲವು ಶಕ್ತಿಗಳ ಕೈವಾಡ ಇದೆ. ಇಂಥ ಸಂಘಟನೆಗಳಿಗೆ ಭವಿಷ್ಯ ಇಲ್ಲ. ಬಹಳ ಗಂಭೀರವಾಗಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರಕರಣವನ್ನು NIA ತನಿಖೆಗೆ ವಹಿಸಬೇಕೆಂದು ಒತ್ತಾಯಿಸ್ತೇನೆ; ಸಚಿವೆ ಶೋಭಾ ಕರಂದ್ಲಾಜೆ
ದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದು, ಇದರ ಹಿಂದಿರುವ ಸಂಘಟನೆಗಳ ಬಗ್ಗೆ ತನಿಖೆಯಾಗಬೇಕು. ಪ್ರಕರಣವನ್ನು NIA ತನಿಖೆಗೆ ವಹಿಸಬೇಕೆಂದು ಒತ್ತಾಯಿಸ್ತೇನೆ. ಕೇಂದ್ರ ಗೃಹ ಸಚಿವಾಲಯಕ್ಕೆ ಭೇಟಿ ನೀಡಿ ಮನವಿ ಮಾಡ್ತೇನೆ. ಈ ಹತ್ಯೆಯ ಹಿಂದಿರುವ ಶಕ್ತಿಗಳ ಷಡ್ಯಂತ್ರ ಗೊತ್ತಾಗಬೇಕು ಎಂದು ಹೇಳಿದರು.
ಸಚಿವ ಮುರುಗೇಶ್ ನಿರಾಣಿ ಸಂತಾಪ
ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಶ್ರೀ ಪ್ರವೀಣ್ ನೆಟ್ಟಾರು ಅವರ ಮೇಲಿನ ಹತ್ಯೆ ನಿಜಕ್ಕೂ ಖೇದಕರ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಈ ದುಷ್ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರು ಮುಲಾಜಿಲ್ಲದೆ ನಮ್ಮ ಸರ್ಕಾರ ಕಠಿಣ ಕ್ರಮವನ್ನು ಕೈಗೊಳ್ಳಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ಯುವ ಮುಖಂಡನ ಹತ್ಯೆಗೆ ಪ್ರಹ್ಲಾದ್ ಜೋಶಿ ಸಂತಾಪ
ಹತ್ಯೆಗೆ ಸಂಬಂಧ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು ಮುಲಾಜಿಲ್ಲದೇ ಆರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿದರು. ಕೊಲೆಗಡುಕರಿಗೆ ಪಾಠವಾಗುವಂತ ಶಿಕ್ಷೆ ನೀಡಬೇಕು ಎಂದು ಟ್ವೀಟ್ ಮೂಲಕ ರಾಜ್ಯ ಸರ್ಕಾರಕ್ಕೆ ಜೋಶಿ ಒತ್ತಾಯಿಸಿದರು.
ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ: ಪ್ರಮೋದ್ ಮುತಾಲಿಕ್
ಹತ್ಯೆ ಪ್ರಕರಣ ಹಿನ್ನೆಲೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಹೇಳಿಕ್ಕೆ ನೀಡಿದ್ದು, ವಾರದ ಹಿಂದೆ ನಡೆದ ಕೊಲೆಯ ಸೇಡಿಗೆ ಹತ್ಯೆ ಎನ್ನಲಾಗ್ತಿದೆ. ಪ್ರವೀಣ್ ಹತ್ಯೆ ಹಿಂದೆ ಕೇರಳದ ಮೂಲ ಅಂತಾ ಹೇಳ್ತಿದ್ದಾರೆ. ಇಂಥ ಕ್ರೌರ್ಯವನ್ನು ಹದ್ದುಬಸ್ತಿನಲ್ಲಿಡುವ ಕೆಲಸವಾಗಬೇಕು. ಇಲ್ಲದೇ ಹೋದಲ್ಲಿ ಮತ್ತಷ್ಟು ಹಿಂದೂಗಳ ಬಲಿಯಾಗುತ್ತದೆ. ಮುಲ್ಲಾ, ಮೌಲ್ವಿಗಳು SDPI, PFI ಹದ್ದುಬಸ್ತಿನಲ್ಲಿಡಬೇಕು. ಶಾಂತಿ-ಸೌಹಾರ್ದತೆ ಬೇಕಾದ್ರೆ ಸಂಘಟನೆಗಳನ್ನ ಹದ್ದುಬಸ್ತಿನಲ್ಲಿಡಿ. ಇಲ್ಲವಾದರೆ ಹಿಂದೂ ಸಮಾಜ ತಿರುಗಿ ಬೀಳುತ್ತೆ. ಸ್ವಯಂ ರಕ್ಷಣೆಗೆ ಹಿಂದೂ ಸಮಾಜ ಸಿದ್ಧವಾಗಬೇಕಿದೆ. ಸರ್ಕಾರ ಕೂಡಲೇ SDPI, ಪಿಎಫ್ಐ ಬ್ಯಾನ್ ಮಾಡಬೇಕು. ಇಲ್ಲವೇ ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
Published On - 10:47 am, Wed, 27 July 22