ಶೀಘ್ರವೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ: ಬೆಂಗಳೂರಿನಲ್ಲಿ ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿಕೆ
ಶೀಘ್ರವೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಬೆಂಗಳೂರಿನಲ್ಲಿ ವೈಎಸ್‌ವಿ ದತ್ತ ತಿಳಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ ಎಂದರು.
ಬೆಂಗಳೂರು: ಮಾಜಿ ಶಾಸಕ ವೈಎಸ್‌ವಿ ದತ್ತ ಅವರು ಜೆಡಿಎಸ್ ಪಕ್ಷ ತೊರೆದಿದ್ದು ಶೀಘ್ರವೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಹಲವು ಬಾರಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿಯಾಗಿ ಮಾತಾಡಿರುವೆ. ವಿಧಾನಸಭಾ ಕ್ಷೇತ್ರದ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ ಎಂದರು.
ನಮಗೆ ಯಾವುದೇ ಜಾತಿ ಬೆಂಬಲ ಇಲ್ಲ. ಹಣ ಬೆಂಬಲ ಇಲ್ಲ. ನಾನು ಖರ್ಗೆಯವರನ್ನ ಭೇಟಿಯಾಗಿಲ್ಲ. ಸಿದ್ದರಾಮಯ್ಯ ಹಲವು ಬಾರಿ ಭೇಟಿಯಾಗಿದ್ದೇನೆ. ಬೇರೆ ಬೇರೆ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆ ಒಂದೇ ವೇದಿಕೆ ಹಂಚಿಕೊಂಡಿದ್ದೇನೆ. ಅಲ್ಲಿ ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವನ್ನು ಕೂಡ ಭೇಟಿಯಾಗಿದ್ದೇನೆ. ಅವರಿಗೂ ಕ್ಷೇತ್ರದ ಬಗ್ಗೆ ತಿಳಿಸಿದ್ದೇನೆ. ಸೇರ್ಪಡೆ ಬಗ್ಗೆ ದಿನಾಂಕ ನಿಗದಿಯಾಗಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಶಾಸಕ ವೈಎಸ್‌ವಿ ದತ್ತ ತಿಳಿಸಿದ್ದಾರೆ.
ಇನ್ನು ನನ್ನ ಮತ್ತು ದೇವೇಗೌಡರ ರಾಜಕೀಯ 50 ವರ್ಷ ಸುದೀರ್ಘವಾದದ್ದು. ದೇವೇಗೌಡರ ಜೊತೆ ನಾನು 20 ವರ್ಷಗಳಿಂದ ಇದ್ದೇನೆ. ನನಗೂ ಅವರಿಗೆ ತಂದೆ ಮಗನ ಸಂಬಂಧ ಇದೆ. ನಾನು ದೇವೇಗೌಡರು ಇರುವವರೆಗೂ ಅವರ ಜೊತೆ ಇರುತ್ತೇನೆ ಎಂದು ಹೇಳಿದ್ದೆ. ಆದ್ರೆ ಕ್ಷೇತ್ರ ರಾಜಕೀಯವಾಗಿ ಮತ್ತು ಕಾರ್ಯಕರ್ತರ ಒತ್ತಾಯದಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಸಂದರ್ಭ ಬಂದೊದಗಿದೆ. ನಾನು ದೇವೇಗೌಡರಿಗೆ ಈ ವಿಚಾರ ಹೇಳಲು ಹೋಗಿ ವಾಪಸ್ ಬಂದಿದ್ದೇನೆ. ನಮ್ಮ ಕ್ಷೇತ್ರದ ಕೋಮುವಾದಿಗಳ ಜೊತೆ ಸೆಣೆಸಾಡಬೇಕೆಂದರೆ ಕಾಂಗ್ರೆಸ್ ಸೇರಬೇಕು ಎಂಬುದು ನಮ್ಮ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರ ಒತ್ತಾಯವಾಗಿದೆ. ಪ್ರಜ್ವಲ್ ಎಂಪಿಗೆ ಸ್ವರ್ಧೆ ಮಾಡಿದಾಗಲೂ ಕಾಂಗ್ರೆಸ್ ಮತ್ತ ಜೆಡಿಎಸ್ ಒಟ್ಟಾಗಿ ಇದ್ರೂ ಕೂಡ ಬಿಜೆಪಿಗೆ ಹೆಚ್ಚು ವೋಟ್ ಬಂದಿದೆ. ಜನರು ಕೋಮುವಾದಿ ಶಕ್ತಿ ಮಣಿಸಲು ಕಾಂಗ್ರೆಸ್ ಸೇರ್ಪಡೆಯಾಗಬೇಕು ಎಂದು ಹೇಳಿದ್ದಾರೆ. ಕ್ಷೇತ್ರದ ಒಳಗಡೆ ಕೊನೆ ಹೋರಾಟ ಆಗಿದೆ. ಆದ್ರೆ ನನ್ನ ನಂಬಿ ಬಂದವರು ಅತಂತ್ರ ಆಗಬಾರದು ಎಂದು ಅವರಿಗೆ ನೆಲೆಕೊಡಿಸಲು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ.
