AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Praveen Nettaru: ಪುತ್ತೂರು, ಸುಳ್ಯ ಸ್ವಯಂಘೋಷಿತ ಬಂದ್; ಪೊಲೀಸ್ ಭದ್ರತೆಯಲ್ಲಿ ಮೃತದೇಹದ ಮೆರವಣಿಗೆ, ಕುಟುಂಬ ಸದಸ್ಯರ ಆಕ್ರೋಶ

ಪುತ್ತೂರು, ಬೆಳ್ಳಾರೆ, ಸುಳ್ಯ, ಕಡಬ ಪಟ್ಟಣಗಳಲ್ಲಿ ಸ್ವಯಂಘೋಷಿತ ಬಂದ್​​​ಗೆ ಹಿಂದುತ್ವ ಪರ ಸಂಘಟನೆಗಳು ಕರೆ ನೀಡಿವೆ. ಪ್ರವೀಣ್ ನೆಟ್ಟಾರು ಮೃತದೇಹವನ್ನು ಪೊಲೀಸ್ ಭದ್ರತೆಯಲ್ಲಿ ಹುಟ್ಟೂರಿಗೆ ಕೊಂಡೊಯ್ಯಲಾಗುತ್ತಿದೆ.

Praveen Nettaru: ಪುತ್ತೂರು, ಸುಳ್ಯ ಸ್ವಯಂಘೋಷಿತ ಬಂದ್; ಪೊಲೀಸ್ ಭದ್ರತೆಯಲ್ಲಿ ಮೃತದೇಹದ ಮೆರವಣಿಗೆ, ಕುಟುಂಬ ಸದಸ್ಯರ ಆಕ್ರೋಶ
ಮೃತ ಪ್ರವೀಣ್ ನೆಟ್ಟಾರು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 27, 2022 | 11:15 AM

Share

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (BJP Leader Praveen Nettaru Murder) ಹತ್ಯೆ ಖಂಡಿಸಿ ಪುತ್ತೂರು, ಬೆಳ್ಳಾರೆ, ಸುಳ್ಯ, ಕಡಬ ಪಟ್ಟಣಗಳಲ್ಲಿ ಸ್ವಯಂಘೋಷಿತ ಬಂದ್​​​ಗೆ ಹಿಂದುತ್ವ ಪರ ಸಂಘಟನೆಗಳು ಕರೆ ನೀಡಿವೆ. ಈ ಕರೆಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನಸಂಚಾರ ವಿರಳವಾಗಿದೆ. ಪುತ್ತೂರಿನ ಪುತ್ತೂರಿ‌ನ ವಿವೇಕಾನಂದ, ಅಂಬಿಕಾ ಶಿಕ್ಷಣ ಸಂಸ್ಥೆಗಳು ರಜೆ ಘೋಷಿಸಿವೆ. ಪ್ರವೀಣ್ ನೆಟ್ಟಾರು ಮೃತದೇಹವನ್ನು ಪೊಲೀಸ್ ಭದ್ರತೆಯಲ್ಲಿ ಹುಟ್ಟೂರಿಗೆ ಕೊಂಡೊಯ್ಯಲಾಗುತ್ತಿದೆ.

ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ನೆಟ್ಟಾರುವಿನಲ್ಲಿ ಅಂತ್ಯಸಂಸ್ಕಾರಕ್ಕೆ‌ ಪ್ರವೀಣ್ ಕುಟುಂಬಸ್ಥರು ಮತ್ತು ಸಂಬಂಧಿಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೂ ‘ಪೂಜಾರಿ’ ಪದ್ಧತಿ ಪ್ರಕಾರ ಮನೆ ಸಮೀಪದ ಸ್ವಂತ ಜಾಗದಲ್ಲಿ ಅಂತಿಮ‌ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಲಸು, ಮಾವು, ಗಂಧದ ಮರದ ತುಂಡುಗಳನ್ನು ಸಂಗ್ರಹಿಸಿರುವ ಕುಟುಂಬದ ಸದಸ್ಯರು ಚಿತೆಯನ್ನು ಸಿದ್ಧಪಡಿಸುತ್ತಿದ್ದಾರೆ.

ಈ ನಡುವೆ ಕರಾವಳಿಯ ಬಿಜೆಪಿ ಮುಖಂಡರ ವಿರುದ್ಧ ಪ್ರವೀಣ್ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರಾದ ಅಂಗಾರ, ಸುನಿಲ್ ಕುಮಾರ್, ನಳಿನ್ ಕುಮಾರ್ ಕಟೀಲ್ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೆರವಣಿಗೆಯಲ್ಲಿ ಶವ ಕೊಂಡೊಯ್ಯಲು ಪ್ರವೀಣ್ ಸಂಬಂಧಿಕರು ಡಿವೈಎಸ್​ಪಿ ಗಾನ ಪಿ.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದರು. ‘ಮೆರವಣಿಗೆ ವೇಳೆ ಅವಘಡವಾದರೆ ನೀವೇ ಹೊಣೆಗಾರರು’ ಎಂದು ಡಿವೈಎಸ್​ಪಿ ಎಚ್ಚರಿಸಿದರು. ಡಿವೈಎಸ್​ಪಿ ಮಾತು ಒಪ್ಪದ ಮೃತರ ಸಂಬಂಧಿ ಜಯರಾಮ್, ನಾವು ಶಾಂತಿಯುತವಾಗಿ ಶೋಭಾಯಾತ್ರೆ ಮಾಡುತ್ತೇವೆ. ನಮ್ಮ ಶೋಭಾಯಾತ್ರೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ವಿನಂತಿಸಿದರು. ಮೃತರ ಕುಟುಂಬಕ್ಕೆ ಸರ್ಕಾರ ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನಿಟ್ಟಾರು ಬರ್ಬರ ಹತ್ಯೆಯು ಬಿಜೆಪಿ ಕಾರ್ಯಕರ್ತರಲ್ಲಿ ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ. ‘ನಮ್ಮದೇ ಸರ್ಕಾರ ಇದ್ದರೂ ನಮ್ಮ ಕಾರ್ಯಕರ್ತರಿಗಿಲ್ಲವೇ ಭದ್ರತೆ’ ಎಂದು ಕಿಡಿಕಾರಿದ್ದಾರೆ.

ಶರತ್ ಮತ್ತು ಪ್ರವೀಣ್ ಕೊಲೆಯಲ್ಲಿ ಹೋಲಿಕೆ

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಇತ್ತೀಚೆಗೆ ಶರತ್ ಮಡಿವಾಳ ಎಂಬಾತನ ಕೊಲೆಯಾಗಿತ್ತು. ಆ ಕೊಲೆಗೂ ಇದೀಗ ಕೊಲೆಯಾಗಿರುವ ಪ್ರವೀಣ್ ನೆಟ್ಟಾರು ಕೊಲೆಗೂ ಹೋಲಿಕೆಯಿರುವುದು ಗೊತ್ತಾಗಿದೆ. ಲಾಂಡ್ರಿ ಅಂಗಡಿ ಮುಚ್ಚುವಾಗ ಶರತ್​ನನ್ನು ಕೊಲೆ ಮಾಡಿದ್ದರು. ನಿನ್ನೆ ಕೋಳಿ ಅಂಗಡಿ ಬಂದ್ ಮಾಡುವಾಗ ಪ್ರವೀಣ್ ಹತ್ಯೆಯಾಗಿದೆ. ಇಬ್ಬರ ಕೊಲೆ ನಡೆದ ರೀತಿ ಒಂದೇ ರೀತಿ ಇರುವುದು ಗಮನಾರ್ಹ ಅಂಶವಾಗಿದೆ.

Published On - 10:12 am, Wed, 27 July 22