ನಾನು ಕ್ಷೇತ್ರ ಪೂರ್ತಿ ಸಂಚಾರ ಮಾಡುತ್ತಿದ್ದೇನೆ ಅಲ್ಲಿನ ಜನರು ಕಾಂಗ್ರೆಸ್ ಸೇರ್ಪಡೆಯಾಗಿ ಎಂದು ಹೇಳುತ್ತಿದ್ದಾರೆ. ಪಕ್ಷಾತೀತವಾಗಿ ನನಗೆ ಕಾರ್ಯಕರ್ತರು ಇದ್ದಾರೆ. ಜನರು ಮತ್ತು ಕಾರ್ಯಕರ್ತರ ಒತ್ತಾಯ ಮೇಲೆ ಸೇರ್ಪಡೆಯಾಗುತ್ತಿದ್ದೆ. ತಂದೆ ಸಮಾನರಾದ ದೇವೇಗೌಡರಿಗೆ ಈ ವಿಚಾರ ಹೇಳದೆ ಒದ್ದಾಡುತ್ತಿದ್ದೇನೆ. ನಾನು ಯಾವುದೇ ಷರತ್ತು ಹಾಕದೆ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದೇನೆ. ನಾನು ಹತ್ತಾರು ಬಾರಿ ದೇವೇಗೌಡರನ್ನು ಈ ವಿಚಾರ ಹೇಳಲು ಭೇಟಿಯಾಗಿದ್ದೆ ಆದ್ರೆ ಅದು ಸಾಧ್ಯವಾಗಿಲ್ಲ. ನನ್ನ ಎಮ್ಎಲ್ಸಿ ಮಾಡಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು. ಅವರ ಋಣ ನನ್ನ ಮೇಲೆ ಇದೆ. ಅದಕ್ಕಾಗಿ ನಾನು ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಜೆಡಿಎಸ್ ನಿಂದ ಶಾಸಕ ಆಗುವವರೆಗೂ ಪಕ್ಷ ಕಟ್ಟಿದ್ದೇನೆ. ಕಡೂರಿನ ರಾಜಕೀಯ ಬೇರೆ ಕ್ಷೇತ್ರಗಳಿಗಿಂತ ಭಿನ್ನವಾಗಿದೆ. ದೇವೇಗೌಡರಿಗೆ ಗೊತ್ತಿದೆ ಕ್ಷೇತ್ರದಲ್ಲಿ ಸ್ಥಳೀಯವಾಗಿ ಇರಲು ತೀರ್ಮಾನ ಮಾಡಿದ್ದಾರೆ ಎಂದು ದೇವೇಗೌಡರು ಕ್ಷಮಿಸುತ್ತಾರೆ ಎಂದು ತಿಳಿಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:38 pm, Wed, 14 December 22